ಒಂದರ್ಥದಲ್ಲಿ ನಾಟಕಕ್ಕೆ ಇದು ಸತ್ವಪರೀಕ್ಷೆಯ ಕಾಲ.
ಟಿ.ವಿ, ಮೊಬೈಲ್, ಅಂತರ್ಜಾಲ ಇಷ್ಟಿದ್ದರೆ ಸಾಕು, ಯಾರಿಗೆ ಬೇಕು ನಾಟಕ? ರಂಜನೆಗೆ ನಾಟಕವನ್ನೇ ಯಾಕೆ ಆಶ್ರಯಿಸಬೇಕು? ರಂಜನೆ ಬೆರಳ ತುದಿಯಲ್ಲೇ ಸಿಗುತ್ತದಲ್ಲ..? ಮಾಹಿತಿಯೂ ಅಷ್ಟೆ. ಅಂದಮೇಲೆ ನಾಟಕ ಯಾಕೆ ಬೇಕು? ನಾಟಕದ ಕಥೆ ಮುಗಿಯಿತು. ಮಂಗಳ ಹಾಡುವುದಷ್ಟೆ ಕೆಲಸ. ನಾಟಕ ಇನ್ನು ಇತಿಹಾಸ. ಕಲಾವಿದರು ಬೇರೆ ಕೆಲಸ ನೋಡಿಕೊಳ್ಳಲಿ. ನಾಟಕ ಪರದೆ, ಬಣ್ಣ, ಪರಿಕರ ಇನ್ನೇನಿದ್ದರೂ ಸಂಗ್ರಹಾಲಯ ಸೇರಿಕೊಳ್ಳಲಿವೆ ಎಂದು ಯಾರಿಗಾದರೂ ಒಂದು ಕ್ಷಣ ಅನ್ನಿಸಿದರೆ ಅದು ಸಹಜ. ಮೇಲ್ನೋಟಕ್ಕೆ ಹಾಗೆ ಕಾಣಿಸುತ್ತಿದೆ.

ಆದರೆ ಸಂಗೀತಕ್ಕೆ ಸಾವಿಲ್ಲ, ನೃತ್ಯ ಹಾಗೂ ದೃಶ್ಯಕಲೆಗೂ ಕೊನೆಯಿಲ್ಲ. ಅಂತೆಯೇ ನಾಟಕ ಕೂಡ. ದೃಶ್ಯ, ಶ್ರವ್ಯ, ಕ್ರಿಯೆ ಎಲ್ಲವನ್ನೂ ಒಳಗೊಂಡ ಸಂಕೀರ್ಣ ಕಲೆ ನಾಟಕ. ಸಾಹಿತ್ಯ ಹಾಗೂ ಪ್ರದರ್ಶಕ ಕಲೆಗಳಲ್ಲಿ ನಾಟಕಕ್ಕೆ ಅಗ್ರಸ್ಥಾನ. ಅಂತೆಯೇ ಕಾಳಿದಾಸ ‘ಕಾವ್ಯೇಷು ನಾಟಕಂ ರಮ್ಯಂ’ ಎಂದು ಕರೆದ. ನಾಟಕ ಅನಾದಿ ಕಲೆ. ಮನುಷ್ಯನ ಹುಟ್ಟಿನೊಂದಿಗೆ ನಾಟಕ ಹುಟ್ಟಿದೆ ಅಥವಾ ನಾಟಕವನ್ನು ಕಟ್ಟಿಕೊಂಡೇ ಮನುಷ್ಯ ಹುಟ್ಟಿದ. ನಾಟಕದ ಅಂತ್ಯ ಎಂದರೆ ಅದು ಮನುಷ್ಯನ ಅಂತ್ಯ. ಎಲ್ಲಿವರೆಗೆ ಮನುಷ್ಯ ಬದುಕಿರುತ್ತಾನೋ ಅಲ್ಲಿವರೆಗೆ ನಾಟಕ ಇದ್ದೇ ಇರುತ್ತದೆ. ದೃಶ್ಯ ಬದಲಾಗುತ್ತದೆ, ಪಾತ್ರಗಳು ಬದಲಾಗುತ್ತವೆ. ಆದರೆ ನಾಟಕ ನಿಲ್ಲುವುದಿಲ್ಲ. ಹೊಸ ಪಾತ್ರಗಳು ಪ್ರವೇಶ ಪಡೆಯುವುದು ನಾಟಕ ಮುನ್ನಡೆಯುವುದರ ಶುಭಸೂಚನೆ. ನಾಟಕದ ಗತಿಶೀಲ ಚಲನಶೀಲತೆ ಇದು.

ನಟ ಇರುವವರೆಗೆ ನಾಟಕ ಇರುತ್ತದೆ, ನಟಿ ಇರುವವರೆಗೆ ಅದಕ್ಕೆ ಸಾವಿಲ್ಲ. ನಾಟಕ ಕಲೆಗೆ ನಟಿ (ಟ) ಒಂದು ಕಣ್ಣಾದರೆ, ಪ್ರೇಕ್ಷಕ ಗಣ ಮತ್ತೊಂದು ಕಣ್ಣು. ಒಬ್ಬ ಪ್ರೇಕ್ಷಕನಿದ್ದರೆ ಸಾಲದು, ಭಿನ್ನರುಚಿ, ಧರ್ಮಗಳ ಅನೇಕ ಪ್ರೇಕ್ಷಕರು ಇರಬೇಕು. ‘ನಾಟ್ಯಂ ಭಿನ್ನ ರುಚೇರ್ಜನಸ್ಯ ಬಹುಧಾಪ್ಯೇಕಂ ಸಮಾರಾಧನಂ’ ಎನ್ನುವಂತೆ ಭಿನ್ನರುಚಿ, ಧರ್ಮಗಳ ಪ್ರೇಕ್ಷಕರು ಏಕೀಭವಿಸಬೇಕು. ಅಂತಹ ಸಮರೂಪಿ ಸಮೂಹ ಇದ್ದಾಗಲೇ ನಾಟಕ ಕಲೆಯ ವಿಶಿಷ್ಟ ಸ್ವರೂಪ ಸುವ್ಯಕ್ತವಾಗುತ್ತದೆ. ‘ಎಲ್ಲ ವರ್ಗದ ಪ್ರೇಕ್ಷಕರೂ ರಸಭಾವಗಳ ಅನುಭೂತಿಗೆ ಏಕಕಾಲಕ್ಕೆ ಒಳಗಾಗುವುದರಿಂದಲೇ ರಂಗಭೂಮಿ ಎಲ್ಲ ವರ್ಗದ ಜನರ ಮನರಂಜನೆ ಕೇಂದ್ರ. ಇನ್ನೊಬ್ಬರ ಅನುಭವಗಳಲ್ಲಿ ತಾನೂ ಭಾಗಿಯಾಗಬೇಕೆಂಬ ಇಚ್ಛೆ ಮನುಷ್ಯನಲ್ಲಿ ಇರುತ್ತದೆ. ನಾಟಕ ಅದನ್ನು ಪೂರೈಸುತ್ತದೆ.’ ನಾಟಕ ಇತರೆಲ್ಲ ಕಲೆಗಳಿಂತ ಸಂಕೀರ್ಣವೂ ಭಿನ್ನವೂ ಆಗುವುದು ಇದೇ ಕಾರಣಕ್ಕೆ.

ಪಂಡಿತ ಪಾಮರ
‘ಪಂಡಿತರು, ಪಾಮರರು’ ಇಬ್ಬರಿಗೂ ಏಕಕಾಲಕ್ಕೆ ನಾಟಕ ರುಚಿಸಬೇಕು. ಬಹುಜನ ಸಮುದಾಯಕ್ಕೆ ಹಿಡಿಸಿದಾಗ ಆ ಕಾಲದ ರಂಗಚಟುವಟಿಕೆ ಶ್ರೀಮಂತವಾಗಿತ್ತು ಎಂದೇ ಅರ್ಥ. ನಮ್ಮ ವೃತ್ತಿರಂಗಭೂಮಿಯಲ್ಲಿ ಹಾಗಾಗಿದೆ. ಆದ್ದರಿಂದಲೇ ಇಂದಿಗೆ ನಮಗದು ಗತವೈಭವ! ಜಾನಪದ ಎಂದಿನಿಂದಲೂ ಪಂಡಿತ ಪಾಮರರಿಬ್ಬರನ್ನು ಮೆಚ್ಚಿಸಿದೆ. ಆ ಕಾರಣಕ್ಕೆ ಅದಂತೂ ಎಂದಿಗೂ ಜನಪ್ರಿಯ ರಂಗಭೂಮಿ.

ಹವ್ಯಾಸಿಯಲ್ಲಿ ಪಂಡಿತ ಪಾಮರರಿಬ್ಬರನ್ನೂ ಏಕಕಾಲಕ್ಕೆ ಮೆಚ್ಚಿಸುವ ಕೆಲಸ ಆಗಾಗ ಮಾತ್ರ ಆಗಿದೆ. ವೃತ್ತಿ ರಂಗಭೂಮಿಯ ಆಧುನಿಕ ರೂಪ ಎನಿಸಿಕೊಂಡಿರುವ ರೆಪರ್ಟರಿ (ಸಂಚಾರಿ ವೃತ್ತಿ ನಾಟಕ ಕಂಪೆನಿ) ಜನಪ್ರಿಯ ಮಾಧ್ಯಮವೇ ಆಗಿದೆ. ತನ್ನ ಕಲಾತ್ಮಕ ರೂಪದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ, ಒಂದು ಉದ್ದೇಶಕ್ಕೆ ಪ್ರಯೋಗಿಸಲಾಗುವ ಬೀದಿ ನಾಟಕ ಎಂದಿಗೂ ಜನಪ್ರಿಯವೇ. ಹೀಗೆ ನಾಟಕಗಳು ಜನಪ್ರಿಯವಾಗಿದ್ದಾಗಲೇ ಅದರ ಚಟುವಟಿಕೆ ಬಿರುಸಾಗಿದೆ. ಜನಪ್ರಿಯತೆ ಪಡೆದ ನಾಟಕಕ್ಕೆ ಪ್ರೇಕ್ಷಕ ದಾಂಗುಡಿ ಇಡುತ್ತಾನೆ. ಪ್ರೇಕ್ಷಕ ನಾಟಕದ ಮತ್ತೊಂದು ಕಣ್ಣು. ಜನಪ್ರಿಯ ಪ್ರಕಾರವು ಪ್ರೇಕ್ಷಕನನ್ನು ನಿರ್ಲಕ್ಷಿಸುವುದಿಲ್ಲ. ಆದ್ದರಿಂದಲೇ ಜನಪ್ರಿಯತೆ ನಾಟಕಕ್ಕೆ ಒಂದು ವರವೇ ಹೊರತು, ಶಾಪವಲ್ಲ.

ವಿಶ್ವ ರಂಗಭೂಮಿ ದಿನಾಚರಣೆಗೆ ಈ ಬಾರಿ ಸಂದೇಶ ನೀಡಿರುವ ದಕ್ಷಿಣ ಆಫ್ರಿಕಾದ ನಾಟಕಕಾರ ಬ್ರೆಟ್ ಬೈಲೆ ಅವರೂ ಇದೇ ಮಾತುಗಳನ್ನು ಸಮರ್ಥಿಸುವಂತೆ, ‘ಸಮುದಾಯ ಇರುವ ಎಲ್ಲೆಡೆ ನಾಟಕದ ಅದಮ್ಯ ಚೇತನ ಪ್ರಕಟಗೊಳ್ಳುತ್ತದೆ. ನಾಟಕ ವಿಭಿನ್ನ ಸಂಪ್ರದಾಯಗಳ ಮುಖವಾಡಗಳನ್ನು ವೇಷಭೂಷಣಗಳನ್ನು ಧರಿಸಿ ಆ ಭಾಷೆ, ಲಯ ಮತ್ತು ಸಂಜ್ಞೆಗಳನ್ನು ಮೈಗೂಡಿಸಿಕೊಂಡು ನೆಲೆಯೂರಿದೆ’ ಎಂದು ಹೇಳಿದ್ದಾರೆ.

ನಾಟಕಕ್ಕೆ ನಟ ನಟಿಯರು ಜೀವಾಳವಾದರೆ, ನಟ ನಟಿಯರಿಗೆ ಪ್ರೇಕ್ಷಕರು ಜೀವಾಳ. ಕಥೆ ತಿಳಿಯಲು ಯಾರೂ ನಾಟಕಕ್ಕೆ ಬರುವುದಿಲ್ಲ. ನಟಿ ಅಥವಾ ನಟ ಇಂದಿನ ನಾಟಕದಲ್ಲಿ ಏನನ್ನು ಹೊಸದಾಗಿ ಕಾಣಿಸುತ್ತಾನೆ ಎನ್ನುವ ಕುತೂಹಲ ನಾಟಕಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಪ್ರತಿಭಾವಂತ ನಟ ನಟಿಯರು ಅಂತಹ ಕುತೂಹಲವನ್ನು ಪ್ರೇಕ್ಷಕನಲ್ಲಿ ಉಂಟು ಮಾಡುತ್ತಾರೆ. ಆಗ ಪ್ರೇಕ್ಷಕರು ರಂಗಸ್ಥಳಕ್ಕೆ ಧುಮ್ಮಿಕ್ಕುತ್ತಾರೆ. ನಟ ಮತ್ತು ಪ್ರೇಕ್ಷಕನ ಮಧ್ಯೆ ಉಂಟಾಗುವ ರಸಾನುಭವವೇ ನಾಟಕ. ಕಲಾವಿದರು ಸೃಜನಶೀಲವಾಗಿದ್ದಷ್ಟು ನಾಟಕ ಕಳೆಗಟ್ಟುತ್ತದೆ. ‘ನಟರಿಗೆ ನಿನ್ನೆಯ ಹಂಗಿಲ್ಲ’ ಎನ್ನುವ ಮಾತಿದೆ. ನಿತ್ಯ ಮಾಡುವ ಅಭಿನಯವೂ ಹೊಸ ಕಾಣ್ಕೆ. ಅದು ನಿನ್ನೆಯ ಪುನರಾವರ್ತನೆ ಅಲ್ಲ. ಆಗ ಪ್ರೇಕ್ಷಕ ರಂಗಸ್ಥಳಕ್ಕೆ ಧಾವಿಸುತ್ತಾನೆ.

ರಂಜನೆಯೇ ಪ್ರಧಾನ
ನಾಟಕದಲ್ಲಿ ಶಿಕ್ಷಣ ನೀಡುವುದು ಅಥವಾ ಅದರ ವೈಚಾರಿಕತೆ ನಂತರದ್ದು. ರಂಜನೆಯೇ ಪ್ರಧಾನ. ಅದಿಲ್ಲದಿದ್ದರೆ ಪ್ರೇಕ್ಷಕ ರಂಗಮಂದಿರದಿಂದ ದೂರ ಉಳಿಯುತ್ತಾನೆ. ನಾಟಕ ನೋಡಲು ಬರುವ ಪ್ರೇಕ್ಷಕನಿಗೆ ಅರ್ಧ ಗಂಟೆಯಲ್ಲಿ ನಾಟಕ ಹಿಡಿಸಬೇಕು. ಕಲಾವಿದರ ಅಭಿನಯ, ಗಾಯನ ಅವರನ್ನು ಹಿಡಿದು ಕೂಡಿಸಬೇಕು. ಸಾಮಾಜಿಕ ಉದ್ದೇಶಕ್ಕೆ ನಾಟಕವನ್ನು ಬಳಸಿಕೊಳ್ಳುವುದನ್ನು ನಂತರ ವಿವೇಚಿಸೋಣ. ಮೊದಲು ನಾಟಕವನ್ನು ರಸವತ್ತಾಗಿಸೋಣ. ಪ್ರೇಕ್ಷಕನನ್ನು ಕಡೆಗಣಿಸಿದರೆ ನಾಟಕ ಉಳಿಯದು.

ಬೆರಳ ತುದಿಯ ರಂಜನೆ, ಮಾಹಿತಿ ಎಂದೂ ನಾಟಕಕ್ಕೆ ಅಡ್ಡಿಯಾಗದು ಎಂದೇ ಭಾವಿಸೋಣ. ಕಿರುತೆರೆ, ಸಿನಿಮಾ ಕಲಾವಿದರು ಸಹ ಆಗಾಗ ನಾಟಕಕ್ಕೆ ಮರಳುತ್ತಲೇ ಇರುತ್ತಾರೆ. ತೆರೆಯ ಮೇಲೆ ಮತ್ತೆ ನವನವೋನ್ಮೇಷಣಶಾಲಿ ಆಗಲು ಅವರಿಗೆ ಉತ್ತೇಜನ ನೀಡುವುದು ನಾಟಕವೇ. ಸಾಹಿತ್ಯಕ್ಕೆ ಜಾನಪದ ತಾಯಿಬೇರು. ತೆರೆಯ ಮೇಲಿನ ಆಟಗಳಿಗೆ ನಾಟಕ ಒಂದು ರೀತಿಯಲ್ಲಿ ತಾಯಿಬೇರು. ನಾಟಕದಲ್ಲಿ ಯಶಸ್ಸು ಪಡೆದ ಕಲಾವಿದ ಮುಂದೆ ಎಲ್ಲಿಯಾದರೂ ಜಯಿಸಬಲ್ಲ ಎಂಬುದು ಯಾವುದೇ ಮಾಧ್ಯಮದ ಕಲಾವಿದರಿಗೆ ಗೊತ್ತಿರುವ ಸಂಗತಿಯೇ. ಅವರೂ ನಾಟಕಕ್ಕೆ ಬರುತ್ತಾರೆ. ಮತ್ತೆ ಜನಪ್ರಿಯತೆ ಸ್ಪರ್ಶ ನೀಡುತ್ತಾರೆ. ಹೀಗೆ ಯಾವ್ಯಾವುದೋ ಮೂಲಗಳಿಂದ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡಷ್ಟೂ ನಾಟಕ ಚಿರಂಜೀವಿಯೇ!

ಭರತನ ನಾಟ್ಯಶಾಸ್ತ್ರ
ರಂಜನೆ ಜತೆಗೆ ಶಿಕ್ಷಣ ನಾಟಕದ ಉದ್ದೇಶ. ಕೃತಯುಗ ಕಳೆದು ತ್ರೇತಾಯುಗ ಆಗಮನದ ಸಂದರ್ಭದಲ್ಲಿ ಜನರಲ್ಲಿ ಆಲಸ್ಯ ಪ್ರವೃತ್ತಿ ಬೆಳೆದಿತ್ತು. ಆಗ ಇಂದ್ರಾದಿ ದೇವತೆಗಳು ಬ್ರಹ್ಮನ ಬಳಿ ಹೋಗಿ, ‘ರಂಜನೆ ಜತೆಗೆ ಜ್ಞಾನ, ಶಿಕ್ಷಣವನ್ನು ಏಕಕಾಲಕ್ಕೆ ಒದಗಿಸುವ ಯಾವುದಾದರೂ ಆಟಿಕೆ ಕೊಡು. ಲೋಭ, ಈರ್ಷೆ ಮುಂತಾದ ದುರ್ಗುಣಗಳಿಂದ ಜನತೆ ಮುಕ್ತರಾಗಲಿ’ ಎಂದು ಬೇಡಿಕೊಳ್ಳುತ್ತಾರೆ. ಆಗ ಬ್ರಹ್ಮ ನಾಟ್ಯವೇದ ರಚಿಸಿದ. ಅದು 5ನೇ ವೇದ ಎಂದೇ ಜನಜನಿತವಾಯಿತು.

‘ಈ 5ನೇ ವೇದ ಓದುವ, ಬಳಸುವ ಅಧಿಕಾರ ದ್ವಿಜರಿಗೆ ಮಾತ್ರವಲ್ಲ, ಎಲ್ಲ ವರ್ಣದವರಿಗೆ ಇದೆ’ ಎಂದು ಬ್ರಹ್ಮ ಸ್ಪಷ್ಟಪಡಿಸುತ್ತಾನೆ. ಆದರೆ ಅದನ್ನು ಓದಿ ತಿಳಿದುಕೊಳ್ಳಲು ಇಂದ್ರಾದಿ ದೇವತೆಗಳು ಅಸಮರ್ಥರಾಗುತ್ತಾರೆ. ಬ್ರಹ್ಮ ಅದನ್ನು ಭರತನಿಗೆ ಒಪ್ಪಿಸುತ್ತಾನೆ. ಭರತ ತನ್ನ 100 ಮಕ್ಕಳ ಸಹಕಾರದಿಂದ ಅದನ್ನು ಸ್ವರ್ಗಲೋಕದಲ್ಲಿ ಪ್ರದರ್ಶಿಸುತ್ತಾನೆ. ತಮಗೆ ಮಾತ್ರ ನಾಟಕ ಮಾಡಲು ಸಾಧ್ಯವಾಗಿದ್ದಕ್ಕೆ ಭರತನ ಮಕ್ಕಳಿಗೆ ಒಂದು ಸಂದರ್ಭದಲ್ಲಿ ಅಹಂಕಾರ ಬೆಳೆದು ತಮ್ಮ ನಾಟಕವನ್ನು ಪ್ರಹಸನವಾಗಿ ಮಾರ್ಪಡಿಸಿ ಋಷಿ ಮುನಿಗಳು, ದೇವಾನು ದೇವತೆಗಳನ್ನು ನಗೆಗೀಡು ಮಾಡುತ್ತಾರೆ. ಆಗ ಋಷಿಗಳು, ‘ನೀವು ಭೂಲೋಕಕ್ಕೆ ಹೋಗಿ ಶೂದ್ರರಾಗಿರಿ’ ಎಂದು ಶಪಿಸುತ್ತಾರೆ. ಭರತನ ಮಕ್ಕಳಾದ ಕೋಹಲ, ವಾತ್ಸ, ದತ್ತಿಲ ಎಂಬುವರು ಭೂಲೋಕದ ಜನರಿಗಾಗಿಯೇ ಬೇರೆಯೇ ನಾಟ್ಯಶಾಸ್ತ್ರ ಬರೆದು ನಾಟಕವಾಡಲು ತೊಡಗುತ್ತಾರೆ. ಅದೇ ಭರತನ ನಾಟ್ಯ ಶಾಸ್ತ್ರ ಎಂದು ಹೆಸರಾಗುತ್ತದೆ... ನಾಟ್ಯಶಾಸ್ತ್ರದಲ್ಲಿ ಈ ಐತಿಹ್ಯದ ಕಥೆ ಹೀಗೇ ಮುಂದುವರಿಯುತ್ತದೆ.

ವಿಶ್ವರಂಗಭೂಮಿ ದಿನ
ಪ್ರತಿವರ್ಷ ಮಾರ್ಚ್ 27ನ್ನು ವಿಶ್ವ ರಂಗಭೂಮಿ ದಿನವಾಗಿ ಆಚರಿಸುವ ಪರಿಪಾಠ 1962ರಿಂದ ಪ್ರಪಂಚದ ಹಲವು ರಾಷ್ಟ್ರಗಳಲ್ಲಿ ಆರಂಭವಾಗಿದೆ. ಇದಕ್ಕಾಗಿ ಅಂತರ ರಾಷ್ಟ್ರೀಯ ರಂಗಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಮುಖ್ಯ ಕಚೇರಿ ಫ್ರಾನ್ಸ್ ದೇಶದಲ್ಲಿದೆ.
ಪ್ರತಿ ವರ್ಷ 27ಕ್ಕೆ ಒಂದು ತಿಂಗಳ ಮುಂಚೆ ವಿಶ್ವದ ಯಾವುದಾದರೊಂದು ಭಾಷೆಯ ನಟ, ನಿರ್ದೇಶಕ ಅಥವಾ ನಾಟಕಕಾರರೊಬ್ಬರಿಂದ ಸಂದೇಶ ಪಡೆದು ಅದನ್ನು ವಿಶ್ವದಾದ್ಯಂತ ಪ್ರಸಾರ ಮಾಡಲಾಗುತ್ತದೆ. ಮೊದಲು ಅಂಚೆ ಮೂಲಕ ತಲುಪಿಸುವ ವ್ಯವಸ್ಥೆ ಇದ್ದರೆ, ಇತ್ತೀಚಿನ ವರ್ಷಗಳಲ್ಲಿ ಅದನ್ನು ಅಂತರ್ಜಾಲದಲ್ಲಿ ಹಾಕುವ ಪರಿಪಾಠ ಬೆಳೆದಿದೆ. ಕನ್ನಡದ ನಾಟಕಕಾರ ಗಿರೀಶ ಕಾರ್ನಾಡ ಅವರಿಗೆ 2002ರಲ್ಲಿ ವಿಶ್ವರಂಗಭೂಮಿ ದಿನದ ಸಂದೇಶ ನೀಡುವ ಗೌರವ ದೊರಕಿತ್ತು.

ಈ ಬಾರಿಯ ವಿಶ್ವರಂಗಭೂಮಿ ದಿನದ ಸಂದೇಶ ನೀಡುವ ಗೌರವ ದಕ್ಷಿಣ ಆಫ್ರಿಕಾದ ನಾಟಕಕಾರ, ನಿರ್ದೇಶಕ ಬ್ರೆಟ್ ಬೈಲೆ ಅವರಿಗೆ ದೊರೆತಿದೆ. ನಾಟಕದ ಮಹತ್ವವನ್ನು ಸಾರುವ ಸುಮಾರು 250 ಪದಗಳ ಸಂದೇಶವೊಂದನ್ನು ಅವರು ನೀಡಿದ್ದಾರೆ. ಪ್ರತಿವರ್ಷ ಈ ಸಂದೇಶ ಅಂತರ್ಜಾಲದಲ್ಲಿ ಪ್ರಕಟವಾದ ಕೂಡಲೇ ಅದನ್ನು ಕನ್ನಡಕ್ಕೆ ಅನುವಾದಿಸಿ ರಾಜ್ಯದ ಹಲವು ರಂಗತಂಡಗಳಿಗೆ, ಮಾಧ್ಯಮದವರಿಗೆ ರಂಗಾಸಕ್ತರಿಗೆ ಕಳಿಸಿಕೊಡುವ ಪರಿಪಾಠವನ್ನು ಕಳೆದ 2 ದಶಕಗಳಿಂದ ಮೈಸೂರಿನ ರಂಗಕರ್ಮಿ ಶ್ರೀಕಂಠ ಗುಂಡಪ್ಪ ಅವರು ನಿಷ್ಠೆಯಿಂದ ಪಾಲಿಸಿಕೊಂಡು ಬಂದಿದ್ದಾರೆ.

ಇದುವರೆಗಿನ ಸಂದೇಶಗಳನ್ನು ಸಂಗ್ರಹಿಸಿ ‘ರಂಗ ಸಂದೇಶ’ ಎಂಬ ಪುಸ್ತಕವೊಂದನ್ನು ಅವರು ಹೊರತಂದಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಅದನ್ನು ಪ್ರಕಟಿಸಿದೆ. ವಿಶ್ವ ರಂಗಭೂಮಿಯ ದಿನ ರಾಜ್ಯದ ಬಹುತೇಕ ನಾಟಕ ತಂಡಗಳು ನಾಟಕ ಪ್ರದರ್ಶನ, ಉತ್ಸವ, ಸಂಕಿರಣ ಮುಂತಾದ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿರುತ್ತವೆ. ಅಂದು ವಿಶ್ವರಂಗಭೂಮಿಯ ಸಂದೇಶವನ್ನು ಓದಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.