ಮಂಗಳವಾರ, ಆಗಸ್ಟ್ 11, 2020
27 °C

ನಿವೇದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿವೇದನೆ

ಬೇರೆಯವರು ಓದುವಂತೆ, ಓದಬೇಕೆಂದು ಬರೆಯಲು ತೊಡಗಿ ಸುಮಾರು ನಲವತ್ತು ವರ್ಷಗಳೇ ಆದವು; ಆದ್ದರಿಂದ ಇದು ನನ್ನ ಬರವಣಿಗೆಗಳ ಮುನ್ನುಡಿಯಲ್ಲ. ಇನ್ನೂ ಏನೇನೋ ಬರೆದೇನು; ಆದ್ದರಿಂದ ಇದು ನನ್ನ ಬರವಣಿಗೆಗಳ ಬೆನ್ನುಡಿಯಲ್ಲ. ಮಧ್ಯಂತರವೋ? ಗೊತ್ತಿಲ್ಲ.

  ಮನೆಗೆ ಬಂದವರಿಗೆ ಹಳೆಯ ಫೋಟೋ ಆಲ್ಬಂ ತೋರಿಸುತ್ತ ಅವರಿಗೆ ಬೇಕೋ ಬೇಡವೋ ಚಿತ್ರಗಳ ನೆನಪನ್ನು ಕಥೆ ಮಾಡಿ ಹೇಳುತ್ತೇವಲ್ಲ. ಹಾಗೆ ಈ ಬರಹ. ವ್ಯತ್ಯಾಸವಿಷ್ಟೇ- ನನ್ನ ಆಲ್ಬಮ್ ನಿಮ್ಮಲ್ಲಿಗೆ ನಾನೇ ಹೊತ್ತು ತರುವಂತಾಗಿದೆ.

ನನ್ನ ಬರವಣಿಗೆ, ಅದಕ್ಕೆ ಕಾರಣವಾದ ಓದು, ಅದಕ್ಕೆ ಕಾರಣವಾದ ನನ್ನ ಮನಸ್ಸು, ಅದಕ್ಕೆ ಕಾರಣವಾದ ನನ್ನ ಮನೆ, ಅದಕ್ಕೆ ಕಾರಣವಾದ ನಾನು ಆಯ್ಕೆ ಇಲ್ಲದೆ ಪಡೆದುಕೊಂಡು ಬೆಳೆದ ಭಾಷೆ, ಜಾತಿ, ಊರುಗಳ ಪರಿಸರ ಇವೆಲ್ಲವನ್ನೂ ನಿವೇದಿಸಿಕೊಳ್ಳುವುದು ಕಷ್ಟ.

ಫೋಟೋ ಯಾರು ಬೇಕಾದರೂ ನೋಡಬಹುದು; ಅದು ಒಳಗೊಂಡಿರುವ ನೆನಪು, ನೆನಪುಗಳೊಳಗೆ ಹರಿಯುವ ಭಾವದ ಹೊಳೆ ತಮ್ಮ ಫೋಟೋ ತಾವೇ ನೋಡುತ್ತಿರುವವರನ್ನು ಮಾತ್ರ ಸೋಕಬಲ್ಲದು. ಬರಹದ ಮುಖ ಓದು, ಓದಿನ ಮುಖ ಬರಹ. ನನ್ನ ಹೆಸರಿನ ಜೊತೆಗೆ ಇರುವ `ಓ' ನಮ್ಮ ಮನೆತನದ ಹೆಸರಂತೆ, ಓದಿನ ಮನೆಯವರು. ಈಗ ಅನ್ನಿಸುತ್ತಿದೆ- ಹಳ್ಳಿಯಿಂದ ನಗರಕ್ಕೆ ಬರುವುದು, ಅಧಿಕಾರ ಪಡೆಯುವುದು, ಬಂಧುಗಳಿಗೆ ನೆರವಾಗುವುದು, ಮನೆ ಕಟ್ಟಿಸುವುದು ಇತ್ಯಾದಿ ಲೌಕಿಕ ಕಾರ್ಯಗಳೆಲ್ಲ ಸಿದ್ಧಿಸುವುದಕ್ಕೆ ಓದು ಮತ್ತು ಬರಹ ಅನಿವಾರ್ಯವಾಗಿತ್ತು ನಮ್ಮಪ್ಪನಿಗೆ.

ತಡವಾಗಿ ಹುಟ್ಟಿದ ಮಗುವಾಗಿ, ದೃಢವಲ್ಲದ ಮೈಕಟ್ಟಿನ, ಒಡಹುಟ್ಟಿದವರಿಲ್ಲದ, ಅಪ್ಪನ ಅಧಿಕಾರದ ಕಾರಣದಿಂದ ನೆರೆಹೊರೆಯವರು ಹೆಚ್ಚಾಗಿ ಬೆರೆಯದ, ಅದೇ ಕಾರಣಕ್ಕೆ ಶಾಲೆಯಲ್ಲೂ ಅನಗತ್ಯ ಗೌರವ ಪಡೆದು ಒಂಟಿಯಾಗಿರುತ್ತಿದ್ದ, ನೆಂಟರಿಷ್ಟರಿಗೆ ಇಂಥವರ ಮಗನೆಂದು ಮಾತ್ರ ಮುಖ್ಯವಾಗಿದ್ದ ನನಗೆ ಎಳವೆಯಲ್ಲಿ ಓದುವುದು ಎಂದರೆ ಪಾರಾಗುವ ದಾರಿಯಾಗಿತ್ತು. ಆದ್ದರಿಂದಲೇ ಯಾವ ಪರೀಕ್ಷೆಯಲ್ಲೂ ಫಸ್ಟು ಬಂದವನಲ್ಲ.

ಒಂದು ಸಾರಿ ಸಿಟ್ಟು ಬಂದು ರೂಮಿನ ಬಾಗಿಲು ಹಾಕಿಕೊಂಡು ಅಲ್ಲಿದ್ದ ಪುಸ್ತಕಗಳನ್ನೆಲ್ಲ ಚಪ್ಪಲಿಯಲ್ಲಿ ಹೊಡೆದಿದ್ದೆ. ಹತ್ತು ಹನ್ನೊಂದರ ವಯಸಿಗೆ ಕನ್ನಡದ ಓದಿನ ಮೂಲಕವೇ ಇಂಡಿಯಾದ, ಜಗತ್ತಿನ ಮುಖ್ಯ ಕತೆಗಾರರ ಜೊತೆಯಲ್ಲಿ ಕಾಲಕಳೆದಿದ್ದೆ. ಓದುತ್ತ ನನ್ನೊಳಗೆ ಒಂದು ಲೋಕ ಹುಟ್ಟುತ್ತಿತ್ತು; ಅಲ್ಲಿನ ಯಾರೂ ನನ್ನ ತಪ್ಪು ತಿಳಿಯುತ್ತಿರಲಿಲ್ಲ, ಸರಿಯಾಗಿಯೂ ತಿಳಿಯುತ್ತಿರಲಿಲ್ಲ, ನನ್ನ ಪಾಡಿಗೆ ನಾನಿರಬಹುದಾದ, ಯಾರ ನೆರವನ್ನೂ ಬೇಡದೆ ಕ್ಷಣಮಾತ್ರದಲ್ಲಿ ಹುಟ್ಟಿಸಿಕೊಳ್ಳಬಹುದಾದ ಲೋಕ.ಈ ಹೊತ್ತಿನ ಎಳೆಯರು ಮೊಬೈಲು, ಟಿವಿ, ಅಂತರ್ಜಾಲ, ಕಂಪ್ಯೂಟರು ಇತ್ಯಾದಿಗಳ ಮೂಲಕ ಮಿಥ್ಯಾವಾಸ್ತವದಲ್ಲಿ ಕಳೆದುಹೋಗುತ್ತಿದ್ದಾರೆ ಅನ್ನುವ ಮಾತು ಕೇಳಿದಾಗೆಲ್ಲ, ನಾನು ಎಳೆಯನಾಗಿದ್ದಾಗ ಮಾಡಿದ್ದೇನು ಅನ್ನುವ ಪ್ರಶ್ನೆ ಹುಟ್ಟುತ್ತದೆ. ನನ್ನ ಹಾಗೆ ಐವತ್ತರ ದಶಕದಲ್ಲಿ ಓದಿಗೆ ತೆತ್ತುಕೊಂಡ ಮಕ್ಕಳು ಓದಿನಿಂದ ಸೃಷ್ಟಿಯಾಗುವ ಮಿಥ್ಯಾವಾಸ್ತವದಲ್ಲಿ ಬದುಕಿರಲಿಲ್ಲವೇ! ಹೊರ ಲೋಕ ಒಳಲೋಕಗಳು ಒಂದಕ್ಕೊಂದು ಯಾವ ಯುಗಮಾನದಲ್ಲಿ ತಾಳೆಯಾಗಿದ್ದವು?ಮಾತು, ಓದು, ಬರಹ ಎಲ್ಲವೂ ಒಳ-ಹೊರಗುಗಳ ನಡುವೆ ಓಡಾಡುವುದಕ್ಕೆ ಕಲ್ಪಿಸಿಕೊಂಡ ಕಾಲು ಹಾದಿಗಳು. `ಒಂದೊಂದು ಮುಖದ ಹಿಂದೆಯೂ ಒಂದೊಂದು ಅಪ್ರತಿಮ ಲೋಕ'. ಬೆಂಗಳೂರಲ್ಲಿರುವ ಕೋಟಿ ಜನ ಒಬ್ಬೊಬ್ಬರೂ ತಮ್ಮಳಗೆ ಒಂದೊಂದು ಬೆಂಗಳೂರು ಸೃಷ್ಟಿಸಿಕೊಂಡು ಓಡಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಿಜವಾಗಿ ಯಾರೂ ಇಲ್ಲವೇ ಇಲ್ಲ ಅನ್ನಿಸುತ್ತದೆ.ಹೈಸ್ಕೂಲಿನಲ್ಲಿ ರಾಮಪ್ಪ ಮೇಷ್ಟರು `ರನ್ನನ ಗದಾಯುದ್ಧ ` ಪಾಠಮಾಡಿದ್ದರು. ಮಹಾರಾಜಾ ಕಾಲೇಜಿನಲ್ಲಿ ಸುಜನಾ ಕಲಿಸಿದ ಕುಮಾರವ್ಯಾಸ, ಗುರುರಾಜಾರಾವ್ ಮಾಡಿದ ಶೇಕ್ಸ್‌ಪಿಯರನ ಪಾಠ, ಗೋವಿಂದರಾವ್ ಇಂಗ್ಲಿಷ್ ಕಾದಂಬರಿಗಳ ಪಾಠ, ಎಂಎಗೆ ಬಂದಾಗ ದಾಮೋದರರಾವ್ ಕಲಿಸಿದ ವಿಮರ್ಶೆಯ ಶಿಸ್ತು, ಅನಂತಮೂರ್ತಿಯವರು ತೋರಿಸಿಕೊಟ್ಟ ವರ್ಡ್ಸ್‌ವರ್ತ್, ಪೋಲಂಕಿಯವರು ಕಾಣಿಸಿದ ಲಾರೆನ್ಸ್, ಎಷ್ಟೊಂದು ಚಿತ್ರಗಳಿವೆ. ಬಿಎ ಓದುವಾಗ ಸಹಸ್ಪಂದಿ ರಾಮು ಗೆಳೆಯನಾಗದಿದ್ದರೆ ನನ್ನ ಓದಿಗೆ ಮತ್ತೆ ನನಗೆ ಆಳ, ವಿಸ್ತಾರ, ದಿಕ್ಕು ಏನೂ ಇರುತ್ತಿರಲಿಲ್ಲ.  ನಾವು ಒಟ್ಟಿಗೆ ಓದುತ್ತ ಓದಿದ್ದನ್ನು ಅನುಭವಿಸುತ್ತ ಬೆಳೆದುಕೊಂಡೆವು.ಅದು ಕನ್ನಡ ನವ್ಯ ಸಾಹಿತ್ಯ ಕೊನೆಯ, ದಲಿತ ಚಳವಳಿ ಮೊಳಕೆಯೊಡೆಯುತ್ತಿದ್ದ, ಎಡಪಂಥೀಯ ಸಮುದಾಯ ಪ್ರವರ್ಧಮಾನಕ್ಕೆ ಬರುತ್ತಿದ್ದ ವರ್ಷಗಳು. ಸಾಹಿತ್ಯ, ಭಾಷೆಗಳು ಜ್ಞಾನದ ಮುಖ್ಯ ಅಂಗಗಳು ಅನ್ನುವ ತಿಳಿವಳಿಕೆ ಕಡಮೆಯಾಗುತ್ತಿದ್ದರೂ ಇನ್ನೂ ಉಳಿದಿತ್ತು.

ನವ್ಯದ ಮುಖಾಂತರ ಒಂಟಿತನಕ್ಕೊಂದು ಭಾಷ್ಯ, ಯಾವ ಸೂಕ್ಷ್ಮವನ್ನು ಹೇಳುವುದಿದ್ದರೂ ಭಾಷೆಯ ಮೂಲಕವೇ, ಹೇಳುವ ಕ್ರಮದಲ್ಲೇ ಸಾಧ್ಯವಾಗಿಸಬೇಕು ಅನ್ನುವ ಏಕಾಂತದ ಅರಿವು; ಸಮುದಾಯ, ಎಡಪಂಥೀಯ ಚಿಂತನೆ, ದಲಿತ ಚಳವಳಿ ಇವುಗಳಿಂದ ಸಾಮಾಜಿಕತೆ, ಸಂಸ್ಕೃತಿ, ರಾಜಕೀಯ ನಿಲುವು ಮೊದಲಾದ ಲೋಕಾಂತದ ತಿಳಿವಳಿಕೆಗಳು ಬೆಳೆದ ಅವಧಿ ಅದು.ಎಂಎ ಓದುವಾಗ ಸಾಹಿತ್ಯದ ಬಗ್ಗೆ ಬರೆಯುವ ಕ್ರಮ, ಅದಕ್ಕೆ ಬೇಕಾದ ಭಾಷೆ ಇವುಗಳ ತಿಳಿವಳಿಕೆ ನನಗೆ ಇನ್ನೂ ಸ್ಪಷ್ಟವಾಗಿ ಆಗಬೇಕು ಅನ್ನಿಸಿ ವಿಮರ್ಶೆಯಲ್ಲಿ, ಕಾವ್ಯಮೀಮಾಂಸೆಯಲ್ಲಿ ಬಳಸುವ ಪದಗಳನ್ನು ಅರ್ಥ ಸಮೇತ ಗುರುತು ಮಾಡಿಕೊಳ್ಳಲು ಶುರುಮಾಡಿದೆ. ಇಪ್ಪತ್ತನೆಯ ವಯಸಿನಲ್ಲಿ ಆರಂಭವಾದ ಈ ಕೆಲಸ ಹತ್ತು ವರ್ಷಗಳ ಕಾಲ ಮುಂದುವರೆಯುತ್ತದೆಂದು ಆಗ ಗೊತ್ತಿರಲಿಲ್ಲ.

  ಪದಗಳ ಬೆನ್ನು ಹತ್ತಿ, ಉದಾಹರಣೆಗಳನ್ನು ಅರಸಿ, ಒಬ್ಬ ಲೇಖಕ ಸೂಚಿಸಿದ ಮತ್ತೊಬ್ಬ ಲೇಖಕನನ್ನು ಓದುತ್ತ ಬರೆದುಕೊಂಡದ್ದು ಸಮಾಧಾನವಾಗದೆ ಮತ್ತೆ ಮತ್ತೆ  ಮತ್ತೂ ಮತ್ತೆ ತಿದ್ದುತ್ತ `ವಿಮರ್ಶೆಯ ಪರಿಭಾಷೆ' ದಿನದಿವೂ ಆ ವರ್ಷಗಳಲ್ಲಿ ಹುಟ್ಟುತ್ತಿತ್ತು.ವಿಮರ್ಶೆಯ ಕೆಲಸ ನನ್ನೊಳಗಿನ ಲೋಕವನ್ನು ಬುದ್ಧಿಯ ಮೂಲಕ ಸ್ಪಷ್ಟ ಮಾಡಿಕೊಳ್ಳುವ ಕೆಲಸವಾಗಿದ್ದರೆ ಸಮುದಾಯದ ಮೂಲಕ ಆರಂಭಗೊಂಡಿದ್ದ ರಂಗಭೂಮಿಯ ಆಕರ್ಷಣೆ ಲೋಕದ ಒಡನಾಟ, ನಾಕು ಜನರೆದುರು ಮಾತಾಡುವ ರೀತಿ, ಹತ್ತು ಜನ ಒಟ್ಟಿಗೆ ಸೇರಿ ನಂಬಿಕೆ, ವಿಶ್ವಾಸಗಳಿಂದ ಸಾವಿರ ಜನರ ಎದುರಿಗೆ ಅರ್ಥಲೋಕವನ್ನು ಸೃಷ್ಟಿಸುವ ಬೆರಗು ಮನಸ್ಸನ್ನು ಸೆಳೆದವು. ಅಲ್ಲೂ ನನಗೆ ಆಸಕ್ತಿ ಇದ್ದದ್ದು ರಂಗದ ಮೇಲೆ ಅರ್ಥವನ್ನು ನಿರ್ಮಿಸುವ ಕ್ರಮದಲ್ಲಿ.

ಮಾತನ್ನು ಆಡುವ ಸರಿಯಾದ ಕ್ರಮವನ್ನು ತಿಳಿಯುವ, ತಿಳಿಸುವ ಬಗೆಯಲ್ಲಿ, ವಿಮರ್ಶೆಯ ಪರಿಭಾಷೆ ಬೆಳೆಯುತ್ತಿದ್ದಾಗಲೇ ಪ್ರಸನ್ನ, ಸಿಜಿಕೆ, ಸಮುದಾಯ, ಕೆ.ವಿ. ಸುಬ್ಬಣ್ಣ, ಜಂಬೆ, ನೀನಾಸಂ, ಶಿವಮೊಗ್ಗದ ಅಭಿನಯ ತಂಡದ ಗೆಳೆಯರು, ಜಯತೀರ್ಥ ಜೋಶಿಯವರ ಒಡನಾಟಗಳಿಂದ ನಾಟಕ ಅನುವಾದ, ಸಣ್ಣಪುಟ್ಟ ಅಭಿನಯ, ಮುಖ್ಯವಾಗಿ ನಿರ್ದೇಶನ, ಇಂಥವುಗಳ ಮೂಲಕ ಕಾವ್ಯಮೀಮಾಂಸೆಯ ಪ್ರಾಯೋಗಿಕ ಅನುಭವಗಳು ದೊರೆತವು.

ರಂಗಭೂಮಿ ಪೂರ್ಣ ಪ್ರಮಾಣದ ಗಮನವನ್ನು ಏಕಾಗ್ರತೆಯನ್ನು ಬಯಸುತ್ತದೆಂದು ಗೊತ್ತಾದಾಗ, ರಂಗಭೂಮಿಯಲ್ಲಿ ಅಹಂಕಾರಗಳ ತೊಡಕು ನಿಭಾಯಿಸಲಾಗದು ಅನಿಸಿದಾಗ ನಿಧಾನವಾಗಿ ದೂರಸರಿದುಕೊಂಡದ್ದೂ ಆಯಿತು. ಆಯಾ ಕ್ಷಣವೇ ಹುಟ್ಟಿ, ಹುಟ್ಟುತ್ತಲೇ ಸಾಯುತ್ತಲೂ ಇರುವ ರಂಗಭೂಮಿಗಿಂತ ಅಕ್ಷರಗೊಂಡು ಹೆಚ್ಚು ಶಾಶ್ವತವಾದದ್ದರ ಬಯಕೆ ನನ್ನನ್ನು ಸೆಳೆಯಿತೇನೋ.

ನೀನಾಸಂ ನಾಡಿನಾದ್ಯಂತ ನಡೆಸುತ್ತಿದ್ದ ಹಲವು ಶಿಬಿರಗಳಲ್ಲಿ ನನ್ನ ಒಡನಾಡಿಗಳಾಗಿದ್ದ ಟಿ.ಪಿ.ಅಶೋಕ, ವಿಜಯಶಂಕರ, ಗಿರಡ್ಡಿ ಇವರೆಲ್ಲ ನನಗೆ ಗೊತ್ತಿರುವುದನ್ನು ನೂರಾರು ಎಳೆಯ ಮನಸ್ಸುಗಳೊಡನೆ ಹಂಚಿಕೊಳ್ಳುವುದನ್ನು ಕಲಿಸಿದರು. ಜೊತೆಗೆ ಅನಂತಮೂರ್ತಿಯವರು ನನ್ನ ವಿಮರ್ಶೆಯ ಪರಿಭಾಷೆಯ ಕೆಲವು ಬರಹಗಳನ್ನು ನೋಡಿ `ಘನವಾದ ಕೆಲಸ' ಎಂದು ಕಾಗದ ಬರೆದದ್ದು ಹುಮ್ಮಸ್ಸು ತಂದಿತ್ತು.

ನನಗೆ ಇಂಗ್ಲಿಷು ಬರುವುದಿಲ್ಲ ಎಂದು ಸಿಟ್ಟುಮಾಡಿಕೊಂಡಿದ್ದ ಮೇಷ್ಟರೇ ಹೀಗೆ ಗುರುತಿಸಿ ಮೆಚ್ಚಿದ್ದು ಅವರ ದೊಡ್ಡ ಗುಣ. ಶಿವಮೊಗ್ಗದ ಗೆಳೆಯರೆಲ್ಲ ದುಡ್ಡು ಹಾಕಿ ಪುಸ್ತಕ ಪ್ರಕಟಿಸಿದರು. ಆಗ ಮೊದಲ ಬಾರಿಗೆ ಜಿ.ಎಸ್.ಎಸ್. ಅವರ ನೇರ ಸಂಪರ್ಕ ಒದಗಿತು. ಅವರೂ ದೊಡ್ಡದೊಂದು ಕಾಗದ ಬರೆದರು, ಬೆಂಗಳೂರು ವಿವಿಯ ಸಂಕಿರಣಗಳಿಗೆ ಕರೆದರು, ನನ್ನನ್ನು ಬೆಳೆಸಿದರು. ಆ ಪುಸ್ತಕದ ಕಾರಣದಿಂದಲೇ ಕಿರಂ, ರಾಘವೇಂದ್ರರಾವ್, ಶ್ರೀನಿವಾಸರಾಜು, ಡಿ.ಆರ್. ನಾಗರಾಜ್, ಕಲ್ಗುಡಿ, ಎಚ್.ಎಸ್. ಶಿವಪ್ರಕಾಶ್, ಇಂಥವರೆಲ್ಲರ ಒಡನಾಟ ಲಭಿಸಿತು. ನನ್ನದು ಎಷ್ಟೇ ಏಕಾಂತವೆಂದರೂ ಇವರೆಲ್ಲ ಗೆಳೆಯರ ಈ ಲೋಕದ ಒಡನಾಟ ಏಕಾಂತವನ್ನೂ ತಿದ್ದಿದೆ.ಇನ್ನೆರಡು ಸಂಗತಿಗಳು ನನ್ನ ಬರವಣಿಗೆಯೊಡನೆ ಹೆಣೆದುಕೊಂಡಿವೆ. ತೀರ ಚಿಕ್ಕಂದಿನಲ್ಲೇ ನಮ್ಮ ಮನೆ ಬೇರೆ ಥರ ಇರಬೇಕಾಗಿತ್ತು, ನಮ್ಮ ಅಪ್ಪ ಅಮ್ಮ ಬೇರೆ ಥರ ಇರಬೇಕಾಗಿತ್ತು, ನಾನು ಬೇರೆ ಥರ ಇರಬೇಕಿತ್ತು ಅನಿಸುತ್ತಿತ್ತು-ತೀವ್ರವಾಗಿ. ನಾನು ಮಾಡಿರುವ, ಮಾಡುವ ಎಲ್ಲ ಅನುವಾದಗಳ ಆಳದಲ್ಲಿ ಇರುವ ಪ್ರೇರಣೆ ಇದೇ ಇರಬಹುದು. ನಾನು ಓದಿದ್ದರಲ್ಲಿ ಇಷ್ಟವಾದದ್ದನ್ನೆಲ್ಲ ನನ್ನ ಮಾತಿನಲ್ಲಿ ನಾನು ಹೇಳಿದರೆ ಹೇಗಿರುತ್ತದೆ ಎಂದು ಮನಸ್ಸಿನಲ್ಲೇ ಬರೆದುಕೊಳ್ಳುತ್ತಿದ್ದೆ.

ಹಾಗೆ ಮೊದಲು ಪಟ್ಟಾಗಿ ಮಾಡಿದ ಅನುವಾದ ಬೆಕೆಟ್‌ನ `ವೇಟಿಂಗ್ ಫಾರ್ ಗೋಡೋ', ರಾಸೀನ್‌ನ `ಫೀದ'್ರ, ಮತ್ತು `ಕಿಂಗ್ ಲಿಯರ್'. ಅವು ಯಾವುವೂ ಉಳಿದುಕೊಳ್ಳಲಿಲ್ಲ, ಬೆಳಕು ಕಾಣಲಿಲ್ಲ. `ವಾರ್ ಅಂಡ್ ಪೀಸ್' ಹಾಗೂ `ಡೆತ್ ಆಫ್ ಇವಾನ್ ಇಲಿಚ್' ಇವು 1973ರಲ್ಲೇ ನನ್ನ ಆವರಿಸಿಕೊಂಡಿದ್ದವು. ನಾನು ಮತ್ತು ರಾಮು ಸುಮಾರು ತಿಂಗಳ ಕಾಲ  `ಡೆತ್ ..'ಕತೆಯನ್ನು ದಿನವೂ ಓದಿ ಕಣ್ಣು ತೇವ ಮಾಡಿಕೊಂಡಿದ್ದೆವು.

ಅವನ್ನು ಕನ್ನಡಕ್ಕೆ ತಂದು ಜನರ ಕಣ್ಣಿಗೆ ಕಾಣುವಂತೆ ಮಾಡುವ ಧೈರ್ಯ ಬರುವುದಕ್ಕೆ ಮೂವತ್ತೆರಡು ವರ್ಷ ಬೇಕಾಯಿತು. ನಾನು ಇಷ್ಟಪಟ್ಟು ಮಾಡಿದ ಇನ್ನೊಂದು ಅನುವಾದ `ಕನ್ನಡಕ್ಕೆ ಬಂದ ಕವಿತೆ'-ಜಗತ್ತಿನ ಬೇರೆ ಬೇರೆ ಕವಿಗಳನ್ನು ನನ್ನ ಕನ್ನಡಕ್ಕೆ ಕರೆದುಕೊಂಡು ಬಂದದ್ದು. ಅರ್ಥ ಮಾಡಿಕೊಳ್ಳುವುದಕ್ಕೆ, ಅರ್ಥವಾದದ್ದನ್ನು ಹೇಳುವುದಕ್ಕೆ. ನಾನು ನಾನೇ ಆಗಿದ್ದುಕೊಂಡೂ ಮತ್ತೊಂದು ಮನಸ್ಸನ್ನು ಆವಾಹಿಸಿಕೊಳ್ಳುವುದಕ್ಕೆ ಅನುವಾದ ಅತ್ಯುತ್ತಮವಾದ ವಿಧಾನ ಅನ್ನಿಸಿತು.ಅದರಲ್ಲೂ ಜೆಕೆ ಅವರ ಕೃತಿಗಳನ್ನು ಅನುವಾದಿಸುವ ಕೆಲಸ, `ಸ್ಟೋರಿ ಆಫ್ ಸಿವಿಲಿಸೇಶನ್' ಅನುವಾದಿಸುವ ಕೆಲಸ ನನ್ನನ್ನು ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿದವು. ಕಂಬಾರರ `ಚಕೋರಿ', `ತುಕ್ರನ ಕನಸು' ಮತ್ತು ಕವಿತೆಗಳು, ಜಿ.ಎಸ್.ಎಸ್ ಅವರ ಕವಿತೆಗಳು ಮತ್ತು ವಚನಗಳು ಇಂಥವನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದ್ದು ನನ್ನದಲ್ಲದ ಭಾಷೆಗೆ ನಾನು ಚಾಚಿಕೊಂಡ ಸಾಹಸ.ಸುಮಾರು ನಲವತ್ತು ವರ್ಷಗಳಾಗುತ್ತಿರುವಾಗ ಒಂದು ಥರದ ಸುಳ್ಳು ಸಮಾಧಾನ ಬೇರು ಬಿಡುತ್ತಿರುವಾಗ ಕನ್ನಡವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ಅವಕಾಶ ಬಂದಿತು. ಚಂದ್ರಶೇಖರ ಕಂಬಾರರು ಕನ್ನಡದ ಅತ್ಯುತ್ತಮ ಮನಸ್ಸುಗಳು ಅಲ್ಲಿ ನೆರೆಯುವಂತೆ ಮಾಡಿದ್ದರು. ವಿಶ್ವವಿದ್ಯಾಲಯ ಆರಂಭವಾದ ಮೊದಲ ಆರು ವರ್ಷಗಳಲ್ಲಿ ಅಲ್ಲಿ ನಾನು ಮತ್ತೆ ಹೊಸಬನಾದೆ. ಅಲ್ಲಿನ ಹಿರಿಯರು ಮತ್ತು ಚಂದ್ರಶೇಖರ್, ಸತ್ಯನಾಥ್, ರಹಮತ್, ಅಮರೇಶ, ಪುಟ್ಟಯ್ಯ, ತಾರಕೇಶ್ವರ ಇಂಥವರೊಡನೆ ತೊಡಗಿಕೊಂಡ ಕೆಲಸಗಳಲ್ಲಿ, ಮೊಂಡಾಗುತ್ತಿದ್ದ ಮನಸ್ಸು ಮತ್ತೆ ಹರಿತಗೊಂಡಿತು.

ನಮ್ಮ ಕನ್ನಡ ಕಾವ್ಯ, ಪುರಾಣ, ಭಾಷಾಂತರ ಇಂಥ ಉದ್ಯಮಗಳೊಡನೆ ಸಂಶೋಧನೆಯ ಶಿಸ್ತು ಬೆರೆಯಿತು. ಯಾವುದೇ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತ ಯಶಸ್ಸು ಕಾಣುವುದಕ್ಕೆ ನಾವು ಮಿಕ್ಕವರನ್ನು ಚದುರಂಗದ ಕಾಯಿಗಳಂತೆ ಬಳಸಿಕೊಳ್ಳಬೇಕು ಇಲ್ಲವೇ ಇತರರ ಆಟದ ಕಾಯಿಗಳಾಗಬೇಕು, ಎರಡೂ ನನಗೆ ಒಗ್ಗದ್ದು ಅನ್ನಿಸಿ ಮತ್ತೆ ಒಳಸರಿದುಕೊಂಡೆ. `ಪ್ರಜಾವಾಣಿ'ಯ ಸಾಪ್ತಾಹಿಕ ಪುರವಣಿಯಲ್ಲಿ `ನುಡಿಯೊಳಗಾಗಿ' ಅಂಕಣ ಬರೆಯುವ ಅವಕಾಶ ದೊರೆತಾಗ ಮೊದಲಿನ ವಿಮರ್ಶೆಯ ಪರಿಭಾಷೆಗಿಂತ ಬೇರೆ ಥರ, ಆಸಕ್ತರಿಗೆ ಅರ್ಥವಾಗುವ ಹಾಗೆ, ಭಾಷೆ, ಸಂಸ್ಕೃತಿ ಇತ್ಯಾದಿ ವಿಚಾರಗಳನ್ನು ಬರೆಯುವ ಪ್ರಯೋಗಕ್ಕೆ ಒಡ್ಡಿಕೊಂಡೆ.ನಾನು ಓದಿದ್ದಕ್ಕಿಂತ ಬರೆದದ್ದು ಕಡಮೆ. ನೂರಾರು ಲೇಖನಗಳನ್ನು ಅಂದಂದಿನ ದಂದುಗದ ಭಾಗವಾಗಿ ಬರೆದದ್ದೇ ಹೆಚ್ಚು. ಹಾಗೆ ಬರೆದವನ್ನೆಲ್ಲ ಪುಸ್ತಕವಾಗಿ ತರಬೇಕೆಂಬ ಹಂಬಲವೇನೂ ಇಲ್ಲ.  ಆ ಬರವಣಿಗೆಗಳು ಈಗ ನನ್ನ ಬಳಿ ಇಲ್ಲವೂ ಇಲ್ಲ. ಹಾಗೆ ಬರೆಯುವಾಗೆಲ್ಲ, ಈಗ ಬರೆಯುತ್ತಿರುವುದನ್ನು ಬಿಟ್ಟರೆ ಬೇರೇನೂ ಇಲ್ಲ ಅನ್ನುವ ಹಾಗೆ ಮುಳುಗಿಕೊಂಡು ಬರೆದದ್ದು ಹೌದು.

ನನ್ನ ಹೆಸರು ಹೊತ್ತು ಜನರ ಕಣ್ಣಿಗೆ ಬಿದ್ದಿರುವ ಸುಮಾರು ಅರುವತ್ತು ಪುಸ್ತಕಗಳೂ ನನ್ನ ಆತ್ಮಕಥೆಯ ಭಾಗಗಳು. ಓದುವುದು ಮತ್ತು ಬರೆಯುವುದು ನನ್ನ ಸ್ವಭಾವಕ್ಕೆ ಒಗ್ಗಿದ್ದು, ಮತ್ತು ನಾನು ಮಾಡಿದ ಉದ್ಯೋಗವೂ ಇವೆರಡೂ ಕಸುಬುಗಳಿಗೇ ಸಂಬಂಧಿಸಿದ್ದು. ಆದ್ದರಿಂದಲೇ ಓದಿನ ಮೂಲಕ, ಬರಹದ ಮೂಲಕ ಮತ್ತೇನೋ ಅಧಿಕಾರ ಇತ್ಯಾದಿಗಳನ್ನು ಪಡೆದುಕೊಳ್ಳಲು ಹಂಬಲಿಸಬೇಕೆಂಬ ಮನಸ್ಸು ಬರಲೇ ಇಲ್ಲ. 

 

ಪಿಂಡಾರಿ ಗ್ಲೇಶಿಯರ್ ನೋಡಲು ಹೋದದ್ದು ನೆನಪಾಗುತ್ತಿದೆ. ಸಂಜೆಯ ಹೊತ್ತು. ಕತ್ತಲಿಳಿಯುತ್ತಿತ್ತು. ದ್ವಾಲಿ ಎಂಬ ಐದಾರು ಸಾವಿರ ಅಡಿ ಎತ್ತರದ ಜಾಗ. ಅಲ್ಲೊಂದು ಒಂಟಿ ಮನೆ. ಅದರ ಎದುರಿಗೆ ಇನ್ನೂ ಎತ್ತರದ ಎರಡು ಶಿಖರಗಳಿಂದ ಎಡಕ್ಕೊಂಡು, ಬಲಕ್ಕೊಂದು ಧುಮ್ಮಿಕ್ಕುವ ಜಲಪಾತ. ಆ ಹೊತ್ತು ಅಲ್ಲಿದ್ದವರು ನಾವು ಐದೇ ಜನ. ಅಗಾಧ ಮೌನದಲ್ಲಿ ಜಲಪಾತದ ಆರ್ಭಟ, ಆವರಿಸುತ್ತಿದ್ದ ಕತ್ತಲು, ತಳದಲ್ಲಿ ಎಲ್ಲೋ ದೂರದಲ್ಲಿ ನೆಲ - ಆಗ ತಟ್ಟನೆ ಅನ್ನಿಸಿತ್ತು.

ನಾನು ಬರೆದು ಖ್ಯಾತನಾದೆನೆಂದುಕೊಂಡ `ವಿಮರ್ಶೆಯ ಪರಿಭಾಷೆ'ಯನ್ನು ಅಲ್ಲಿ ನೆಲದ ಮೇಲಿಟ್ಟರೆ ಇಲ್ಲಿಂದ ದುರ್ಬೀನು ಹಾಕಿಕೊಂಡು ನೋಡಿದರೂ ಕಾಣುವುದಿಲ್ಲ. ಕಾಡು ಇಷ್ಟ. ಗೆಳೆಯ ನೊಸಂತಿ, ರಾಜು, ಮೂರ್ತಿ, ಹಾಲೇಶ, ಮತ್ತು ನನ್ನ ಹೆಂಡತಿಯೊಡನೆ ಪಶ್ಚಿಮಘಟ್ಟಗಳ ಹಲವು ಕಾಡು ಸುತ್ತಿದ್ದೇನೆ, ಹಿಮಾಲಯದಲ್ಲಿ  ಅಲೆದಿದ್ದೇನೆ. ಅಲ್ಲಲ್ಲಿನ ವಾಸನೆ, ಸ್ಪರ್ಶ, ಬೆಳಕು, ಕತ್ತಲು, ಆಯಾಸ, ಭಯ, ಉತ್ಸಾಹ, ಸಂತೋಷ ಇವೆಲ್ಲವನ್ನೂ ಮಾತಿನಲ್ಲಿ ಹಿಡಿದಿಡಬೇಕೆಂದು ಆಸೆ ಪಟ್ಟು `ನನ್ನ ಹಿಮಾಲಯ' ಬರೆದೆ.ನಾವೆಲ್ಲಿ ಹೋದರೂ, ಏನು ಮಾಡಿದರೂ ಅಲ್ಲೆಲ್ಲ, ಆಗೆಲ್ಲ, ನಮ್ಮಳಗಿನ ನಾವು ಹಾಗೇ ಇರುತ್ತದೆ. ಎಲ್ಲಿ ಹೋದರೂ ನಾವು ಬಿಟ್ಟುಬಂದೆವೆಂದುಕೊಂಡ ಜಾಗದಲ್ಲೇ ಇರುತ್ತೇವೆ. ಇನ್ನೇನೋ ಆಗಬೇಕೆಂದುಕೊಂಡು ಓದಿದೆ, ಇನ್ನೇನೋ ಆಗಬೇಕೆಂದುಕೊಂಡು ಬರೆದೆ. ಏನೂ ಆಗಲಿಲ್ಲವೋ ಏನೋ! ನಾನು ಬರೆದದ್ದು ಸಾರ್ಥಕವೋ ಸಾಧನೆಯೋ ನನಗೆ ಗೊತ್ತಿಲ್ಲ. ತೀರ್ಥಹಳ್ಳಿಯ ಹತ್ತಿರ ನದಿಯ ತುಂಬ ಬಂಡೆಗಳು. ನದಿಯ ಕನಸಿನ ಹಾಗೆ ಅವುಗಳ ರೂಪ.

ಈ ಬಂಡೆಯಿಂದ ನದಿ ಹೇಗೆ, ಅಲ್ಲಿಂದ ಹೇಗೆ, ಮತ್ತೊಂದು ಬಂಡೆಯಿಂದ ಹೇಗೆ-ಕುಪ್ಪಳಿಸುತ್ತ, ಬಂಡೆಯಿಂದ ಬಂಡೆಗೆ ಸಾಗುತ್ತ ನೋಡಿದಂತೆ ಇತಿಹಾಸ, ಭಾಷಾಶಾಸ್ತ್ರ, ಸಾಹಿತ್ಯ, ವಿಮರ್ಶೆ, ಅನುವಾದ, ನಾಟಕ, ಭಾಷಣ ಎಲ್ಲಿಂದ ನೋಡಿಕೊಂಡರೂ ನದಿ ಅದೇ. `ಈ ಲೋಕದ ಎಲ್ಲ ಮನುಷ್ಯರಂತೆಯೇ ನಾನೂ ತುಂಬ ವಿಶಿಷ್ಟನಾದವನು' ಯಾರು ಹೇಳಿದ್ದೋ ಈ ಮಾತು ಮರೆತಿದೆ, ಮಾತು ಉಳಿದಿದೆ. ನನ್ನ ಓದು, ಬರಹ ಈ ಸತ್ಯವನ್ನು ನನಗೆ ಒಂದಷ್ಟು ಕಾಣಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.