ಶುಕ್ರವಾರ, ಜೂನ್ 25, 2021
29 °C
ಹಮಾಲಿ ಕಾರ್ಮಿಕರ ರಾಜ್ಯ ಮಟ್ಟದ 4ನೇ ಸಮ್ಮೇಳನ

ನೇಮಕಾತಿಯಲ್ಲಿ ಮೀಸಲಾತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಹಮಾಲರು ಎಂದರೆ ಜೀತಕ್ಕೆ ಇರುವವರು ಎಂದು ಭಾವಿಸಲಾಗುತ್ತಿದೆ. ಆದರೆ, ಜನ–ಜೀವನ ಸುಗಮವಾಗಿ ಸಾಗಲು ಹಮಾಲರ ಕೊಡುಗೆ ದೊಡ್ಡದಿದೆ. ಹಮಾಲರ ಜೀವನ ಸುಧಾರಿಸಲು ಅವರ ಮಕ್ಕಳಿಗೆ ಎಪಿಎಂಸಿ, ರೈಲ್ವೆ ಇಲಾಖೆ ನೇಮಕಾತಿಗಳಲ್ಲಿ, ಬಸ್‌ ನಿಲ್ದಾಣಗಳಲ್ಲಿ ಸರಕು ಸಾಗಿಸುವ ಹಮಾಲರ ಮಕ್ಕಳಿಗೆ ಕೆಎಸ್‌ಆರ್‌ಟಿಸಿ ನೇಮಕಾತಿಗಳಲ್ಲಿ ಮೀಸಲಾತಿ ನೀಡುವಂತಾಗಬೇಕು’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯಪಟ್ಟರು.ನಗರದ ಆರ್‌.ಎನ್‌. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜರುಗಿದ ಹಮಾಲಿ ಕಾರ್ಮಿಕರ ರಾಜ್ಯಮಟ್ಟದ 4ನೇ ಸಮ್ಮೇಳನದ ಉದ್ಘಾಟನಾ ಭಾಷಣ ಮಾಡಿದ ಅವರು, ‘ಪರಿಶ್ರಮದ ವೃತ್ತಿಗೆ ಗೌರವ ಕಡಿಮೆ ಇದೆ. ಜ್ಞಾನ ಆಧಾರಿತ ವೃತ್ತಿಗಳಿಗೇ ಹೆಚ್ಚಿನ ಆದ್ಯತೆ ನೀಡಲಾ ಗುತ್ತಿದೆ. ಶ್ರೀಮಂತರಿಗೆ, ರಾಜಕಾರಣಿ ಗಳಿಗೆ, ಬಂಡವಾಳ ಶಾಹಿಗಳಿಗೆ ಮಾತ್ರ ಸೌಲಭ್ಯಗಳು ಸಿಗುತ್ತಿವೆ. ಶ್ರಮಿಕರು ಸೌಲಭ್ಯಗಳು ವಂಚಿತರಾಗು ತ್ತಿದ್ದಾರೆ’ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.‘ಸರ್ಕಾರ ವಿತರಿಸುವ ಆಶ್ರಯ ಮನೆಗಳಲ್ಲಿ ಹಮಾಲರಿಗೂ ಪಾಲು ದೊರಕುವಂತಾಗಬೇಕು. ಕಾರ್ಮಿಕರು ರಾಜ್ಯಮಟ್ಟದಲ್ಲಿ ಸಂಘಟಿತರಾದರೆ ಸೌಲಭ್ಯಗಳು ಸಿಗುತ್ತವೆ’ ಎಂದ ಅವರು, ‘ಹಮಾಲಿ ಕಾರ್ಮಿಕರು ತಮ್ಮ ದೈಹಿಕ ನೋವನ್ನು ಮರೆ ಯಲು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಚಟಗಳ ದಾಸರಾಗದೆ, ಆರೋಗ್ಯದತ್ತ ಗಮನ ಕೊಡಿ. ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಿ’ ಎಂದು ಸಲಹೆ ನೀಡಿದರು.ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ ಮಾತನಾಡಿ, ‘ಹಮಾಲಿ ಕಾರ್ಮಿಕರಿಗೆ ಅವರ ರಟ್ಟೆ ಮತ್ತು ಸೊಂಟವೇ ಆಸ್ತಿ. ದೈಹಿಕವಾಗಿ ದುರ್ಬಲ ರಾದರೆ ಹಮಾಲಿ ಕಾರ್ಮಿಕರದು ನರಕಸದೃಶ ಬದುಕು. ಹೀಗಾಗಿ, ಸರ್ಕಾರ ಹಮಾಲಿ ಕಾರ್ಮಿಕರಿಗೆ ಪಿಂಚಣಿ, ನಿವೇಶನ ಸೇರಿದಂತೆ ಅಗತ್ಯ ಸೌಲಭ್ಯ ನೀಡಬೇಕು’ ಎಂದು ಅವರು ಮನವಿ ಮಾಡಿಕೊಂಡರು.ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌. ಪ್ರಸನ್ನಕುಮಾರ ಮಾತನಾಡಿ, ‘ಹಮಾಲಿ ಕಾರ್ಮಿಕರಿಂದ ಸರ್ಕಾರದ ಆದಾಯ ಸಿಗುತ್ತಿದೆ. ಲಕ್ಷ ಕೋಟಿ ರೂಪಾಯಿಗಳಷ್ಟು ತೆರಿಗೆ ಸಂಗ್ರಹ ವಾಗಿದೆ. ಇದರಲ್ಲಿ ಸ್ವಲ್ಪ ಭಾಗವನ್ನು ಹಮಾಲಿ ಕಾರ್ಮಿಕರ ಕಲ್ಯಾಣಕ್ಕೆ ಸರ್ಕಾರ ವಿನಿಯೋಗಿಸ ಬೇಕು. ‘ಕಾಯಕ ನಿಧಿ’ ಯೋಜನೆ ಅಡಿಯಲ್ಲಿ ತೆಗೆದಿಟ್ಟಿರುವ 1 ಕೋಟಿ ಅನುದಾನಕ್ಕೆ ಬದಲಾಗಿ, 1 ಸಾವಿರ ಕೋಟಿ ರೂಪಾಯಿ ತೆಗೆದಿಡಬೇಕು’ ಎಂದು ಅವರು ವಿನಂತಿಸಿದರು.ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮತ್ತಿತರರು ಮಾತನಾಡಿದರು. ನಿತ್ಯಾನಂದ ಸ್ವಾಮಿ, ಹರೀಶ ನಾಯಕ, ಬಿ.ಇ. ಈಳಗೇರ, ಎಂ.ಬಿ. ಕಟ್ಟಿ, ಕೆ. ಮಹಾಂತೇಶ, ಬಿ.ಎಸ್‌. ಸೊಪ್ಪಿನ ಮೊದಲಾದ ವರು ಹಾಜರಿದ್ದರು. ವೀರೇಶ ಬಡಿಗೇರ ಮತ್ತು ತಂಡದವರು ಪ್ರಸ್ತುತ ಪಡಿಸಿದ ಜಾಗೃತ ಗೀತೆ ಗಮನ ಸೆಳೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.