ಮಂಗಳವಾರ, ಮಾರ್ಚ್ 2, 2021
27 °C

ನೃತ್ಯಲೋಕದ ಪ್ರಖರ ತಾರೆ ಅಸ್ತಂಗತ

-ಪ್ರೊ.ಮೈಸೂರು ವಿ.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ನೃತ್ಯಲೋಕದ ಪ್ರಖರ ತಾರೆ ಅಸ್ತಂಗತ

20ನೇ ಶತಮಾನದ ಉತ್ತರಾರ್ಧದಲ್ಲಿ ಭಾರತೀಯ ನೃತ್ಯರಂಗದಲ್ಲಿ ಪ್ರಖರವಾಗಿ ಬೆಳಗಿದವರು ಮೃಣಾಲಿನಿ ಸಾರಾಭಾಯಿ. ಸ್ವಾತಂತ್ರ್ಯೋತ್ತರ  ಭಾರತದಲ್ಲಿ ನೃತ್ಯ ಕಲೆಗೆ ಹೊಸ ಆಯಾಮ ತಂದುಕೊಟ್ಟ ಮೃಣಾಲಿನಿಯವರು ತನಿ(ಸಡಿರ್‌) ಹಾಗೂ ನೃತ್ಯನಾಟಕಗಳಲ್ಲಿ ಪ್ರಖರವಾಗಿ ಬೆಳಗಿದವರು. ನಿಜವಾದ ಅರ್ಥದಲ್ಲಿ ಮೃಣಾಲಿನಿ ಬಹುಶ್ರುತೆ. ಬೆಂಗಳೂರಿನೊಂದಿಗೂ ನಿಕಟ ಸಂಪರ್ಕ ಹೊಂದಿದ್ದವರು.

ಅವರು ಕೇರಳದಲ್ಲಿ ಜನಿಸಿದರೂ, ವಿದ್ಯಾಭ್ಯಾಸ ನಡೆದದ್ದು ಸ್ವಿಟ್ಜರ್‌ಲೆಂಡ್‌ನಲ್ಲಿ. ಭಾರತಕ್ಕೆ ಹಿಂತಿರುಗಿದ ಮೇಲೆ ನಾಲ್ವರು ದಿಗ್ಗಜರಲ್ಲಿ ಭರತನಾಟ್ಯವನ್ನು ತೀವ್ರ ಶ್ರದ್ಧೆಯಿಂದ ಕಲಿತರು. ಕೆಲಕಾಲ ಶಾಂತಿನಿಕೇತನ ಸೇರಿ ರವೀಂದ್ರನಾಥ್ ಟ್ಯಾಗೋರರ ಕೆಲ ನೃತ್ಯನಾಟಕಗಳಲ್ಲೂ ಪಾಲ್ಗೊಂಡರು. ಅಮೆರಿಕದಲ್ಲಿ ಧ್ವನಿ ಸಂಸ್ಕರಣದಲ್ಲಿ ತರಬೇತಿ ಪಡೆದದ್ದಲ್ಲದೇ ಜಾವಾ, ಬಾಲಿ ದ್ವೀಪಗಳಿಗೂ ಭೇಟಿ

ಕೊಟ್ಟು ಆಗ್ನೇಯ ಏಷ್ಯಾದ ನೃತ್ಯಪ್ರಕಾರಗಳನ್ನು ಅಧ್ಯಯನ ಮಾಡಿದರು. ಜಾವಾದಲ್ಲಿ ಪ್ರಿನ್ಸ್ ತೇಜೊ ಕುಸುಮ್ ಅವರಲ್ಲೂ ಮಾರ್ಗದರ್ಶನ ಪಡೆದು ತಮ್ಮ ಜ್ಞಾನಭಂಡಾರ ವೃದ್ಧಿಸಿಕೊಂಡರು.

ಮೃಣಾಲಿನಿ ಬೆಂಗಳೂರಿನೊಡನೆ ನಿಕಟ ಸಂಪರ್ಕ ಹೊಂದಿದ್ದು ಅವರ ಬದುಕಿಗೆ ಹೊಸ ತಿರುವು ನೀಡಿತು.  ನಗರದಲ್ಲಿ ಡ್ಯಾನ್ಸ್ ಸ್ಟುಡಿಯೊ ಹೊಂದಿದ್ದ ರಾಮ್‌ಗೋಪಾಲ್ ಅವರೊಡನೆ  ನರ್ತಿಸತೊಡಗಿ ಭಾರತದಾದ್ಯಂತ ಕಾರ್ಯಕ್ರಮಗಳನ್ನು ನೀಡತೊಡಗಿದರು. ಆ ದಿನಗಳಲ್ಲಿ ಬೆಂಗಳೂರಿನಲ್ಲಿ  (ಡಾ.ಸರ್‌.ಸಿ.ವಿ. ರಾಮನ್ ಅವರ ಕೈಕೆಳಗೆ) ವ್ಯಾಸಂಗ ಮಾಡುತ್ತಿದ್ದ ಡಾ. ವಿಕ್ರಂ ಸಾರಾಭಾಯಿ ಅವರ ಪರಿಚಯವಾಗಿ 1942ರಲ್ಲಿ ಅವರ ಬಾಳ ಸಂಗಾತಿಯಾದರು.

ಮದುವೆಯ ನಂತರ ಅಹಮದಾಬಾದ್‌ ನಿವಾಸಿಯಾಗಿ ‘ದರ್ಪಣ’ ನೃತ್ಯಸಂಸ್ಥೆ ತೆರೆದು ಗುಜರಾತ್‌ ರಾಜ್ಯದಲ್ಲಿ ಭರತನಾಟ್ಯ ಕಲೆಯನ್ನು ವ್ಯಾಪಕವಾಗಿ ಪ್ರಸರಿಸಿದ ಕೀರ್ತಿಗೆ ಭಾಜನರಾದರು. ಗಣ್ಯ ನೃತ್ಯ ಸಂಯೋಜಕಿಯಾಗಿದ್ದ ಶ್ರೀಮತಿ ಸಾರಾಭಾಯಿ ಅವರು ಕೊರವಂಜಿ, ಪಲ್ಲಕ್ಕಿ ಸೇವಾಪ್ರಬಂಧ, ವಲ್ಲಿ ಕಲ್ಯಾಣ, ಗೀತಗೋವಿಂದ, ಟ್ಯಾಗೋರರ ‘ಭಾನುಸಿಂಗರ್‌ ಪದಾವಳಿ’ ಮುಂತಾದ 50 ನೃತ್ಯನಾಟಕಗಳನ್ನು ಬಹುಸುಂದರವಾಗಿ ಸಂಯೋಜಿಸಿದ್ದರು.

ಮೃಣಾಲಿನಿ ಅವರು ಸಂಯೋಜಿಸಿದ್ದ  ‘ಮೆಮೊರಿ, ಸ್ತ್ರೀ ಮತ್ತು ನೀಲ’ ನೃತ್ಯನಾಟಕಗಳು ಅವರ ಸೃಜನಶೀಲತೆಗೆ ಸಾಕ್ಷಿಯಾಗಿ ನಿಂತಿವೆ. ಈ ನೃತ್ಯತಂಡ ಭಾರತದಾದ್ಯಂತವಲ್ಲದೇ ಅಮೆರಿಕ, ಚೀನಾ, ರಷ್ಯಾ, ಜಪಾನ್ ಮುಂತಾದ ದೇಶಗಳಲ್ಲೂ ಪದೇ ಪದೇ ಕಾರ್ಯಕ್ರಮಗಳನ್ನು ನೀಡಿ ಭಾರತೀಯ ಶಾಸ್ತ್ರೀಯ ನೃತ್ಯದ ವ್ಯಾಪ್ತಿಯನ್ನು  ವಿಸ್ತರಿಸುವಲ್ಲಿ ಯಶಸ್ವಿಯಾದವು. ಶಾರೀರಿಕ ಭಾಷೆಯನ್ನು ಅರ್ಥಪೂರ್ಣವಾಗಿ ಬಳಸಿ, ಆಂಗಿಕಾಭಿನಯಕ್ಕೆ  ಹೊಸ ರೂಪ ನೀಡಿ,  ನೃತ್ತ ಮತ್ತು ಮುಖಿಜ ಅಭಿನಯಗಳಿಗೆ ಹೊಸ ಮಜಲನ್ನು ತಂದುಕೊಟ್ಟರು.

ದರ್ಪಣ ಸಂಸ್ಥೆಯಿಂದ ಸುಮಾರು ಹದಿನೆಂಟು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭರತನಾಟ್ಯ ಮತ್ತು ಕಥಕ್ಕಳಿ ನೃತ್ಯ ಪ್ರಕಾರಗಳಲ್ಲಿ ಪದವಿ ಪಡೆದುಕೊಂಡಿದ್ದಾರೆ.ಅವರ ಮಗಳು ಮಲ್ಲಿಕಾ ಸಾರಾಭಾಯಿ ಸಹ ಮುಂಚೂಣಿಯ ನೃತ್ಯ ಕಲಾವಿದೆ. ‘ದರ್ಪಣ’ವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅಲ್ಲದೇ ಮೃಣಾಲಿನಿ ಅವರ ಹಲವು ಶಿಷ್ಯರು   ಪ್ರಪಂಚದ ನಾನಾಕಡೆ ಭಾರತದ ಸಾಂಸ್ಕೃತಿಕ ರಾಯಭಾರಿಗಳಂತೆ ಸೇವೆ ಸಲ್ಲಿಸುತ್ತಿದ್ದಾರೆ. 

‘ಕಲಾವಿದರು ಸ್ವಾಭಿಮಾನಿಗಳೂ ಆಗಿರಬೇಕು’ ಎನ್ನುತ್ತಿದ್ದ ಮೃಣಾಲಿನಿ ಅವರು ಕೆಲವೊಮ್ಮೆ ಪ್ರಭುತ್ವದ ವಿರುದ್ಧವೂ ದನಿ ಎತ್ತಿದ್ದರು. ಸಹಜವಾಗಿಯೇ  ಅನೇಕ ಗೌರವ ಪ್ರಶಸ್ತಿಗಳು ಅವರಿಗೆ ಸಂದಿದ್ದವು.

ಸಾಧಕರಿಗೆ ಸದಾ ಆದರ್ಶಪ್ರಾಯರಾದ ಮೃಣಾಲಿನಿ ಸಾರಾಭಾಯಿ ಅವರ ನಿಧನದಿಂದ ನೃತ್ಯಕ್ಷೇತ್ರ  ಪ್ರತಿಭಾವಂತ ಕಲಾವಿದೆಯನ್ನು ಕಳೆದುಕೊಂಡು ಸೊರಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.