ಮಂಗಳವಾರ, ಮಾರ್ಚ್ 9, 2021
30 °C

ನೀರಾವರಿ ನಿಗಮ ಕಚೇರಿಗೆ ರೈತರ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರಾವರಿ ನಿಗಮ ಕಚೇರಿಗೆ ರೈತರ ಮುತ್ತಿಗೆ

ಮದ್ದೂರು: ತಾಲ್ಲೂಕಿನ ವಿಶ್ವೇಶ್ವರಯ್ಯ ನಾಲೆ ಹಾಗೂ ಕೆಮ್ಮಣ್ಣುನಾಲೆ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸುವಲ್ಲಿ ಅಲಕ್ಷ್ಯ ವಹಿಸಿರುವ ಕಾವೇರಿ ನೀರಾವರಿ ನಿಗಮದ ಎಂಜಿನಿಯರ್‌ಗಳ ವಿರುದ್ಧ ರೈತರು ಬುಧವಾರ ಇಲ್ಲಿನ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಬೇಜವಾಬ್ದಾರಿತನ ಪ್ರದರ್ಶಿಸಿರುವ ಎಂಜಿನಿಯರ್‌ಗಳ ವಿರುದ್ಧ ಘೋಷಣೆ ಮೊಳಗಿಸಿದ  ನಗರಕೆರೆ, ಚನ್ನಸಂದ್ರ, ಮಾಲಾಗಾರನಹಳ್ಳಿ, ಗುರುದೇವರಹಳ್ಳಿ, ಛತ್ರದ ಹೊಸಹಳ್ಳಿಗಳ ರೈತರು ಒಂದು ಗಂಟೆಗೂ ಹೆಚ್ಚು ಕಾಲ ಕಚೇರಿ ಎದುರು ಧರಣಿ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರೈತ ಮುಖಂಡ ನ.ಲಿ. ಕೃಷ್ಣ ಮಾತಾನಾಡಿ, ವಿಶ್ವೇಶ್ವರಯ್ಯ ನಾಲೆ ಸೇರಿದಂತೆ ಕೆಮ್ಮಣ್ಣು ನಾಲೆಯ 13ನೇ ಭಾಗಕ್ಕೆ ನೀರು ನಿಲ್ಲಿಸಿರುವ ಪರಿಣಾಮ ಸಾವಿರಾರು ಎಕರೆ ಬೆಳೆ ಒಣಗಿ ಹಾಳಾಗಿ ರೈತರು ಸಂಕಷ್ಟಕ್ಕೆ ಸಿಲಿಕಿದ್ದಾರೆ. ಈ ಬೆಳೆಗಳು ನೀರಿಲ್ಲದೆ ಒಣಗಲು  ಎಂಜಿನಿಯರ್‌ಗಳ ಕರ್ತವ್ಯ ಲೋಪವೇ ಮುಖ್ಯಕಾರಣವಾಗಿದೆ. ಕೂಡಲೇ ತಪ್ಪೆಸಗಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.ಅಷ್ಟರಲ್ಲಿ ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮಂಡ್ಯ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎಂ.ಕೆ.  ತಮ್ಮಣ್ಣ ಅವರನ್ನು  ತರಾಟೆಗೆ ತೆಗದುಕೊಂಡ ಪ್ರತಿಭಟನಾಕಾರರು ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ರೈತರನ್ನು ಸಮಾಧಾನಪಡಿಸಿದ ಇಇ ಸುರೇಶ್, ತಾಲ್ಲೂಕಿನ ಹಲವು ಗ್ರಾಮಗಳ ಕೊನೆಯ ಭಾಗದ ಜಮೀನುಗಳಿಗೆ ನೀರು ತಲುಪಿಲ್ಲ, ಈ ಸಂಬಂಧ ಎಂಜಿನಿಯರಗಳು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಾವೇರಿ ನಿಗಮದ ಮುಖ್ಯ ಇಂಜಿನಿಯರ್ ಜತೆ ಮಾತನಾಡಿ ಒಂದೆರೆಡು ದಿನಗಳಲ್ಲಿ   ಈ ಭಾಗದ ಎಲ್ಲಾ ನಾಲೆಗಳಿಗೆ ನೀರು ಹರಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.ತೆಂಗು ಬೆಳೆಗಾರರ ರಾಜ್ಯ ಘಟಕದ ಅಧ್ಯಕ್ಷ ಲಕ್ಷ್ಮಣ್ ಚನ್ನಸಂದ್ರ, ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ. ಉಮಾಶಂಕರ್, ರೈತ ಮುಖಂಡ ರಾದ ಉಮೇಶ, ಬೋರೇಗೌಡ, ಕಾಳಯ್ಯ, ಅಂಕೇಗೌಡ, ವರದೇಗೌಡ, ಕರಿ ಚಿಕ್ಕಹೆಗಡೆ, ಬಸವರಾಜು, ತಿಪ್ಪುರು ರಾಜೇಶ, ಮಾರಸಿಂಗನಹಳ್ಳಿ ಮಲ್ಲರಾಜು, ದ್ರುವಕುಮಾರ್‌, ಮಿಲ್ಟ್ರಿ ಕುಮಾರ್, ಜಗದೀಶ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.