ಭಾನುವಾರ, ಏಪ್ರಿಲ್ 11, 2021
32 °C

ನೀಲಂ ಆರ್ಭಟ: ತಮಿಳುನಾಡಿನಲ್ಲಿ 13 ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳುನಾಡು ಕರಾವಳಿಯಲ್ಲಿ `ನೀಲಂ~ ಚಂಡಮಾರುತ ಈಗ ದುರ್ಬಲವಾಗಿದ್ದರೂ, 13 ಮಂದಿಯನ್ನು ಬಲಿ ತೆಗೆದುಕೊಂಡಿದೆ.  ಈ ಮಧ್ಯೆ ಬಿರುಗಾಳಿಯಿಂದ ಅಪಾಯಕ್ಕೆ ಸಿಲುಕಿದ್ದ ತೈಲ ಸಾಗಣೆ ನೌಕೆಯ ಇಬ್ಬರು ಸಾವಿಗೀಡಾಗಿ, ಐವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ.ನಾಪತ್ತೆಯಾದವರಲ್ಲಿ ಕರ್ನಾಟಕದ ಬೆಳಗಾವಿ ಮೂಲದ ಜಾಡವರ್ ಋಷಭ್ ಎಂಬುವವರು ಸೇರಿದ್ದಾರೆ. ಮೃತರಾದ ಸಿಬ್ಬಂದಿಯಲ್ಲಿ ಒಬ್ಬರನ್ನು ಪುದುಚೇರಿಯ ಅರುಣ್ ಮೋಹನ್ ಎನ್ನಲಾಗಿದೆ.

ಈ ನಡುವೆ, ಚಂಡಮಾರುತಕ್ಕೆ ತಮಿಳುನಾಡಿನಲ್ಲಿ ಸತ್ತವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಬುಧವಾರ ಇಬ್ಬರು ಸಾವನ್ನಪ್ಪಿದ ವರದಿಯಾಗಿತ್ತು.ಮಿಂಚಿನ ಕಾರ್ಯಾಚರಣೆ: `ಪ್ರತಿಭಾ ಕಾವೇರಿ~ ತೈಲ ಸಾಗಣೆ ಹಡಗಿನಲ್ಲಿ ಒಟ್ಟು 37 ಸಿಬ್ಬಂದಿ ಇದ್ದರು. ಇವರಲ್ಲಿ 30 ಮಂದಿಯನ್ನು `ಭಾರತೀಯ ಕರಾವಳಿ ರಕ್ಷಣಾ ಪಡೆ~ಯವರು (ಐಸಿಜಿ) ಗುರುವಾರ ಮುಂಜಾನೆ ಹೊತ್ತಿಗೆ ರಕ್ಷಿಸಿದರು.ತೈಲ ಸಾಗಣೆ ಹಡಗಿಗೆ ಹಾನಿಯಾಗುವ ಭೀತಿ ಬುಧವಾರ ಸಂಜೆ ಎದುರಾಗಿ ಪರಿಸರ ಕಲುಷಿತಗೊಳ್ಳುವ ಆತಂಕ ಕಾಡುತ್ತಿತ್ತು. ಆದರೆ, ಸದ್ಯಕ್ಕೆ ಈ ಆತಂಕ ದೂರವಾಗಿದೆ.ಬುಧವಾರ ಮಧ್ಯರಾತ್ರಿ ಕಳೆದ ನಂತರ ಹಡಗಿನಲ್ಲಿದ್ದ 37 ಸಿಬ್ಬಂದಿಯಲ್ಲಿ 22 ಮಂದಿ ದಡಕ್ಕೆ ಬಂದು ಸೇರಲು ಮಾಡಿದ ಆತುರದಿಂದಾಗಿ ಒಂದೇ ಜೀವ ರಕ್ಷಕ ದೋಣಿಗೆ ಜಿಗಿದಿದ್ದರು. ಆದರೆ ಜೀವ ರಕ್ಷಕ ದೋಣಿಯೇ ಜೋರು ಗಾಳಿಯಿಂದಾಗಿ ಸಮುದ್ರದಲ್ಲಿ ಮಗುಚಿ ಬಿದ್ದು, ಎಲ್ಲರೂ ಅಪಾಯಕ್ಕೆ ಸಿಲುಕಿದ್ದರು.ಆಗ `ಐಸಿಜಿ~ ಮತ್ತು ನೌಕಾ ದಳದ ಮುಳುಗು (ಡೈವರ್ಸ್‌) ಈಜುಗಾರರು ಕೂಡಲೇ ಧಾವಿಸಿ 17 ಸಿಬ್ಬಂದಿಯನ್ನು ದಡಕ್ಕೆ ಕರೆತರಲು ಯಶಸ್ವಿಯಾದರು.  ಆದರೆ ಇವರಲ್ಲಿ ಇಬ್ಬರು ಸಾವನ್ನಪ್ಪಿದರು. ಉಳಿದ  15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಗುರುವಾರ ಮುಂಜಾನೆ ಹೊತ್ತಿಗೆ ಎರಡು ಹೆಲಿಕಾಪ್ಟರ್‌ಗಳ  ನೆರವನ್ನೂ ಪಡೆದು ಕಾರ್ಯಾಚರಣೆಗೆ ಇಳಿದ `ಐಸಿಜಿ~ ಸಿಬ್ಬಂದಿ ತೈಲ ಸಾಗಣೆ ಹಡಗಿನಲ್ಲೇ ಇದ್ದ ಉಳಿದಿದ್ದ ಕ್ಯಾಪ್ಟನ್ ಸೇರಿದಂತೆ    15 ಮಂದಿಯನ್ನು ಸುರಕ್ಷಿತವಾಗಿ ದಡಕ್ಕೆ  ಕರೆತಂದರು.

ತಮಿಳುನಾಡಿನಲ್ಲಿ ಬೆಳೆ ನಾಶ: `ನೀಲಂ~ ಚಂಡಮಾರುತದ ಕಾರಣ ತಮಿಳುನಾಡಿನಲ್ಲಿ ಕಾವೇರಿ ನದಿಯ ಕಡೆಯ ಅಚ್ಚುಕಟ್ಟು ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಆದ ವರದಿ ಆಗಿದೆ.ನಾಗಪಟ್ಟಣಂ ಜಿಲ್ಲೆಯಲ್ಲಿ 92 ಸಾವಿರ ಹೆಕ್ಟೇರ್ ಪ್ರದೇಶ ಮತ್ತು ಮತ್ತು ತಿರುವರೂರು ಜಿಲ್ಲೆಯ 35 ಸಾವಿರ ಹೆಕ್ಟೇರ್ ಪ್ರದೇದಲ್ಲಿನ ಬತ್ತದ ಬೆಳೆ  ಪ್ರವಾಹಕ್ಕೆ ಸಿಲುಕಿದೆ. ಚಂಡಮಾರುತದ ಹಾವಳಿಗೆ ಗುರಿಯಾಗಿರುವ ಇನ್ನಿತರ ಜಿಲ್ಲೆಗಳಲ್ಲಿನ ಬೆಳೆಹಾನಿ ಬಗ್ಗೆ ಇನ್ನು ಅಂದಾಜು ಮಾಹಿತಿ ಲಭ್ಯವಾಗಿಲ್ಲ.

ಆಂಧ್ರದಲ್ಲಿ ನಾಲ್ವರ ಸಾವು: `ನೀಲಂ~ ಚಂಡಮಾರುತದ ಕಾರಣ ಆಂಧ್ರಪ್ರದೇಶದಲ್ಲಿ ನಾಲ್ವರು ಸಾವನ್ನಪ್ಪಿರುವ ವರದಿಯಾಗಿದೆ. ಕರಾವಳಿ ತೀರದ ಎಲ್ಲಾ ಜಿಲ್ಲೆಗಳಲ್ಲೂ ಜೀನಜೀವನ ಅಸ್ತವ್ಯಸ್ತಗೊಂಡಿದೆ.ವಿದ್ಯುತ್ ಪ್ರವಹಿಸಿ ಮೂವರು ಮೃತರಾದರೆ, ಮತ್ತೊಬ್ಬರು ಗೋಡೆ ಕುಸಿತದ ಕಾರಣ ಸಾವನ್ನಪ್ಪಿದ್ದಾರೆ. ಪ್ರಕಾಶಂ, ನೆಲ್ಲೂರು, ಚಿತ್ತೂರು, ಕೃಷ್ಣಾ ಜಿಲ್ಲೆಗಳಲ್ಲಿ ಅನೇಕ ಕಡೆ ಮನೆಗಳ ಗೋಡೆ ಕುಸಿತ ಉಂಟಾಗಿದೆ.  ಹಲವೆಡೆ ಜಾನುವಾರುಗಳು ಸತ್ತಿವೆ. ಬತ್ತ ಬೆಳೆ ಮತ್ತು ಬಾಳೆ ತೋಟಗಳಿಗೆ ಹಾನಿಯಾಗಿದೆ. ಮುಂದಿನ 12ಗಂಟೆಗಳಲ್ಲಿ ಚಂಡಮಾರುತ ದುರ್ಬಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.