ಬುಧವಾರ, ಜೂನ್ 16, 2021
21 °C

ನಿರ್ದೇಶಕಿಯರ ಆ್ಯಕ್ಷನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಣ್ಣಹಚ್ಚುವ ವನಿತೆಯರು ಅನೇಕರಿದ್ದಾರೆ. ಬಣ್ಣ ಹಚ್ಚಿಸಿ, ಆಕ್ಷನ್-ಕಟ್ ಹೇಳುವವರು ಮಾತ್ರ ವಿರಳ. ಆ ಹಾದಿಯಲ್ಲಿ ಯಶಸ್ಸು ಕಂಡ ಮೂವರು `ಮೆಟ್ರೊ~ ಜೊತೆ ಮಾತಿಗಿಳಿದಿದ್ದಾರೆ. ತಾವೆದುರಿಸುತ್ತಿರುವ ಸವಾಲುಗಳು, ಉದ್ಯಮದವರ ಪ್ರತಿಕ್ರಿಯೆ, ಸೃಜನಶೀಲತೆಯ ಕಷ್ಟ-ಸುಖವನ್ನು ಹಂಚಿಕೊಂಡಿದ್ದಾರೆ. ಅಂದಹಾಗೆ, ಇಂದು ವಿಶ್ವ ಮಹಿಳಾ ದಿನಾಚರಣೆ.ಯಾಕೀ ಸಂಶಯ?

ಸಿನಿಮಾರಂಗದಲ್ಲಿ ಮಹಿಳೆಯಾಗಿ ಎದುರಿಸಿದ ಸವಾಲುಗಳು ಹೆಚ್ಚೇನೂ ಇಲ್ಲ. ಆದರೆ ನಾವು ತೆಗೆದುಕೊಳ್ಳುವ ಸಿನಿಮಾದ ವಿಷಯಗಳನ್ನು ಸಂಶಯದ ದೃಷ್ಟಿಯಿಂದ ನೋಡುವ ಚಾಳಿಯಂತೂ ಇದ್ದೇಇದೆ. `ಸ್ಲಂ ಬಾಲ~ ಮಾಡಿದಾಗ ಇವರಿಗೆ ಭೂಗತಲೋಕದ ಸಂವೇದನೆಗಳೇನು ಗೊತ್ತು? ಎಂದರು.ಮಹಿಳೆಯರ ಸೂಕ್ಷ್ಮ ಸಂವೇದನೆಯನ್ನು ಪುಟ್ಟಣ್ಣ ಕಣಗಾಲ್ ಅವರಂಥ ಪುರುಷರು ಯಶಸ್ವಿಯಾಗಿ ಹೇಳಿರುವಾಗ ಮಹಿಳೆಯರಿಗೆ ಪುರುಷರ ಸಂವೇದನೆಯನ್ನು ತೆರೆಮೇಲೆ ತರಲು ಯಾಕೆ ಸಾಧ್ಯವಿಲ್ಲ?

 

ನಾವು ಕೂಡ ಅಣ್ಣ-ತಮ್ಮ, ಅಪ್ಪ ಹೀಗೆ ಗಂಡಸರೊಂದಿಗೆ ಬೆರೆತು ಬೆಳೆದಿರುತ್ತೆವೆ. ಅದರಿಂದ ಅಂಥ ತಾರತಮ್ಯವನ್ನು ನಾನು ವಿರೋಧಿಸುತ್ತೇನೆ. `ಕಳ್ಳರ ಸಂತೆ~ಯಂಥ ರಾಜಕೀಯ ವಿಡಂಬನೆ ಇರುವ ಸಿನಿಮಾ ಮಾಡಿದಾಗಲೂ ಅಷ್ಟೇ ಸಂಶಯದಿಂದ ನೋಡಿದರು. ಆದರೆ ದೊಡ್ಡ ದೊಡ್ಡ ಕಲಾವಿದರು ನನ್ನ ಕೆಲಸವನ್ನು ಮೆಚ್ಚಿ ಮಾತನಾಡಿದಾಗ ಸಂತೋಷವಾಯಿತು.ನಾನು ಹೆಣ್ಣು ಎಂಬ ದೃಷ್ಟಿಯಿಂದ ನನ್ನನ್ನು ಇಲ್ಲಿ ಕೀಳಾಗಿ ನೋಡಿಲ್ಲ. ಆದರೆ ನಮ್ಮ ಕೆಲಸಕ್ಕೆ ಕೆಲವೊಮ್ಮೆ ಪ್ರೋತ್ಸಾಹ ಕಡಿಮೆ ಎನಿಸುತ್ತದೆ. ಕಮರ್ಷಿಯಲ್ ಸಿನಿಮಾ ಮಾಡಲು ಇವರಿಂದ ಆಗುವುದಿಲ್ಲ ಎಂಬ ಅನುಮಾನ ಎಲ್ಲರಲ್ಲೂ ಇರುತ್ತದೆ.ದೊಡ್ಡ ಸ್ಟಾರ್‌ಗಳು ನಮಗೆ ಡೇಟ್ ಕೊಡಲ್ಲ. ಇಂಥ ತಾರತಮ್ಯಗಳು ಹೋದರೆ ಪುರುಷರಿಗಿಂತ ಹೆಚ್ಚು ಸಾಧಿಸಿ ತೋರುತ್ತೇವೆ. ಇನ್ನು ಇಲ್ಲಿ ನಮ್ಮ ನಡತೆಯ ಮೇಲೆ ಗೌರವ- ಅಗೌರವ ಎಂಬುದು ಅವಲಂಬಿತವಾಗಿರುತ್ತದೆ.ನಿರ್ದೇಶನ ಎಂಬುದು ಅಧಿಕ ಸಮಯ ಮತ್ತು ಶಕ್ತಿ ಬೇಡುವ ಕೆಲಸ. ಅದು ನೂರು ಮನಸ್ಸುಗಳಿಗೆ ನಮ್ಮ ಭಾವನೆಯನ್ನು ಅರ್ಥೈಸುವ ಕೆಲಸ. ಅದಕ್ಕೆ ತುಂಬಾ ಎನರ್ಜಿ ಬೇಕು.ನಾನು ಇನ್ನು ಸಂಸಾರದ ಬಂಧಕ್ಕೆ ಒಳಪಟ್ಟಿಲ್ಲದ ಕಾರಣ ಅದನ್ನು ತೂಗಿಸಿಕೊಂಡು ಹೋಗುತ್ತಿದ್ದೇನೆ. ಅದರಿಂದ ಹೆಚ್ಚು ಹೆಣ್ಣುಮಕ್ಕಳು ಇತ್ತ ಬರಲು ಮನಸ್ಸು ಮಾಡಿಲ್ಲ ಎನಿಸುತ್ತದೆ. ನನಗಂತೂ ನನ್ನ ಕಲಾವಿದರಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ.ಪರಭಾಷೆಗೆ ಹೋಲಿಸಿದರೆ ಕನ್ನಡದಲ್ಲಿ ನಿರ್ದೇಶಕಿಯರ ಸಂಖ್ಯೆ ಕೊಂಚ ಕಡಿಮೆಯೇ ಎನ್ನಬಹುದು. ಇದು ಅತಿ ಒತ್ತಡದ ಕೆಲಸವಾದರೂ ನಿಯಮಿತವಾಗಿ ಯೋಗ ಮಾಡುವುದರಿಂದ ನನ್ನ ಆರೋಗ್ಯ ಕೆಟ್ಟಿಲ್ಲ.

ಸುಮನಾ ಕಿತ್ತೂರುಬೇಕು ಎನರ್ಜಿ

ಸವಾಲು ತುಂಬಾನೆ ಇದೆ. ಪುರುಷರಿಗೂ ಅಂಥ ಸವಾಲುಗಳು ಇದೆ ಎನ್ನಬಹುದು. ಸಾಮಾನ್ಯವಾಗಿ ನಿರ್ದೇಶಕರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಆದರೆ ಮಹಿಳೆಯರಿಗೆ ಇವರು ಗಂಭೀರ ಸಿನಿಮಾಗಳನ್ನು ಮಾತ್ರ ಮಾಡಲು ಸರಿ ಎಂಬ ಹಣೆಪಟ್ಟಿ ಕಟ್ಟುತ್ತಾರೆ.ಅದು ತಪ್ಪು. ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಎನರ್ಜಿ ಬೇಡುವ ಕೆಲಸ ಇದು. ನನ್ನ ಜೊತೆ ಮೂರು ನಾಲ್ಕು ಜನ ಸಹಾಯಕರು ಕೆಲಸ ಮಾಡಲು ಬಂದು 2-3 ದಿನಕ್ಕೆ ಹೊರಟು ಹೋದರು.

 

ಆದರೆ ಸಿನಿಮಾ ನಿರ್ದೇಶನವನ್ನು ಪ್ಯಾಶನ್ ಎಂದುಕೊಂಡು ಬಂದಿರುವ ನನಗೆ ಇದನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಅದರಿಂದ ಎಲ್ಲವನ್ನೂ ತೂಗಿಸಿಕೊಂಡು ಹೋಗುತ್ತಿರುವೆ. ಸಿನಿಮಾ ಎಂದರೆ ನನಗೆ ದುಡ್ಡು ಒಂದೇ ಅಲ್ಲ.

 

ಇದನ್ನು ತುಂಬಾ ಪ್ರೀತಿಯಿಂದ ನಿಭಾಯಿಸುತ್ತಿರುವೆ. ಸಿನಿಮಾರಂಗ ಪುರುಷ ಪ್ರಧಾನ ಉದ್ಯಮ. ಇಲ್ಲಿ ಗ್ಲಾಮರ್‌ಗೆ ಮಾತ್ರ ಹೆಣ್ಣುಮಕ್ಕಳಿದ್ದಾರೆ. ಪ್ಯಾಶನ್ ಇರುವ ನಿರ್ದೇಶಕಿಯರಿಗೆ ಮಾತ್ರ ಒತ್ತಡಗಳನ್ನು ತೂಗಿಸಿಕೊಂಡು ಹೋಗಲು ಸಾಧ್ಯ.

 

ಎಲ್ಲರಿಂದಲೂ ಅದು ಸಾಧ್ಯವಿಲ್ಲ. `ಕ್ರೇಜಿ ಲೋಕ~ ಚಿತ್ರೀಕರಣದ ಸಂದರ್ಭದಲ್ಲಿ ಅನುಮಾನಗಳು ಕಾಡಿದರೆ ರವಿಚಂದ್ರನ್ ಕೇಳಿ ಪರಿಹರಿಸಿಕೊಳ್ಳುತ್ತಿದ್ದರು. ಅವರೆಂದೂ ಸ್ಟಾರ್ ತರ ವರ್ತಿಸಲಿಲ್ಲ. ನಾನು ಕೂಡ ಅವರನ್ನು ಕಲಾವಿದರಂತೆಯೇ ನೋಡಿಕೊಂಡೆ. ಒಟ್ಟಾರೆ ನಮ್ಮ ಕೆಲಸದ ಮೇಲೆ ಎಲ್ಲಾ ಅವಲಂಬಿತವಾಗಿರುತ್ತದೆ. ಕೆಲಸ ಚೆನ್ನಾಗಿದ್ದರೆ ಯಾರೂ ಏನೂ ಮಾತನಾಡೊಲ್ಲ. ಇದರಲ್ಲಿ ಒತ್ತಡ ತುಂಬಾ ಇರುತ್ತೆ. ನಾನು ಗರ್ಭಿಣಿಯಾಗಿದ್ದಾಗಲೂ ಆಗುಂಬೆಯಲ್ಲಿ ಚಿತ್ರೀಕರಣ ಮಾಡಿದ್ದೆ ಗೊತ್ತಾ? 

ಕವಿತಾ ಲಂಕೇಶ್ನನಗೆ ಆದ ಅನುಭವವೆಲ್ಲಾ ಒಳ್ಳೆಯದೇ

ಆರಂಭದಲ್ಲಿ ನಟಿಯಾಗಿದ್ದ ಕಾರಣ ಕಲಾವಿದರು ಪರಿಚಯವಾಗಿದ್ದರು. ಅದಕ್ಕೇ ಯಾರಿಂದಲೂ ನನಗೆ ತೊಂದರೆಯಾಗಲಿಲ್ಲ. ನಿರ್ದೇಶಕಿಯಾಗಿ ನನಗೆ ಆಗಿರುವುದೆಲ್ಲಾ ಸಕಾರಾತ್ಮಕ ಅನುಭವವೇ.ನಮ್ಮ ಕೆಲಸದ ಬಗ್ಗೆ ಆತ್ಮವಿಶ್ವಾಸ ಇದ್ದರೆ ಯಾರೂ ತೊಂದರೆ ಕೊಡೋಕಾಗಲ್ಲ. ಅರ್ಧಂಬರ್ಧ ಕೆಲಸ ಮಾಡುವವರಿಗೆ ತೊಂದರೆ ಆಗಿಯೇ ಆಗುತ್ತದೆ.ಮಹಿಳೆಯರು ಹೆಚ್ಚು ನಿರ್ದೇಶನದತ್ತ ಬರದೇ ಇರಲು ಅದಕ್ಕೆ ಹೆಚ್ಚು ಸಮಯದ ಅಗತ್ಯ ಇರುವುದು ಕಾರಣ ಅನಿಸುತ್ತದೆ. ಒಬ್ಬ ನಟಿ ದಿನದಲ್ಲಿ ಕೆಲವು ಗಂಟೆ ಕೆಲಸ ಮಾಡಿ ಮನೆಗೆ ತೆರಳಿ ಕುಟುಂಬದ ಸೌಖ್ಯ ನೋಡಿಕೊಳ್ಳಬಹುದು. ಆದರೆ ನಿರ್ದೇಶಕಿಗೆ ಆಗಲ್ಲ.ಅವಳು ಚಿತ್ರೀಕರಣ ಮುಗಿದ ನಂತರವೂ ಕಲಾವಿದರ ಡೇಟ್ಸ್, ದೃಶ್ಯದ ಬೆಳವಣಿಗೆ ಬಗ್ಗೆ ಚಿಂತಿಸಬೇಕು. ನಿರ್ದೇಶಕಿಯಾಗಲು ಆಸಕ್ತಿಯೂ ಮುಖ್ಯ.ಏಕತಾನತೆಯಿಂದ ಬೇಸರ ಬಂದು ನನಗೆ ನಿರ್ದೇಶನದತ್ತ ಆಸಕ್ತಿ ಬಂತು. `ನಮ್ಮಮ್ಮ ಶಾರದೆ~ ಸೆಟ್‌ನಲ್ಲಿ ಕೆಲವೊಂದು ಭಾವನಾತ್ಮಕ ಸನ್ನಿವೇಶಗಳ ಚಿತ್ರೀಕರಣದಲ್ಲಿ ಕೆಲಸ ಮಾಡಿದೆ.

 

ಅದಾದ ನಂತರ `ಚಿ.ಸೌ.ಸಾವಿತ್ರಿ~ ನಿರ್ದೇಶಿಸುವ ಅವಕಾಶ ಸಿಕ್ಕಿತು. ಅದು ಸೂಪರ್ ಹಿಟ್ ಆಯ್ತು. ಇದೀಗ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ನನ್ನ ಗೆಳೆಯ ರಮೇಶ್ ಇಂದಿರಾ ಕೂಡ ಇದೇ ಕ್ಷೇತ್ರದಲ್ಲಿ ಇರುವುದರಿಂದ ನಿರ್ದೇಶನದ ಒತ್ತಡಗಳನ್ನು ನಿಭಾಯಿಸಲು ಸಾಧ್ಯವಾಗಿದೆ.

 ಶ್ರುತಿ ನಾಯ್ಡು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.