ಭಾನುವಾರ, ಮೇ 16, 2021
28 °C

ನಿಯಮ ಉಲ್ಲಂಘನೆಗೆ ಎರವಲು ಸೇವೆಯೇ ಹೊಣೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರವನ್ನು ಯೋಜಿತ ರೀತಿಯಲ್ಲಿ ರೂಪಿಸಬೇಕಾದ ಗುರುತರ ಜವಾಬ್ದಾರಿ ಹೊತ್ತಿರುವ ಬಿಬಿಎಂಪಿ ನಗರ ಯೋಜನೆ ವಿಭಾಗದಲ್ಲಿ ಎರವಲು ಸೇವೆ ಅಧಿಕಾರಿಗಳದ್ದೇ ಕಾರುಬಾರು! ಹಾಗಾಗಿ ನಗರದಲ್ಲಿ ಕಟ್ಟಡ ನಿಯಮ ಉಲ್ಲಂಘನೆಯಲ್ಲಿ ಈ ಅಧಿಕಾರಿಗಳ ಪಾಲು ಪ್ರಮುಖವಾಗಿದೆ. ಆದರೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿದ ಉದಾಹರಣೆ ಮಾತ್ರ ಕಾಣುತ್ತಿಲ್ಲ.ಉದ್ಯಾನನಗರಿ ಬೆಂಗಳೂರಿನ ಜಾಯಮಾನಕ್ಕೆ ಒಪ್ಪುವ ರೀತಿಯಲ್ಲಿ ನಗರದ ವಿನ್ಯಾಸವನ್ನು ರೂಪಿಸಬೇಕಾದ ಜವಾಬ್ದಾರಿ ನಗರ ಯೋಜನೆ ಮೇಲಿದೆ. ವಿಶಾಲ ರಸ್ತೆಗಳು, ಪಾದಚಾರಿ ಮಾರ್ಗಗಳು, ಸುಂದರ ಉದ್ಯಾನಗಳಿರುವ ನಗರ ಎಂಬ ಹೆಗ್ಗಳಿಕೆಯನ್ನು ಕಾಯ್ದುಕೊಳ್ಳಬೇಕಾದ ಹೊಣೆಗಾರಿಕೆ ಕೂಡ ಈ ವಿಭಾಗಕ್ಕಿದೆ.ನಗರದ ಸೌಂದರ್ಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕಟ್ಟಡಗಳು ನಿರ್ಮಾಣವಾಗುವಂತೆ ಮೇಲ್ವಿಚಾರಣೆ ನಡೆಸುವ ಜವಾಬ್ದಾರಿಯೂ ನಗರ ಯೋಜನೆ ವಿಭಾಗದ ಮೇಲಿದೆ. ಇಷ್ಟು ಮಹತ್ವದ ವಿಭಾಗದಲ್ಲಿ ಎರವಲು ಸೇವೆಯ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ನಗರ ಯೋಜನೆ ವಿಭಾಗದಲ್ಲಿ ಒಟ್ಟು 50 ಮಂದಿ ಸಹಾಯಕ/ ಕಿರಿಯ ಎಂಜಿನಿಯರ್‌ಗಳಿದ್ದಾರೆ. ಇವರ ಪೈಕಿ ಪಾಲಿಕೆ ಎಂಜಿನಿಯರ್‌ಗಳು 11 ಮಂದಿ ಮಾತ್ರ ಇದ್ದು, ಉಳಿದ 39 ಮಂದಿ ಎರವಲು ಸೇವೆ ಸಲ್ಲಿಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ 37 ಮಂದಿ, ನಗರ ಯೋಜನೆ ಇಲಾಖೆ ಹಾಗೂ ಡಿಎಂಎ ಇಲಾಖೆಯ ತಲಾ ಒಬ್ಬರು ಎಂಜಿನಿಯರ್ ಕಾರ್ಯನಿರ್ವಹಿಸುತ್ತಿದ್ದಾರೆ.ಪಾಲಿಕೆಯ ಒಬ್ಬ ಎಂಜಿನಿಯರ್ ಇಲ್ಲ: ಹಾಗೆಯೇ, 37 ಮಂದಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್/ ಸಹಾಯಕ ನಿರ್ದೇಶಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಚ್ಚರಿ ಎಂದರೆ ಇವರ ಪೈಕಿ ಪಾಲಿಕೆ ಒಬ್ಬ ಎಂಜಿನಿಯರ್ ಕೂಡ ಇಲ್ಲ. ಬದಲಿಗೆ ಲೋಕೋಪಯೋಗಿ ಇಲಾಖೆಯಿಂದ 27, ನಗರ ಯೋಜನೆ ಇಲಾಖೆಯಿಂದ 4, ಕೆಪಿಟಿಸಿಎಲ್, ಕೃಷಿ ಇಲಾಖೆ, ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಹಾಗೂ ಭೂಸೇನಾ ನಿಗಮದಿಂದ ತಲಾ ಒಬ್ಬ ಎಂಜಿನಿಯರ್ ಎರವಲು ಸೇವೆ ಸಲ್ಲಿಸುತ್ತಿದ್ದಾರೆ.ಲೋಕೋಪಯೋಗಿ ಇಲಾಖೆಗೆ ಅಗ್ರಸ್ಥಾನ: ನಗರ ಯೋಜನೆ ವಿಭಾಗದಲ್ಲಿ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಟ್ಟು 87 ಸಹಾಯಕ ಕಾರ್ಯಪಾಲಕ ಎಂಜಿನಿಯರ್/ ಸಹಾಯಕ ನಿರ್ದೇಶಕರ ಪೈಕಿ 64 ಮಂದಿ ಲೋಕೋಪಯೋಗಿ ಇಲಾಖೆಯಿಂದ ಬಂದವರಾಗಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಎಂಜಿನಿಯರ್‌ಗಳು ನಗರ ಯೋಜನೆ ವಿಭಾಗದಲ್ಲಿ ಎರವಲು ಸೇವೆ ಸಲ್ಲಿಸುತ್ತಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.ನಗರ ಯೋಜನೆ ಮೇಲೆ ಕಣ್ಣು: ಬಿಬಿಎಂಪಿಗೆ ಎರವಲು ಸೇವೆಯ ಮೇಲೆ ನಿಯೋಜನೆಗೊಳ್ಳುವವರು ನಗರ ಯೋಜನೆ ಮತ್ತು ಕಾಮಗಾರಿ ವಿಭಾಗದ ಮೇಲೆ ಕಣ್ಣಿಟ್ಟಿರುತ್ತಾರೆ. ಏಕೆಂದರೆ ಈ ಎರಡೂ ವಿಭಾಗಗಳಲ್ಲಿ ಸಲ್ಲಿಸುವ ಸೇವೆಗೆ ಉತ್ತಮ `ಪ್ರತಿಫಲ~ ದೊರೆಯುತ್ತದೆ ಎಂಬುದು ಅವರ ನಂಬಿಕೆ.ನಗರದಲ್ಲಿ ಕಟ್ಟಡ ನಿರ್ಮಾಣ ಮಾಡಬೇಕಾದರೆ ನಗರ ಯೋಜನೆ ವಿಭಾಗದಿಂದ ಮೊದಲಿಗೆ ನಕ್ಷೆ ಮಂಜೂರಾತಿ ಪಡೆಯಬೇಕು. ಹಾಗೆಯೇ ಕಾಮಗಾರಿ ಪ್ರಾರಂಭ ಪ್ರಮಾಣ ಪತ್ರ (ಕಮೆನ್ಸ್‌ಮೆಂಟ್ ಸರ್ಟಿಫಿಕೇಟ್) ಹಾಗೂ ಸ್ವಾಧೀನ ಪ್ರಮಾಣ ಪತ್ರ (ಒ.ಸಿ) ವಿತರಿಸುವವರು ಕೂಡ ನಗರ ಯೋಜನೆ ವಿಭಾಗದ ಅಧಿಕಾರಿಗಳೇ. ಈ ವಿಭಾಗದಲ್ಲಿ ಹಣ ನೀಡದೇ ಯಾವುದೇ `ಕೆಲಸ~ವೂ ಸುಸೂತ್ರವಾಗಿ ನಡೆಯುವುದಿಲ್ಲ ಎಂಬುದು ಜನಜನಿತವಾದ ಮಾತು.`ಎರವಲು ಸೇವೆಯ ಮೇಲೆ ನಿಯೋಜನೆಗೊಂಡವರಿಗೆ ಕಟ್ಟಡ ನಿರ್ಮಾಣ ಉಪ ವಿಧಿಗಳು, ಮೇಲ್ವಿಚಾರಣೆ ನಡೆಸುವ ವಿಧಾನಗಳ ಬಗ್ಗೆ ಅರಿವಿರುವುದಿಲ್ಲ. ಅಲ್ಲದೇ ನೀತಿ ನಿಯಮಗಳನ್ನು ತಿಳಿದುಕೊಳ್ಳುವ ಗೋಜಿಗೂ ಹೋಗುವುದಿಲ್ಲ. ಆದರೆ ಪ್ರತಿ ಹಂತದಲ್ಲೂ ನಿವೇಶನದಾರರಿಂದ ಹಣ ಪಡೆಯದೇ ಯಾವ ಕೆಲಸವನ್ನೂ ಬಹುಪಾಲು ಅಧಿಕಾರಿಗಳು ಮಾಡುವುದಿಲ್ಲ~ ಎಂದು ಪಾಲಿಕೆಯ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಒಪ್ಪಿಕೊಳ್ಳುತ್ತಾರೆ.`ಒಂದೊಮ್ಮೆ ಎರವಲು ಸೇವೆ ಅಧಿಕಾರಿ ನಿಯಮಗಳನ್ನು ಸಮರ್ಪಕವಾಗಿ ತಿಳಿದುಕೊಂಡಿದ್ದೇ ಆದರೆ ಅವರು ನಿವೇಶನದಾರರನ್ನು ಇನ್ನಷ್ಟು ಶೋಷಿಸುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಲಂಚದ ಹಣಕ್ಕೆ ಬೇಡಿಕೆ ಇಡುತ್ತಾರೆ. ಈ ವಿಭಾಗದಲ್ಲಿ ಹಣ ಪಡೆಯದೇ ಮಂಜೂರಾತಿ ಮಾಡುವವರ ಸಂಖ್ಯೆ ತೀರಾ ಕಡಿಮೆ. ಈ ವಿಭಾಗದಲ್ಲಿ ಪಾರದರ್ಶಕತೆ ಇಲ್ಲವೇ ಇಲ್ಲ. ಎರವಲು ಸೇವೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಷ್ಟೆಲ್ಲಾ ಅಕ್ರಮಗಳು ನಡೆಯುತ್ತಿವೆ~ ಎಂದು ಹೇಳುತ್ತಾರೆ.ಈ ಅಧಿಕಾರಿಗಳೇ ಹೊಣೆ: ನಗರದಲ್ಲಿ ನಿಯಮಬಾಹಿರವಾಗಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕಟ್ಟಡಗಳು ನಿರ್ಮಾಣಗೊಳ್ಳುವಲ್ಲಿ ಈ ಅಧಿಕಾರಿಗಳ ಪಾತ್ರ ದೊಡ್ಡದಿದೆ. ಈ ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸದಿರಲು ಕಾರಣವಿದೆ. ಎರವಲು ಸೇವೆಯ ಅಧಿಕಾರಿಯ ವಿರುದ್ಧ ಕ್ರಮ ಜರುಗಿಸಲು ಪಾಲಿಕೆಗೆ ಅಧಿಕಾರವೇ ಇಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಎಂದು ಶಿಫಾರಸು ಮಾಡಿ ಮಾತೃ ಇಲಾಖೆಗೆ ವಾಪಸ್ ಕಳುಹಿಸಬಹುದಷ್ಟೇ. ಪರಿಣಾಮವಾಗಿ ಅಧಿಕಾರಿಗಳು ನಿಯಮ ಪಾಲನೆಗೆ ಹೆಚ್ಚು ಒತ್ತು ನೀಡಿಲ್ಲ ಎಂಬುದು ಸ್ಪಷ್ಟ.ವಾರ್ಡ್ ಎಂಜಿನಿಯರ್‌ಗಳ ಕರಾಮತ್ತು: ನಕ್ಷೆ ಮಂಜೂರಾತಿ, ಸಿ.ಸಿ, ಒ.ಸಿ ಪ್ರಮಾಣ ಪತ್ರ ನೀಡುವ ಜವಾಬ್ದಾರಿ ನಗರ ಯೋಜನೆ ವಿಭಾಗಕ್ಕೆ ನೀಡಿದ್ದರೆ, ಕಟ್ಟಡ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆಯ ಪತ್ತೆ ಹಾಗೂ ಉಲ್ಲಂಘನೆ ವಿರುದ್ಧ ಕ್ರಮ ಜರುಗಿಸುವ ಅಧಿಕಾರವನ್ನು ವಾರ್ಡ್ ಎಂಜಿನಿಯರ್‌ಗಳಿಗೆ ನೀಡಲಾಗಿದೆ.ಈ ವಿಭಾಗದಲ್ಲೂ ಎರವಲು ಸೇವೆ ಅಧಿಕಾರಿಗಳು ಗಣನೀಯ ಸಂಖ್ಯೆಯಲ್ಲಿದ್ದಾರೆ. ಈ ಎಂಜಿನಿಯರ್‌ಗಳು ನಿಯಮ ಉಲ್ಲಂಘನೆಯನ್ನು ತಡೆಗಟ್ಟುವ ಬದಲು ಉಲ್ಲಂಘನೆಗೆ ಅವಕಾಶ ನೀಡುವುದೇ ಹೆಚ್ಚು! ನಂತರ ಕಟ್ಟಡ ಮಾಲೀಕರನ್ನು ಸಂಪರ್ಕಿಸಿ ಉಲ್ಲಂಘನೆಯನ್ನು `ಸಕ್ರಮ~ಗೊಳಿಸಲು ಒಂದಿಷ್ಟು `ದಕ್ಷಿಣೆ~ ಪಡೆಯುವುದನ್ನು ರೂಢಿಸಿಕೊಂಡಿದ್ದಾರೆ. ಮುಂಚಿತವಾಗಿಯೇ `ದಕ್ಷಿಣೆ~ ನೀಡಿದರೆ ಯಾವ ರೀತಿ ನಿಯಮ ಉಲ್ಲಂಘಿಸಬಹುದು ಎಂಬ ಬಗ್ಗೆ ಸಲಹೆ- ಸೂಚನೆಯನ್ನು ಉದಾರವಾಗಿ ನೀಡುತ್ತಾರೆ ಎಂಬ ಆರೋಪ ಕೂಡ ಇದೆ.ನಗರ ಯೋಜನೆ ಹಾಗೂ ವಾರ್ಡ್ ವಿಭಾಗದ ಎಂಜಿನಿಯರ್‌ಗಳ ಕರ್ತವ್ಯ ಲೋಪದಿಂದ ನಗರದಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವುದು ಎಗ್ಗಿಲ್ಲದೆ ಸಾಗಿದೆ. ಕರ್ತವ್ಯ ಲೋಪ ಮಾಡುವ ಕಿರಿಯ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳು ಕ್ರಮ ಜರುಗಿಸದಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಇದಕ್ಕೆ ಜನಪ್ರತಿನಿಧಿಗಳ `ಪ್ರೋತ್ಸಾಹ~ ಕೂಡ ಇರುವುದರಿಂದ ಎಲ್ಲವೂ ಪಾರದರ್ಶಕವಾಗಿಯೇ ನಡೆಯುತ್ತಿದೆ.

ನೀವೂ ಮಾಹಿತಿ ನೀಡಿ

ನಿಯಮಗಳ ಉಲ್ಲಂಘನೆ ಹಾಗೂ ಕಟ್ಟಡ ನಿರ್ಮಾಣದಲ್ಲಿ ನಡೆಯುವ ಅಕ್ರಮಗಳ ಕುರಿತು `ಪ್ರಜಾವಾಣಿ~ ಸರಣಿ ಲೇಖನಗಳನ್ನು ಪ್ರಕಟಿಸಲಿದೆ.

ಓದುಗರು ಸಹ ಈ ರೀತಿಯ ಪ್ರಕರಣಗಳ ಬಗ್ಗೆ ಮಾಹಿತಿ ನೀಡಬಹುದು. ಅಲ್ಲದೇ ಕಟ್ಟಡ ನಿರ್ಮಾಣ ವೇಳೆ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡುತ್ತಿದ್ದರೆ ಈ ಕುರಿತು ಮಾಹಿತಿ ನೀಡಬಹುದು. ಅದನ್ನು ಓದುಗರ ಹೆಸರಿನಲ್ಲಿಯೇ ಪ್ರಕಟಿಸಲಾಗುವುದು.

ಹಾಗೆಯೇ ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡ ಹಾಗೂ ನಿರ್ಮಾಣವಾಗುತ್ತಿರುವ ಬಹುಮಹಡಿ ಕಟ್ಟಡಗಳ ಬಗ್ಗೆ ದಾಖಲೆ ಸಹಿತ ಮಾಹಿತಿಯನ್ನು ಕೆಳಕಂಡ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಇ-ಮೇಲ್: civicpv@gmail.com

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.