ಗುರುವಾರ , ಜೂನ್ 17, 2021
29 °C

ನಿಯಮ ಜಾರಿ ಕಟ್ಟುನಿಟ್ಟಾಗಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಮಹಾನಗರದಲ್ಲಿ ಹೋಟೆಲ್, ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಇರುಳಿನ ವಹಿವಾಟು ಅವಧಿಯನ್ನು ವಿಸ್ತರಿಸುವ ರಾಜ್ಯ ಸರ್ಕಾರದ ತೀರ್ಮಾನ ಸ್ವಾಗತಾರ್ಹವಾದುದು.ಊಟ,  ತಿಂಡಿ–ತಿನಿಸು ಪೂರೈಸುವ ಹೋಟೆಲ್‌ಗಳಿಗೆ ವಾರದ ಎಲ್ಲಾ ದಿನ;  ಪಬ್, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ವಾರಾಂತ್ಯದ ಶುಕ್ರವಾರ ಮತ್ತು ಶನಿವಾರ ರಾತ್ರಿ ಒಂದು ಗಂಟೆಯವರೆಗೂ  ವಹಿವಾಟು ನಡೆಸಲು ಅವಕಾಶ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತ ಬೇಡಿಕೆ ಬಹಳ ದಿನಗಳಿಂದ ಇತ್ತು. ಅದಕ್ಕೆ ಸರ್ಕಾರ ತಡವಾಗಿಯಾದರೂ ಸ್ಪಂದಿಸಿದೆ ಎಂಬುದು ಸಮಾಧಾನದ ಸಂಗತಿ.ಬದಲಾದ ಈ ಕಾಲಘಟ್ಟದಲ್ಲಿ ಮಹಾನಗರಗಳಿಗೆ ಹಗಲು–ಇರುಳಿನ ಭೇದವೇ ಇಲ್ಲವಾಗಿದೆ! ವಾಹನಗಳ ಸದ್ದು ತಡರಾತ್ರಿಯ ನಂತರ, ಅದೂ ಎರಡು–ಮೂರು ತಾಸಿನ ಮಟ್ಟಿಗೆ ಕಮ್ಮಿಯಾಗುವುದು ಬಿಟ್ಟರೆ, ಉಳಿದಂತೆ ಮಹಾನಗರಗಳಿಗೆ ‘ನಿದ್ರೆ’ ಎಂಬುದೇ ಇಲ್ಲ.ರಾತ್ರಿಯೇ ಕೆಲಸ ಮಾಡಬೇಕಾಗಿರುವ ಹೊರಗುತ್ತಿಗೆ ಉದ್ಯಮ ಬೆಂಗಳೂರಿನಲ್ಲಿ ಲಕ್ಷಾಂತರ ಕೈಗಳಿಗೆ ಕೆಲಸ ಕೊಟ್ಟಿದೆ. ಅದರೊಂದಿಗೆ ಬೇರೆ ಬೇರೆ ಕಡೆ ರಾತ್ರಿ ಪಾಳಿಗಳಲ್ಲಿ ಕೆಲಸ ಮಾಡುವವರು, ಹೊರಗಿನಿಂದ ಬಂದು ಹೋಗುವವರ ಸಂಖ್ಯೆ ಗಣನೀಯವಾಗಿದೆ. ದುಡಿಯುವ ಜೀವ, ಹೋಟೆಲ್‌ಗಳು  ಮುಚ್ಚಿವೆ ಎಂಬ ಕಾರಣಕ್ಕಾಗಿ ಹಸಿವು ಭರಿಸುವ ಅನಿವಾರ್ಯ ಎದುರಾಗಬಾರದು.

ಜಾಗತಿಕ ನಗರಗಳಾಗಿ ರೂಪುಗೊಳ್ಳುತ್ತಿರುವ ಬೆಂಗಳೂರಿನಂಥ ಮಹಾ­ನಗರಗಳಿಗೆ ‘ನೈಟ್ ಲೈಫ್’ ಎಂಬುದು ಅತ್ಯಗತ್ಯ. ಪೊಲೀಸರಿಗೆ  ತ್ರಾಸ ಆಗು­ತ್ತದೆ ಎಂಬುದು ಇದಕ್ಕೆ ಬಾಧಕವಾಗಬಾರದು. ‘ನೈಟ್‌ ಲೈಫ್’, ಅಪ­ರಾಧ­ಗಳನ್ನು ಹೆಚ್ಚುವಂತೆ ಮಾಡುತ್ತದೆ ಎಂಬುದನ್ನು  ‘ನೈಟ್‌ಲೈಫ್’ ಇರುವ ಭಾರತದ ಯಾವ ನಗರದ ಅಪರಾಧದ ಅಂಕಿ–ಅಂಶಗಳೂ ಸಮರ್ಥಿ­ಸು­ವು­ದಿಲ್ಲ. ಹಾಗಂತ ಸ್ವೇಚ್ಛಾಚಾರಕ್ಕೆ, ನಿಯಮ ಉಲ್ಲಂಘನೆಗೆ ಅವಕಾಶ ಮಾಡಿ­ಕೊಡಬೇಕು ಎಂದು ಯಾರೂ ಹೇಳಲಾರರು.ನಿಯಮ ಪಾಲನೆಗೆ ಕಟ್ಟು­ನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಕ್ರಮ, ಅನೈತಿಕ ಚಟುವಟಿಕೆಗಳ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯವಾಗಿ ನಡೆದುಕೊಳ್ಳಬೇಕು. ಕುಡಿದು ಗಲಾಟೆ ಎಬ್ಬಿ­ಸು­ವವರು, ನಶೆ ಏರಿಸಿಕೊಂಡು ಯರ್ರಾಬಿರ್ರಿ ವಾಹನ ಓಡಿಸುವವರ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳಲು ಪೊಲೀಸರಿಗೆ ಮುಕ್ತ ಅವಕಾಶ ಇರಬೇಕು. ರಾಜ­ಕೀಯ ಹಸ್ತಕ್ಷೇಪ ಇಲ್ಲದಿದ್ದರೆ, ಶಾಂತಿಪ್ರಿಯ ನಿವಾಸಿಗಳಿಂದ ಕೂಡಿದ ಬೆಂಗ­ಳೂ­ರಿನಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡುವುದು ಪೊಲೀಸರಿಗೆ ಕಷ್ಟ ಆಗ­ಲಾರದು.ಅಂತೆಯೇ ಇಲಾಖೆಗೆ ಅಗತ್ಯ ಸಿಬ್ಬಂದಿ, ಸೌಕರ್ಯ ಒದಗಿಸು­ವು­ದನ್ನು ಸರ್ಕಾರ ಆದ್ಯತೆಯ ಕೆಲಸವಾಗಿ ಪರಿಗಣಿಸಬೇಕು. ಗಸ್ತು ವಾಹನಗಳ ಖರೀದಿಗೆ ಸರ್ಕಾರ ರೂ 5 ಕೋಟಿ ಬಿಡುಗಡೆ ಮಾಡಿರುವುದು ಈ ನಿಟ್ಟಿನಲ್ಲಿ ಶುಭಾರಂಭ ಎಂದು ಭಾವಿಸೋಣ. ಎಲ್ಲಕ್ಕಿಂತ ಮುಖ್ಯವಾಗಿ ನಗರದ ಮೂಲ ಸೌಕರ್ಯ ವೃದ್ಧಿಗೆ ಗಮನಹರಿಸಲೇಬೇಕು. ಇಲ್ಲವಾದರೆ ಜಾಗತಿಕ ಮಟ್ಟ­ದಲ್ಲಿ ನಗರದ ವರ್ಚಸ್ಸು ಮಣ್ಣುಪಾಲಾಗುವುದರಲ್ಲಿ  ಅನುಮಾನವೇ ಇಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.