ಸೋಮವಾರ, ಮಾರ್ಚ್ 8, 2021
30 °C

ನಾಲ್ಕು ತಿಂಗಳಲ್ಲಿ ರಾಜಕಾಲುವೆಗಳ ಒತ್ತುವರಿ ತೆರವು

ಮಂಜುನಾಥ ಹೆಬ್ಬಾರ್ Updated:

ಅಕ್ಷರ ಗಾತ್ರ : | |

ನಾಲ್ಕು ತಿಂಗಳಲ್ಲಿ ರಾಜಕಾಲುವೆಗಳ ಒತ್ತುವರಿ ತೆರವು

ಬೆಂಗಳೂರಿನಲ್ಲಿ ಕಳೆದ ವಾರ ಸುರಿದ ಮಳೆಯಿಂದಾಗಿ 600ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡು ನಾಗರಿಕರು ಸಂಕಷ್ಟ ಅನುಭವಿಸಿದರು. 100 ಮಿ.ಮೀ. ಮಳೆ ನಗರದ ಆಡಳಿತ ವ್ಯವಸ್ಥೆಯ ಲೋಪಗಳನ್ನು ಎತ್ತಿ ತೋರಿಸಿತು.ಕೆರೆಗಳು ಹಾಗೂ ರಾಜಕಾಲುವೆಗಳ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜಾಣ ಮೌನ ತಾಳಿದ್ದೇ ಮಳೆ ಅನಾಹುತಕ್ಕೆ ಕಾರಣ ಎಂಬ ಟೀಕೆಗಳು ಕೇಳಿ ಬಂದವು. ರಾಜಕಾಲುವೆಗಳ ಒತ್ತುವರಿ ತೆರವಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದರು. ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಮುಂದಿನ ಕಾರ್ಯಾಚರಣೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಿದ್ದಾರೆ:* ಮಳೆ ಅನಾಹುತಕ್ಕೆ ಬಿಬಿಎಂಪಿಯ ಉದಾಸೀನವೇ ಕಾರಣ ಅಲ್ಲವೇ?

ಮೊನ್ನೆಯ ಮಹಾಪೂರಕ್ಕೆ ಮಳೆ ಒಂದು ಕಾರಣ ಅಷ್ಟೆ. ನಾವು ಮಾಡಿದ ಎಡವಟ್ಟುಗಳೇ ಈ ಸಮಸ್ಯೆಗೆ ಮೂಲ. ಕಳೆದ ಕೆಲವು ವರ್ಷಗಳಲ್ಲಿ ಕೆರೆಗಳು ಒತ್ತುವರಿಯಾದವು. ಕಾಲುವೆಗಳು ಮಾಯವಾದವು. ಮಳೆ ನೀರುಗಾಲುವೆಗಳು ಕೆರೆಗಳ ಸಂಪರ್ಕಕ್ಕೆ ಇರುವ ಕಾಲುವೆಗಳು. ಆದರೆ, ಒತ್ತುವರಿಯಿಂದಾಗಿ ಇವುಗಳ ಸಂಪರ್ಕ ಕೊಂಡಿ ತಪ್ಪಿ ಹೋಗಿದೆ. ನಗರದ ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಮೂಲಸೌಕರ್ಯ ಕಲ್ಪಿಸಲು ವಿಫಲರಾಗಿದ್ದೇವೆ.200 ಚದರ ಕಿ.ಮೀ. ಇದ್ದ ಬಿಬಿಎಂಪಿ ವ್ಯಾಪ್ತಿ 2007ರಲ್ಲಿ 800 ಚದರ ಕಿ.ಮೀ.ಗೆ ಹಿಗ್ಗಿತು. ಮಹಾನಗರದ ತೆಕ್ಕೆಯೊಳಗೆ 110 ಹಳ್ಳಿಗಳು ಸೇರಿದವು. ಈ ಗ್ರಾಮಗಳು ನಗರಸಭೆಗಳ ವ್ಯಾಪ್ತಿಯಲ್ಲಿದ್ದವು. ಆಗ ಸಮರ್ಪಕವಾಗಿ ಯೋಜನೆ ರೂಪಿಸಲಿಲ್ಲ. ಇದರಿಂದಾಗಿ ಬೇಕಾಬಿಟ್ಟಿಯಾಗಿ ಕಂದಾಯ ಬಡಾವಣೆಗಳು ತಲೆ ಎತ್ತಿದವು. ಜತೆಗೆ ಈ ಬಡಾವಣೆಗಳು ಯೋಜನಾಬದ್ಧವಾಗಿ ನಿರ್ಮಾಣವಾಗಿಲ್ಲ. ಅನೇಕ ಬಡಾವಣೆಗಳು ಕೆರೆಯಂಗಳದಲ್ಲೇ ಇವೆ. ಈ ಬಡಾವಣೆಗಳಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರು ಕೆರೆಗಳನ್ನು ಸೇರುತ್ತಿದೆ.* ವಿವಿಧ ಇಲಾಖೆಗಳ ನಡುವೆ ಸಮನ್ವಯ ಕೊರತೆ ಇದೆಯಲ್ಲ. ಅದನ್ನು ಹೇಗೆ ನಿಭಾಯಿಸುತ್ತೀರಿ?

ನಾವು ಚಿಕ್ಕವರಾಗಿದ್ದಾಗ ರಾಜಕಾಲುವೆಗಳಲ್ಲಿ ಮಳೆಗಾಲದಲ್ಲಿ ಮಾತ್ರ ನೀರು ಹರಿಯುತ್ತಿತ್ತು. ಉಳಿದ ಸಮಯದಲ್ಲಿ ಅವು ಒಣಗಿರುತ್ತಿದ್ದವು. ಅನೇಕ ಸಂದರ್ಭಗಳಲ್ಲಿ ರಾಜಕಾಲುವೆಗಳಲ್ಲೇ ನಾವು ಆಟ ಆಡಿದ್ದೇವೆ. ಇಂತಹ ಕಾಲುವೆಗಳಲ್ಲೀಗ ವರ್ಷವಿಡೀ ಕೊಳಚೆ ನೀರು ಹರಿಯುತ್ತಿದೆ. ಇದರ ಜತೆಗೆ ಹೂಳು ತುಂಬುತ್ತಿದೆ. ಕೆರೆಗಳ ನೀರಿನಲ್ಲಿ ಆಮ್ಲಜನಕ ಕಡಿಮೆಯಾಗುತ್ತಿದೆ. ಹೂಳು ತೆಗೆಯದ ಕಾರಣ ಸ್ವಲ್ಪ ಮಳೆ ಬಂದರೂ ಉಕ್ಕಿ ಹರಿಯುತ್ತಿವೆ.ಕೆರೆಗಳ ಬಗ್ಗೆ ಕಾಳಜಿ ವಹಿಸದೆ ಇರುವುದೇ ಈಗಿನ ದುಸ್ಥಿತಿಗೆ ಕಾರಣ. ಲಕ್ಷ್ಮಣ ರಾವ್‌ ಸಮಿತಿಯ ಪ್ರಕಾರ 1985ರಲ್ಲಿ ನಗರದಲ್ಲಿ 385 ಕೆರೆಗಳು ಇದ್ದವು. ಈಗ ಬಿಬಿಎಂಪಿ ವ್ಯಾಪ್ತಿಯಲ್ಲಿ 210 ಕೆರೆಗಳು ಉಳಿದಿವೆ. ಹಲವಾರು ಕೆರೆಗಳನ್ನು ಮುಚ್ಚಿ ನಗರ ನಿರ್ಮಾಣ ಮಾಡಿದ್ದೇವೆ. ಕಳೆದ 50 ವರ್ಷಗಳಲ್ಲಿ ನಗರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿಲ್ಲ.ಪ್ರತಿವರ್ಷ ಸರಾಸರಿ 930 ಮಿ.ಮೀ. ಮಳೆ ಸುರಿಯುತ್ತದೆ. ಇಷ್ಟು ಪ್ರಮಾಣದ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಬೇಕಾದ ಕೆರೆಗಳ ಸಂಖ್ಯೆ ಕಡಿಮೆಯಾಗಿದೆ. ಉಳಿದಿರುವ ಕೆರೆಗಳ ಧಾರಣಾ ಶಕ್ತಿಯೂ ಕುಸಿದಿದೆ. ರಾಜಕಾಲುವೆಗಳ ಸಮರ್ಪಕ ನಿರ್ವಹಣೆ ಮಾಡಿಲ್ಲ. ಕಾಲುವೆಗಳಲ್ಲಿ ತ್ಯಾಜ್ಯ ಹಾಗೂ ಕಟ್ಟಡ ತ್ಯಾಜ್ಯಗಳನ್ನು ಸುರಿಯುತ್ತಿದ್ದೇವೆ.ಇದರಿಂದ ಸಮಸ್ಯೆ ದುಪ್ಪಟ್ಟು ಆಗಿದೆ. ಮುಂದಿನ ದಿನಗಳಲ್ಲಿ ಅನಾಹುತಗಳನ್ನು ತಡೆಯಬೇಕಿದೆ, ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಈ ದಿಸೆಯಲ್ಲಿ ಬಿಬಿಎಂಪಿ ಹೆಜ್ಜೆ ಇಟ್ಟಿದೆ.ನಗರದ ರಾಜಕಾಲುವೆಗಳ ಒತ್ತುವರಿಯನ್ನು  ನಿರ್ದಯವಾಗಿ ತೆರವು ಮಾಡಿ, ಇದಕ್ಕೆ ನಾವು ಅಡ್ಡಿ ಬರುವುದಿಲ್ಲ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.ಮೊದಲ ಹಂತದಲ್ಲಿ ಒತ್ತುವರಿ ತೆರವು ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಕೆರೆಗಳು ಹಾಗೂ ರಾಜಕಾಲುವೆಗಳ ಪುನರುಜ್ಜೀವನ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ. ಕೆರೆಗಳ ಹೂಳೆತ್ತಿ ತಡೆಬೇಲಿಗಳನ್ನು ನಿರ್ಮಿಸುತ್ತೇವೆ. ನಂತರ ಸಮಸ್ಯೆ ಸೃಷ್ಟಿಯಾಗದಂತೆ ಅಧಿಕಾರಿಗಳು ನಿಗಾ ವಹಿಸುತ್ತಾರೆ.

* ಕೆರೆಗಳು ಕೊಳಚೆ ನೀರಿನ ಕೇಂದ್ರಗಳಾಗಿವೆ. ಈ ಸಮಸ್ಯೆಗೆ ಪರಿಹಾರ ಏನು?

ನಗರಕ್ಕೆ ಪ್ರತಿನಿತ್ಯ 140 ಕೋಟಿ ಲೀಟರ್‌ ಕಾವೇರಿ ನೀರು ಸರಬರಾಜು ಆಗುತ್ತಿದೆ. ಇದರಲ್ಲಿ ಶೇ 80ರಷ್ಟು ನೀರು ಕೊಳಚೆ ನೀರಾಗಿ ಪರಿವರ್ತನೆ ಆಗುತ್ತಿದೆ. ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಸಾಮರ್ಥ್ಯ 72 ಕೋಟಿ ಲೀಟರ್‌ ಮಾತ್ರ. ಉಳಿದ ಶೇ 50ರಷ್ಟು ಕೊಳಚೆ ನೀರು ರಾಜಕಾಲುವೆಗಳಿಗೆ ಸೇರುತ್ತಿದೆ. ಬಳಿಕ ಈ ನೀರು ಸೇರುವುದು ಕೆರೆಗಳನ್ನು. ಸ್ವಲ್ಪ ಮಳೆ ಬಂದರೂ ಕೆರೆಗಳು ಉಕ್ಕಿ ಹರಿಯುತ್ತವೆ. ಮನೆಗಳಿಗೆ ನೀರು ನುಗ್ಗುತ್ತದೆ.₹2,500 ಕೋಟಿ ವೆಚ್ಚದಲ್ಲಿ 70 ಕೋಟಿ ಲೀಟರ್‌ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಜಲಮಂಡಳಿ ಟೆಂಡರ್‌ ಕರೆದಿದೆ. ಈ ಘಟಕಗಳ ನಿರ್ಮಾಣಕ್ಕೆ 3–4 ವರ್ಷಗಳಾದರೂ ಬೇಕು. ಅಲ್ಲಿಯವರೆಗೆ ಕಾಯುವುದು ಅನಿವಾರ್ಯ.* ರಾಜಕಾಲುವೆಗಳ ಸಮೀಕ್ಷೆ ಕಾರ್ಯ ವರ್ಷದಿಂದ ನಡೆಯುತ್ತಲೇ ಇದೆ. ಅದು ಪೂರ್ಣಗೊಳ್ಳಲು ಇನ್ನೆಷ್ಟು ವರ್ಷ ಬೇಕು?

ಭೂಮಾಪನಾ ಇಲಾಖೆಯ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ನಗರಕ್ಕೆ ಹೊಸದಾಗಿ ಸೇರ್ಪಡೆಯಾದ ಆರು ನಗರಸಭೆ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಶೇ 75ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ನಗರದ ಹೃದಯ ಭಾಗದಲ್ಲಿ ಹೆಚ್ಚು ಒತ್ತುವರಿಯಾಗಿಲ್ಲ ಎಂಬ ಮಾಹಿತಿ ಸಿಕ್ಕಿದೆ.ಭೂಮಾಪನಾ ಇಲಾಖೆಯ ಅಧಿಕಾರಿಗಳ ಜತೆಗೆ ಪ್ರತಿದಿನ ಸಂಪರ್ಕದಲ್ಲಿ ಇದ್ದೇವೆ. ಉಳಿದಿರುವ ಕಾಲುವೆಗಳ ಸಮೀಕ್ಷೆಗೆ ಒತ್ತಡ ಹೇರುತ್ತಿದ್ದೇವೆ. ಸಮೀಕ್ಷೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಇಲಾಖೆಗೆ ಅಗತ್ಯ ಸಂಪನ್ಮೂಲ ಒದಗಿಸಲು ನಾವು ಸಿದ್ಧರಿದ್ದೇವೆ.ಸದ್ಯ 1,923 ಒತ್ತುವರಿಗಳನ್ನು ಗುರುತಿಸಲಾಗಿದೆ. ಈ ಪೈಕಿ 822 ಪ್ರಕರಣಗಳ ತೆರವು ಮಾಡಲಾಗಿದೆ. ಬಾಕಿ 1,101 ಪ್ರಕರಣಗಳ ತೆರವು ಕಾರ್ಯಾಚರಣೆ ಶನಿವಾರದಿಂದ ಆರಂಭವಾಗಿದೆ. ನಾಲ್ಕು ತಿಂಗಳಲ್ಲಿ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸುತ್ತೇವೆ. ಒತ್ತುವರಿಗೆ ಸಹಕರಿಸಿದ ಅಧಿಕಾರಿಗಳಿಗೂ ಮುಂದೆ ಕಠಿಣ ಶಿಕ್ಷೆ ಕಾದಿದೆ.* ಒತ್ತುವರಿ ತೆರವು ಮಾಡದಂತೆ ಜನಪ್ರತಿನಿಧಿಗಳು ಹಾಗೂ ರಿಯಲ್ ಎಸ್ಟೇಟ್‌ ಉದ್ಯಮಿಗಳ ಒತ್ತಡ ಇದೆಯಂತೆ, ಹೌದೇ?

ಯಾರಿಗೂ ಅಂಜದೆ, ಮುಲಾಜು ಇಲ್ಲದೆ ಕಾರ್ಯಾಚರಣೆ ನಡೆಸಿ ಎಂದು ಮುಖ್ಯಮಂತ್ರಿ ತಾಕೀತು ಮಾಡಿದ್ದಾರೆ. ಚಿಕ್ಕವರು, ದೊಡ್ಡವರು ಎಂದು ನೋಡದೆ ಕಾರ್ಯಾಚರಣೆ ನಡೆಸುತ್ತೇವೆ.ರಾಜಕಾಲುವೆಗಳ ಸಮೀಕ್ಷೆಯನ್ನು ಸರಿಯಾಗಿ ನಡೆಸಿಲ್ಲ ಎಂಬ ಆರೋಪ ಇದೆ. ಕೆಲವು ಒತ್ತುವರಿಗಳನ್ನು ಗುರುತಿಸಿಲ್ಲ ಎಂಬ ಮಾಹಿತಿ ಸಿಕ್ಕಿದೆ. ಬಿಲ್ಡರ್‌ಗಳ ಬಗ್ಗೆ ಮೃದು ಧೋರಣೆ ತಾಳಲಾಗಿದೆ ಎಂಬ ದೂರು ಬಂದಿದೆ. ಹೀಗಾಗಿ ಸರ್ವೆಯ ಎಲ್ಲ ಮಾಹಿತಿಗಳನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತದೆ. ಜನರು ಪರಾಮರ್ಶಿಸಲಿ.ತಪ್ಪಾಗಿದ್ದರೆ ಮತ್ತೆ ಸಮೀಕ್ಷೆ ನಡೆಸುತ್ತೇವೆ. ಜನರ ಸಹಭಾಗಿತ್ವ ಸಿಕ್ಕರೆ ನಮಗೆ ಇನ್ನಷ್ಟು ಉಮೇದು ಬರುತ್ತದೆ, ಪರಿಪೂರ್ಣ ಕೆಲಸ ಸಾಧ್ಯವಾಗುತ್ತದೆ.* ಕಾಟಾಚಾರಕ್ಕೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ ಎಂಬ ಆರೋಪ ಇದೆಯಲ್ಲ?

ಈ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆ. ಕಾರ್ಯಾಚರಣೆ ಬಳಿಕ ರಾಜಕಾಲುವೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ. ಒಂದು ವೇಳೆ ನಮ್ಮಿಂದ ತಪ್ಪಾದರೆ ಜನರು ಸಿಡಿದೇಳಬೇಕು. ಹೋರಾಟ ಮಾಡಬೇಕು. ಅಸಹಾಯಕರಾಗಿ ಕೂರುವುದು ಬೇಡ.* ರಾಜಕಾಲುವೆಗಳ ಅಂಚಿನಲ್ಲಿ ನೂರಾರು ಬಡವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಅವರ ಎತ್ತಂಗಡಿ ಸಾಧ್ಯವೇ? ಅವರಿಗೆ ಪುನರ್ವಸತಿ ಹೇಗೆ ಕಲ್ಪಿಸುತ್ತೀರಿ?

ತೆರವು ಕಾರ್ಯಾಚರಣೆಯ ಸ್ಥಳಗಳಿಗೆ ನಿರಂತರ ಭೇಟಿ ನೀಡುತ್ತಿದ್ದೇನೆ. ಬಡವರು ರಾಜಕಾಲುವೆಗಳಲ್ಲಿ ಮನೆ ಕಟ್ಟಿಕೊಂಡಿದ್ದು ಕಡಿಮೆ. ಮಧ್ಯಮವರ್ಗದವರು ಹಾಗೂ ಶ್ರೀಮಂತರೇ ಅಧಿಕ ಪ್ರಮಾಣದಲ್ಲಿ ಕಬಳಿಸಿದ್ದಾರೆ. ಬಡವರಿಗೆ ತೊಂದರೆ ಮಾಡುವುದಿಲ್ಲ. ಅವರಿಗೆ ಪುನರ್ವಸತಿ ಕಲ್ಪಿಸಲು ಮುಖ್ಯಮಂತ್ರಿ ಅವರ ಗಮನ ಸೆಳೆಯುತ್ತೇನೆ.* ತೆರವು ಕಾರ್ಯಾಚರಣೆಗೆ ಸಾಕಷ್ಟು ತಡೆಯಾಜ್ಞೆಗಳು ಬರುತ್ತಿವೆ. ಇದಕ್ಕೆ ಬಿಬಿಎಂಪಿಯ ಕಾನೂನು ಕೋಶದ ಲೋಪವೇ ಕಾರಣ ಎಂಬ ಆರೋಪ ಇದೆಯಲ್ಲ, ಈ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತೀರಿ?

ನಮ್ಮ ಕಾನೂನು ಕೋಶ ಅಷ್ಟೊಂದು ಸದೃಢವಾಗಿಲ್ಲ ಎಂಬುದು ನಿಜ. ಅದಕ್ಕೆ ಬಲ ತುಂಬುತ್ತೇವೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅಪವಿತ್ರ ಮೈತ್ರಿಯಿಂದ ನಮಗೆ ಹಿನ್ನಡೆಯಾಗುತ್ತಿದೆ. ಒತ್ತುವರಿದಾರರು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ತಡೆಯಾಜ್ಞೆ ತರುತ್ತಿದ್ದಾರೆ.ನುರಿತ ವಕೀಲರನ್ನು ನೇಮಕ ಮಾಡಿ ಸಮರ್ಥವಾಗಿ ವಾದ ಮಾಡುತ್ತೇವೆ. ಕಾನೂನು ಕೋಶವನ್ನು ಬಲಪಡಿಸಲು ಕಾನೂನು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ನಾಲ್ಕು ಅಥವಾ ಐದನೇ ವರ್ಷದಲ್ಲಿ ವ್ಯಾಸಂಗ ಮಾಡುವ 15 ವಿದ್ಯಾರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಅವರು ದಿನಕ್ಕೆ 3–4 ಗಂಟೆ ಕೆಲಸ ಮಾಡಿದರೆ ಸಾಕು. ಅವರಿಗೆ ಶಿಷ್ಯವೇತನವನ್ನೂ ಕೊಡುತ್ತೇವೆ.* ಬಿಬಿಎಂಪಿಗೆ ಮಳೆಗಾಲದಲ್ಲಿ ಮಾತ್ರ ರಾಜಕಾಲುವೆ ನೆನಪಾಗುವುದೇ?

ನಾವು ಎಚ್ಚೆತ್ತುಕೊಂಡು ಮೊದಲೇ ಕಾಮಗಾರಿ ಮಾಡಬೇಕಿತ್ತು. ಈ ವರ್ಷ ಆ ಕೆಲಸ ಮಾಡಿಲ್ಲ. ತಪ್ಪಾಗಿರುವುದು ನಿಜ. ಈ ತಪ್ಪನ್ನು ಪುನರಾವರ್ತನೆ ಮಾಡುವುದಿಲ್ಲ. ಎರಡು  ವರ್ಷಗಳಲ್ಲಿ ಯಾವೆಲ್ಲ ಕಾಮಗಾರಿಗಳು ಆಗಬೇಕು ಎಂಬುದನ್ನು ಪಟ್ಟಿ ಮಾಡಿ ಈಗಾಗಲೇ ಚಾಲನೆ ನೀಡಿದ್ದೇವೆ. ಮುಂದಿನ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ.* ಅಲ್ಪ ಮಳೆ ಸುರಿದರೂ ನಗರದ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತವೆ. ಈ ಸಮಸ್ಯೆಗೆ ಪರಿಹಾರ ಏನು?

ನಗರದಲ್ಲಿ 122 ತಗ್ಗು ಪ್ರದೇಶಗಳಿವೆ ಎಂಬುದನ್ನು ಕರ್ನಾಟಕ ಪ್ರಾಕೃತಿಕ ವಿಕೋಪ ನಿರ್ವಹಣಾ ಸಂಸ್ಥೆ ಗುರುತಿಸಿದೆ. ಸಂಸ್ಥೆಯ ಜತೆಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದೇವೆ.ಯಾವ ಭಾಗದಲ್ಲಿ ಎಷ್ಟು ಮಳೆ ಸುರಿಯುತ್ತದೆ, ನೆರೆ ಯಾವಾಗ ಬರುತ್ತದೆ ಎಂಬ ಬಗ್ಗೆ ಸಮಗ್ರ ಅಧ್ಯಯನ ಮಾಡುತ್ತಿದ್ದೇವೆ. ಒಂದು ತಿಂಗಳಲ್ಲಿ ಆ್ಯಪ್‌ ಅಭಿವೃದ್ಧಿಪಡಿಸುತ್ತೇವೆ.ಆಸ್ತಿ ತೆರಿಗೆ ಪಾವತಿಸುವವರ ದೂರವಾಣಿ ಸಂಖ್ಯೆಗಳು ನಮ್ಮ ಬಳಿ ಇವೆ. ಮಳೆ ಮಾಹಿತಿ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡುತ್ತೇವೆ. ಆಗ ಅವರು ಮುನ್ನೆಚ್ಚರಿಕೆ ವಹಿಸಲು ಸುಲಭವಾಗುತ್ತದೆ.* ಚೆನ್ನೈ ಮಾದರಿಯಲ್ಲಿ ಬೆಂಗಳೂರಿನಲ್ಲೂ ಅನಾಹುತ ಉಂಟಾಗಲಿದೆ ಎಂದು ಕೆರೆ ಒತ್ತುವರಿ ಪತ್ತೆ ಸದನ ಸಮಿತಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಅವರು ಆರು ತಿಂಗಳ ಹಿಂದೆಯೇ ಎಚ್ಚರಿಸಿದ್ದರು. ಅದನ್ನು ಬಿಬಿಎಂಪಿ ಗಂಭೀರವಾಗಿ ಪರಿಗಣಿಸಲಿಲ್ಲ ಅಲ್ಲವೇ?

ಅವರು ಸರಿಯಾಗಿ ಹೇಳಿದ್ದಾರೆ. ಅವರ ಮಾತಿನಂತೆ ಆರು ತಿಂಗಳ ಹಿಂದೆಯೇ ದೂರದೃಷ್ಟಿಯಿಂದ ಕೆಲಸ ಮಾಡಿದ್ದರೆ ಮಹಾಪೂರ ಉಂಟಾಗುತ್ತಿರಲಿಲ್ಲ. ಈ ಘಟನೆ ನಮಗೊಂದು ಎಚ್ಚರಿಕೆ ಗಂಟೆ.* ಕೆರೆಗಳ ಸಂರಕ್ಷಣೆ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶದ ಪಾಲನೆಗೆ ಬಿಬಿಎಂಪಿ ಕೈಗೊಂಡ ಕ್ರಮಗಳೇನು?

ಎನ್‌ಜಿಟಿ ಮೇ 4ರಂದು ಆದೇಶ ಹೊರಡಿಸಿತು. ಕೆರೆಗಳ 75 ಮೀಟರ್‌ ಮೀಸಲು ಪ್ರದೇಶ, ರಾಜಕಾಲುವೆಗಳ ಮೀಸಲು ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಮೇ 5ರಂದೇ ಆದೇಶ ಹೊರಡಿಸಿದ್ದೇನೆ. ಕೆರೆಯಂಚಿನಲ್ಲಿ ಹೊಸ ನಿರ್ಮಾಣಗಳಿಗೆ ಅನುಮತಿ ನೀಡಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.