ಶನಿವಾರ, ಮೇ 8, 2021
18 °C

ನಾಗರಿಕರಿಗೆ ಸಕಾಲದಿಂದ ತ್ವರಿತ ಸೇವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಸಕಾಲ ಸೇವೆಯಿಂದ ಜನರಿಗೆ ತ್ವರಿತ ಸೇವೆ ಸಿಗಲಿದೆ. ನಾಗರಿಕರ ಕೆಲಸಗಳಿಗೆ ವಿಳಂಬವಾಗಲು ಇಲ್ಲಿ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ ಹೇಳಿದರು.ನಗರದಲ್ಲಿ ಸೋಮವಾರ `ಕರ್ನಾಟಕ ನಾಗರಿಕ ಸೇವೆಗಳ ಖಾತರಿ~ ವ್ಯವಸ್ಥೆ `ಸಕಾಲ~ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಕಾಲ ಇಂದಿನಿಂದ ಜಾರಿಗೊಂಡಿದೆ. ಜನಸಾಮಾನ್ಯರಿಗೆ ಅಗತ್ಯವಿರುವ ವಿವಿಧ ಇಲಾಖೆಗಳ ಹಲವು ಸೇವೆಗಳನ್ನು ಇದರ ವ್ಯಾಪ್ತಿಗೆ ತರಲಾಗಿದೆ. ನಾಗರಿಕರಿಗೆ ತ್ವರಿತ ಸೇವೆ ಲಭ್ಯವಾಗಲಿದೆ. ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಂಗೇಗೌಡ ಮಾತನಾಡಿ, ಸಕಾಲ ಯೋಜನೆಯು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮ. ಆಡಳಿತದಲ್ಲಿ ಪಾರದರ್ಶಕತೆ ತರುವುದು ಇದರ ಉದ್ದೇಶ. ಇದಕ್ಕೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆಗೆ ಸಂಬಂಧಪಟ್ಟ ಅರ್ಜಿಗಳನ್ನು ಪ್ರಾಯೋಗಿಕವಾಗಿ ಸಾರ್ವಜನಿಕರಿಂದ ಸ್ವೀಕರಿಸಿ, ಸ್ವೀಕೃತಿ ನೀಡಲಾಯಿತು. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಯಾಲಕ್ಕಿಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಗಟ್ರೂಡ್ ವೇಗಸ್ ಇನ್ನಿತರರು ಇದ್ದರು.`ನಾಗರಿಕರಿಗೆ ಕಾಲಾವಧಿಯಲ್ಲಿ ಸೇವೆ~

 ತರೀಕೆರೆ: ನಾಗರಿಕ ಸನ್ನದು ಅನ್ವಯ ಪುರಸಭೆಯ ಕಾರ್ಯವನ್ನು ನಿರ್ವಹಿಸಲು ನಿರ್ಧರಿಸಿದ್ದು, ಈ ಸಂಬಂಧ ಪೌರಸೇವೆಯಲ್ಲಿ ಬರುವ ಜನನ-ಮರಣ ದೃಢೀಕರಣ ಪತ್ರ, ವ್ಯಾಪಾರ ವಹಿವಾಟು ಪರವಾನಗಿ ಪತ್ರ, ಕಟ್ಟಡ ನಿರ್ಮಾಣ ಪರವಾನಗಿ ಪತ್ರ, ದಾಖಲೆಗಳ ಖಾತಾ ನಕಲು ಮತ್ತು ನೀರು ಸರಬರಾಜು ಹೊಸ ಸಂಪರ್ಕ ಕಲ್ಪಿಸುವ ಕಾರ್ಯಗಳಿಗೆ ಸಕಾಲದ ಕಾಲಾವಧಿಯಲ್ಲಿ ನೀಡಲಾಗುವುದು ಎಂದು ಪುರಸಭೆಯ ಮುಖ್ಯಾಧಿಕಾರಿ ಕೆ.ಎಂ.ಸತ್ಯನಾರಾಯಣ್ ತಿಳಿಸಿದರು.ಪುರಸಭೆಯ ಆವರಣದಲ್ಲಿ ಸೋಮವಾರ ಸಾರ್ವಜನಿಕರ ಮಾಹಿತಿಗಾಗಿ ನಾಗರಿಕ ಸೇವಾ ಯೋಜನೆಯ ಮಾಹಿತಿಯನ್ನೊಳಗೊಂಡ ಎರಡು ಪ್ಲೆಕ್ಸ್ ಬ್ಯಾನರ್‌ಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವ್ಯವಸ್ಥಾಪಕ ನಾಗರಾಜ್, ಸಕಾಲ ಯೋಜನೆಯ ನಿರ್ವಾಹಕ ಎಚ್.ಪ್ರಶಾಂತ್, ಎಸ್‌ಜೆಎಸ್‌ಆರ್‌ವೈನ ನಿರ್ವಾಹಕಿ ಅನುಪಮ, ಸ್ಥಾಯಿ ಸಮಿತಿ ಅಧ್ಯಕ್ಷ ಮಿಲ್ಟ್ರಿ ಶ್ರೀನಿವಾಸ್, ಮಾಜಿ ಪುರಸಭಾಧ್ಯರಾದ ಟಿ.ಜೆ.ಗೋಪಿಕುಮಾರ್, ಟಿ.ಆರ್.ಬಸವರಾಜ್ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ರೇವಣ್ಣ ಮತ್ತು ಇತರರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.