ಬುಧವಾರ, ಮೇ 18, 2022
27 °C

ನಾಲೆಗೆ ನೀರು: ರೈತರ ಹರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಕೆಆರ್‌ಎಸ್ ಜಲಾಶಯದಿಂದ ಜುಲೈ 9ರ ಮಧ್ಯರಾತ್ರಿಯಿಂದ ಕೆಆರ್‌ಎಸ್, ವರುಣಾ ಸೇರಿದಂತೆ ಎಲ್ಲ ನಾಲೆಗಳಿಗೆ ನೀರು ಹರಿಸಲಾಗುವುದು ಎಂದ ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಜಿಲ್ಲೆಯ ರೈತರ ಮೊಗದಲ್ಲಿ ಹರ್ಷ ಮೂಡಿದೆ.ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗದಿದ್ದರೂ ನಾಲೆಯ ನೀರನ್ನು ಅವಲಂಬಿಸಿರುವ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಚುರುಕು ಪಡೆಯಲಿದೆ. 64,450 ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಹಾಗೂ 30,550 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುವುದು. ಈ ಬೆಳೆಗಳನ್ನು ಬೆಳೆಯಲು ಈಗಾಗಲೇ ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ.ಜಲಾಶಯದಲ್ಲಿ ನೀರಿನ ಮಟ್ಟವು 110 ಅಡಿಯನ್ನು ಸಮೀಪಿಸಿದ್ದು, 29 ಟಿಎಂಸಿ ಅಡಿಯಷ್ಟು ನೀರು ಸಂಗ್ರಹವಾಗಿದೆ. ಒಳಹೊರಿವು ಕಡಿಮೆಯಾಗಿದ್ದರೂ 10 ಸಾವಿರಕ್ಕೂ ಹೆಚ್ಚಿದೆ. ಕಳೆದ ಬಾರಿಗೆ ಹೋಲಿಸಿದರೆ 30 ಅಡಿಗಿಂತಲೂ ಹೆಚ್ಚು ನೀರು ಇರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.ಜುಲೈ ಅಂತ್ಯದವರೆಗೆ ಹಾಗೂ ಆಗಸ್ಟ್‌ನಲ್ಲಿಯೂ ಮಳೆ ಬೀಳುವುದರಿಂದ ಇನ್ನಷ್ಟು ನೀರು ಹರಿದು ಬರಲಿದ್ದು, ಈ ಬಾರಿ ನೀರಿನ ತೊಂದರೆಯಾಗಲಿಕ್ಕಿಲ್ಲ ಎಂಬ ಭಾವನೆ ರೈತರದ್ದಾಗಿದೆ. ಜಲಾಶಯದ ಎಲ್ಲ ನಾಲೆಗಳಿಗೆ ನೀರು ಬಿಟ್ಟರೆ ನಿತ್ಯ ಅರ್ಧ ಟಿಎಂಸಿ ಅಡಿಯಷ್ಟು ನೀರು ಬೇಕಾಗುತ್ತದೆ. ಒಳ ಹರಿವಿನ ಪ್ರಮಾಣ ಉತ್ತಮವಾಗಿದ್ದರೆ, ಮುಂಗಾರಿನ ಹಂಗಾಮಿಗೆ ಯಾವುದೇ ತೊಂದರೆ ಯಾಗುವುದಿಲ್ಲ. ಜುಲೈ ಹಾಗೂ ಆಗಸ್ಟ್‌ನಲ್ಲಿ ಬೀಳುವ ಮಳೆ ಆಧರಿಸಿ ಹಿಂಗಾರು ಹಂಗಾಮಿಗೆ ನೀರು ಬಿಡುವ ವಿಷಯ ನಿರ್ಧಾರವಾಗುತ್ತದೆ ಎನ್ನುತ್ತಾರೆ ನೀರಾವರಿ ಇಲಾಖೆಯ ಅಧಿಕಾರಿಗಳು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.