ಗುರುವಾರ , ಜೂನ್ 24, 2021
22 °C

ನ್ಯಾಯಾಂಗ ತನಿಖೆ: ಸಿಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳು, ಪೊಲೀಸರು ಹಾಗೂ ಸಾರ್ವಜನಿಕರ ಮೇಲೆ ವಕೀಲರು ಹಲ್ಲೆ ನಡೆಸಿದ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಶುಕ್ರವಾರ ಆದೇಶಿಸಿದ್ದಾರೆ.ಗೃಹ ಸಚಿವ ಆರ್.ಅಶೋಕ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಅವರು, ನಿವೃತ್ತ ನ್ಯಾಯಮೂರ್ತಿಗಳಿಂದ ಆದಷ್ಟು ಬೇಗ ತನಿಖೆ ನಡೆಸಲಾಗುವುದು ಎಂದರು.ಘಟನೆಯಲ್ಲಿ ಗಾಯಗೊಂಡಿರುವವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಘಟನೆಯಿಂದ ಆಗಿರುವ ಹಾನಿಯ ಬಗ್ಗೆಯೂ ಅಂದಾಜು ಮಾಡಲಾಗುವುದು. ಶನಿವಾರವೂ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ ಎಂದು ಅವರು ಹೇಳಿದರು.ಘಟನೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಸಮಾಜಘಾತುಕ ಶಕ್ತಿಗಳಿಗೆ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.`ಹಲ್ಲೆ ನಡೆಸಿದವರು ಯಾರು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಆದರೂ ಸಮಗ್ರವಾಗಿ ತನಿಖೆಯಾಗಬೇಕು. ಇದಕ್ಕೆ ಕಾರಣ ಏನು ಎಂಬುದು ಗೊತ್ತಾಗಬೇಕು ಎಂಬ ದೃಷ್ಟಿಯಿಂದ ತನಿಖೆಗೆ ಆದೇಶಿಸಲಾಗಿದೆ. ಆದಷ್ಟು ಬೇಗ ನ್ಯಾಯಮೂರ್ತಿಯ ಹೆಸರನ್ನು ಪ್ರಕಟಿಸಲಾಗುವುದು~ ಎಂದರು.ಅಹಿತಕರ ಘಟನೆಗಳು ನಡೆಯುತ್ತಿರುವುದು ಗೊತ್ತಾದ ತಕ್ಷಣ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವಕೀಲರು ಮಾಧ್ಯಮದವರ ಮೇಲೆ ಹಲ್ಲೆ ನಡೆಸಿರುವುದು ಖಂಡನಾರ್ಹ. ಇಂತಹ ಘಟನೆಗಳು ಮರುಕಳಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. `ಕಾನೂನು ಕೈಗೆತ್ತಿಕೊಂಡವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಕೋರ್ಟ್ ಆವರಣದಲ್ಲಿನ ಪರಿಸ್ಥಿತಿ ಕುರಿತು ಪ್ರತಿ ಅರ್ಧ ಗಂಟೆಗೊಮ್ಮೆ ಮಾಹಿತಿ ಪಡೆದಿದ್ದೇನೆ. ವಕೀಲರು ಈ ಹಿಂದೆ ಕಾನೂನು ಕೈಗೆತ್ತಿಕೊಂಡಾಗ ಸರ್ಕಾರ ಕೊಂಚ ಸಂಯಮ ತೋರಿತ್ತು. ಆದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಹಿಂಜರಿದಿಲ್ಲ~ ಎಂದರು.ಶುಕ್ರವಾರ ನಡೆದ ಘಟನೆಗಳಲ್ಲಿ ತಪ್ಪೆಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ಲೋಪ ಎಸಗಿದ್ದರೆ ಅವರ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ನಗರ ಪೊಲೀಸ್ ಕಮಿಷನರ್ ಅವರು ವಿಫಲವಾದರು ಎಂಬ ದೂರುಗಳ ಹಿನ್ನೆಲೆಯಲ್ಲಿ ಅವರ ಬಗ್ಗೆಯೂ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಗೊತ್ತಾಗಿದೆ.ಘಟನೆ ಹಿನ್ನೆಲೆಯಲ್ಲಿ ಸದಾನಂದ ಗೌಡ ಅವರು ಗೃಹ ಕಚೇರಿ `ಕೃಷ್ಣಾ~ದಲ್ಲಿ ಎರಡು ಬಾರಿ ತುರ್ತು ಸಭೆ ನಡೆಸಿದರು. ಗೃಹ ಸಚಿವ ಅಶೋಕ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಸಭೆಯಲ್ಲಿ ಭಾಗವಹಿಸಿದ್ದರು. ವಿವಿಧ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು ಕೋರ್ಟ್ ಆವರಣದಲ್ಲಿ ನಡೆದ ಘಟನೆಗಳ ಕುರಿತು ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.