ಮಂಗಳವಾರ, ಮೇ 17, 2022
23 °C

`ನಮ್ಮ ದುಡಿಮೆಯನ್ನು ಕಿತ್ತು ತಿನ್ನುತ್ತಿದ್ದಾರೆ'

ಪ್ರಜಾವಾಣಿ ವಾರ್ತೆ / ಅಶ್ವಿನಿ ವಿಜಯಪುರ Updated:

ಅಕ್ಷರ ಗಾತ್ರ : | |

`ನಮ್ಮ ದುಡಿಮೆಯನ್ನು ಕಿತ್ತು ತಿನ್ನುತ್ತಿದ್ದಾರೆ'

ವಿಜಯಪುರ:  ಪಟ್ಟಣದ ಪುರಸಭೆಯ ಒಟ್ಟು ಪೌರ ಕಾರ್ಮಿಕರ ಸಂಖ್ಯೆ 65. ಇವರಲ್ಲಿ 24 ಮಂದಿ ಕಾಯಂ ನೌಕರರು, (ಮಹಿಳೆಯರು 12, ಪುರುಷರು 12), 31 ಮಂದಿ ಗುತ್ತಿಗೆ ಆಧಾರಿತ ನೌಕರರು. 10 ಮಂದಿ ಸಮಾನ ವೇತನ ನೌಕರರು (ಮಹಿಳೆಯರು 4, ಪುರುಷರು 6) ಇದ್ದಾರೆ.`ಸರ್ಕಾರದ ಯಾವ ಸೌಲಭ್ಯಗಳೂ ನಮಗೆ ದೊರೆಯುತ್ತಿಲ್ಲ. ಸಮಯಕ್ಕೆ ಸರಿಯಾಗಿ ಸಂಬಳ ನೀಡುವುದಿಲ್ಲ. ಪೌರ ಕಾರ್ಮಿಕರಿಗೆ ಸ್ವಚ್ಛತೆಗೆಂದು ನೀಡುವ ಸೋಪು, ಚಪ್ಪಲಿ, ಟವೆಲ್, ಮಾಸ್ಕ್ ಇವೆಲ್ಲದರಿಂದಲೂ ನಾವು ವಂಚಿತರಾಗಿದ್ದೇವೆ. ಕೆಲವು ಸೌಲಭ್ಯಗಳು ಎಲ್ಲರಿಗೂ ಸಿಗದೆ ತಾರತಮ್ಯ ರೀತಿಯಲ್ಲಿ ಹಂಚುವುದೂ ಉಂಟು' ಎಂಬುದು ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಮೇಸ್ತ್ರಿಯ ಕೊರಗು.`ಒಂದು ವರ್ಷಕ್ಕೆ ನಮಗೆ 15 ರಜೆ ಇವೆ. ಆದರೆ ಒಂದು ದಿನವೂ ನಮಗೆ ರಜೆ ನೀಡುವುದಿಲ್ಲ. ಅನಾರೋಗ್ಯವಿದ್ದರೂ, ವೈದ್ಯಕೀಯ ಪ್ರಮಾಣ ಪತ್ರ ನೀಡಿದರೂ ರಜೆ ಕೊಡುವುದಿಲ್ಲ. ಈ ಬಗ್ಗೆ ನ್ಯಾಯ ಕೇಳಲು ಹೋದರೆ ಅಂದು ಕೆಲಸ ಮಾಡಿದ್ದರೂ ಹಾಜರಾತಿ ನೀಡದೆ ಸಂಬಳ ಕಡಿತಗೊಳಿಸುತ್ತಾರೆ' ಎಂಬುದು ಕಾಯಂ ನೌಕರರ ಅಳಲು.`13 ವರ್ಷದಿಂದ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದು, ಕಾಯಂಗೊಳಿಸಲು ಪೌರಾಡಳಿತ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡುತ್ತಿದ್ದರೂ ಯಾವ ಅಧಿಕಾರಿಗಳೂ ಕ್ರಮ ತೆಗೆದುಕೊಳ್ಳದೆ ನಮ್ಮನ್ನು ಗುತ್ತಿಗೆ ನೌಕರರಾಗಿಯೇ ಉಳಿಸಿಕೊಂಡಿದ್ದಾರೆ. ನಮ್ಮ ಪಾಡು ಹೇಳತೀರದಾಗಿದೆ' ಎನ್ನುತ್ತಾರೆ ಇಲ್ಲಿನ ಗುತ್ತಿಗೆ ನೌಕರರು.`ನಮ್ಮ ತಂದೆ ತಾಯಿ ಇಬ್ಬರೂ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಈಗ ಇಬ್ಬರೂ ಜೀವಂತವಾಗಿಲ್ಲ. ಈಗ ನನಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡ್ದ್ದಿದು ಕೇವಲ 3,750 ರೂ ಸಂಬಳ ನೀಡುತ್ತಿದ್ದಾರೆ. ಕೆಲಸ ಕಾಯಂ ಆಗಬೇಕಾದರೆ 50 ಇಂದ 60 ಸಾವಿರ ರೂಪಾಯಿ ಖರ್ಚು ಮಾಡಬೇಕಂತೆ. ನನ್ನ ಪತಿ ಇಲ್ಲ. ಇರುವ ಇಬ್ಬರು ಮಕ್ಕಳನ್ನು ಸಾಕಲು ಬರುವ ಸಂಬಳ ಸಾಲದಾಗಿದೆ. ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ' ಎನ್ನುವುದು ಮಹಿಳಾ ಗುತ್ತಿಗೆ ನೌಕರೊಬ್ಬರ ಸಂಕಟ.`ಇಲ್ಲಿ ಎಲ್ಲಾ ವಿಷಯಕ್ಕೂ ತಾರತಮ್ಯ, ವಿರೋಧ, ಕಿರುಕುಳ, ಬೆದರಿಕೆ, ಸಂಬಳ ಕಡಿತದಂತಹ ಕಾಟಗಳಿವೆ. ನಮ್ಮ ದುಡಿಮೆಯನ್ನು ಅಧಿಕಾರಿಗಳು ಕಿತ್ತು ತಿನ್ನುತ್ತಿದ್ದಾರೆ' ಎಂಬುದು ಬಹುತೇಕ ನೌಕರರ ಆರೋಪ.`ಮೊದಲು ಇಲ್ಲಿ ನಮ್ಮ ಸಂಘವೂ ಇತ್ತು. ಅಧ್ಯಕ್ಷರೂ ಇದ್ದರು. ಎಲ್ಲ ಸುಸೂತ್ರವಾಗಿ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಬಹಳಷ್ಟು ಬದಲಾಗಿದೆ. ಕಣ್ಣ ಮುಂದೆ ಆಗುತ್ತಿರುವ ಅನ್ಯಾಯಗಳನ್ನು ಸಹಿಸಿಕೊಂಡೇ ಇರಬೇಕಾಗಿದೆ.ವಿರೋಧಿಸಿದರೆ ಕೆಲಸ ಕಳೆದುಕೊಳ್ಳುವ ಭೀತಿ ಇದೆ. ನಮ್ಮಲ್ಲಿದ್ದ ಒಗ್ಗಟ್ಟನ್ನು ಒಡೆಯಲಾಗಿದೆ. ನಮ್ಮ ಮೇಲೆ ಅಧಿಕಾರಿಗಳ ಸವಾರಿ ನಡೆದಿದೆ. ಪುರಸಭೆಯ ಹಣ ದುರ್ಬಳಕೆಯಾಗುತ್ತಿದೆ. ನಮಗೆ ಕೈಸೇರಬೇಕಾದ ದುಡ್ಡು ಇನ್ಯಾರದೋ ಜೇಬು ಸೇರುತ್ತಿದೆ' ಎಂಬುದು ಇಲ್ಲಿನ ಪೌರ ಕಾರ್ಮಿಕರ ಆರೋಪ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.