ಶನಿವಾರ, ಜೂನ್ 19, 2021
27 °C

ನೇತಾಡುವ ಜರಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೇತಾಡುವ ಜರಡಿ

ಸಾಗರ ಬಳಿಯ ಮಾವಿನಸರದ ಕೃಷಿಕ ಶ್ರೀಪಾದ ಅವರದ್ದು ದೊಡ್ಡ ಪ್ರಮಾಣದ ಎರೆಗೊಬ್ಬರ ತಯಾರಿಕೆ. ಸುಮಾರು 30 ಅಡಿ ಉದ್ದ, 4 ಅಡಿ ಅಗಲದ 4-5 ಎರೆಗೊಬ್ಬರ ಟ್ಯಾಂಕ್‌ಗಳಿವೆ. ವಾರಕ್ಕೆ 6-7 ಕ್ವಿಂಟಾಲ್ ಉತ್ಪತ್ತಿ. ಮಾರಾಟ ಮಾಡುವಾಗ ಎರೆಗೊಬ್ಬರವನ್ನು ಜರಡಿ ಹಿಡಿದು (ಸಾಣಿಸಿ) ಚೀಲಗಳಲ್ಲಿ ತುಂಬಿಸುತ್ತಾರೆ.ಇದರಿಂದ ಗೊಬ್ಬರ ಕಸಕಡ್ಡಿಯಿಂದ ಮುಕ್ತವಾಗುತ್ತದೆ. ಎರೆಗೊಬ್ಬರದಿಂದ ಎರೆಹುಳುಗಳು ಬೇರ್ಪಡುತ್ತವೆ. ಆದರೆ ಮಾಮೂಲಿ ಜರಡಿಗಳಲ್ಲಿ ಕೆಲಸ ಮತ್ತು ಶ್ರಮ ಜಾಸ್ತಿ. ಮರಳು ಸಾಣಿಸುವ ಜರಡಿಗಳು ಮಳೆಗಾಲದಲ್ಲಿ ಎರೆಗೊಬ್ಬರದ ಕೆಲಸಕ್ಕೆ ಬರುವುದಿಲ್ಲ. ಏಕೆಂದರೆ ಗೊಬ್ಬರದಲ್ಲಿ ತೇವಾಂಶ ಹೆಚ್ಚು ಇರುವುದರಿಂದ ಸುಲಭವಾಗಿ ಕೆಳಕ್ಕೆ ಇಳಿಯುವುದಿಲ್ಲ.ಅದಕ್ಕಾಗಿ ಅವರು ಜರಡಿಯಲ್ಲಿ ಮಾರ್ಪಾಡು ಮಾಡಿದ್ದಾರೆ. ನೇತಾಡುವ ಈ ಜರಡಿಗೆ ಸುತ್ತಲೂ ಕಬ್ಬಿಣದ ಪಟ್ಟಿಗಳಿವೆ. ಇದಕ್ಕೆ ಮರಳು ಸಾಣಿಸುವ ಜರಡಿಗಿಂತ ದೊಡ್ಡ ಕಿಂಡಿಗಳುಳ್ಳ ಜಾಲರಿ (ಮೆಶ್) ಅಳವಡಿಸಿದ್ದಾರೆ (ವಿವಿಧ ಗಾತ್ರದ ಮೆಶ್‌ಗಳು ಮಾರುಕಟ್ಟೆಯಲ್ಲಿ ಲಭ್ಯ; ಬೇಕಾದ ಅಳತೆ ನೋಡಿಕೊಂಡು ತಂದು ಅಳವಡಿಸಿದರಾಯಿತು). ಒಮ್ಮೆ ಜಾಲರಿ ಹಾಳಾದರೆ, ಮತ್ತೊಂದನ್ನು ತಂದು ಕೂರಿಸಬಹುದು. ಇದಕ್ಕೆ ನಟ್‌ಬೋಲ್ಟ್‌ನ ವ್ಯವಸ್ಥೆ ಇದೆ.ಕೆಲಸ ಮಾಡುವಾಗ ಈ ಜರಡಿಯನ್ನು ನಾಲ್ಕೂ ಮೂಲೆಗಳಿಂದ ದಾರ /ಹಗ್ಗದಿಂದ ನೇತುಹಾಕಿಕೊಳ್ಳಬೇಕು. ಇಬ್ಬರು ಕೆಲಸಗಾರರು ಎರಡು ಕಡೆಗಳಲ್ಲಿ ಹಿಡಿದುಕೊಳ್ಳಲು ಅನುಕೂಲವಾಗುವಂತೆ ಎರಡು ಹಿಡಿಕೆಗಳಿವೆ (ಚಿತ್ರ ನೋಡಿ). ಒಬ್ಬರು ಎರೆಗೊಬ್ಬರ ತಂದು ಸುರುವಿದರೆ ಇಬ್ಬರು ಜರಡಿಯನ್ನು ಸುಲಭವಾಗಿ ಅಲ್ಲಾಡಿಸಬಹುದು.

 

ನೇತು ಹಾಕಿರುವುದರಿಂದ ಜರಡಿಯು ಭಾರ ಎನಿಸುವುದಿಲ್ಲ ಮತ್ತು ಮೇಲೆ ಉಳಿಯುವ ಎರೆಹುಳುಗಳನ್ನು ಆರಾಮವಾಗಿ ಇನ್ನೊಂದೆಡೆ ಹಾಕಬಹುದು. ಕೆಲಸ ಮುಗಿದ ನಂತರ ಜರಡಿಯನ್ನು ಗೋಡೆಗೆ ನೇತುಹಾಕಬಹುದು. ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಸಾಣಿಸಬಹುದು.

 

`8-10 ವರ್ಷಗಳಿಂದ ಇದನ್ನು ಬಳಸುತ್ತಿದ್ದೇನೆ. ಎರೆಗೊಬ್ಬರ ತಯಾರಿಸುವವರಿಗೆ ಇದರ ಅಗತ್ಯ ಇದೆ~  ಎನ್ನುತ್ತಾರೆ ಶ್ರೀಪಾದ ರಾವ್. ಮಾಹಿತಿಗೆ 08183-236082

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.