ಬುಧವಾರ, ಮೇ 19, 2021
26 °C
ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ್ ವಿಷಾದ

ನ್ಯಾಯಾಲಯದ ಹೊರಗೆ ಹೆಚ್ಚು ಪ್ರಕರಣ ಇತ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ತೀರ್ಪು ಪ್ರಕಟಿಸುವುದು ವಿಳಂಬವಾಗುತ್ತಿರುವುದರಿಂದ ಬಹುತೇಕ ಪ್ರಕರಣಗಳು ಸಂವಿಧಾನಬಾಹಿರವಾಗಿ ನ್ಯಾಯಾಲಯದ ಹೊರಗೆ ತೀರ್ಮಾನವಾಗುತ್ತಿವೆ ಎಂದು ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ್ ವಿಷಾದ ವ್ಯಕ್ತಪಡಿಸಿದರು.ರಾಜ್ಯ ವಕೀಲರ ಪರಿಷತ್ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ವಕೀಲರ ಭವನದಲ್ಲಿ ನಡೆದ ಕಾನೂನು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಮನುಷ್ಯನ ಆಸೆ, ದುರಾಸೆಯಿಂದಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ತೀರ್ಪು ಬರುವುದು ಸಹ ವಿಳಂಬವಾಗುತ್ತಿದೆ. ಶೇ 25ರಷ್ಟು ಪ್ರಕರಣಗಳು ಮಾತ್ರ ನ್ಯಾಯಾಲಯದ ಒಳಗೆ ಇತ್ಯರ್ಥವಾಗುತ್ತಿದ್ದು, ಉಳಿದಂತೆ ಶೇ 75 ರಷ್ಟು ಪ್ರಕರಣಗಳು ನ್ಯಾಯಾಲಯದ ಹೊರಗೆ ಇತ್ಯರ್ಥವಾಗುತ್ತಿವೆ.

 

ವಿಶೇಷವಾಗಿ ಪೊಲೀಸ್ ಠಾಣೆಗಳಲ್ಲಿ ಸಂವಿಧಾನ ಬಾಹಿರವಾಗಿ ಇತ್ಯರ್ಥವಾಗುತ್ತಿವೆ. ಈ ಬಗ್ಗೆ ನ್ಯಾಯಾಧೀಶರು ಹಾಗೂ ವಕೀಲರು ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಎಂದರು.ವಕೀಲರು ಕಾನೂನಿನ ತಿಳಿವಳಿಕೆ ಮತ್ತು ಭಾಷೆಯ ಮೇಲೆ ಹಿಡಿತ ಹೊಂದಿರಬೇಕು. ಆಗ ಮಾತ್ರ ಉತ್ತಮವಾಗಿ ವಾದ ಮಾಡುವ ಮೂಲಕ ಕಕ್ಷಿದಾರರಿಗೆ ಸೂಕ್ತ ನ್ಯಾಯ ಕೊಡಿಸಲು ಸಾಧ್ಯ. ವಕೀಲರು ಮತ್ತು ನ್ಯಾಯಾಧೀಶರಿಗೆ ಕಾನೂನಿನ ಬಗ್ಗೆ ಆಳವಾದ ಅಧ್ಯಯನ ಅಗತ್ಯವಿದೆ ಎಂದು ಸಲಹೆ ನೀಡಿದರು.ಭೋಪಾಲ್ ಅನಿಲ ದುರಂತದಲ್ಲಿ ವಕೀಲರು ಸರಿಯಾದ ರೀತಿಯಲ್ಲಿ ವಾದ ಮಂಡಿಸಿದ್ದರೆ ನೊಂದವರಿಗೆ ನ್ಯಾಯ ಒದಗಿಸಬಹುದಾಗಿತ್ತು. ಈ ದುರಂತ ಕುರಿತಂತೆ ಸಿಬಿಐ ಸಮರ್ಪಕವಾಗಿ ಆರೋಪಪಟ್ಟಿ ಸಲ್ಲಿಸದ ಕಾರಣ ತೀರ್ಪು ವ್ಯತಿರಿಕ್ತವಾಗಿ ಬಂತು.ಇಲ್ಲಿ ವಾದ ಮಂಡಿಸುವವರು ಸಹ ಬೇರೆ ಸೆಕ್ಷನ್‌ಗಳನ್ನು ಬಳಸಿದ್ದರೆ, ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿತ್ತು. ಸತ್ತವರನ್ನು ಬಿಟ್ಟು ದುರಂತದಿಂದ ಸಾಕಷ್ಟು ನಷ್ಟ ಅನುಭವಿಸಿ, ಅಂಗವಿಕಲರಾದವರ ಪರವಾಗಿ ಯಾದರೂ ವಾದ ಮಾಡಬೇಕಿತ್ತು.ಯುವ ವಕೀಲರಲ್ಲಿ ಸಿವಿಲ್ ಪ್ರಕರಣಗಳತ್ತ ಆಸಕ್ತಿ ಕಡಿಮೆಯಾಗುತ್ತಿದೆ. ಸಿವಿಲ್ ವ್ಯಾಜ್ಯಗಳು ಮುಖ್ಯವಾಗಿವೆ. ಸಿವಿಲ್ ಪ್ರಕರಣಗಳು ಜಾಸ್ತಿಯಾದಂತೆ `ಸಿವಿಲೈಜೇಷನ್' ಹೆಚ್ಚಾಗುತ್ತದೆ.  ಕ್ರಿಮಿನಲ್ ಪ್ರಕರಣಗಳು ಹೆಚ್ಚಾದಂತೆ `ಕ್ರೈಂ' ಹೆಚ್ಚುತ್ತದೆ ಎನ್ನುವ ಮಾತೊಂದಿದೆ. ಈ ಹಿನ್ನೆಲೆಯಲ್ಲಿ ಸಿವಿಲ್ ದಾವೆ ಹೂಡಲು ಬರುವವರು ಜಗಳ ಮಾಡಲು ಬರುವವರು ಎಂದು ಭಾವಿಸದೆ, ಅವರ ಹಕ್ಕು ಕೇಳಲು ಬಂದಿದ್ದಾರೆ ಎನ್ನುವ ರೀತಿಯಲ್ಲಿ ಯೋಚಿಸಬೇಕು ಎಂದು ತಿಳಿಸಿದರು.ರಾಜ್ಯ ವಕೀಲರ ಪರಿಷತ್ ಸದಸ್ಯೆ  ಸಂಧ್ಯಾ ಮಾದಿನೂರು ಮಾತನಾಡಿ, `ಕಾನೂನಿನ ಪಾಠಗಳನ್ನು ಸರಿಯಾಗಿ ಕಲಿತುಕೊಂಡರೆ, ನ್ಯಾಯಾಧೀಶರ ಎದುರು ವಕೀಲರು ಸಮರ್ಪಕವಾಗಿ ದಿಟ್ಟತನದಿಂದ ವಾದ ಮಂಡಿಸಬಹುದು. ಕೆಲ ವಿಚಾರಗಳಲ್ಲಿ ಕೆಲ ಕಾಯ್ದೆಗಳು ಸಾಕಷ್ಟು ಸಹಾಯಕ್ಕೆ ಬರುತ್ತವೆ. ಆದರೆ, ಅವು ನಮಗೆ ಗೊತ್ತಿಲ್ಲದಿದ್ದಾಗ ವಿಫಲರಾಗುತ್ತೇವೆ' ಎಂದರು.`ವಕೀಲರಿಗೆ `ಲಾ', `ಲಾಂಗ್ವೇಜ್', `ಲರ್ನಿಂಗ್' ಹಾಗೂ `ಲಿಸನಿಂಗ್' ಮುಖ್ಯವಾಗಿದ್ದು, ನಾವು ವಾದ ಮಂಡಿಸಿದ ನಂತರ ತೀರ್ಪು ಹಾಗೂ ತೀರ್ಪಿನ ಪ್ರತಿಯನ್ನು ನೋಡಿ, ವಾದ ಮಂಡಿಸಿದ ವಿಷಯಗಳು ತೀರ್ಪಿನಲ್ಲಿವೆಯೇ' ಎನ್ನುವುದನ್ನು ಪರೀಕ್ಷಿಸಿಕೊಳ್ಳಬೇಕು ಎಂದು ಹೇಳಿದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನಿಪುರಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಜಿ.ಕೃಷ್ಣಮೂರ್ತಿ, ಉಪಾಧ್ಯಕ್ಷ ಶಿವುಯಾದವ್, ಕಾರ್ಯದರ್ಶಿ ವಿ.ಅಶೋಕ್, ಸಹ ಕಾರ್ಯದರ್ಶಿ ಇ.ಶಿವಕುಮಾರ್, ಜಿ.ಶ್ರೀಧರ ಮೂರ್ತಿ, ಪರಿಷತ್ ಸದಸ್ಯರಾದ ಸಿ.ಎಂ.ಜಗದೀಶ್ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.