ಸೋಮವಾರ, ಮೇ 17, 2021
23 °C

ನೀರು, ಮೇವು ಒದಗಿಸಿ: ಪುಟ್ಟಣ್ಣಯ್ಯ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಬರ ಪರಿಸ್ಥಿತಿ ಇರುವ ತಾಲ್ಲೂಕುಗಳಲ್ಲಿ ಸರ್ಕಾರ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಆದ್ಯತೆಯ ಮೇರೆಗೆ ಮೇವು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಒತ್ತಾಯಿಸಿದ್ದಾರೆ.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಭೀಕರ ಬರ ಆವರಿಸಿದೆ. ಭೂಮಿಯನ್ನು ನಂಬಿದ್ದ ಜನರು ಈಗ ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ಕನಿಷ್ಠ ಅಗತ್ಯಗಳನ್ನು ಒದಗಿಸುವ ಮೂಲಕ ಅವರಿಗೆ ಜೀವನಭದ್ರತೆ ನೀಡಬೇಕಿದೆ ಎಂದರು.ಭವಿಷ್ಯದಲ್ಲಿ ಇಂಥಸ್ಥಿತಿಯನ್ನು ಎದುರಿಸಲು ಅನುವಾಗುವಂತೆ ಮಳೆ ಕೊಯ್ಲು ಪದ್ಧತಿ, ಅಂತರ್ಜಲ ರಕ್ಷಣೆ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು. ಸರ್ಕಾರಕ್ಕೆ ನಿಜಕ್ಕೂ ರೈತರ ಬಗೆಗೆ ಕಾಳಜಿಯಿದ್ದರೆ ಮಳೆ ನೀರು ಸಂಗ್ರಹ ಯೋಜನೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.ನೀರು ನಿರ್ವಹಣೆ ವೈಫಲ್ಯವೇ ಅನೇಕ ಸಮಸ್ಯೆಗಳಿಗೆ ಕಾರಣ. ನಗರ, ಜಿಲ್ಲೆಯಲ್ಲಿ ವರದಿಯಾದ ವಾಂತಿ-ಭೇದಿ ಪ್ರಕರಣಗಳಿಗೂ ಕಲುಷಿತ ನೀರು, ಹಳೆಯ ಪೈಪ್‌ಲೈನ್‌ಗಳೇ ಕಾರಣ. ಹಳೆಯ ಪೈಪ್‌ಲೈನ್‌ಗಳನ್ನುಬದಲಿಸಿ ಹೊಸದನ್ನು ಅಳವಡಿಸಲು ಸರ್ಕಾರ ಜಿಲ್ಲೆಗೆ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ತರಾಟೆ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಮ್ಮ ವಿರುದ್ಧ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ತಾಕೀತು ಮಾಡಿದ ಅವರು, ರೈತರ ಪರ ಎಂದು ಹೇಳಿಕೊಳ್ಳುವ ಚಂದ್ರಶೇಖರ್‌ಗೆ ಬೆಂಗಳೂರಿನಲ್ಲಿ ಏನು ಕೆಲಸ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ನಿಜವಾಗಿ ಅವರಿಗೆ ರೈತರ ಬಗೆಗೆ ಕಾಳಜಿಯಿದ್ದರೆ ರೈತರ ಬಳಿಗೆ ಹೋಗಿ ಸೇವೆ ಮಾಡಲಿ. ಬೆಂಗಳೂರಿನಲ್ಲಿ ಕುಳಿತು ರಾಜಕಾರಣ ಮಾಡುವುದನ್ನು ಬಿಡಲಿ ಎಂದರು.ಸೇರ್ಪಡೆ: ಜಿಲ್ಲೆಯ ಹುಲ್ಲೇನಹಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ,, ಸದಸ್ಯ ಉಮೇಶ್, ಹಾಲು ಉತ್ಪಾದಕರ ಸಂಘದ ಎಚ್.ಎಂ. ಮಹೇಶ್ ಇತರರು ಪುಟ್ಟಣ್ಣಯ್ಯ ಉಪಸ್ಥಿತಿಯಲ್ಲಿ ರೈತ ಸಂಘ ಸೇರಿದರು. ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೋಣಸಾಲೆ ನರಸರಾಜು ಅವರು ಇದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.