ಮಂಗಳವಾರ, ಮೇ 17, 2022
24 °C

ನರಗುಂದ ಕ್ಷೇತ್ರದಲ್ಲಿ ದೇವಸ್ಥಾನಗಳಲ್ಲೇ ಅಂಗನವಾಡಿ ಕೇಂದ್ರ !

ಪ್ರಜಾವಾಣಿ ವಾರ್ತೆ / ಆರ್.ವೀರೇಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ನರಗುಂದ ಕ್ಷೇತ್ರದಲ್ಲಿ ದೇವಸ್ಥಾನಗಳಲ್ಲೇ ಅಂಗನವಾಡಿ ಕೇಂದ್ರ !

ಗದಗ:  ಜಿಲ್ಲೆಯ ನರಗುಂದ ಪಟ್ಟಣದಲ್ಲಿರುವ 38 ಅಂಗನವಾಡಿ ಕೇಂದ್ರಗಳ ಪೈಕಿ 36 ದೇವಸ್ಥಾನಗಳಲ್ಲಿಯೇ ಕಾರ್ಯ ನಿರ್ವಹಿಸುತ್ತಿವೆ !

38ರಲ್ಲಿ ಒಂದು ಕೇಂದ್ರಕ್ಕೆ ಮಾತ್ರ ಕಟ್ಟಡವಿದೆ. ಒಂದು ಕೇಂದ್ರ ವಿನಾಯಕನಗರದ ಯುವಕ ಮಂಡಳದ ತಗಡಿನ ಶೆಡ್ಡಿನಲ್ಲಿ ನಡೆಯುತ್ತಿದೆ. ಉಳಿದ ಕೇಂದ್ರಗಳಿಗೆ ಶರಣ ಬಸವೇಶ್ವರ, ಹನುಮಂತ ದೇವರು, ಶಂಕರಲಿಂಗ, ಕಿಡಕಿ ಬಸವೇಶ್ವರ ಸೇರಿದಂತೆ ಇನ್ನು ಹಲವಾರು ದೇವರ ಗುಡಿಗಳ ಆವರಣವೇ ಗತಿ.

ನರಗುಂದ ಕ್ಷೇತ್ರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸಿ.ಸಿ.ಪಾಟೀಲ ಪ್ರತಿನಿಧಿಸುತ್ತಿದ್ದಾರೆ. ಅಲ್ಲದೆ ನರಗುಂದ ಪಟ್ಟಣದಲ್ಲೇ ವಾಸವಾಗಿದ್ದಾರೆ.

ಬೆಳಿಗ್ಗೆ 9.30ರ ಸುಮಾರಿಗೆ ಅಂಗನವಾಡಿಗಳು ಪ್ರಾರಂಭವಾಗುತ್ತವೆ. ಈ ಸಮಯದಲ್ಲಿಯೇ ದೇವಸ್ಥಾನಕ್ಕೆ ಭಕ್ತರು ಹೆಚ್ಚಾಗಿ ಆಗಮಿಸುತ್ತಾರೆ. ಪೂಜೆ-ಪುನಸ್ಕಾರಗಳು ಇದೇ ಸಮಯದಲ್ಲೇ ಹೆಚ್ಚು. ಭಕ್ತರು ಸಲ್ಲಿಸುವ ಪೂಜೆ, ಪ್ರದಕ್ಷಿಣೆ ಹಾಕುವ, ಗಂಟೆ ಬಾರಿಸುವ ಪ್ರಕ್ರಿಯೆಯನ್ನು ನೋಡುತ್ತಾ ಕೂರಬೇಕಾದ ಪರಿಸ್ಥಿತಿ ಇಲ್ಲಿನ ಮಕ್ಕಳದ್ದು.

ದೇವಾಲಯಗಳಿಗೆ ಕೇವಲ ಬೆಳಿಗ್ಗೆ ಮಾತ್ರ ಭಕ್ತರು ಬರುವುದಿಲ್ಲ. ಸಂಜೆಯವರೆಗೂ ಒಬ್ಬರು-ಇಬ್ಬರು ಆಗಮಿಸುತ್ತಿರುತ್ತಾರೆ. ಆವಾಗಲೆಲ್ಲವೂ ಮಕ್ಕಳು ಪಾಠ ಕೇಳುವುದನ್ನು ಬಿಟ್ಟು ಬಂದವರನ್ನೇ ನೋಡುತ್ತಾ ಕುಳಿತುಬಿಡುತ್ತವೆ.

ಸ್ವಂತ ಕಟ್ಟಡಗಳು ಇಲ್ಲದ ಪರಿಣಾಮ ಅಂಗನವಾಡಿ ಮಕ್ಕಳಿಗೆ ವಿತರಣೆಯಾಗುವ ಆಹಾರ ಸಾಮಗ್ರಿಗಳನ್ನು ಅಂಗನವಾಡಿ ಕಾರ್ಯಕರ್ತೆಯರ ಮನೆಯಲ್ಲಿಯೇ ದಾಸ್ತಾನು ಇಡಲಾಗುತ್ತಿದೆ.

ಅಂಗನವಾಡಿಗೆ ಮಕ್ಕಳನ್ನು ಅಕರ್ಷಿಸಲು ಹಾಗೂ ಪೌಷ್ಟಿಕಾಂಶದ ಆಹಾರ ನೀಡುವ ಸಲುವಾಗಿ ಕುರ್‌ಕುರೆ, ಬಿಸಿಬೇಳೆ ಭಾತ್, ಕೇಸರಿಭಾತ್, ಎನರ್ಜಿಫುಡ್ ಅನ್ನು ಸರ್ಕಾರ ನೀಡುತ್ತಿದೆ. ಆದರೆ ಇಷ್ಟು ಆಹಾರ ಪದಾರ್ಥವೂ ಅಂಗನವಾಡಿ ಕಾರ್ಯಕರ್ತೆಯರ ಮನೆಯಲ್ಲಿರುತ್ತದೆ. ಅಲ್ಲದೇ ಬಿಸಿಬೇಳೆ ಭಾತ್, ಕೇಸರಿಭಾತ್ ವಿತರಣೆಯ ದಿನದಂದು ಅಂಗನವಾಡಿ ಕಾರ್ಯಕರ್ತೆಯರ ಮನೆಯಲ್ಲಿಯೇ ಆಹಾರ ಸಿದ್ಧಪಡಿಸಿ, ಅಂಗನವಾಡಿಗೆ ತಂದು ಮಕ್ಕಳಿಗೆ ಕೊಡಲಾಗುತ್ತದೆ.

`ತಾಲ್ಲೂಕಿನಲ್ಲಿ 117 ಅಂಗನವಾಡಿ ಕೇಂದ್ರಗಳಿವೆ ಅದರಲ್ಲಿ 73 ಕೇಂದ್ರಗಳು ಸ್ವಂತ ಕಟ್ಟಡ ಹೊಂದಿವೆ. ಇವು ಗ್ರಾಮೀಣ ಪ್ರದೇಶದಲ್ಲಿ ಇವೆ. ಆದರೆ ಪಟ್ಟಣದಲ್ಲಿ ಕಟ್ಟಡದ ಕೊರತೆ ಇದೆ. ಸ್ವಂತ ಕಟ್ಟಡ ಇಲ್ಲದೇ ಇರುವುದರಿಂದ ಆಹಾರ ಸಾಮಗ್ರಿಗಳನ್ನು ದೇವಸ್ಥಾನಗಳಲ್ಲಿ ಇಡಲು ಆಗುವುದಿಲ್ಲ. ಅಲ್ಲದೇ ಪ್ರತಿದಿನವೂ ಅಂಗನವಾಡಿ ಕಾರ್ಯಕರ್ತೆಯರು ಗೋದಾಮಿಗೆ ಬಂದು ಆಹಾರವನ್ನು ತಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮಕ್ಕಳಿಗೆ  ವಿತರಿಸಲಾಗುವ ಆಹಾರ ಸಾಮಗ್ರಿಗಳನ್ನು ಒಂದು ತಿಂಗಳಿಗೆ ಆಗುವಷ್ಟು ಪ್ರಮಾಣವನ್ನು ಅಂಗನವಾಡಿ ಕಾರ್ಯಕರ್ತೆಯರ ಸುಪರ್ದಿಗೆ ನೀಡಲಾಗುತ್ತದೆ ಎಂದು ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ಶಂಕರಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.