ಸೋಮವಾರ, ಏಪ್ರಿಲ್ 19, 2021
25 °C

ನ್ಯಾಯಕ್ಕಾಗಿ ಮಾಜಿ ಯೋಧನ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಗಡಿಯಲ್ಲಿ ಶತ್ರುಗಳ ಮೇಲೆ ಕಣ್ಣಿಟ್ಟು ದೇಶ ರಕ್ಷಣೆಗೆ ತೊಡಗಿದ್ದ ಆ ಯೋಧನಿಗೆ ಈಗ ತನ್ನ ಜಮೀನನ್ನು ರಕ್ಷಣೆ ಮಾಡಿಕೊಳ್ಳುವುದೇ ಕಷ್ಟದ ಕೆಲಸವಾಗಿದೆ.ದೇಶ ಕಾಯುವಾಗ ಸುಸ್ತು ಎಂಬ ಪದವೇ ಹತ್ತಿರ ಸುಳಿಯದ ಈ ಮಾಜಿ ಯೋಧನಿಗೆ ಈಗ ಸಂಬಂಧಪಟ್ಟ ಕಚೇರಿಗಳಿಗೆ ಅಲೆದು ಸುಸ್ತಾಗಿದೆ. ಅಧಿಕಾರಿಗಳ ಧೋರಣೆಗೆ ಬೇಸತ್ತಿರುವ ಈ ಮಾಜಿ ಯೋಧ ತನಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮಂದೆ ಧರಣಿ ನಡೆಸಿದ್ದಾನೆ.ಮೂಲತಃ ಗಂಗಾವತಿ ತಾಲ್ಲೂಕಿನ ಕಾರಟಗಿ ಗ್ರಾಮದ ಮರಿಸ್ವಾಮಿ ಶಿವರುದ್ರಪ್ಪ ಎಂಬ ಯೋಧ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಗ್ರಾಮದಲ್ಲಿ 3 ಎಕರೆ 16 ಗುಂಟೆ ಜಮೀನು ಹೊಂದಿರುವ ಮರಿಸ್ವಾಮಿ, ನಕ್ಷೆ ಪ್ರಕಾರ ತನ್ನ ಹೊಲವನ್ನು ಅಳತೆ ಮಾಡಬೇಕು ಹಾಗೂ ಆಕಾರಬಂದ ನೀಡುವಂತೆ ಮನವಿ ಸಲ್ಲಿಸಿದ್ದಾರೆ.ಆದರೆ, ಹಲವಾರು ಬಾರಿ ಸಂಬಂಧಪಟ್ಟ ಕಚೇರಿಗಳಿಗೆ ಅಲೆದರೂ ತಮ್ಮ ಕೆಲಸವಾಗಿಲ್ಲ. ಹೀಗಾಗಿ ಜಿಲ್ಲಾಡಳಿತ ಭವನದ ಮುಂದೆ ಧರಣಿ ನಡೆಸುತ್ತಿರುವುದಾಗಿ ಹೇಳಿದರು.ಗಂಗಾವತಿ ತಹಸೀಲ್ದಾರ ಕಚೇರಿ ಮತ್ತು ಭೂ ಮಾಪನ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಅಳತೆ ಮಾಡಿಲ್ಲ. ಏನಾದರೂ ಸುಳ್ಳು ಹೇಳಿ ಅಳತೆ ಕಾರ್ಯವನ್ನು ಮುಂದೂಡುತ್ತಲೇ ಇದ್ದಾರೆ ಎಂದು ಮರಿಸ್ವಾಮಿ ಮನವಿ ಪತ್ರದಲ್ಲಿ ವಿವರಿಸಿದ್ದಾರೆ.ಈ ಅಧಿಕಾರಿಗಳು ನೀಡಿರುವ ವರದಿಯನ್ನು ಆಧರಿಸಿ ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕರು ನೀಡಿರುವ ದಾಖಲೆಗಳ ಪ್ರಕಾರ ನನ್ನ ಜಮೀನು 3 ಎಕರೆ 16 ಗುಂಟೆ ಬದಲಾಗಿ 2 ಎಕರೆ 34 ಗುಂಟೆ ಎಂದಾಗಿದೆ. ಇದರ ವಿರುದ್ಧ 2009ರ ಜೂ. 20ರಂದು ಜಿಲ್ಲಾಧಿಕಾರಿ ಕಚೇರಿಗೆ ಮೇಲ್ಮನವಿಯನ್ನು ಸಲ್ಲಿಸಿದ್ದರೂ ಈ ವರೆಗೆ ಯಾವುದೇ ಮಾಹಿತಿ, ಮರು ಅಳತೆಗಾಗಿ ನೊಟೀಸ್ ಬಂದಿಲ್ಲ ಎಂದು ವಿವರಿಸಿದ್ದಾರೆ.ಈಗಲಾದರೂ ತಮ್ಮ ಜಮೀನಿನ ಅಳತೆಯನ್ನು ಸಮರ್ಪಕವಾಗಿ ಮಾಡಿ, ದಾಖಲೆಗಳನ್ನು ನೀಡಬೇಕು ಎಂದೂ ಮನವಿ ಮಾಡಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.