ಶನಿವಾರ, ಏಪ್ರಿಲ್ 17, 2021
24 °C

ನಾಗರಕುಂಟೆಗೆ ನಡೆದಿದೆ ಕಾಯಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಗರಕುಂಟೆಗೆ ನಡೆದಿದೆ ಕಾಯಕಲ್ಪ

ಕೋಲಾರ: ನಗರದ ಹೃದಯ ಭಾಗದಲ್ಲಿರುವ ನಾಗರಕುಂಟೆ ಅಭಿವೃದ್ಧಿಗೆ ಜಿಲ್ಲಾಡಳಿತ ಚಾಲನೆ ನೀಡಿ ಗುರುವಾರಕ್ಕೆ ಸರಿಯಾಗಿ ಮೂರು ತಿಂಗಳಾಗುತ್ತದೆ. ಕಳೆದ ಅ.8ರಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಈ ಕಾರ್ಯಕ್ಕೆ ಚಾಲನೆ ನೀಡಿದ ಬಳಿಕ ಈಗ ಅಲ್ಲಿ ಹಳೆಯ ಕಲ್ಯಾಣಿಯ ಚಿತ್ರವೊಂದು ಅಸ್ಪಷ್ಟವಾಗಿ ಮೂಡಿದೆ.   ಗೋಪುರದಂತೆ ಕಾಣುತ್ತಿದ್ದ ಕಸ ಮತ್ತು ಕಟ್ಟಡ ತ್ಯಾಜ್ಯದ ಬೃಹತ್ ರಾಶಿ ಕಾಣೆಯಾಗಿದೆ. ಪಳೆಯುಳಿಕೆಯಂತೆ ಕಾಣುತ್ತಿದ್ದ ಗೋಪುರಕ್ಕೆ ವಿಶೇಷ ಕಳೆ ಬಂದಿದೆ. ಜಿಲ್ಲೆಯ ಕಲ್ಯಾಣಿಗಳ ಅಭಿವೃದ್ಧಿಗೆ ಚಾಲನೆ ದೊರೆತ ಬಳಿಕ ಸಮಗ್ರ ಅಭಿವೃದ್ಧಿ ಅವಕಾಶ ಪಡೆದಿರುವ ನಗರದ ವೊದಲ ಕಲ್ಯಾಣಿಯಾಗಿಯೂ ನಾಗರಕುಂಟೆ ಗಮನ ಸೆಳೆಯಲಿದೆ.ಆ.8ರಂದು ಈ ಕಲ್ಯಾಣಿ ಅಭಿವೃದ್ಧಿಗೆ ಚಾಲನೆ ದೊರೆತ ಸಂದರ್ಭದಲ್ಲಿ ನೆರೆದ ಅಧಿಕಾರಿಗಳು, ಸಂಘ-ಸಂಸ್ಥೆಗಳ ಕಾರ್ಯಕರ್ತರು ಕಲ್ಯಾಣಿಯ ಅಗಾಧ ಆಳಕ್ಕೆ ಬೆರಗುಪಟ್ಟಿದ್ದರು. ಇದನ್ನು ಅಭಿವೃದ್ಧಿಪಡಿಸುವುದು ಅಷ್ಟು ಸುಲಭವಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದರು. ಅಂತರಗಂಗೆಯ ಬೆಟ್ಟ ಸಾಲುಗಳಿಂದ ಹರಿದು ಬರುವ ನೀರು ಸಂಗ್ರಹವಾಗಲೆಂದೇ ನಿರ್ಮಿಸಿದ್ದ ನಾಗರಕುಂಟೆಯಲ್ಲಿ ಮತ್ತೆ ನೀರಿನ ಕಲರವ ಕೇಳಿಬರಲಿದೆ. ಅದಕ್ಕೆಂದೇ 75 ಲಕ್ಷ ವೆಚ್ಚದ ಅಭಿವೃದ್ಧಿ ಯೋಜನೆಯ ಅನುಷ್ಠಾನ ಕೆಲಸವೂ ಭರದಿಂದ ನಡೆಯುತ್ತಿದೆ.ಕಲ್ಯಾಣಿಯ ಪಾರಂಪರಿಕ ಸ್ವರೂಪವನ್ನು ಕಾಪಾಡುವ ರೀತಿಯಲ್ಲೇ ಕಲ್ಯಾಣಿಯ 200*100 ಅಡಿ ವ್ಯಾಪ್ತಿಯಲ್ಲಿ ಬೃಹತ್ ಸಿಮೆಂಟ್ ತಡೆಗೋಡೆಯನ್ನು ನಿರ್ಮಿಸುವ ಕೆಲಸ ಹಲವು ದಿನಗಳಿಂದ ನಡೆಯುತ್ತಿದೆ.ಮೊದಲಿನಂತೆ ಜನ  ಇಲ್ಲಿ ಕಸ ಸುರಿಯುವುದನ್ನು ತಪ್ಪಿಸುವುದು ಮತ್ತು ಮಳೆ ನೀರು ಸಂಗ್ರಹಕ್ಕೆ ಅವಕಾಶ, ಅನುಕೂಲ ಕಲ್ಪಿಸುವುದು ಈ ತಡೆಗೋಡೆ ನಿರ್ಮಾಣದ ಉದ್ದೇಶ ಎನ್ನುತ್ತಾರೆ ಕಾಮಗಾರಿಯನ್ನು ನಡೆಸುತ್ತಿರುವ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ನಾರಾಯಣಗೌಡ.ಬುಧವಾರ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಅವರು, ಜನ ಸುರಿದಿದ್ದ ಕಸ, ಕಟ್ಟಡ ತ್ಯಾಜ್ಯದ ಬೃಹತ್ ರಾಶಿಯನ್ನು ಸುಮಾರು 15 ಲಕ್ಷ ವೆಚ್ಚದಲ್ಲಿ ತೆರವುಗೊಳಿಸಲಾಗಿದೆ. ಕಲ್ಯಾಣಿಯ ಎಲ್ಲ ಕಸವನ್ನೂ ತೆರವುಗೊಳಿಸುವ ಪ್ರಯತ್ನ ನಡೆಸಿದರೆ ಜನರಿಗೆ ಓಡಾಡಲು ರಸ್ತೆಯೇ ಸಿಗದ ಸನ್ನಿವೇಶ ನಿರ್ಮಾಣವಾಗಬಹುದು ಎಂಬ ಕಾರಣಕ್ಕೆ 200*100 ಅಡಿ ವ್ಯಾಪ್ತಿಯಲ್ಲಿ ಕಲ್ಯಾಣಿಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.ಉದ್ಯಾನ ನಿರ್ಮಾಣ: ಕಲ್ಯಾಣಿಯ ತಳಭಾಗದಲ್ಲಿ ಪಾರಂಪರಿಕ ಸ್ವರೂಪವನ್ನು ಉಳಿಸಿಕೊಂಡು ಮೇಲ್ಭಾಗದಲ್ಲಿ ವಾಕಿಂಗ್ ಪಾಥ್ ನಿರ್ಮಾಣ ಮಾಡುವ ಉದ್ದೇಶವೂ ಇದೆ. ಕಲ್ಯಾಣಿಯಿಂದ ಮೇಲಕ್ಕೆ ಮೆಟ್ಟಿಲುಗಳನ್ನು ನಿರ್ಮಿಸಲಾಗುವುದು. ಮೇಲ್ಭಾಗದಲ್ಲಿ ಪುಟ್ಟ ಉದ್ಯಾನವನ್ನು ನಿರ್ಮಿಸಲಾಗುವುದು. ಆಗ ಕಲ್ಯಾಣಿಯು ಏಕಕಾಲಕ್ಕೆ ವಾಯುವಿಹಾರಕ್ಕೆ ಬರುವವರಿಗೆ, ಮಕ್ಕಳಿಗೆ ಆಕರ್ಷಣೆ ಕೇಂದ್ರವಾಗುತ್ತದೆ.ಹಾಗೆಯೇ ಕಲ್ಯಾಣಿ ಪಕ್ಕದ ವೆಂಕಟರಮಣಸ್ವಾಮಿ ದೇವಾಲಯಕ್ಕೆ ಬರುವವರಿಗೆ ಧಾರ್ಮಿಕ ಮಹತ್ವದ ಸ್ಥಳವಾಗಿಯೂ ಉಳಿಯಲಿದೆ ಎಂದು ಅವರು ನುಡಿದರು.ಡಿಸೆಂಬರ್-ಜನವರಿ ವೇಳೆಗೆ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದೆ. ನಂತರ ಅದನ್ನು ನಗರಸಭೆಗೆ ಹಸ್ತಾಂತರಿಸಲಾಗುವುದು. ಇದುವರೆಗೂ ಈ ಸ್ಥಳ ಘನ ತ್ಯಾಜ್ಯ ವಿಲೇವಾರಿಯಿಂದ ಸುತ್ತಮುತ್ತಲಿನ ಪರಿಸರವನ್ನು ಕಲುಷಿಷಿತಗೊಳಿಸುತ್ತಿತ್ತು. ಒತ್ತುವರಿದಾರರಿಗೂ ಅನುಕೂಲ ಕಲ್ಪಿಸಿದಂತಾಗುತ್ತಿತ್ತು. ಇನ್ನು ಮುಂದೆ ಅಂಥ ವಾತಾವರಣ ಇರುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ನಾಗರಕುಂಟೆಯಲ್ಲಿ ಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮೂರು ವಾರದೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ. ಡಿಸೆಂಬರ್ ಹೊತ್ತಿಗೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದೆ. ಹೊಸ ವರ್ಷದ ಹೊತ್ತಿಗೆ ನಾಗರಕುಂಟೆ ನಗರದ ಪ್ರಮುಖ ಆಕರ್ಷಣೆಯಾಗಲಿದೆ. ಜಲಸಂರಕ್ಷಣೆ ಮತ್ತು ಕಲ್ಯಾಣಿ ಅಭಿವೃದ್ಧಿಯ ಪ್ರಮಖ ಮಾದರಿಯಾಗಿಯೂ ಗಮನ ಸೆಳೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ತಿಳಿಸಿದರು.ಮಳೆಗಾಲ ಮುಗಿದ ಬಳಿಕ ವೇಣುಗೋಪಾಲ ಪುಷ್ಪರಣಿಯ ಅಭಿವೃದ್ಧಿ ಕಾರ್ಯವನ್ನು ಖಂಡಿತವಾಗಿಯೂ ಕೈಗೆತ್ತಿಕೊಳ್ಳಲಾಗುವುದು. ಪುಷ್ಕರಣಿಯಲ್ಲಿ ಹೂಳು, ಕೆಸರು ತುಂಬಿದೆ. ಅದನ್ನು ಈಗ ತೆರವುಗೊಳಿಸಿದರೆ ಅಭಿವೃದ್ಧಿ ಕಾರ್ಯಕ್ಕೆ ತೊಂದರೆಯಾಗಬಹುದು ಎಂಬ ಕಾರಣದಿಂದ ಕಾರ್ಯವನ್ನು ಸ್ವಲ್ಪ ಅವಧಿಯ ಮಟ್ಟಿಗೆ ಮುಂದೂಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.