ಶನಿವಾರ, ಸೆಪ್ಟೆಂಬರ್ 26, 2020
23 °C

ನರಗುಂದದಲ್ಲಿ ಪಲ್ಲಕ್ಕಿ ಉತ್ಸವ

ಎ.ಎಸ್. ಹೂಗಾರ Updated:

ಅಕ್ಷರ ಗಾತ್ರ : | |

ನರಗುಂದದಲ್ಲಿ ಪಲ್ಲಕ್ಕಿ ಉತ್ಸವ

ಐದು ಗೋಪುರಗಳ ಭವ್ಯನೋಟ, ನಡುವೆ ನಾಗರಶೈಲಿಯಲ್ಲಿರುವ ಮಹಾದ್ವಾರ, ದ್ವಾರದ ಲಲಾಟದಲ್ಲಿ ಶ್ರೀರಾಮಚಂದ್ರ, ಸೀತಾಮಾತೆ, ಲಕ್ಷ್ಮಣ, ಹನುಮಂತರ ಶಿಲ್ಪ; ಚಾಮರ ಬೀಸುತ್ತಿರುವ ಎರಡು ಆನೆ, ಪ್ರದಕ್ಷಿಣಾ ಪಥ ಹೊಂದಿದ ಗರ್ಭಗುಡಿ, ದೇವಾಲಯದ ಆವರಣದಲ್ಲಿ ಗಣೇಶ, ಹನುಮಂತ ಹಾಗೂ ಗರುಡ ಶಿಲ್ಪ. ದೇವಾಲಯದ ಮುಂದೆ ತೇರಿನ ಮಹಾಮನೆ, ಗೋವಿಂದರಾಜನ ಗುಡಿ...ಚಿಕ್ಕತಿರುಪತಿಯಂತೆ ಗೋಚರಿಸುವ ಇಂಥ ಒಂದು ಸುಂದರ ದೃಶ್ಯ ಕಾಣಸಿಗುವುದು ಗದಗ ಜಿಲ್ಲೆಯ ನರಗುಂದದಲ್ಲಿ. ಮಲಗಿದ ಸಿಂಹದಂತೆ ಕಾಣುವ ಗುಡ್ಡ, ಗುಡ್ಡಕ್ಕೆ ವಿಭೂತಿ ಹಚ್ಚಿದಂತೆ ಕಾಣುವ ದೇವಾಲಯದ ನೋಟ ಬಹು ಆಕರ್ಷಕ. ಪ್ರತಿ ಶುಕ್ರವಾರದ ಪಲ್ಲಕ್ಕಿ ಉತ್ಸವ ಇಲ್ಲಿಯ ವಿಶೇಷತೆ.ಸ್ಥಳದ ವಿಶೇಷತೆ: ನರಗುಂದದಲ್ಲಿ ಮೊದಲಿದ್ದ ಮಣ್ಣಿನ ಕೋಟೆಯನ್ನು ಛತ್ರಪತಿ ಶಿವಾಜಿ ಮಹಾರಾಜ 1674 ವಶಪಡಿಸಿಕೊಂಡು `ಮಹಿಫತ್ ಗಡ' ಎಂಬ ಕಲ್ಲಿನ ಕೋಟೆ ಕಟ್ಟಿಸಿದ. ಅಲ್ಲಿ ಅಂಬಾಭವಾನಿಯ ದೇವಾಲಯ ನಿರ್ಮಿಸಿದ. ಶಿವಾಜಿಯ ಗುರು ಸಮರ್ಥ ರಾಮದಾಸರು ಇಲ್ಲಿ ರಾಮಮಂದಿರ, ಹನುಮ ಮಂದಿರ ಸ್ಥಾಪಿಸಿದರು. 17ನೆಯ ಶತಮಾನದ ಪ್ರಾರಂಭಿಕ ವರ್ಷಗಳಲ್ಲಿ ತಿರುಪತಿ ಮಾದರಿಯ ವೆಂಕಟೇಶ್ವರನ ದೇವಾಲಯ ನಿರ್ಮಿಸಿ ಜಾತ್ರೆ, ಉತ್ಸವ ಪ್ರಾರಂಭಿಸಿದರು. ಈಗಲೂ ಜಾತಿ, ಧರ್ಮ, ಪಂಥಗಳ ಭೇದವನ್ನು ಮೀರಿ ಇಲ್ಲಿ ಉತ್ಸವ ಜರಗುತ್ತದೆ.ಉತ್ಸವಗಳಂದು ಊರೇ ಸುಣ್ಣ ಬಣ್ಣಗಳಿಂದ ಶೃಂಗಾರಗೊಳ್ಳುತ್ತದೆ. ಉತ್ಸವದ ದಿನಗಳಲ್ಲಿ ಚಿಕ್ಕ ತಿರುಪತಿಯಂತೆ ನರಗುಂದ ಗುಡ್ಡದ ಮೇಲಿನ ವೆಂಕಟೇಶ್ವರ ದೇವಾಲಯವು ಅಲಂಕರಣಗೊಳ್ಳುತ್ತದೆ. ಧರ್ಮ, ಸಂಸ್ಕೃತಿ ಕಾರ್ಯಕ್ರಮಕ್ಕೆ ಇಂಬುಗೊಡುವ ಈ ಉತ್ಸವವು ಭಕ್ತಸಮೂಹಕ್ಕೆ ಆಕರ್ಷಕ. ಇಂಪಾದ ಸಂಗೀತದ ಕಂಪು ಹೃನ್ಮನಗಳಿಗೆ ಮುದ ನೀಡುತ್ತದೆ. ಪೂಜೆ-ಪುನಸ್ಕಾರ, ಹೋಮ-ಹವನ, ಮಂತ್ರ ಪಠಣ, ಯಜ್ಞ-ಯಾಗ, ಅರ್ಚನ ಕಾರ್ಯಗಳು ಬಿಡುವಿಲ್ಲದೆ ನಡೆಯುತ್ತದೆ.ಪೂಜೆಯ ವೇಳೆಯಲ್ಲಿ ನಡೆಯುವ ನೃತ್ಯ, ಸಂಗೀತ, ವಾದ್ಯ-ವೈಭವದ ಶೆಹನಾಯ್ ಮಂಗಳ ವಾದ್ಯದ ಸಂಗೀತ ನಾದಲೋಕದಲ್ಲಿ, ಭಕ್ತಿಲೋಕದಲ್ಲಿ ತೇಲುವಂತೆ ಮಾಡುತ್ತವೆ. ವೈಭವದ ಸಭೆಗಳು ಕಣ್ಮನ ಸೆಳೆಯುತ್ತವೆ. ದೀಪೋತ್ಸವ, ತೇರು, ಪಲ್ಲಕ್ಕಿ, ಉತ್ಸವ, ಆಯುಧ ಪೂಜೆ, ಮೆರವಣಿಗೆ, ಗೊಂಬೆಗಳ ಮಾರಾಟ ಉತ್ಸವದ ಜೀವಂತಿಕೆ ಹೆಚ್ಚಿಸುತ್ತವೆ. ಮನಸ್ಸಿನ ಶುದ್ಧೀಕರಣಕ್ಕೆ, ಜೀವನದ ಸಾರ್ಥಕತೆಗೆ ದಾರಿ ತೋರುವ ಈ ಕ್ಷೇತ್ರದ ಉತ್ಸವದಲ್ಲಿ ಜನರು ತಮ್ಮ ಒತ್ತಡಗಳನ್ನು ಬದಿಗೊತ್ತಿ ಜಾತ್ರೆಗೆ ಬರುತ್ತಾರೆ, ಪಾಲ್ಗೊಂಡು ತಮ್ಮ ತನು-ಮನ ಸಂತೈಸಿಕೊಳ್ಳುತ್ತಾರೆ.ಹುಬ್ಬಳ್ಳಿ-ಸೊಲ್ಲಾಪುರ ಹೆದ್ದಾರಿಯ ಮೇಲೆ ನರಗುಂದ ಹುಬ್ಬಳ್ಳಿಯಿಂದ 55 ಕಿ.ಮೀ. ಅಂತರದಲ್ಲಿದೆ. ರಾಜ್ಯ ಸಾರಿಗೆಯ ಹಾಗೂ ಖಾಸಗಿ ಬಸ್ಸುಗಳ ಸೌಕರ್ಯ ಹೊಂದಿದೆ. ಹುಬ್ಬಳ್ಳಿ-ಧಾರವಾಡ, ಗದಗ ಪಟ್ಟಣಗಳಿಗೆ ಕಾಣುವ ಗುಡ್ಡದ ಈ ದೇವಾಲಯ ಭವ್ಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.