ಮಂಗಳವಾರ, ಮೇ 24, 2022
25 °C

ನಮ್ಮ ಅಂಗಳದ ಮಲ್ಲಿಗೆ ಇರಲಿ ನಮ್ಮದೇ ಮುಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

~ಈ ಪಾಪಿ ದುನಿಯಾ.. ಪ್ರೀತಿ ಕಲಿಸಿ ಉಳಿಸೋದು ಕಲಿಸಿಲ್ಲ..~- ಸೂರಿ ನಿರ್ದೇಶನದ `ದುನಿಯಾ~ ಚಿತ್ರದ ಈ ಗೀತೆ ಅದೆಷ್ಟು ಜನರನ್ನು ಆರ್ದ್ರಗೊಳಿಸಿಲ್ಲ? ಸಹೃದಯರ ಮಾತಿರಲಿ, ಈ ಗೀತೆಯನ್ನು ಹಾಡುವ ಸಂದರ್ಭದಲ್ಲಿ ಗಾಯಕ ಬದ್ರಿ ಪ್ರಸಾದ್ ಸ್ವತಃ ಕಣ್ಣೀರು ಸುರಿಸಿದ್ದರಂತೆ. `ಹಾಡುವಾಗ ತಲ್ಲೆನತೆ ಬಹಳ ಮುಖ್ಯ. ಹಾಗಾದಾಗ ಮಾತ್ರ ಗೀತೆಗೆ ನ್ಯಾಯ ಸಲ್ಲಿಸಲು ಸಾಧ್ಯ~ ಎನ್ನುವ ಅವರು, ಹಿನ್ನೆಲೆ ಗಾಯನದಲ್ಲಿ ಹೆಸರು ಮಾಡುತ್ತಿರುವ ಯುವ ಪ್ರತಿಭೆ.ಇದುವರೆಗೂ 250ಕ್ಕೂ ಹೆಚ್ಚು ಸಿನಿಮಾಗಳಿಗೆ ಹಾಡಿರುವ ಬದ್ರಿ ಪ್ರಸಾದ್ ಅವರಿಗೆ ಕನ್ನಡದ ಗಾಯಕರಿಗೆ ಸಿನಿಮಾದ ಪ್ರಮುಖ ಹಾಡುಗಳನ್ನು ಹಾಡುವ ಅವಕಾಶ ದೊರಕುತ್ತಿಲ್ಲ ಎಂಬ ನೋವಿದೆ. `ಸಂಗೀತ ನಿರ್ದೇಶಕರಿಗೆ ಈ ಸಿನಿಮಾದಲ್ಲಿ ಇಂಥ ಹಾಡು ಹಿಟ್ ಆಗುವುದು ಖಂಡಿತ ಎಂದು ತಿಳಿದಿರುತ್ತದೆ. ಅಂಥ ಹಾಡನ್ನು ಅವರು ಹೆಚ್ಚಾಗಿ ಪರಭಾಷೆ ಗಾಯಕರಿಗೆ ನೀಡುತ್ತಾರೆ. ಆ ಹಾಡುಗಳು ಕನ್ನಡಿಗರಿಗೆ ಸಿಗುವಂತಾಗಬೇಕು~ ಎನ್ನುವ ಕಾಳಜಿ ಅವರದು.`ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ ಎಂಬಂತೆ ಅವಕಾಶಗಳು ದೊರಕುತ್ತಿವೆ~ ಎಂದು ನುಡಿಯುವ ಬದ್ರಿ ಪ್ರಸಾದ್ ಬೆಂಗಳೂರಿನವರು. ತಾಯಿ ಶಾರದಾ ಕರ್ನಾಟಕ ಶಾಸ್ತ್ರೀಯ ಸಂಗೀತದ ಗಾಯಕಿ. ಅವರ ಗರಡಿಯಲ್ಲಿ ಪಳಗಿದ ಬದ್ರಿ ಪ್ರಸಾದ್ ಚಿಕ್ಕಂದಿನಿಂದಲೂ ಗಾಯನವನ್ನು ಗ್ರಹಿಸುವ ಪ್ರತಿಭೆಯನ್ನು ಹೊಂದಿದ್ದರು. ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಎಸ್ಸಿ ಕಲಿತಿರುವ ಅವರಿಗೆ ಯಾವುದೋ ಕಂಪೆನಿಯಲ್ಲಿ ಉದ್ಯೋಗ ಮಾಡುವುದಕ್ಕಿಂತ ಹಾಡುವುದು ಹೆಚ್ಚು ಖುಷಿ ಕೊಡುತ್ತದೆ.ಅದರಲ್ಲೂ ಹಿನ್ನೆಲೆ ಗಾಯನವನ್ನು ಬಹುವಾಗಿ ಇಷ್ಟಪಡುವ ಅವರು ತಮ್ಮ ತಾಯಿ ಹೆಸರಿನಲ್ಲಿ ಸಂಗೀತ ಶಾಲೆ ತೆರೆದು ನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಲಘು ಸಂಗೀತ, ಹಿನ್ನೆಲೆ ಗಾಯನದ ತಂತ್ರಗಾರಿಕೆ, ಭಕ್ತಿ ಗೀತೆ, ಹಿಂದಿ ಭಜನೆಗಳನ್ನು ಹೇಳಿಕೊಡಲಾಗುತ್ತಿದೆ.

 

`ನಾನು ಶಾಲಾ ದಿನಗಳಲ್ಲಿ ಹಾಡಿನ ಸ್ಪರ್ಧೆಗೆ ಹೋದರೆ ಬಹುಮಾನ ಕಟ್ಟಿಟ್ಟ ಬುತ್ತಿ ಎಂಬಂತೆ ಇರುತ್ತಿತ್ತು~ ಎಂದು ಬಾಲ್ಯದ ನೆನಪನ್ನು ಹೇಳುತ್ತಾ ನಗುವ ಬದ್ರಿ ಪ್ರಸಾದ್ ಅವರಿಗೆ ಗಾಯಕರಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಯೇಸುದಾಸ್ ಸ್ಫೂರ್ತಿಯಂತೆ.ಕಾಲೇಜಿನಲ್ಲಿ ಗೆಳೆಯರ ಎದುರು `ನಾನು ಹಿನ್ನೆಲೆ ಗಾಯಕನಾಗುವೆ ಎಂದು ಹೇಳಿಕೊಳ್ಳುತ್ತಿದ್ದೆ. ಅದನ್ನು ಸಾಧಿಸಿದ್ದು ನನಗೆ ಅತಿ ಹೆಚ್ಚು ಖುಷಿ ನೀಡಿದ ವಿಚಾರ~ ಎಂದು ಹೆಮ್ಮೆಯಿಂದ ಹೇಳುವ ಅವರು ಮೊದಲಿಗೆ ಟ್ರ್ಯಾಕ್ ಗಾಯಕನಾಗಿಯೇ ಚಿತ್ರೋದ್ಯಮಕ್ಕೆ ಕಾಲಿಟ್ಟವರು.`ಟ್ರ್ಯಾಕ್ ಗಾಯನ ಕಳಪೆಯೇನಲ್ಲ. ಅದರಿಂದ ನಮ್ಮ ದನಿ ಪಳಗುತ್ತದೆ. ಅನುಭವ ಹೆಚ್ಚಾಗುತ್ತದೆ~ ಎನ್ನುವ ಬದ್ರಿ ಪ್ರಸಾದ್, `ಅಳಿಯ ಅಲ್ಲ ಮಗಳ ಗಂಡ~ ಚಿತ್ರದ ಮೂಲಕ ಸ್ವತಂತ್ರ ಗಾಯಕರಾದರು. ತಮಗೆ ಅವಕಾಶ ನೀಡಿದ ಹಂಸಲೇಖ, ವಿ.ಮನೋಹರ್, ಅಭಿಮನ್ ರಾಯ್ ಮುಂತಾದ ಸಂಗೀತ ನಿರ್ದೇಶಕರನ್ನು ಸ್ಮರಿಸುತ್ತಾರೆ.`ರಾವಣ~ ಚಿತ್ರದ `ನಿನ್ನ ಮನೆವರೆಗೂ ಜೊತೆಯಲಿ ನಾನೂ ಬರಬಹುದೆ...~, `ತಾಜ್‌ಮಹಲ್~ ಚಿತ್ರದ `ಕೊಲ್ಲುವುದಾದರೆ ಕೊಂದು ಬಿಡು...~, `ಮುರಳಿ ಮೀಟ್ಸ್ ಮೀರಾ~ ಚಿತ್ರದ `ಒಂದು ಚಂದ್ರ ಬೇಕು ನಿಂತು ನೋಡಲು...~, `ನಮ್ಮೆಜಮಾನ್ರು~ ಚಿತ್ರದ `ಈ ಮೌನ ಮಾನಸ ಗಾನ..~, `ಮುಖಪುಟ~ ಚಿತ್ರದ `ಅಜಂ ನಿರ್ವಿಕಲ್ಪಂ..~ ಅವರು ಹಾಡಿದ ಪ್ರಮುಖ ಹಾಡುಗಳು.ಹಂಸಲೇಖ ಅವರು `ಚಂದಮಾಮ~ ಚಿತ್ರದ ಆಡಿಶನ್‌ನಲ್ಲಿ ಕರೆಸಿ ತಮ್ಮನ್ನು ಆಯ್ಕೆ ಮಾಡಿಕೊಂಡಿದ್ದನ್ನು ನೆನಪಿಸಿಕೊಳ್ಳುವ ಬದ್ರಿ ಪ್ರಸಾದ್ ಅವರಿಗೆ ಎಸ್.ಪಿ. ಬಾಲಸುಬ್ರಹ್ಮಣ್ಯ, ಜೇಸುದಾಸ್, ಸೋನು ನಿಗಮ್ ಅವರಂತೆ ನೀವು ಹಾಡುವಿರಿ ಎಂದು ಜನರು ಹೇಳಿದಾಗ ಖುಷಿಯಾಗುತ್ತದೆ. ಜೊತೆಗೆ `ಹಾಡಿನ ಶೈಲಿಯನ್ನು ಅನುಕರಿಸುವುದು ತಪ್ಪಲ್ಲ. ದನಿ ಅನುಕರಿಸುವುದು ತಪ್ಪು~ ಎಂದು ಹೇಳುವ ಎಚ್ಚರಿಕೆಯೂ ಇದೆ.ಇದುವರೆಗೂ ಎಲ್ಲಾ ಶೈಲಿಯ ಹಾಡುಗಳನ್ನೂ ಹಾಡಿರುವ ತಮಗೆ ಎಂಥ ಹಾಡುಗಳನ್ನು ಹಾಡಲು ಅವಕಾಶ ಬಂದರೂ ಹಾಡಿ ತೋರಿಸುವ ಛಲವಿರುವುದಾಗಿ ಹೇಳುವ ಬದ್ರಿ ಪ್ರಸಾದ್, ಎಂಥದೇ ಹಾಡಾದರೂ ಅದರಲ್ಲಿ ತಲ್ಲೆನತೆಯೊಂದೇ ಮುಖ್ಯ ಎನ್ನುತ್ತಾರೆ.

`ಕನ್ನಡದಲ್ಲಿ ಪ್ರತಿಭಾವಂತ ಗಾಯಕರಿದ್ದಾರೆ. ಅಂಥವರಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಚಿತ್ರರಂಗದವರು ಮನಸ್ಸು ಮಾಡಬೇಕು. ಪ್ರತಿಭೆಯನ್ನು ಸಾಬೀತುಪಡಿಸಲು ವೇದಿಕೆ ಕಲ್ಪಿಸಬೇಕು.ಸುಮಾರಾಗಿ ಇರುವ ಹಾಡನ್ನು ಎಷ್ಟೇ ಚೆನ್ನಾಗಿ ಹಾಡಿದರೂ ಅದು ಜನಪ್ರಿಯ ವಾಗುವುದಿಲ್ಲ~ ಎನ್ನುವ ಬದ್ರಿ ಪ್ರಸಾದ್, ಗಾಯನ ಕಾರ್ಯಕ್ರಮಗಳಿಗಾಗಿ ವಿದೇಶಕ್ಕೂ ಹೋಗಿ ಬಂದಿದ್ದಾರೆ. ಇಂದಿಗೂ ಹಲವು ಕಾರ್ಯಕ್ರಮಗಳಲ್ಲಿ ಹಾಡುವ ಅವರು ಅಕಾರ್ಡಿಯನ್, ಮೃದಂಗ, ತಬಲಾ, ಬುಲ್‌ಬುಲ್ ತರಂಗ್ ವಾದ್ಯಗಳನ್ನು ನುಡಿಸುತ್ತಾರೆ.

 

ಸಿನಿಮಾ, ಧಾರಾವಾಹಿಗಳು ಸೇರಿದಂತೆ ಭಕ್ತಿ, ಭಾವ ಗೀತೆಗಳೆಲ್ಲಾ ಸೇರಿದಂತೆ ಅವರು ಹಾಡಿರುವ ಹಾಡುಗಳ ಸಂಖ್ಯೆ 3000 ದಾಟುತ್ತದೆ.`2005ರಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಎ.ಆರ್.ರೆಹಮಾನ್ ಶೋ ನಡೆಯುತ್ತಿತ್ತು. ಅಲ್ಲಿ ಹಾಡಲು ಆಯ್ಕೆಯಾಗಿದ್ದ ಏಕೈಕ ಕನ್ನಡದ ಗಾಯಕ ನಾನು. ಹಿಂದಿನ ದಿನ ತಾಲೀಮಿನ ಸಮಯದಲ್ಲಿ ರೆಹಮಾನ್ ಹತ್ತಿರ ಬಂದು ನನ್ನ ದನಿಯನ್ನು ಮೆಚ್ಚಿಕೊಂಡರು.ಮಾರನೇ ದಿನ ನನ್ನ ಗಾಯನ ಮುಗಿದ ನಂತರ ಎದ್ದು ನಿಂತು ಚಪ್ಪಾಳೆ ತಟ್ಟಿದ್ದರು. ಅದಕ್ಕಿಂತ ದೊಡ್ಡ ಪ್ರಶಂಸೆ ಮತ್ತೇನಿದೆ?~ ಎನ್ನುತ್ತಾ ಅಂದಿನ ದಿನವನ್ನು ನೆನೆಯುವ ಬದ್ರಿ ಪ್ರಸಾದ್ ಅವರಿಗೆ ಉತ್ತಮ ಅವಕಾಶಗಳ ನಿರೀಕ್ಷೆ ಇದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.