ಸೋಮವಾರ, ಜೂನ್ 21, 2021
27 °C

ನೀರಿನ ಸಮಸ್ಯೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾನ್ವಿ: ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲು ಪುರಸಭೆ ಮುಖ್ಯಾಧಿಕಾರಿ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಧೋರಣೆಯೇ ಕಾರಣ ಎಂದು ಪುರಸಭೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ಪುರಸಭೆಯ ತುರ್ತುಸಭೆಯಲ್ಲಿ ಜರುಗಿತು.ಪ್ರತಿ ವರ್ಷ ಬೇಸಿಗೆ ಸಂದರ್ಭದಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತದೆ. ಈ ಸಮಸ್ಯೆಯ ಅರಿವು ಮೊದಲೇ ಇದ್ದರೂ ಕೂಡ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.  ಎಂಜಿನಿಯರ್ ಅಮರೇಶ ನಿರಂತರವಾಗಿ ಗೈರಾಗಿ ಜನತೆಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಲ್ಲಿ  ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.

ಅವರ ವಿರುದ್ಧ ಕ್ರಮ ಜರುಗಿಸವಂತೆ ಜಿಲ್ಲಾಧಿಕಾರಿಗೆ ಶಿಫಾರಸ್ಸು ಮಾಡಲು  ಪುರಸಭೆ ಪ್ರತಿಪಕ್ಷ ನಾಯಕ ರಾಜಾ ಮಹೇಂದ್ರ ನಾಯಕ ಮತ್ತಿತರ ಸದಸ್ಯರು ಒತ್ತಾಯಿಸಿದರು. ಕುಡಿಯುವ ನೀರಿನ ಪೈಪುಗಳು  ಒಡೆದು ನೀರು ಪೋಲಾಗುತ್ತಿದೆ. ಇಂತಹ ಪೈಪುಗಳ ದುರಸ್ತಿ ಮಾಡುವಂತೆ ವಿವಿಧ ವಾರ್ಡ್‌ಗಳ ಸದಸ್ಯರು ಆಗ್ರಹಿಸಿದರು.ಪುರಸಭೆ ಸದಸ್ಯ ಸುಭಾಸ್‌ಚಂದ್ರ ಮಾತನಾಡಿ, 19ನೇ ವಾರ್ಡಿನ ಹಿರೇಬಾವಿಗೆ ಹೊಸ ಮೋಟಾರ್ ಅಳವಡಿಸಿ,  17,18,19 ಹಾಗೂ 20ನೇ ವಾರ್ಡ್‌ಗಳಿಗೆ  ನೀರಿನ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಿ ನಾಯಕ ಮಾತನಾಡಿ, ಬೇಸಿಗೆಯ ಈ ಮೂರು ತಿಂಗಳಲ್ಲಿ ಜನತೆಗೆ ಕುಡಿಯುವ ನೀರಿನ ತೊಂದರೆ ಉದ್ಭವಿಸದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೊಳವೆಬಾವಿಗಳನ್ನು ದುರಸ್ತಿ ಮಾಡಲಾಗುವುದು. ಅಗತ್ಯ ಇರುವ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುವುದು. 2011-12ನೇ ಸಾಲಿನಲ್ಲಿ ಬರಪರಿಹಾರ ಅನುದಾನದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.

 

ಕೆರೆ ಹಾಗೂ ಬಾವಿಗಳನ್ನು ಸ್ವಚ್ಛಗೊಳಿಸಿ ನೀರು ಪಡೆಯಲಾಗುವುದು. ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು ಯೋಜನೆಗೆ ಹೆಚ್ಚಿನ ಸಾಮರ್ಥ್ಯದ ಜಲಸಂಗ್ರಹಣೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಪಡೆಯಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಅನಧಿಕೃತವಾಗಿ  ನಳಗಳ ಸಂಪರ್ಕ ಕಡಿತಗೊಳಿಸುವಂತೆ ಪುರಸಭೆ ಸಿಬ್ಬಂದಿಗೆ ಅಧ್ಯಕ್ಷೆ ಲಕ್ಷ್ಮೀದೇವಿ ಕಟ್ಟುನಿಟ್ಟಿನ ಸೂಚನೆ ನೀಡಿದರು.ಕುಡಿಯುವ ನೀರು ಸಮಸ್ಯೆ ಉಂಟಾದಲ್ಲಿ ಜನತೆ ಯಾವುದೇ ಸಂದರ್ಭದಲ್ಲಿ ತಮಗೆ ಅಥವಾ ಪುರಸಭೆ ಕಚೇರಿಯ ಗಮನಕ್ಕೆ ತರುವಂತೆ ಅವರು ಮನವಿ ಮಾಡಿದರು. ಪುರಸಭೆ ಉಪಾಧ್ಯಕ್ಷ ಹುಸೇನ್ ಬೇಗ್, ಮುಖ್ಯಾಧಿಕಾರಿ ವೆಂಕಟೇಶ ಸೇರಿದಂತೆ ಸರ್ವ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.