ಮಂಗಳವಾರ, ಏಪ್ರಿಲ್ 13, 2021
23 °C

ನರೇಗಾ ಕೂಲಿ ಕ್ವಾರ್ಟರ್ ಮದ್ಯಕ್ಕೂ ಸಾಲದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಒಂದು ಬಡ ಕುಟುಂಬಕ್ಕೆ ಪೂರೈಸುವ ಅಕ್ಕಿಗೆ ತಿಂಗಳಿಗೆ 200 ರೂಪಾಯಿ ಸಬ್ಸಿಡಿ ನೀಡುವ ಸರ್ಕಾರ, ಅಬಕಾರಿ ತೆರಿಗೆ ರೂಪದಲ್ಲಿ ಅವರಿಂದ 1,200 ರೂಪಾಯಿ ವಸೂಲಿ ಮಾಡುತ್ತಿದೆ. ಬಡವರ ಜೀವನ ಹಾಳು ಮಾಡಿ ಸಾಮ್ರಾಜ್ಯ ಕಟ್ಟುವುದು ಯಾವ ನ್ಯಾಯ ಎಂದು ಜೆಡಿಎಸ್‌ನ ಕೆ.ಎಂ.ಶಿವಲಿಂಗೇಗೌಡ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ಬರ ಪರಿಸ್ಥಿತಿ ಕುರಿತು ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಬೀಡಾ ಅಂಗಡಿ, ರೈಲು ನಿಲ್ದಾಣ, ಬೀದಿ ಬದಿಗಳಲ್ಲಿ ತರಕಾರಿ ಮಾದರಿಯಲ್ಲಿ ಮದ್ಯ ಮಾರಾಟವಾಗುತ್ತಿದೆ. ಇದರಿಂದ ಬಡವರು ಹಾಳಾಗುತ್ತಿದ್ದಾರೆ ಎಂದು ಹೇಳಿದರು.ತಳ್ಳುವ ಗಾಡಿಗಳಲ್ಲಿ ಮನೆ ಮುಂದೆ ತರಕಾರಿ ಮಾರಾಟ ಮಾಡುವ ಹಾಗೆ, ಮದ್ಯ ಮಾರಾಟ ಮಾಡುವ ದಿನಗಳು ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.ಅಬಕಾರಿ ತೆರಿಗೆಯಿಂದ 12 ಸಾವಿರ ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳುತ್ತಿದ್ದಾರೆ. ಬಡವರ ಜೀವನ ಹಾಳು ಮಾಡಿ, ಬೊಕ್ಕಸದ ಆದಾಯವನ್ನು ಜಾಸ್ತಿ ಮಾಡಿಕೊಳ್ಳುವುದರಲ್ಲಿ ಯಾವ ಅರ್ಥವಿದೆ ಎಂದು ಅವರು ಪ್ರಶ್ನಿಸಿದರು.ಉದ್ಯೋಗ ಖಾತರಿ ಯೋಜನೆಯಡಿ ಕಾರ್ಮಿಕರಿಗೆ ದಿನಕ್ಕೆ 155 ಕೂಲಿ ನೀಡಲಾಗುತ್ತಿದೆ. ಇದು ಎರಡು ಕ್ವಾರ್ಟರ್ ಮದ್ಯಕ್ಕೂ ಸಾಲುವುದಿಲ್ಲ. ಒಂದು ಕುಟುಂಬ ನಿರ್ವಹಣೆಗೆ ನಿತ್ಯ 500 ರೂಪಾಯಿ ಬೇಕು. ವಾಸ್ತವದ ಆಧಾರದ ಮೇಲೆ ಹೆಚ್ಚಿನ ಕೂಲಿ ನಿಗದಿ ಮಾಡಿ ಎಂದು ಅವರು ಆಗ್ರಹಿಸಿದರು.ಹಳ್ಳಿಗಳಲ್ಲಿ ಕೇವಲ ಎರಡು ಗಂಟೆ ವಿದ್ಯುತ್ ಪೂರೈಕೆಯಾಗುತ್ತಿದೆ. ವಿದ್ಯುತ್ ಸ್ಥಾವರಗಳು ಸುಟ್ಟು ಹಾಳಾಗಿವೆ. ಕುಡಿಯಲು ನೀರಿಲ್ಲ. ದನಕರುಗಳಿಗೆ ಮೇವು ಇಲ್ಲ. ಸರ್ಕಾರ ಬರ ಪರಿಸ್ಥಿತಿಯನ್ನು ಹಗುರವಾಗಿ ಪರಿಗಣಿಸಿದೆ ಎಂದರುಗೋ ಪೂಜೆ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿಯವರು, ಗೋ ಮಾತೆಯ ಕಣ್ಣೀರು ಹಾಕಿಸುವುದು ಒಳ್ಳೆಯದಲ್ಲ. ಅದರ ಶಾಪ ತಟ್ಟುತ್ತದೆ ಎಂದು ಎಚ್ಚರಿಸಿದರು. ಕೂಡಲೇ ಮೇವಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.ಶೇ 10ರಷ್ಟು ರೈತರಿಗೂ ಸಾಲ ನೀಡಿಲ್ಲ. ಹೀಗಾಗಿ ಸಾಲ ಮನ್ನಾದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಮೊದಲು ನಿಜವಾದ ಎಲ್ಲ ರೈತರಿಗೂ ಸಾಲ ನೀಡಿ, ಆ ಮೇಲೆ ಮನ್ನಾ ಮಾಡಿ ಎಂದು ಅವರು ಒತ್ತಾಯಿಸಿದರು.

`ಹೊಟ್ಟೆಗೆ ಹಿಟ್ಟಿಲ್ಲ...~

 

ಬೆಂಗಳೂರು: `ನಮಗೇ ಹೊಟ್ಟೆಗೆ ಹಿಟ್ಟಿಲ್ಲ. ತಮಿಳುನಾಡಿಗೆ ಎಲ್ಲಿಂದ ತರುವುದು....~

ಈ ಪ್ರಶ್ನೆ ಎತ್ತಿದ್ದು ಪಕ್ಷೇತರ ಸದಸ್ಯ ಪಿ.ಎಂ.ನರೇಂದ್ರಸ್ವಾಮಿ.ವಿಧಾನಸಭೆಯಲ್ಲಿ ಬರ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು `ಇತ್ತೀಚೆಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯೊಬ್ಬರು ಕಾವೇರಿ ನದಿ ನೀರಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸುತ್ತಿದ್ದು, ಅದರ ವಿರುದ್ಧ ಹೋರಾಟ ನಡೆಸಬೇಕು~ ಎಂದು ಆಗ್ರಹಪಡಿಸಿದರು.`ಕಾವೇರಿ ನದಿ ಪ್ರಾಧಿಕಾರದ ಸಭೆ ಕರೆಯಬೇಕು ಎಂದು ಪ್ರಧಾನಿಯನ್ನು ಆಗ್ರಹಪಡಿಸಿರುವ ಅವರಿಗೆ ಇಡೀ ಸದನ ಧಿಕ್ಕಾರ ಹೇಳಬೇಕು. ನಮ್ಮ ಹೊಟ್ಟೆಗೇ ನೀರಿಲ್ಲ, ಹಿಟ್ಟಿಲ್ಲ. ಅವರಿಗೆ ಎಲ್ಲಿಂದ ನೀರು ಕೊಡುವುದು. ಇಂತಹ ಬೇಡಿಕೆಗಳಿಗೆ ಸ್ಪಂದಿಸಬಾರದು~ ಎಂದರು.`ಕಾವೇರಿ ನದಿ ನಮ್ಮ ಕ್ಷೇತ್ರದಲ್ಲೇ (ಮಳವಳ್ಳಿ) ಹರಿದರೂ ಇನ್ನೂ ಹಲವು ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ನೀರು ಒದಗಿಸಲು ದೂರದೃಷ್ಟಿಯ ಯೋಜನೆಗಳನ್ನು ಹಮ್ಮಿಕೊಂಡಿಲ್ಲ~ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.