ಬುಧವಾರ, ಏಪ್ರಿಲ್ 21, 2021
32 °C

ನಾಪೋಕ್ಲು: ಉಪ್ಪಾಗೆ ಮರಕ್ಕೆ ಹುಳ ಬಾಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯ ಕಾಫಿಯ ತೋಟಗಳಲ್ಲಿ ಇರುವ ಉಪ್ಪಾಗೆ ಮರದ ಚಿಗುರು ಹುಳದ ಬಾಧೆಗೆ ತುತ್ತಾಗಿರುವ ಅಂಶ ಗೋಚರಿಸಿದೆ. ಮರ ಚಿಗುರಿ ಹೂ ಬಿಡುವ ಈ ಅವಧಿಯಲ್ಲಿ ಮರದ ಚಿಗುರುಗಳು ತುಂಡುತುಂಡಾಗಿ ಉದುರುತ್ತಿರುವುದು ಕಂಡು ಬಂದಿದೆ. ಉಪ್ಪಾಗೆ ಮರದ ಹೂಗಳು ಅರಳದೆ ಇದ್ದಲ್ಲಿ ಮಳೆಗಾಲದಲ್ಲಿ ಉಪ್ಪಾಗೆ ಹಣ್ಣುಗಳ ಪ್ರಮಾಣದಲ್ಲಿ  ತೀವ್ರ ಕೊರತೆ ಕಂಡು ಬರಲಿದೆ.ಕಾಫಿ, ಏಲಕ್ಕಿ, ಕಾಳು ಮೆಣಸು ಮುಂತಾದವು ಕೊಡಗಿನಲ್ಲಿ ರೈತರು ಬೆಳೆಯುವ ವಾಣಿಜ್ಯ ಬೆಳೆಗಳು. ಈ ತೋಟಗಳಲ್ಲಿ ಕಾಡು ಉತ್ಪನ್ನವಾಗಿ ಲಭಿಸುವ ಉಪ್ಪಾಗೆ ಹುಳಿಯು ಅಧಿಕ ಬೇಡಿಕೆಯನ್ನು ಹೊಂದಿದೆ. ಉಪ್ಪಾಗೆ ಹುಳಿಯು ಮಲೆನಾಡಿನ ರೈತರಿಗೆ ನಿಸರ್ಗ ನೀಡಿದ ವರವೆಂದರೂ ತಪ್ಪಾಗದು. ಕೊಡಗಿನಲ್ಲಿ ಪಣ್‌ಪುಳಿ ಎಂಬ ಹೆಸರು. ಪಶ್ಚಿಮ ಘಟ್ಟ ಪ್ರದೇಶ ಹಾಗೂ ಕರಾವಳಿಯ ಕಾಡುಗಳಲ್ಲಿ ಬೆಳೆಯುವ ಈ ಹಣ್ಣು ಮಲೆನಾಡಿನ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ಅಡುಗೆಗೆ ಬಳಕೆಯಾಗುವುದು.ಜೊತೆಗೆ ವಿವಿಧ ಔಷಧ ತಯಾರಿಕೆಗೆ ಹಾಗೂ ತಿಂಡಿ ತಿನಿಸುಗಳಲ್ಲಿ ಉಪಯೋಗಿಸಲಾಗುತ್ತದೆ. ಎಂಬತ್ತರ ದಶಕದಿಂದೀಚೆಗೆ ಉಪ್ಪಾಗೆ ಕಿರು ಅರಣ್ಯ ಉತ್ಪನ್ನದ ಒಂದು ಮಜಲಾಗಿ ಹೊರಹೊಮ್ಮಿದ್ದು ಉತ್ತಮ ಮಾರುಕಟ್ಟೆ ದರವನ್ನು ಹೊಂದಿದೆ. ಜೂನ್‌ನಿಂದ ಮುಂಗಾರು ಆರಂಭಗೊಂಡರೆ ಆಗಸ್ಟ್‌ವರೆಗಿನ ಅವಧಿಯಲ್ಲಿ ಉಪ್ಪಾಗೆ ಹಣ್ಣುಗಳನ್ನು ಸಂಗ್ರಹಿಸಬಹುದು. ಕಾಡಿನಲ್ಲಿ ಬೆಳೆಯುವ ಉಪ್ಪಾಗೆಯನ್ನು ಸಂಗ್ರಹಿಸಲು ಜುಲೈ-ಆಗಸ್ಟ್ ತಿಂಗಳು ಸೂಕ್ತ ಸಮಯ. ಕಾಡಿನಿಂದ ಉಪ್ಪಾಗೆಯನ್ನು ಹೆಕ್ಕಿ ತಂದು ಒಡೆದು ಬೀಜ ತೆಗೆದು ಒಣಗಿಸಬೇಕು.ಮಳೆಗಾಲದಲ್ಲಿ ಉಪ್ಪಾಗೆಯನ್ನು ಸಂಗ್ರಹಿಸುವುದು, ಒಣಗಿಸುವುದು ಸುಲಭದ ಕೆಲಸವಲ್ಲ. ಹೇರಳ ಪ್ರಮಾಣದ ಕಟ್ಟಿಗೆ ಅವಶ್ಯಕ ಕೇರಳದಲ್ಲಿ ಓಣಂ ಹಬ್ಬದ ಸಮಯದಲ್ಲಿ ಒಣಗಿಸಿದ ಉಪ್ಪಾಗೆ ಸಿಪ್ಪೆಗೆ ಅಧಿಕ ಬೇಡಿಕೆ. ಉಪ್ಪಾಗೆ ಹಣ್ಣನ ಆಮ್ಲಯುಕ್ತ ಹುಳಿಸಿಪ್ಪೆಯನ್ನು ಅಡುಗೆಯಲ್ಲಿ ಬಳಸುತ್ತಾರೆ. ಹುಳಿಯ ರಸಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ರೈತರು ಕೂಲಿ ಕಾರ್ಮಿಕರು ಕಷ್ಟಪಟ್ಟು ಉಪ್ಪಾಗೆ ಹುಳಿ ಸಂಗ್ರಹಿಸಿ ಸಂಸ್ಕರಿಸಿ ಮಾರಾಟ ಮಾಡುತ್ತಾರೆ.ಈ ವರ್ಷ ಉಪ್ಪಾಗೆ ಮರದ ಚಿಗುರುಗಳಿಗೆ ಹುಳದ ಬಾಧೆ ತಗಲಿರುವುದರಿಂದ ಫಸಲಿಗೆ ತೀವ್ರ ಧಕ್ಕೆಯಾಗಲಿದೆ ಎನ್ನಲಾಗಿದೆ. ಅಂತೆಯೇ ಫಸಲಿನ ಕೊರತೆಯಿಂದ ಉಪ ಉತ್ಪನ್ನ ಉಪ್ಪಾಗೆಯಿಂದ ಬೆಳೆಗಾರರಿಗೆ ಸಿಗುವ ಲಾಭಾಂಶ ತಪ್ಪಿಹೋಗಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.