ಭಾನುವಾರ, ಜೂನ್ 13, 2021
29 °C

ನಾಗರಹೊಳೆ ಕಾಡಿಗೆ ಬೆಂಕಿ ಪಾರದರ್ಶಕ ತನಿಖೆ ಅಗತ್ಯ: ಲಕ್ಷ್ಮಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಬೆಂಕಿ ಬಿದ್ದ ಪರಿಣಾಮ 509 ಹೆಕ್ಟೇರ್ ಅರಣ್ಯ ಪ್ರದೇಶ ಸುಟ್ಟು ಹೋಗಿದೆ. ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಅರಣ್ಯ ಇಲಾಖೆ ಪಾರದರ್ಶಕ ತನಿಖೆ ನಡೆಸಬೇಕು~ ಎಂದು ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ ಒತ್ತಾಯಿಸಿದರು.`ಅರಣ್ಯ ಪ್ರದೇಶಕ್ಕೆ ಬೆಂಕಿ ಹೇಗೆ ಬಿದ್ದಿದೆ? ಎಂಬುದನ್ನು ಪ್ರಾಮಾಣಿಕವಾಗಿ ಪತ್ತೆ ಮಾಡಬೇಕು. ಇದಕ್ಕೆ ಸಾರ್ವ ಜನಿಕರು, ಇಲಾಖೆ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಆದಿವಾಸಿಗಳ ಸಹಕಾರ ಪಡೆಯಬೇಕು. ಬೇಸಿಗೆ ಇನ್ನೂ ಎರಡು ತಿಂಗಳು ಇರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ನಾಗರಹೊಳೆ ಕಾಡು ಇನ್ನೂ ಬೂದಿ ಮುಚ್ಚಿದ ಕೆಂಡದಂತಿದ್ದು, ಯಾವಾಗ ಬೇಕಾದರೂ ಮತ್ತೆ ಬೆಂಕಿ ಆವರಿಸಿಕೊಳ್ಳಬಹುದು. ಆದ್ದರಿಂದ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು~ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.`ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದ ಪರಿಣಾಮ ಬಿದಿರು, ಮರಗಳು ಮಾತ್ರವಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಸರೀಸೃಪಗಳು, ಪ್ರಾಣಿ, ಪಕ್ಷಿಗಳು ಜೀವ ಕಳೆದುಕೊಂಡಿವೆ. 1967ರಲ್ಲಿ ಚಿಕ್ಕಮಗಳೂರಿನ ಭಗವತಿ ಕಾಡಿಗೆ ಬೆಂಕಿ ಬಿದ್ದಿದ್ದು, ಘಟನೆ ನಡೆದು ಇಷ್ಟು ವರ್ಷಗಳಾದರೂ ಕಾಡನ್ನು ಮರು ಸೃಷ್ಟಿಸಲು ಸಾಧ್ಯವಾಗಿಲ್ಲ. ಅದೇ ರೀತಿ 1992ರಲ್ಲಿ ನಾಗರಹೊಳೆ ಕಾಡಿಗೆ ಬೆಂಕಿ ಬಿದ್ದ ಪರಿಣಾಮ 400 ಹೆಕ್ಟೇರ್ ಅರಣ್ಯ ನಾಶವಾಗಿದೆ. ಆದ್ದರಿಂದ ಈ ವಿಷಯವನ್ನು ಇಲಾಖೆ, ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು~ ಎಂದು ತಿಳಿಸಿದರು.`ನಷ್ಟವಾಗಿರುವ ಅರಣ್ಯ ಪ್ರದೇಶವನ್ನು ಮರು ಸೃಷ್ಟಿಸಲು ಸರ್ಕಾರ ಯೋಜನೆ ರೂಪಿಸಬೇಕು. ಸಾರ್ವಜನಿಕರೂ ಇದರಲ್ಲಿ ಭಾಗಿಯಾಗಬೇಕು. ಯಾವುದಾದರೂ ರೂಪದಲ್ಲಿ ಒಂದು ದಿನ ಕೆಲಸ ಮಾಡಬೇಕು. ನೌಕರರು ತಮ್ಮ ಸಂಬಳದ ಒಂದು ಗಂಟೆಯ ಪಾಲನ್ನು ಸರ್ಕಾರಕ್ಕೆ ನೀಡಬೇಕು. ಆ ಹಣವನ್ನು ಬಳಸಿ, ಅರಣ್ಯದಲ್ಲಿ ಮತ್ತೆ ಬಿದಿರು, ಗಿಡ-ಮರಗಳನ್ನು ಬೆಳೆಸಲು ಇಲಾಖೆ ಮುತುವರ್ಜಿ ವಹಿಸಬೇಕು~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.