ಸೋಮವಾರ, ಮೇ 23, 2022
26 °C

ನೀತಿ ಸಂಹಿತೆಗೆ ಶಾಸನದ ಬಲ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ (ಪಿಟಿಐ): ಚುನಾವಣಾ ನೀತಿ ಸಂಹಿತೆಯನ್ನು ಶಾಸನದ ಮೂಲಕ ಬಲಪಡಿಸುವ ಅಗತ್ಯವಿಲ್ಲ ಎಂದು ಹೇಳಿರುವ ನೂತನ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಅವರು , ಚುನಾವಣಾ ಆಯೋಗದಲ್ಲಿ ಈಗಿರುವ ವ್ಯವಸ್ಥೆಯ ಮೂಲಕವೇ ಚುನಾವಣೆಗಳನ್ನು ಅತ್ಯಂತ ದಕ್ಷತೆಯಿಂದ ನಡೆಸಬಹುದಾಗಿದೆ ಎಂದು   ಅಭಿಪ್ರಾಯ ಪಟ್ಟಿದ್ದಾರೆ.ದೇಶದ 18ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ನಂತರ ವರದಿಗಾರರ ಬಳಿ ಮಾತನಾಡಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.ಚುನಾವಣೆಗಳನ್ನು ನಡೆಸಲು ಆಯೋಗ, ಚುನಾವಣಾ ನೀತಿ ಸಂಹಿತೆಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಆಯೋಗದ ಕಾರ್ಯವೈಖರಿ ಬದಲಿಸುವ ಪ್ರಸ್ತಾಪದ ಕುರಿತು ವಿಸ್ತೃತ ಸಾರ್ವಜನಿಕ ಚರ್ಚೆ ನಡೆಯುವ  ಅಗತ್ಯವಿದೆ ಎಂದರು.ಮಾರ್ಚ್‌ನಲ್ಲಿ ಐದು ರಾಜ್ಯಗಳಿಗೆ ನಡೆದಿದ್ದ ಚುನಾವಣೆಯ ಸಂದರ್ಭದಲ್ಲಿ ಕೆಲಸಚಿವರು ಚುನಾವಣಾ ನೀತಿ ಸಂಹಿತೆಯನ್ನು ಶಾಸನದ ಮೂಲಕ ಬಲಪಡಿಸುವ ಹೇಳಿಕೆ ನೀಡಿದ್ದರು. ಆದರೆ, ಹಾಗಾದಲ್ಲಿ ಚುನಾವಣೆಯ ಸಮಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸುವುದು ಸಾಧ್ಯವಾಗುವುದಿಲ್ಲ. ಅಲ್ಲದೇ ಆಯೋಗದ ಅಧಿಕಾರ ಮೊಟಕಾಗುತ್ತದೆ ಎಂದು ಚುನಾವಣಾ ಆಯೋಗ ಆತಂಕ ವ್ಯಕ್ತಪಡಿಸಿತ್ತು.ಮುಖ್ಯ ಚುನಾವಣಾ ಆಯುಕ್ತರ ಹುದ್ದೆಗೆ ಆಯ್ಕೆ ಸಮಿತಿಯ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡುವ ಪ್ರಕ್ರಿಯೆ ಕುರಿತು ಅಭಿಪ್ರಾಯ ಕೇಳಿದಾಗ, ಸಂಪತ್ ಈ ಕುರಿತು ನೇರವಾಗಿ ಉತ್ತರಿಸಲಿಲ್ಲ. ಸದ್ಯಕ್ಕೆ ತಮ್ಮ ಮುಂದಿರುವ ಹೊಣೆ ನಿಭಾಯಿಸುವುದಾಗಿ ಹೇಳಿದರು.ಚುನಾವಣಾ ಸುಧಾರಣೆ ತಮ್ಮ ಆದ್ಯತೆಯಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಸ್ಪಷ್ಟಪಡಿಸಿದರು.

ಅಪರಾಧಿಗಳು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಹಾಗೂ ಚುನಾವಣೆಯಲ್ಲಿ ಹಣ ಬಲ ಬಳಸುವುದನ್ನು ಕೊನೆಗಾಣಿಸಲು ಬಹುಕಾಲದಿಂದ ನೆನೆಗುದಿಯಲ್ಲಿ ಇರುವ ಚುನಾವಣಾ ಸುಧಾರಣಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಯತ್ನಿಸುವುದಾಗಿ ತಿಳಿಸಿದರು.ಅಪರಾಧ ಹಿನ್ನೆಲೆಯುಳ್ಳವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆಯಲು ಆಯೋಗ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದ್ದು, ಸರ್ಕಾರ ಮುಂದಿನ ಕ್ರಮ ಕೈಗೊಳ್ಳಬೇಕಾಗಿದೆ ಎಂದರು. ಮತದಾರರ ಪಟ್ಟಿ ಸರಿಪಡಿಸುವುದು, ಮತದಾರರ ಪಟ್ಟಿಯಲ್ಲಿ ಕಿರಿಕಿರಿಯಿಲ್ಲದೇ ಹೆಸರು ನೋಂದಾಯಿಸಿಕೊಳ್ಳುವಂತೆ ಮಾಡುವುದು ಇತ್ಯಾದಿ ಕೆಲಸಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.