ಗುರುವಾರ , ಜೂನ್ 24, 2021
23 °C

ನೀರು ಪೋಲು ನಿಯಂತ್ರಣ ರೂ.180 ಕೋಟಿ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ವಿವಿಧೆಡೆ ಪೋಲಾಗುತ್ತಿರುವ ನೀರನ್ನು ನಿಯಂತ್ರಿಸುವ ಸಲುವಾಗಿ ರೂ 180 ಕೋಟಿಗಳ ವೆಚ್ಚದಲ್ಲಿ ಯೋಜನೆಯೊಂದನ್ನು ರೂಪಿಸಲಾಗಿದ್ದು, ಪದ್ಮನಾಭನಗರ, ಚಾಮರಾಜಪೇಟೆ, ಬಿಟಿಎಂ ಲೇಔಟ್, ಚಿಕ್ಕಪೇಟೆ ಹಾಗೂ ಜಯನಗರದಲ್ಲಿ 56 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು ಎಂದು ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.ಬೆಂಗಳೂರು ಜಲಮಂಡಳಿಯು ಬಸವನಗುಡಿ ವಿಧಾನ ಸಭಾ ವ್ಯಾಪ್ತಿಯಲ್ಲಿ ಆಯೋಜಿಸಿದ್ದ 2.88 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ಸೋಮವಾರ ನೆರವೇರಿಸಿ ಮಾತನಾಡಿದರು.ನೀರು ಸೋರಿಕೆ ನಿಯಂತ್ರಣ ಯೋಜನೆಯು ಯಶಸ್ವಿಯಾದರೆ ನಗರದ ಇತರೆ ಪ್ರದೇಶಗಳಿಗೂ ವಿಸ್ತರಿಸಲಾಗುವುದು. ಮಂಡಳಿಯ ಪೂರೈಸುತ್ತಿರುವ ನೀರಿನ ಪ್ರಮಾಣದಲ್ಲಿ ಶೇ 36 ರಷ್ಟು ಸೋರಿಕೆಯಾಗುತ್ತಿದ್ದು, ಇದನ್ನು ನಿಯಂತ್ರಿಸುವುದು ಒಂದು ದೊಡ್ಡ ಸವಾಲಾಗಿದೆ ಎಂದು ಹೇಳಿದರು.ಜೂನ್ ವೇಳೆಗೆ ಕಾವೇರಿ 4ನೇ ಹಂತದ 2 ನೇ ಘಟ್ಟದ ನೀರು ಪೂರೈಕೆಯಾಗಲಿದ್ದು, ನೀರಿನ ಸಮಸ್ಯೆ ಬಹುತೇಕ ಕಡಿಮೆಯಾಗಲಿದೆ. ಐಟಿ ಬಡಾವಣೆ, ವಿವೇಕಾನಂದ ನಗರದಲ್ಲಿ ನೀರಿನ ಸಮಸ್ಯೆ ನಿವಾರಣೆಗಾಗಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ 10 ಟಿಎಂಎ ಸುತ್ತಳತೆ ಕೊಳವೆಯನ್ನು ಅಳವಡಿಸಲಾಗುವುದು ಎಂದು ಹೇಳಿದರು.ಜಲಮಂಡಳಿಯ ಮುಖ್ಯ ಎಂಜಿನಿಯರ್ ವೆಂಕಟರಾಜು, `ನಗರದ ದಕ್ಷಿಣ ವಲಯದಲ್ಲಿ ನೀರು ಸೋರುವಿಕೆಯ ಪ್ರಮಾಣ ಹೆಚ್ಚಿದ್ದು, ಯಾವ ಭಾಗಗಳಲ್ಲಿ ನೀರು ಸೋರಿಕೆಯಾಗುತ್ತಿದೆ ಎಂಬುದರ ಸ್ಪಷ್ಟವಾದ ಮಾಹಿತಿ ದೊರೆತಿಲ್ಲ. ಈ ನಿಟ್ಟಿನಲ್ಲಿ ಕಾಮಗಾರಿ ಗುತ್ತಿಗೆದಾರರು ನಿರ್ದಿಷ್ಟ ಸ್ಥಳಗಳಲ್ಲಿ ಮೀಟರ್ ಅಳವಡಿಸಲಿದ್ದಾರೆ~ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಕತ್ತರಗುಪ್ಪೆ ಪ್ರದೇಶ 100 ಎಂ.ಎಂ. ಸುತ್ತಳತೆಯ ಕೊಳವೆ ಮಾರ್ಗ ಅಳವಡಿಕೆ ಮತ್ತು ಒಳಚರಂಡಿ ಕೊಳವೆ ಬದಲಾವಣೆಯ ಯೋಜನೆಗಳಿಗೆ ಗುದ್ದಲಿ ಪೂಜೆ ಮಾಡಲಾಯಿತು. ಶಾಸಕ ಎಲ್. ಎ.ರವಿಸುಬ್ರಹ್ಮಣ್ಯ, ಪಾಲಿಕೆ ಸದಸ್ಯ ಸಂಗಾತಿ ವೆಂಕಟೇಶ್, ಜಲಮಂಡಳಿಯ ಅಧ್ಯಕ್ಷ ಗೌರವ್ ಗುಪ್ತ, ಪ್ರಧಾನ ಎಂಜಿನಿಯರ್ ವೆಂಕಟರಾಜು ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.