ಶುಕ್ರವಾರ, ಏಪ್ರಿಲ್ 16, 2021
31 °C

ನಿಯಮ ಉಲ್ಲಂಘಿಸಿದ ಕಟ್ಟಡಗಳಿಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಉಲ್ಲಂಘಿಸಿ ನಿರ್ಮಿಸುತ್ತಿರುವ ಎಲ್ಲ ಕಟ್ಟಡಗಳಿಗೆ ನೋಟಿಸ್ ಜಾರಿಗೊಳಿಸಿ ಕಾನೂನುರೀತ್ಯ ಕ್ರಮ ಜರುಗಿಸಲು ಶುಕ್ರವಾರ ನಡೆದ ಪಾಲಿಕೆ ಅಧಿಕಾರಿಗಳು ಹಾಗೂ ನೌಕರರ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.ಮೊದಲ ಹಂತದಲ್ಲಿ ನಿಯಮ ಉಲ್ಲಂಘಿಸಿದ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಸಭೆಯಲ್ಲಿ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಎಲ್ಲ 198 ವಾರ್ಡ್‌ಗಳಲ್ಲಿಯೂ ಈ ರೀತಿ ನಿಯಮ ಉಲ್ಲಂಘಿಸಿರುವ ಕಟ್ಟಡಗಳಿಗೆ ಒಂದು ವಾರದೊಳಗೆ ನೋಟಿಸ್ ನೀಡಲು ಸಲಹೆ ಮಾಡಲಾಗಿದೆ ಎಂದು ಎಂದು ಪಾಲಿಕೆ ಅಧಿಕಾರಿಗಳು ಹಾಗೂ ನೌಕರರ ಸಂಘದ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ಸಭೆಯ ತೀರ್ಮಾನದ ಪ್ರಕಾರ, ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿರುವ ಮಾಲೀಕರಿಗೆ ಕೆಎಂಸಿ ಕಾಯ್ದೆ 321 (1 ಮತ್ತು 2) ಪ್ರಕಾರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಒಂದು ವಾರದೊಳಗೆ ತಿಳಿವಳಿಕೆ ಪತ್ರ ನೀಡಲಿದ್ದಾರೆ. ಒಂದು ವೇಳೆ ಮಾಲೀಕರು ಯಾವುದೇ ಉತ್ತರ ನೀಡದಿದ್ದಲ್ಲಿ ಆನಂತರ ಏಳು ದಿನಗಳೊಳಗೆ 321 (3) ಪ್ರಕಾರ ಸ್ಥಿರೀಕರಣ ಪತ್ರ ಜಾರಿಗೊಳಿಸಲಾಗುತ್ತದೆ.ಅದಕ್ಕೂ ಉತ್ತರ ಬರದಿದ್ದಲ್ಲಿ ನಿಯಮ 462 ಪ್ರಕಾರ, ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಂದ ಕಟ್ಟಡ ನೆಲಸಮಗೊಳಿಸಲು ಅನುಮತಿ ಪಡೆದು ಕಾನೂನುರೀತ್ಯ ಕ್ರಮ ಜರುಗಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಈ ಮೂಲಗಳು ತಿಳಿಸಿವೆ.ನಗರದಲ್ಲಿ ನಕ್ಷೆ ಮಂಜೂರಾತಿ ಉಲ್ಲಂಘಿಸಿ ಲಕ್ಷಾಂತರ ಮನೆಗಳನ್ನು ನಿರ್ಮಿಸಲಾಗಿದೆ. ಅವುಗಳೆಲ್ಲಕ್ಕೂ ನೋಟಿಸ್ ನೀಡಿದಲ್ಲಿ ಜನ ಪಾಲಿಕೆ ಸದಸ್ಯರು ಹಾಗೂ ಶಾಸಕರ ಮನೆ ಬಾಗಿಲು ತಟ್ಟಲಿದ್ದಾರೆ. ಬಿಎಂಟಿಎಫ್ ಮುಖ್ಯಸ್ಥರ ಸೂಚನೆಯಂತೆ ನಾವು ಕಾರ್ಯನಿರ್ವಹಿಸೋಣ. ಅನಗತ್ಯವಾಗಿ ನಾವು ತೊಂದರೆ ಅನುಭವಿಸುವುದು ಬೇಡ ಎಂಬ ತೀರ್ಮಾನಕ್ಕೆ ಸಭೆಯಲ್ಲಿ ಬರಲಾಗಿದೆ.ತ್ವರಿತ ತನಿಖೆಗೆ ಬಿಎಂಟಿಎಫ್ ನಿರ್ಧಾರ: ಈ ನಡುವೆ, ಬಿಎಂಟಿಎಫ್‌ನಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ತ್ವರಿತವಾಗಿ ಕೈಗೆತ್ತಿಕೊಂಡು ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಅದರ ಮುಖ್ಯಸ್ಥ ಡಾ.ಆರ್.ಪಿ. ಶರ್ಮ ತಿಳಿಸಿದ್ದಾರೆ.ಮೂರು ದಿನ ಬಿಬಿಎಂಪಿ ನೌಕರರ ಮುಷ್ಕರದ ಜತೆಗೆ, ಎರಡು ದಿನದ ಸರ್ಕಾರಿ ರಜೆ ಅವಧಿಯಲ್ಲಾದ ಕೆಲಸದ ನಷ್ಟವನ್ನು ಸರಿದೂಗಿಸುವ ರೀತಿಯಲ್ಲಿ ತನಿಖೆ ಮುಂದುವರಿಸಲಾಗುವುದು ಎಂದು ಅವರು ಹೇಳಿದ್ದಾರೆ.

 

 

 

 

 

 

 

 

  

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.