ಸೋಮವಾರ, ಏಪ್ರಿಲ್ 19, 2021
31 °C

ನೀರು ಬಿಡುಗಡೆಗಾಗಿ ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೀರು ಬಿಡುಗಡೆಗಾಗಿ ರೈತರ ಪ್ರತಿಭಟನೆ

ಸಿರುಗುಪ್ಪ: ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಯಿಂದ ಹಚ್ಚೊಳ್ಳಿ ಉಪ ಕಾಲುವೆಗೆ ಸಮರ್ಪಕ ನೀರು ಬಿಡುಗಡೆಗೆ ಒತ್ತಾಯಿಸಿ ತಾಲ್ಲೂಕಿನ ಬಂಡ್ರಾಳ್ ಕ್ರಾಸ್ ಬಳಿಯ ಆದವಾನಿ-ಸಿರುಗುಪ್ಪ ರಸ್ತೆಯಲ್ಲಿ ಗುರುವಾರ ನೂರಾರು ರೈತರು ಎರಡು ಗಂಟೆ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ತಾಲ್ಲೂಕಿನ ಬಂಡ್ರಾಳ್, ನಾಡಂಗ, ಬೊಮ್ಮಲಾಪುರ, ಅಗಸನೂರು, ನಾಗರಹಾಳ್, ರಾರಾವಿ, ಕುರುವಳ್ಳಿ ಗ್ರಾಮಗಳ ನೀರಾವರಿ ಜಮೀನುಗಳಿಗೆ ನೀರು ಒದಗಿಸುವ ಹಚ್ಚೊಳ್ಳಿ ಉಪ ಕಾಲುವೆಗೆ ಸರಿಯಾಗಿ ನೀರು ಬಾರದಿರುವುದನ್ನು ಖಂಡಿಸಿ ನೂರಾರು ರೈತರು ಹೋರಾಟಕ್ಕೆ ಮುಂದಾಗಿದ್ದಾರೆ.ಆಂಧ್ರ ಭಾಗದಿಂದ ಈ ಉಪ ಕಾಲುವೆಗೆ ನೀರು ಹರಿದು ಬರಬೇಕಾಗಿದೆ. ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಟ್ಟು 20 ದಿನಗಳು ಕಳೆದರೂ ಇಲ್ಲಿಯವರೆಗೆ ಒಂದು ಹನಿ ನೀರು ಹರಿದುಬಂದಿಲ್ಲ, ಮೇಲ್ಭಾಗದ ಆಂಧ್ರದ ರೈತರು ನೂರಾರು ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದಾರೆ ಎಂದು ದೂರಿದರು. ನಮ್ಮ ಪಾಲಿನ 54 ಕ್ಯೂಸೆಕ್ ನೀರು ಕೊಡಿ ಇಲ್ಲವಾದರೆ ಕಾಲುವೆಯನ್ನು ಸಂಪೂರ್ಣವಾಗಿ ಮುಚ್ಚಿಬಿಡಿ ಎಂದು ರಾಮಕೃಷ್ಣಾರೆಡ್ಡಿ ಹೇಳಿದರು.ತಹಸೀಲ್ದಾರ್ ಸಿ.ಎಚ್.ಶಿವಕುಮಾರ್ ಮತ್ತು ನೀರಾವರಿ ಇಲಾಖೆ ಎಇಇ ಆದೆಪ್ಪ ರೈತರೊಂದಿಗೆ ಸಮಾಲೋಚಿಸಿ ಆಂಧ್ರ ಪ್ರದೇಶದ ನೀರಾವರಿ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.ತಾ.ಪಂ.ಸದಸ್ಯ ರಾಮಾ ನಾಯ್ಕ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ನಾಗೇಶಪ್ಪ, ಚಂದ್ರಶೇಖರ, ಆರ್.ಪಂಪನಗೌಡ, ರಾಘವೇಂದ್ರ ರೆಡ್ಡಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.