ಶನಿವಾರ, ಜನವರಿ 25, 2020
19 °C

ನಾಳೆ ಬಿಎಸಿ ಬೇಟನ್ ರಿಲೇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಏಷ್ಯಾದಲ್ಲೇ ಪ್ರಸಿದ್ಧಿ ಈಜು ಕೇಂದ್ರ ಎನಿಸಿರುವ ಬಸವನಗುಡಿ ಈಜು ಕೇಂದ್ರವು (ಬಿಎಸಿ) ರಜತಮಹೋತ್ಸವ ಅಂಗವಾಗಿ ಗುರುವಾರ ನಗರದಲ್ಲಿ ಬೇಟನ್ ರಿಲೇ ಆಯೋಜಿಸಿದ್ದು, ಹಾಲಿ ಹಾಗೂ ಮಾಜಿ ಈಜುಪಟುಗಳು ಪಾಲ್ಗೊಳ್ಳಲಿದ್ದಾರೆ.ಗುರುವಾರ ಬೆಳಿಗ್ಗೆ ಎಂಟು ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ಬೇಟನ್ ರಿಲೇ ಆರಂಭವಾಗಿ ಬಿಎಸಿಯಲ್ಲಿ ಕೊನೆಗೊಳ್ಳಲಿದೆ. ರಾಷ್ಟ್ರೀಯ ಪದಕ ವಿಜೇತರಾದ ಈ ಕೇಂದ್ರದ ಮೊದಲ ಈಜುಪಟು ಬಿ.ರಮ್ಯಾ ಅವರು ಬೇಟನ್ ರಿಲೇಯ ನೇತೃತ್ವ ವಹಿಸಲಿದ್ದಾರೆ. ಈ ವಿಷಯವನ್ನು ಬಿಎಸಿ ಅಧ್ಯಕ್ಷ ನೀಲಕಂಠರಾವ್ ಜಗದಾಳೆ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ `ಜ್ಯೋತಿ~ಯನ್ನು ಅನಾವರಣ ಮಾಡಲಾಯಿತು.ಬೇಟನ್ ರಿಲೇ ಕಾರ್ಪೊರೇಷನ್ ವೃತ್ತ, ಟೌನ್‌ಹಾಲ್, ಜೆ.ಸಿ.ರಸ್ತೆ, ಮಿನರ್ವ ವೃತ್ತ, ಸಜ್ಜನರಾವ್ ವೃತ್ತ, ನ್ಯಾಷನಲ್ ಕಾಲೇಜ್ ಮೂಲಕ ಬಿಎಸಿ ತಲುಪಲಿದೆ. ಈ ಸಂದರ್ಭದಲ್ಲಿ ಮಾಜಿ ಹಾಗೂ ಹಾಲಿ ಅಥ್ಲೀಟ್‌ಗಳು, 400ಕ್ಕೂ ಹೆಚ್ಚು ಈಜುಪಟುಗಳು ಪಾಲ್ಗೊಳ್ಳಲಿದ್ದಾರೆ.`ಬೆಳ್ಳಿ ಹಬ್ಬದ ಸಂಭ್ರಮ ನೆನಪಿನಲ್ಲಿ ಉಳಿಯುವಂತೆ ಮಾಡಬೇಕು. ಅದಕ್ಕಾಗಿ ನಾವು ಈಜುಕೊಳವನ್ನು ಮೇಲ್ದರ್ಜೆಗೇರಿಸಲಿದ್ದೇವೆ. ಇದಕ್ಕೆ ಒಟ್ಟು ಆರು ಕೋಟಿ ರೂಪಾಯಿ ಹಣದ ಅಗತ್ಯವಿದೆ. ಮೂರು ಕೋಟಿ ನೀಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಭರವಸೆ ನೀಡಿದೆ. ಅವರು ಗ್ಯಾಲರಿ ನಿರ್ಮಿಸಿ ಕೊಡಲಿದ್ದಾರೆ.ಇನ್ನುಳಿದ 3 ಕೋಟಿಯನ್ನು ನಾವು ಹೊಂದಿಸಬೇಕಾಗಿದೆ. ಈ ಹಣದಲ್ಲಿ ನಾವು 10 ಲೇನ್ ಪೂಲ್ ನಿರ್ಮಿಸಲಿದ್ದೇವೆ. ಎಲ್ಲವೂ ನಾವು ಅಂದುಕೊಂಡಂತೆ ನಡೆದರೆ 2013ರ ಅಂತ್ಯಕ್ಕೆ ಅಂತರರಾಷ್ಟ್ರೀಯ ಈಜುಕೊಳ ತಲೆಎತ್ತಲಿದೆ~ ಎಂದು ಜಗದಾಳೆ ವಿವರಿಸಿದರು.`1991ರಲ್ಲಿ ಕಾರ್ಪೊರೇಷನ್‌ನಿಂದ 30 ವರ್ಷಗಳ ಅವಧಿಗೆ ಭೋಗ್ಯಕ್ಕೆ ಪಡೆದಿದ್ದೇವೆ. ಮತ್ತೆ 20 ವರ್ಷ ಅದನ್ನು ವಿಸ್ತರಿಸಲು ನಾವು ಬಿಬಿಎಂಪಿಯನ್ನು ಕೋರಲಿದ್ದೇವೆ. ಹಾಗೇ, ಈ ಕೇಂದ್ರದಲ್ಲಿ ಹೈಡ್ರೋ ಥೆರಪಿ ವಿಭಾಗವನ್ನು ತೆರೆಯಲು ಯೋಜನೆ ರೂಪಿಸಿದ್ದೇವೆ. ಆದರೆ ಈ ವರ್ಷ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್ ಆಯೋಜನೆ ಯೋಜನೆಯನ್ನು ಕೈಬಿಡಲಾಗಿದೆ~ ಎಂದರು.`ಫೆಬ್ರುವರಿಯಲ್ಲಿ ನಾವು ಅಂತರ ಬಿಎಸಿ ಚಾಂಪಿಯನ್‌ಷಿಪ್ ಆಯೋಜಿಸಲಿದ್ದೇವೆ. ಇದಕ್ಕೆ ಬಿಎಸಿ ಪ್ರತಿಭಾ ಶೋಧನಾ ಚಾಂಪಿಯನ್‌ಷಿಪ್ ಎಂದು ಹೆಸರಿಟ್ಟಿದ್ದೇವೆ. ಇದರಲ್ಲಿ ಚಾಂಪಿಯನ್ ಆಗುವ ಈಜುಪಟುಗಳತ್ತ ಮುಂದಿನ ದಿನಗಳಲ್ಲಿ ಹೆಚ್ಚು ಗಮನ ಹರಿಸಿ ಅವರ ಪ್ರಗತಿಗೆ ಒತ್ತು ನೀಡಲಾಗುವುದು~ ಎಂದು ರಾಷ್ಟ್ರೀಯ ಈಜು ಕೋಚ್ ಕೂಡ ಆಗಿರುವ ಪ್ರದೀಪ್ ಕುಮಾರ್ ನುಡಿದರು.ಪತ್ರಿಕಾಗೋಷ್ಠಿಯಲ್ಲಿ ಬಿಎಸಿ ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ರಾಜಣ್ಣ, ಜಂಟಿ ಕಾರ್ಯದರ್ಶಿ ಜಯತೀರ್ಥರಾವ್, ಖಜಾಂಚಿ ಸುಂದರರಾಜ್ ಗುಪ್ತಾ, ಸಮಿತಿ ಸದಸ್ಯರಾದ ರಕ್ಷಿತ್ ಹಾಗೂ ಸತೀಶ್ ಕುಮಾರ್ ಇದ್ದರು.

ಪ್ರತಿಕ್ರಿಯಿಸಿ (+)