ಶನಿವಾರ, ಮೇ 28, 2022
25 °C

ನ್ಯಾಯಕ್ಕಾಗಿ ಹೋರಾಟ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಜಾಗತೀಕರಣ, ಉದಾರೀಕಣ ಮತ್ತು ಖಾಸಗೀಕರಣದಿಂದ ಕಾರ್ಮಿಕರು ಕೆಲಸ ಕಳೆದುಕೊಳ್ಳುವುದರ ಜೊತೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಉದ್ಯೋಗ ಭದ್ರತೆ ಇಲ್ಲದೇ ನರಳುತ್ತಿರುವ ಕಾರ್ಮಿಕರು ಸಂಘಟನಾತ್ಮಕವಾಗಿ ಹೋರಾಟ ಮಾಡದೇ ಬೇರೆ ಮಾರ್ಗವಿಲ್ಲ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದರು. ಸಿಐಟಿಯು ಸಂಘಟನೆ ಸದಸ್ಯರಿಗಾಗಿ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಅಧ್ಯಯನ ಶಿಬಿರದಲ್ಲಿ ಮಾತನಾಡಿ, ಈಚಿನ ದಿನಗಳಲ್ಲಿ ಕಾಯಂ ಉದ್ಯೋಗ ಎಂಬುದು ಇಲ್ಲ. ಎಲ್ಲೆಡೆ ಗುತ್ತಿಗೆ ಪದ್ಧತಿ ಜಾರಿಗೆ ಬಂದಿದ್ದು, ಕಾರ್ಮಿಕರು ಯಾವುದೇ ಸಂದರ್ಭದಲ್ಲಿ ಕೆಲಸ ಕಳೆದುಕೊಳ್ಳಬಹುದು ಎಂದರು.ಉದ್ಯೋಗ ಅವಕಾಶ ಕಲ್ಪಿಸಬೇಕಿದ್ದ ಸರ್ಕಾರಗಳು ಖಾಸಗೀಕರಣಕ್ಕೆ ಆದ್ಯತೆ ನೀಡುತ್ತಿವೆ. ಗ್ರಾಮೀಣ ಯುವಕರಿಗೆ ಮತ್ತು ಮಹಿಳೆಯರಿಗೆ ಉದ್ಯೋಗ ನೀಡಬೇಕಿದ್ದ ಸರ್ಕಾರ ಬಂಡವಾಳ ಹೂಡಲು ವಿದೇಶಿ ಸಂಸ್ಥೆಗಳನ್ನು ಆಹ್ವಾನಿಸುತ್ತಿದೆ. ಕೈಗಾರಿಕೆಗಳ ಸ್ಥಾಪನೆ ಮತ್ತು ಕೃಷಿ ಕ್ಷೇತ್ರಗಳಿಗೆ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಉದ್ಯೋಗ ಸೃಷ್ಟಿಸಬೇಕಿದ್ದ ಸರ್ಕಾರ ತನ್ನ ಜವಾಬ್ದಾರಿಗಳನ್ನು ಖಾಸಗಿಯವರಿಗೆ ಹಸ್ತಾಂತರಿಸುತ್ತಿದೆ’ ಎಂದು ಅವರು ಆರೋಪಿಸಿದರು.ಈ ಎಲ್ಲದರ ಪರಿಣಾಮ ಕಾರ್ಮಿಕರು ಅದರಲ್ಲೂ ಅಸಂಘಟಿತ ವಲಯದ ಕಾರ್ಮಿಕರು ಆತಂಕದ ಸ್ಥಿತಿಯಲ್ಲಿದ್ದಾರೆ. ನ್ಯಾಯ ಮತ್ತು ಹಕ್ಕು ಕೇಳಲು ಸೂಕ್ತ ವೇದಿಕೆ ಮತ್ತು ಅವಕಾಶ ಸಿಗದ ಕಾರಣ ಕಾರ್ಮಿಕರು ಚಿಂತೆಗೀಡಾಗಿದ್ದಾರೆ. ಅಸಂಘಟಿತ ವಲಯದ ಕಾರ್ಮಿಕರು ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಒಂದುಗೂಡಿ ಹೋರಾಟ ಮಾಡದ ಹೊರತು, ನ್ಯಾಯ ಸಿಗುವುದಿಲ್ಲ ಎಂದು ರಾಮರೆಡ್ಡಿ ಹೇಳಿದರು.ಅಭಿವೃದ್ಧಿ ಹೆಸರಿನಲ್ಲಿ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆಯುವ ಸರ್ಕಾರ ಸಾರ್ವಜನಿಕರ ಮೇಲೆ ಸಾಲದ ಹೊರೆ ಹಾಕುತ್ತಿದೆ. ಬಡ್ಡಿ ಸಹಿತ ಸಾಲದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, ಮಧ್ಯಮ ವರ್ಗದವರು ಮತ್ತು ಬಡವರ ಮೇಲೆ ತೆರಿಗೆಯೂ ಹೆಚ್ಚುತ್ತಿದೆ. ಈ ಅಂಶಗಳನ್ನು ಮುಚ್ಚಿಟ್ಟ ಸರ್ಕಾರ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಹೇಳಿಕೆ ನೀಡಿ ಜನರನ್ನು ಮರಳು ಮಾಡುತ್ತಿದೆ ಎಂದು ಆರೋಪಿಸಿದರು.ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಎಸ್.ವರಲಕ್ಷ್ಮಿ ಮಾತನಾಡಿ, ‘ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಬಿಸಿಯೂಟದ ಕಾರ್ಮಿಕರು, ಗ್ರಾ.ಪಂ. ನೌಕರರು ಎಲ್ಲರೂ ಬೇರೆ ಬೇರೆ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವರು ಪರಸ್ಪರ ಸಹಕರಿಸುವ ಮೂಲಕ ಹೋರಾಟಕ್ಕೆ ಬಲ ತುಂಬಬಹುದು’ ಎಂದರು. ಸಿಐಟಿಯು ಮುಖಂಡರಾದ ದೇವಿಲಕ್ಷ್ಮಮ್ಮ, ಬಿ.ಎನ್.ಮುನಿಕೃಷ್ಣಪ್ಪ, ಎಂ.ಪಿ.ಮುನಿವೆಂಕಟಪ್ಪ, ಸಿದ್ದಗಂಗಪ್ಪ, ಮಧುಲತಾ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾ.ಪಂ. ನೌಕರರು ಮತ್ತು ಬಿಸಿಯೂಟದ ನೌಕರರು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.