ಮಂಗಳವಾರ, ಮೇ 11, 2021
26 °C
ಋಷಿಕೇಶದಲ್ಲಿ ರಾಜ್ಯದ ವೈದ್ಯರ ತಂಡದ ಅವಿರತ ಸೇವೆ

ನಿಲ್ಲದ ಹುಡುಕಾಟ, ನೆರವಿಗೆ ಮೊರೆ...

ಡಿ.ಬಿ.ನಾಗರಾಜ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು:  ಊಹಿಸಲಾಗದಷ್ಟು ನಷ್ಟ. ದುರಸ್ತಿಪಡಿಸಲಾಗದಷ್ಟು ಹಾನಿ. ನೆರೆಯಲ್ಲಿ ಕೊಚ್ಚಿ ಹೋದ ಜನರ ದಂಡು. ನಾಪತ್ತೆಯಾದವರಿಗಾಗಿ ಹುಡುಕಾಟ. ಎತ್ತ ನೋಡಿದರೂ ಆಕ್ರಂದನ. ನೆರವಿಗಾಗಿ ಮೊರೆ... ಇದು ಕೇದಾರನಾಥ ದೇವರ ದರ್ಶನ ಪಡೆದು ಜಲ ಪ್ರಳಯದಿಂದ ಪಾರಾದ ರಾಜ್ಯದ ಇಪ್ಪತ್ತಕ್ಕೂ ಹೆಚ್ಚು ಪ್ರವಾಸಿಗರು ಪ್ರತ್ಯಕ್ಷವಾಗಿ ಕಂಡ ದೃಶ್ಯಾವಳಿಗಳು.ಮೈಸೂರು ಸುತ್ತಲಿನ ಪ್ರವಾಸಿಗರು ನಿರ್ಮಲ ಟ್ರಾವೆಲ್ಸ್ ಮೂಲಕ ಉತ್ತರ ಭಾರತ ಪ್ರವಾಸ ತೆರಳಿದ್ದರು. ಜೂನ್ 17ರ ಸೋಮವಾರ ರಾತ್ರಿ ಕೇದಾರನಾಥಕ್ಕೆ ಭೇಟಿ ನೀಡಿದ್ದರು. ರಾತ್ರಿ 7.30ರಿಂದ 8 ಗಂಟೆ ಸಮಯ ಕೇದಾರನಾಥನ ದರ್ಶನ ಪಡೆದು ಸಮೀಪದ ವಸತಿ ಗೃಹದಲ್ಲೇ ಉಳಿದಿದ್ದರು.`ಕೊಂಚ ಹೊತ್ತಿಗೆ ಭಾರಿ ಸದ್ದು ಮೊಳಗಿತು. ಗಾಬರಿಯಿಂದ ಎಲ್ಲರೂ ಹೊರಗೆ ಓಡಿದರು. ತಕ್ಷಣವೇ ಎತ್ತರದ ಪ್ರದೇಶಕ್ಕೆ ಹೋಗಿ ಎಂಬ ಕೂಗು ಮಾರ್ದನಿಸಿತು. ಹಿಂದೆ ಮುಂದೆ ನೋಡದೆ ಎತ್ತರದ ಪ್ರದೇಶಕ್ಕೆ ಓಡಿದೆವು. ನಮ್ಮ ತಂಡ ಚೆಲ್ಲಾಪಿಲ್ಲಿಯಾಯಿತು. ಬೆಟ್ಟದ ಮೇಲಿದ್ದ ಒಂದು ಮೆಸ್‌ನಲ್ಲಿ ಇಪ್ಪತ್ತು ಮಂದಿಯೂ ಆಸರೆ ಪಡೆದವು. ಒಂದು ವಾರ ಅಲ್ಲೇ ಉಳಿದು ಕಣ್ಣೆದುರೇ ನಡೆದ ಘೋರ ದುರಂತಕ್ಕೆ ಸಾಕ್ಷಿಯಾದೆವು' ಎಂದು ಬದುಕಿ ಬಂದವರು ಸ್ಮರಿಸುತ್ತಾರೆ.`ಒಂದು ವಾರ ಅನುಭವಿಸಿದ ಯಾತನೆ ಹೇಳಲಸಾಧ್ಯ. ಜತೆಯಲ್ಲಿದ್ದವರು ನಾಪತ್ತೆಯಾಗಿದ್ದರು. ಏನಾದರೂ ಎಂಬುದೇ ಗೊತ್ತಾಗುತ್ತಿರಲಿಲ್ಲ. ಭಾನುವಾರ ಸಂಜೆ ಸೇನೆ ರಕ್ಷಿಸಿ ಸುರಕ್ಷಿತ ನೆಲೆಗೆ ತಲುಪಿಸಿದ ನಂತರ 10 ಕಿ.ಮೀ. ದೂರ ನಡೆದು ಬಂದು, ವಾಹನಗಳ ಮೂಲಕ ಋಷಿಕೇಶ ತಲುಪಿದ್ದೇವೆ.ಇಲ್ಲಿ ಚಿಕಿತ್ಸೆ ಪಡೆದು ದೆಹಲಿಗೆ ತೆರಳಿ ಜತೆ ಪ್ರವಾಸಿಗರನ್ನು ಸೇರಿಕೊಳ್ಳುತ್ತೇವೆ ಎಂದು ಮೈಸೂರಿನ ರಾಘವೇಂದ್ರ ಮಾಹಿತಿ ನೀಡಿದರು' ಎಂದು ಋಷಿಕೇಶದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಲು ತೆರಳಿರುವ ತಂಡದಲ್ಲಿರುವ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ ವೈದ್ಯ ಡಾ.ಎಸ್.ಪಿ.ಚನ್ನಕೇಶವ `ಪ್ರಜಾವಾಣಿ'ಗೆ ಸೋಮವಾರ ವಿವರಿಸಿದರು.`ಶನಿವಾರ ರಾತ್ರಿ ರಾಜ್ಯದ ವೈದ್ಯರ ಮೂರು ತಂಡ ಋಷಿಕೇಶ ತಲುಪಿ, ಬಿಡುವಿಲ್ಲದೆ ಸೇವೆ ಕೈಗೊಂಡಿದೆ. ಸತ್ತವರ ಸಂಬಂಧಿಕರ ಅಳಲು, ಬದುಕುಳಿದವರ ರೋದನ, ಅನಾರೋಗ್ಯಕ್ಕೀಡಾದವರ ಸಂಕಷ್ಟ, ನಾಪತ್ತೆಯಾದವರ ಪರದಾಟ ಹೇಳತೀರದು. ಬೀದಿ ಬೀದಿಗಳಲ್ಲೂ ನಾಪತ್ತೆಯಾದವರ ಭಾವಚಿತ್ರ, ಮೊಬೈಲ್ ನಂಬರ್ ಪ್ರಕಟಿಸಿ ಹುಡುಕಾಡುತ್ತಿದ್ದಾರೆ. ನಮ್ಮ ಜತೆ ಬೇರೆ ರಾಜ್ಯಗಳ ವೈದ್ಯರ ತಂಡ ಹಾಗೂ ಸಂಘ-ಸಂಸ್ಥೆಗಳ ಸ್ವಯಂಸೇವಕರು ಸೇವೆ ಸಲ್ಲಿಸುತ್ತಿದ್ದಾರೆ' ಎಂದರು.`ಋಷಿಕೇಶದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಸೇನೆ ಯೋಧರು ಇತರೆಡೆ ಸಂಕಷ್ಟಕ್ಕೀಡಾವರನ್ನು ರಕ್ಷಿಸಿ ಇಲ್ಲಿಗೆ ತಂದು ಬಿಡುತ್ತಿದ್ದಾರೆ. ಇಲ್ಲಿಂದ ದೆಹಲಿ, ಪಟ್ನಾ, ಲಖನೌ, ಚಂಡೀಗಡ ಮುಂತಾದೆಡೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ ನಿಲ್ದಾಣದಲ್ಲೇ ಉಚಿತ ವೈದ್ಯಕೀಯ ಸೇವೆ, ಊಟ, ನೀರು, ವಿಶ್ರಮಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇಲ್ಲಿನ ವ್ಯವಸ್ಥೆ ಉತ್ತಮವಾಗಿದೆ. ಇದಕ್ಕೆ ಸ್ಥಳೀಯರು ಸಹಕರಿಸುತ್ತಿದ್ದಾರೆ' ಎಂದು ಡಾ.ಚನ್ನಕೇಶವ ತಿಳಿಸಿದರು.`ಋಷಿಕೇಶದ ನಿರ್ಮಲ ಆಶ್ರಮದ ಸಿಬ್ಬಂದಿ ಅಹೋರಾತ್ರಿ ಸೇವೆ ಸಲ್ಲಿಸುತ್ತಿದ್ದಾರೆ. ನೊಂದವರಿಗೆ ಸಾಂತ್ವನ ಹೇಳುವ ಜತೆ ನಾಪತ್ತೆಯಾದವರ ಹುಡುಕಾಟ, ಲಭ್ಯವಿರುವ ಸೇವೆಗೆ ಪ್ರತ್ಯೇಕ ವೆಬ್‌ಸೈಟ್ ಆರಂಭಿಸಿದ್ದಾರೆ. ವೆಬ್‌ನಲ್ಲಿ ತಮ್ಮವರ ಪರಿಚಯ ಹಾಕಿಸಲು ಜನ ಮುಗಿ ಬೀಳುತ್ತಿದ್ದಾರೆ. ಋಷಿಕೇಶ, ಹರಿದ್ವಾರದಲ್ಲಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಇಲ್ಲಿನ ಜನ ಸುರಕ್ಷಿತರಾಗಿದ್ದಾರೆ.ಭಾನುವಾರ ಎರಡು- ಮೂರು ಬಾರಿ ಮಳೆ ಬಿದ್ದಿದ್ದು ಜನರ ಆತಂಕ ಹೆಚ್ಚಿಸಿದೆ. ಆದರೆ ಈಗಲೂ ಗೌರಿಕುಂಡ್, ಉತ್ತರಕಾಶಿ, ಬದರಿ, ಕೇದಾರ, ಹೇಮಗಿರಿ ಇತರೆಡೆಯಿಂದ ಜಲಪ್ರಳಯಕ್ಕೆ ಸಿಲುಕಿದ್ದ ಜನ ಮರುಜನ್ಮ ಪಡೆದು ಪ್ರವಾಹೋಪಾದಿಯಲ್ಲಿ ಋಷಿಕೇಶಕ್ಕೆ ಮರಳುತ್ತಿದ್ದಾರೆ. ಇಲ್ಲಿ ಸಕಲ ಸೇವೆ ಕಲ್ಪಿಸಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಿಕೊಡಗುತ್ತಿದೆ' ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.