ಗುರುವಾರ , ಜೂನ್ 17, 2021
29 °C
‘ಚುನಾವಣೆ; ಕಾಂಗ್ರೆಸ್‌ ಗೆಲುವಿಗೆ ಒಳ್ಳೆಯ ವಾತಾವರಣ’

ನರೇಂದ್ರ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುನಗುಂದ(ಬಾಗಲಕೋಟೆ): ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಗೆಲ್ಲಲು ಒಳ್ಳೆಯ ವಾತಾವರಣವಿದೆ, 20ಕ್ಕಿಂತ ಹೆಚ್ಚು ಸ್ಥಾನದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಹುನಗುಂದ ಪಟ್ಟಣದಲ್ಲಿ ಬುಧವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ವಾರದೊಳಗೆ ಕಾಂಗ್ರೆಸ್‌ ಅಭ್ಯರ್ಥಿ ತೀರ್ಮಾನ ಮಾಡಲಾಗುವುದು, ಕಾರ್ಯ­ಕರ್ತರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಂಕಲ್ಪ ಮಾಡಬೇಕು, ಪಕ್ಷವನ್ನು ಗೆಲ್ಲಿಸುವ ಮೂಲಕ ರಾಜ್ಯ ಸರ್ಕಾರ, ಸೋನಿಯಾ ಗಾಂಧಿ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.ಬಿಜೆಪಿಯ ಮುಖಂಡರಾದ ಬಿ.ಎಸ್‌.ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಸದಾನಂದಗೌಡ ಅವರಿಗೆ ಜನತೆಯ ಮುಂದೆ ಬರಲು ಮುಖವಿಲ್ಲ, ನೈತಿಕತೆ ಕಳೆದು­ಕೊಂಡಿದ್ದಾರೆ, ಅಧಿಕಾರದಲ್ಲಿ ಇದ್ದಾಗ ಮಾಡಬಾರದನ್ನು ಮಾಡಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದರು, ವಿಧಾನ­ಸೌಧದಲ್ಲಿ ಅಶ್ಲೀಲ ಚಿತ್ರ ನೋಡಿದರು, ಭ್ರಷ್ಟಾಚಾರ ಮಾಡುವ ಮೂಲಕ ರಾಜ್ಯದ ಮರ್ಯಾದೆ ತೆಗೆದು ಜೈಲಿಗೆ ಹೋದರು. ಇಂತವರನ್ನು ಕೂರಿಸಿಕೊಂಡು ನರೇಂದ್ರ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಮೋದಿಗೆ ನೈತಿಕತೆ ಇಲ್ಲ ಎಂದರು.ನರೇಂದ್ರ ಮೋದಿ ಯಾರು? ಅವರ ಹಿನ್ನೆಲೆ ಏನು? ಮೋದಿ ಪ್ರಧಾನಿಯಂತೆ ಭಾಷಣ ಮಾಡುತ್ತಾರೆ. ದೇಶದ ಜನತೆ ಜಾತ್ಯತೀತದಲ್ಲಿ ನಂಬಿಕೆ ಇಟ್ಟವರು, ಜಾತ್ಯತೀತದಲ್ಲಿ ನಂಬಿಕೆ ಇಟ್ಟ ಪಕ್ಷ, ವ್ಯಕ್ತಿಯನ್ನು ಜನತೆ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆಶಿರ್ವಾದ ಮಾಡುತ್ತಾರೆ, ಕೋಮುವಾದಿ ಮೋದಿಗೆ ಬೆಂಬಲಿಸುವುದಿಲ್ಲ ಎಂದರು.ಕಾಂಗ್ರೆಸ್‌ 65 ವರ್ಷಗಳಲ್ಲಿ ಮಾಡದ ಅಭಿವೃದ್ಧಿಯನ್ನು ಕೇವಲ 60 ತಿಂಗಳಲ್ಲಿ ಮಾಡುತ್ತೇನೆ ಎನ್ನುತ್ತಾರೆ ಮೋದಿ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷ ಬಿಜೆಪಿ ಅಲ್ಲ, ಸಮಾಜ, ದೇಶವನ್ನು ಒಡೆಯುವ ಪಕ್ಷ  ಬಿಜೆಪಿ, ಗುಜರಾತ್‌ನಲ್ಲಿ ನಡೆದ ನರಮೇಧಕ್ಕೆ ಮೋದಿ ನೇರ ಕಾರಣ, ಮೋದಿಗೆ ಕಾಂಗ್ರೆಸ್‌ ಇತಿಹಾಸ ಗೊತ್ತಿಲ್ಲ ಎಂದು ಹೇಳಿದರು.ಗುಜರಾತ್‌ ಅಭಿವೃದ್ಧಿಯಲ್ಲಿ ಮೊದಲ ರಾಜ್ಯವಲ್ಲ, ಪಂಜಾಬ್‌, ಹರಿಯಾಣ, ದೆಹಲಿ ಮೊದಲ ಮೂರು ಸ್ಥಾನದಲ್ಲಿವೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆಗೆ ನೀಡಿದ್ದ 165 ವಚನಗಳಲ್ಲಿ ಈಗಾಗಲೇ 95 ಈಡೇರಿಸಿದ್ದೇವೆ. ಪ್ರಣಾಳಿಕೆಯೇ ನಮಗೆ ಸಂವಿಧಾನ, ಬೈಬಲ್‌ ಇದ್ದ ಹಾಗೆ, ಐದು ವರ್ಷದಲ್ಲಿ ಎಲ್ಲ ಭರವಸೆ ಈಡೇರಿಸುತ್ತೇವೆ, ರಾಜ್ಯವನ್ನು ಹಸಿವು ಮುಕ್ತ ರಾಜ್ಯ ಮಾಡುವುದೇ ನಮ್ಮ ಧ್ಯೇಯ ಮತ್ತು ಗುರಿಯಾಗಿದೆ ಎಂದರು.ರಾಜ್ಯದ ಎಲ್ಲ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ₨ 50 ಸಾವಿರ ಕೋಟಿ ಅಗತ್ಯವಿದ್ದು, ಪ್ರತಿ ಬಜೆಟ್‌ನಲ್ಲಿ ₨ 10 ಸಾವಿರ ಕೋಟಿ ನೀಡುತ್ತಿದ್ದೇವೆ ಎಂದು ಹೇಳಿದರು.ಸಚಿವರಾದ ಎಸ್‌.ಆರ್‌.ಪಾಟೀಲ, ಎಂ.ಬಿ. ಪಾಟೀಲ, ಎಚ್‌.ಕೆ.ಪಾಟೀಲ, ಶಾಸಕ ವಿಜಯಾನಂದ ಕಾಶಪ್ಪನವರ, ಎಚ್‌.ವೈ.ಮೇಟಿ, ಜೆ.ಟಿ.ಪಾಟೀಲ, ಅಶೋಕ ಪಟ್ಟಣದ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸೌದಾಗರ, ಮಾಜಿ ಶಾಸಕ ಎಸ್‌.ಜಿ.ನಂಜಯ್ಯನಮಠ, ಡಾ.ದೇವರಾಜ ಪಾಟೀಲ, ಇಳಕಲ್‌ ನಗರಸಭೆ ಅಧ್ಯಕ್ಷ ದೇವಾನಂದ ಕಾಶಪ್ಪನವರ, ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ಎಂ.ಎಲ್‌. ಶಾಂತಗೇರಿ, ಶೋಭಾ ಅಮದಿಹಾಳ, ಮಹಾಂತೇಶ ನರಗುಂದ, ಬಸವರಾಜ ಅಂಗಡಿ, ಮುತ್ತಣ್ಣ ಭಜಂತ್ರಿ, ಬಸವ್ವ ಕಬ್ಬರಗಿ, ನೀಲಮ್ಮ ಮುಕ್ಕಣ್ಣವರ, ರಾಜಕುಮಾರ ಬಾದವಾಡಗಿ, ಮತ್ತಿತರರು ಸಮಾವೇಶದಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.