ಶ್ರುತಿ ಶುದ್ಧಿ, ಕೃತಿ ಶುದ್ಧಿ, ಲಯ ಶುದ್ಧಿ ಈ ಮೂರೂ ಮುಖದ ಶುದ್ಧಿ ನಮ್ಮ ಬಹುತೇಕ ಸಂಗೀತಗಾರರಲ್ಲಿ ಅಪರೂಪ. ಕೆಲವರಿಗೆ ಶ್ರುತಿ ಶುದ್ಧಿ ಇರುತ್ತದೆ. ಆದರೆ ಕೃತಿಯನ್ನು ಗಾಯನಕ್ಕೆ ಆಯ್ದುಕೊಂಡಾಗ ಸಾಹಿತ್ಯಕ ಅಪಚಾರ ಎಸಗುತ್ತಾರೆ, ಇನ್ನು ಕೆಲವರಿಗೆ ಲಯವೇ ಕೈ ಕೊಡುತ್ತದೆ. ರಾಗ ಅನಗತ್ಯವಾಗಿ ಮಿಶ್ರರಾಗದ ನಡೆಗೆ ಹೊರಳುತ್ತದೆ. ಈ ಬಗೆಯ ಅಪವಾದಗಳಿಂದ ಬಹುದೂರದಲ್ಲಿರುವ ಕಲಾವಿದ ಡಾ. ರುದ್ರಪಟ್ಣಂ ಕೃಷ್ಣಶಾಸ್ತ್ರಿ ಶ್ರೀಕಂಠನ್.

ಭಾರತೀಯ ಸಂಗೀತ ಕ್ಷೇತ್ರದಲ್ಲಿ ವ್ಯಾಪಕವಾಗಿ ಕರ್ನಾಟಕ ಸಂಗೀತ ವಲಯದಲ್ಲಿ ವಿಶೇಷವಾಗಿ ಆರ್.ಕೆ. ಶ್ರೀಕಂಠನ್ ಎಂದೇ ಹೆಸರಾಗಿರುವ ಬಹುಶ್ರುತ ಪ್ರತಿಭೆಯ ಈ ಕಲಾವಿದ ಈಗ 92ರ ಇಳಿವಯಸ್ಸಿನಲ್ಲಿದ್ದಾರೆ. ಬೆನ್ನುನೋವು, ಮಂಡಿನೋವು ಹೀಗೆ ವಯೋಸಹಜ ಸಮಸ್ಯೆಗಳಿಂದ ಶರೀರ ಜರ್ಝರಿತವಾಗಿದೆ.

ಆದರೆ ಕಛೇರಿಯಲ್ಲಿ ಶ್ರುತಿ ಹಿಡಿದು ರಾಗ ಎತ್ತಿ ಕುಳಿತರೆಂದರೆ ಈ ಹೊತ್ತಿಗೂ ಅವರ ಶಾರೀರ, 29ರ ಕಲಾವಿದನಂತೆ ಹುಡಿಗೈಯುತ್ತದೆ. ಅಪರೂಪದ, ದಶಕಗಳಿಂದ ಕೇಳಿರದ ರಾಗಗಳನ್ನು ಹುಡುಕಿ ಹಾಡಿ ರಸಿಕ ಲೋಕವನ್ನು ರಂಜಿಸುವಲ್ಲಿ ಶ್ರೀಕಂಠನ್ ಅವರಿಗೆ ಶ್ರೀಕಂಠನ್ ಅವರೇ ಸಾಟಿ.

ಗಾಯನದಂತೆ ಈ ಕ್ಷೇತ್ರದಲ್ಲಿ ಶಿಷ್ಯರನ್ನು ತಯಾರು ಮಾಡುವಲ್ಲಿಯೂ ಶ್ರೀಕಂಠನ್ರದು ಎತ್ತಿದ ಕೈ. ಅವರ ಒಬ್ಬೊಬ್ಬ ಶಿಷ್ಯರೂ ಕರ್ನಾಟಕ ಸಂಗೀತದಲ್ಲಿ ಶ್ರೀಕಂಠನ್ರಿಗೆ ಸಮರ್ಥ ಉತ್ತರಾಧಿಕಾರಿಯಾಗುವ ಶುಭ ಲಕ್ಷಣ ತೋರಿದ್ದಾರೆ. ಸಂಗೀತ ಸಾವಿಲ್ಲದ ಚಿರಂಜೀವಿ ಎಂದು ನಂಬಿರುವ ಆರ್ಕೆಶ್ರೀ ಕೊರಳನ್ನು ಭಾರತ ಸರ್ಕಾರ ನೀಡುವ ಪದ್ಮಭೂಷಣ ಪ್ರಶಸ್ತಿ ಅಲಂಕರಿಸಿದೆ. ಸಂಗೀತ ನಾಟಕ ಅಕಾಡೆಮಿ, ಚೆನ್ನೈ ಮ್ಯೂಸಿಕ್ ಅಕಾಡೆಮಿಯ ಸಂಗೀತ ಕಲಾನಿಧಿ, ಕನಕ-ಪುರಂದರ, ರಾಜ್ಯೋತ್ಸವ ಪುರಸ್ಕಾರ... ಹೀಗೆ ಅಸಂಖ್ಯ ಗೌರವಗಳು ಅವರಿಗೆ ಸಂದಿವೆ. ಬಹುತೇಕ ಪ್ರಶಸ್ತಿಗಳ ಮೌಲ್ಯ ಶ್ರೀಕಂಠನ್ ಕಾರಣವಾಗಿಯೇ ಹೆಚ್ಚಿವೆ ಎಂದರೆ ಉತ್ಪ್ರೇಕ್ಷೆಯ ಮಾತಲ್ಲ.

ತ್ಯಾಗರಾಜ ಪರಂಪರೆಯ ಕೊಂಡಿಯಾಗಿರುವ ಈ ಗಾಯಕ ಶ್ರೇಷ್ಠನನ್ನು ಅರಸಿ `ಸಂಗೀತ ವೇದಾಂತ ಧುರೀಣ~ ಪ್ರಶಸ್ತಿ ಈಗ ಬಂದಿದೆ. ಬೆಂಗಳೂರು ನಗರದಲ್ಲಿ ಸಂಗೀತ ಸೇವೆಯನ್ನು ವ್ರತದಂತೆ ಪರಿಪಾಲಿಸಿಕೊಂಡು ಬಂದಿರುವ ಶ್ರೀರಾಮ ಲಲಿತ ಕಲಾ ಮಂದಿರ ನೀಡುವ ಈ ಪ್ರಶಸ್ತಿ ಒಂದು ಲಕ್ಷ ರೂಪಾಯಿ ನಗದು ಹಾಗೂ ರಜತ ಫಲಕವನ್ನು ಒಳಗೊಂಡಿದೆ. ಸಂಗೀತ ದಿಗ್ಗಜ ಡಾ.ಎಂ. ಬಾಲಮುರಳಿಕೃಷ್ಣ ಅವರಿಗೆ ಈ ಹಿಂದೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

1250ನೇ ಕಛೇರಿ: ನಾಳೆ ಭಾನುವಾರ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ಶ್ರೀಕೃಷ್ಣ ಕಲಾಕ್ಷೇತ್ರದ ನಿರ್ದೇಶಕ ತಿರು ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಸ್ವೀಕರಿಸುವ ಶ್ರೀಕಂಠನ್ ಗಾಯನ ಕಛೇರಿಯನ್ನೂ ನಡೆಸಿಕೊಡಲಿದ್ದಾರೆ. ವಿಶೇಷವೆಂದರೆ ಶ್ರೀರಾಮ ಲಲಿತ ಕಲಾ ಮಂದಿರದ ಆಶ್ರಯದಲ್ಲಿ ನಡೆಯುತ್ತಿರುವ 1250ನೇ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ಇದು!

ಶ್ರೀರಾಮ ಲಲಿತ ಕಲಾ ಮಂದಿರ ಸ್ಥಾಪನೆಯಾಗಿದ್ದು 1955ರಲ್ಲಿ. ಪ್ರತಿವರ್ಷವೂ ಹಲವು ಬಾರಿ ಸಂಗೀತ ಕಛೇರಿ ಏರ್ಪಡಿಸಿ ಸಂಗೀತ ಪ್ರೇಮಿಗಳನ್ನು ಸದಾ ಸಂತೋಷದಲ್ಲಿಡುವ ಕೈಂಕರ್ಯ ಸಂಸ್ಥೆಯದು. ಸಂಗೀತದಲ್ಲಿ ಪ್ರಕಾಂಡ ಪಂಡಿತರೆನಿಸಿದ್ದ ಜಿ.ವೇದಾಂತ ಅಯ್ಯಂಗಾರ್ಯರು ಸಂಸ್ಥೆಯನ್ನು ಸಂಗೀತ ಸರಸ್ವತಿಯ ಸೇವೆಗೆಂದೇ ಹುಟ್ಟು ಹಾಕಿದರು. ಮುಂದೆ ಏಳೇ ವರ್ಷದಲ್ಲಿ ಅವರು ಅಸುನೀಗಿದರು. ಅವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಪುತ್ರಿ, ವಿದುಷಿ ಜಿ.ವಿ. ರಂಗನಾಯಕಮ್ಮ ಬಹುವಾಗಿ ಶ್ರಮಿಸಿದರು.

ಅವರೂ ಈಗ ಕಾಲನ ವಶರಾಗಿದ್ದಾರೆ. ಆ ತೇರನ್ನು ಮುಂದಕ್ಕೆ ಎಳೆಯುವ ಕೆಲಸವನ್ನು ವಿದುಷಿ ಜಿ.ವಿ. ನೀಲಾ ಹಾಗೂ ಸಂಸ್ಥೆಯ ಕಾರ್ಯದರ್ಶಿ ಜಿ.ವಿ. ಕೃಷ್ಣಪ್ರಸಾದ್ ಮಾಡುತ್ತಿದ್ದಾರೆ. 2012 ವೇದಾಂತಂ ಅಯ್ಯಂಗಾರ್ಯರ 50ನೇ ಪುಣ್ಯ ತಿಥಿಯ ವರ್ಷವೂ ಹೌದು. ಅವರ ಹೆಸರೂ ಒಳಗೊಂಡ ಸಂಗೀತ ಪ್ರಶಸ್ತಿಯ `ಸಂಗೀತ ವೇದಾಂತ ಧುರೀಣ~ ಎಂಬ ಹೆಸರನ್ನು ಸೂಚಿಸಿದ್ದು ತಿರು ಸ್ವಾಮೀಜಿ. ಸಂಗೀತ ಮತ್ತು ವೇದಾಂತ ಒಂದುಗೂಡಿರುವ ವಿಶೇಷ ಇದು.

ಕಾರ್ಯಕ್ರಮ ವಿವರ: ಆರ್.ಕೆ. ಶ್ರೀಕಂಠನ್ ಗಾಯನ, ಆರ್.ಎಸ್. ರಮಾಕಾಂತ್ ಸಹ ಗಾಯನ. ಪಕ್ಕವಾದ್ಯದಲ್ಲಿ ಎಚ್.ಕೆ.ವೆಂಕಟರಾಂ (ಪಿಟೀಲು) ಶ್ರೀಮುಷ್ಣಂ ವಿ.ರಾಜಾರಾವ್ ಹಾಗೂ ಎಚ್.ಎಸ್. ಸುಧೀಂದ್ರ (ಮೃದಂಗದ್ವಯ) ಸಹಕಾರ. ಸ್ಥಳ: ಬೆಂಗಳೂರು ಗಾಯನ ಸಮಾಜ, ಸಮಯ: ಸಂಜೆ 5 ಗಂಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.