ಗುರುವಾರ , ಜೂನ್ 17, 2021
27 °C

ನಿದ್ರೆ ಮಾಪಕ ‘ಬೆಡ್ಡಿಟ್’

ವಿಶ್ವನಾಥ ಶರ್ಮಾ Updated:

ಅಕ್ಷರ ಗಾತ್ರ : | |

ಕೆಲಸದ ಒತ್ತಡ, ಕುಟುಂಬದ ಸಮಸ್ಯೆ, ಆರ್ಥಿಕ  ಬಿಕ್ಕಟ್ಟು ಹೀಗೆ ಇನ್ನೂ ಅನೇಕ ಸಮಸ್ಯೆಗಳಿಂದಾಗಿ ಹಲವರಿಗೆ ರಾತ್ರಿ ನಿದ್ರೆಯೇ ಬರುವುದಿಲ್ಲ. ಅದರಲ್ಲೂ ನಗರ ಪ್ರದೇಶದ ಜಂಜಾಟದ ಬದುಕಿನಲ್ಲಿ ಈ ಸಮಸ್ಯೆ ಇದ್ದೇ ಇರುತ್ತದೆ.ದಿಂಬಿಗೆ ತಲೆ ಇಟ್ಟೊಡನೆ ನಿದ್ರಾದೇವಿ ಆಲಂಗಿಸಬೇಕು. ಆದರೆ, ನೂರಾರು ಚಿಂತೆಗಳು ಕಾಡತೊಡಗಿ ಬೇಗ ನಿದ್ರೆ ಹತ್ತುವುದೇ ಇಲ್ಲ. ಹಾಗಾಗಿ ಬೆಳಿಗ್ಗೆ ಹೊತ್ತು ಮೂಡಿದರೂ ಏಳಲು ಮನಸ್ಸಾಗದು. ಇದರಿಂದ ದಿನವಿಡೀ ಒಂದು ರೀತಿಯ ಆಲಸ್ಯ ಮನೆ ಮಾಡಿರುತ್ತದೆ.

ಈ ಸಮಸ್ಯೆ ನಿವಾರಿಸಿಕೊಳ್ಳಲು ಕೆಲವರು ನಿದ್ರೆ ಮಾತ್ರೆ ಸೇವಿಸುವುದು, ಅದೂ ಫಲಿಸದಾದಾಗ ವೈದ್ಯರ ಮೊರೆ ಹೋಗುವುದು ಬಹಳಷ್ಟು ಮಂದಿಯ ರೂಢಿ.ಸರಿಯಾಗಿ ನಿದ್ರೆ ಬಾರದೇ ಇರಲು ಕಾರಣ ಏನು? ಎಂಬುದನ್ನು ನಾವೇ ಕಂಡುಕೊಂಡರೆ ವೈದ್ಯರಲ್ಲಿಗೆ ಹೋಗುವ ಪ್ರಮೇಯವೇ ಬರುವುದಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೆ. ಆದರೂ ಆ ಬಗ್ಗೆ ಯಾರೂ ಹೆಚ್ಚಿಗೆ ಗಮನ ಹರಿಸುವುದಿಲ್ಲ!

ಈ ಹಿನ್ನೆಲೆಯಲ್ಲಿ ನಮ್ಮ ನಿದ್ರೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಲು ಫಿನ್‌ಲ್ಯಾಂಡ್‌ನ  ಹೆಲ್ಸಿಂಕಿ  (Helsinki) ವಿಶ್ವವಿದ್ಯಾಲಯದ ತಂತ್ರಜ್ಞರ ತಂಡ ಮುಂದಾಗಿದೆ.ಮುಖ್ಯ ತಂತ್ರಜ್ಞ ಜೂನಸ್ ಪಾಲಸ್ಮಾ  (Joonas Paalasmaa) ಅವರ ತಂಡ ‘ಬೆಡ್ಡಿಟ್’(Beddit) ಸಾಧನ  ರೂಪಿಸಿದೆ. ಇದು ವ್ಯಕ್ತಿಯ ನಿದ್ರೆಗೆ ಸಂಬಂಧಿಸಿದ ಅಗತ್ಯ ಎಲ್ಲಾ ಮಾಹಿತಿಗಳನ್ನೂ ನಿಖರವಾಗಿ ಬ್ಲೂಟೂತ್ ಸಹಾಯದಿಂದ ಮೊಬೈಲ್‌ನಲ್ಲಿರುವ ಆ್ಯಪ್‌ಗೆ ರವಾನಿಸುತ್ತದೆ. ಆ ಮಾಹಿತಿಗಳಿಗೆ ಅನುಗುಣವಾಗಿ ನಮ್ಮ ದೈನಂದಿನ ನಿದ್ರೆಯ ಪ್ರಮಾಣ ತಿಳಿಯುತ್ತದೆ. ವುದಲ್ಲದೆ, ಸುಖಕರ ನಿದ್ರೆಗೆ ಬೇಕಾದ ಅಗತ್ಯ ಸಲಹೆ, ಸೂಚನೆಗಳನ್ನು ಈ ಆ್ಯಪ್ ನೀಡುತ್ತದೆ.‘ನಿದ್ರೆಯ ಗುಣಮಟ್ಟು ಮತ್ತು ಪ್ರಮಾಣ ವೃದ್ಧಿಸಲು ‘ಬೆಡ್ಡಿಟ್’ ಸಾಧನ ಸುಲಭವಾದ ಮಾರ್ಗವಾಗಿದೆ. ಇದು ನಿದ್ರೆಗೆ ಸಂಬಂಧಿಸಿದ ಮಾಹಿತಿಗಳಾದ ನಿದ್ರೆ ಪ್ರಮಾಣ, ಗೊರಕೆ ಮತ್ತು ಹೃದಯದ ವೇಗದ ಬಗ್ಗೆ ಲೆಕ್ಕಾಚಾರ ಹಾಕುತ್ತದೆ. ಬಳಿಕ ಅದನ್ನು ಆನ್‌ಲೈನ್‌ ಸೇವೆ ಅಥವಾ ಮೊಬೈಲ್‌ನಲ್ಲಿ ಬಳಕೆದಾರನಿಗೆ ಪ್ರದರ್ಶಿಸುತ್ತದೆ ಎನ್ನುತ್ತಾರೆ ಜೋನ್ನಾ.‘ಸದ್ಯ ವೈದ್ಯಕೀಯ ತಪಾಸಣೆಯಲ್ಲಿ ಮಾತ್ರ ನಿದ್ರೆಯ ಗುಣಮಟ್ಟ ಮತ್ತು ಪ್ರಮಾಣ ಅಳೆಯುವ ವಿಧಾನ ಬಳಕೆಯಲ್ಲಿದೆ. ಆದರೆ ನಮ್ಮ ಈ ಬೆಡ್ಡಿಟ್ ಸಾಧನವನ್ನು ಯಾರು ಬೇಕಾದರೂ ಬಳಸಿ ತಮ್ಮ ನಿದ್ರೆಯ ಸಂಪೂರ್ಣ ಮಾಹಿತಿ ಪಡೆದು ನಿದ್ರಾಹೀನತೆ ಸಮಸ್ಯೆ ನಿವಾರಿಸಿಕೊಳ್ಳಬಹುದು’ ಎನ್ನುವುದು ಅವರ ವಾದ.‘ಬೆಡ್ಡಿಟ್’ ಕಾರ್ಯವೈಖರಿ?

ಹೃದಯ ಬಡಿತ ಪರೀಕ್ಷಿಸುವ ವೈಜ್ಞಾನಿಕ ವಿಧಾನದ ಆಧಾರದ ಮೇಲೆ ಈ ಬ್ಲೂಟೂತ್ ನಿದ್ರಾ ಸಂವೇದಕ  (sleep sensor) ಸಾಧನ  ಅಭಿವೃದ್ಧಿಪಡಿಸಲಾಗಿದೆ. ಇದು ಅತ್ಯಂತ ತೆಳ್ಳಗಿದ್ದು, ಹಾಸಿಗೆಗೆ ಅಂಟಿಕೊಳ್ಳುವುದರಿಂದ  ಇದರ ಇರುವಿಕೆಯ ಅರಿವೇ ಆಗುವುದಿಲ್ಲ.

ನಾವು ಮಲಗಿದ ಕೂಡಲೇ ಈ ಸಂವೇದಕ ಕಾರ್ಯಾಚರಿಸಲು ಆರಂಭಿಸುತ್ತದೆ. ನಿದ್ರೆಗೆ ಸಂಬಂಧಿಸಿದ ಮಾಹಿತಿಗಳನ್ನು ಬ್ಲೂಟೂತ್ ಮೂಲಕ ಮೊಬೈಲಿನಲ್ಲಿರುವ ಬೆಡ್ಡಿಟ್ ಆ್ಯಪ್‌ಗೆ ರವಾನೆಯಾಗುತ್ತದೆ. ಈ ಮಾಹಿತಿಗಳ ಆಧಾರದ ಮೇಲೆ ಹೇಗೆ ಒಳ್ಳೆಯ ನಿದ್ರೆ ಮಾಡಿ ದಿನವಿಡೀ ನಮ್ಮ ಚೈತನ್ಯ ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ಕೆಲವು ಅಗತ್ಯ ಸಲಹೆಗಳನ್ನು ನೀಡುತ್ತದೆ. ಜತೆಗೆ  ನಿದ್ರೆಗೆ ಸಂಬಂಧಿಸಿದ ಮಾಹಿತಿಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಅವಕಾಶವಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.