ಶನಿವಾರ, ಜನವರಿ 18, 2020
19 °C
ಉಪ್ಪಿನಂಗಡಿ ಅಂಬೇಡ್ಕರ್ ಭವನದ ದುರ್ಬಳಕೆ -ಆರೋಪ

ನ್ಯಾಯ ಸಿಗದಿದ್ದರೆ ಕ್ರಿಮಿನಲ್ ಮೊಕದ್ದಮೆ: -ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ಉಪ್ಪಿನಂಗಡಿಯ ಅಂಬೇಡ್ಕರ್ ಭವನವನ್ನು ಕಾಲೇಜಿನ ವಾಚನಾಲಯ ಮತ್ತಿತರ ಕಾರ್ಯಕ್ರಮಗಳಿಗೆ ಉಪಯೋಗಿಸುತ್ತಿದ್ದಾರೆ. ಇದರಿಂದ ದಲಿತ ಜನಾಂಗದ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ತೊಂದರೆಯಾ­ಗುತ್ತಿದೆ. 15 ದಿವಸದೊಳಗೆ ಈ ಅಕ್ರಮ ವ್ಯವಸ್ಥೆಯನ್ನು ತೆರವುಗೊಳಿಸದಿದ್ದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ದಲಿತ ಮುಖಂಡ ಸೇಸಪ್ಪ ನೆಕ್ಕಿಲು ಅವರು ಎಚ್ಚರಿಸಿದರು.ಪುತ್ತೂರು ತಾಲ್ಲೂಕು ಪಂಚಾಯಿತಿ ಸಭಾಂಗಣ­ದಲ್ಲಿ ಗುರುವಾರ ತಹಶೀಲ್ದಾರ್ ಎಂ.ಟಿ. ಕುಳ್ಳೇ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕ್ಷೇಮಾಭಿವೃದ್ಧಿ ಸಭೆಯಲ್ಲಿ ಈ ಆರೋಪ ಮತ್ತು ಆಕ್ರೋಶ ವ್ಯಕ್ತ­ವಾಯಿತು. ಮೇಲಧಿಕಾರಿಗಳಿಗೆ ತಿಳಿಸಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಸಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು..ವಿದ್ಯುತ್ ಬಿಲ್ ಗೊಂದಲದ ಬಗ್ಗೆ ಸ್ಪಷ್ಟನೆ: ಗ್ರಾಮೀಣ ಭಾಗದಲ್ಲಿರುವ ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಯೋಜನೆಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳು ವಿದ್ಯುತ್ ಬಿಲ್‌  ಪಾವತಿಸುವ ಬಗ್ಗೆ ಗೊಂದಲದಲ್ಲಿದ್ದಾರೆ. ಬಿಲ್‌ ಸಂಗ್ರಾಹಕರು ಸೂಕ್ತ ಮಾಹಿತಿಯನ್ನು ನೀಡುತ್ತಿಲ್ಲ ಎಂದು ದಲಿತ ಸಂಘಟನೆಯ ಮುಖಂಡ ಕೂಸಪ್ಪ ಅವರು ದೂರಿದರು. ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ಫಲಾನುಭವಿಗಳು ತಿಂಗಳಲ್ಲಿ 18 ಯೂನಿಟ್‌ಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಬಿಲ್‌ ಪಾವತಿಸಬೇಕು ಎಂದು ಮೆಸ್ಕಾಂ ಅಧಿಕಾರಿ ರೋಹಿತ್ ಅವರು ಸ್ಪಷ್ಟಪಡಿಸಿದರು.ದಲಿತರಿಗೆ ನ್ಯಾಯ ಸಿಗುತ್ತಿಲ್ಲ-: ದಲಿತ ಸಂಘಟನೆ ಮುಖಂಡ ಕೂಸಪ್ಪ ಎಂಬವರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ದುರ್ಬಲ ಕಾಯಿದೆ ದಾಖಲಿಸಿ ಆರೋಪಿಗೆ ಜಾಮೀನು ನೀಡಲಾಗಿದೆ. ಇದರಿಂದ ಆರೋಪಿಗೆ ಮತ್ತಷ್ಟು ಪ್ರೇರಣೆ ನೀಡಿದಂತಾಗಿದೆ. ಸಂಪ್ಯ ಠಾಣೆಯ ಎಸ್.ಐ ಅವರು ಸರಿಯಾದ ತನಿಖೆ ನಡೆಸದೆ `ಬಿ’ ಅಂತಿಮ ವರದಿಯನ್ನು ಸಲ್ಲಿಸುವ ಮೂಲಕ  ದಲಿತರಿಗೆ ಅನ್ಯಾಯ ಎಸಗಿದ್ದಾರೆ ಎಂದು ದಲಿತ ಮುಖಂಡ ಆನಂದ ಮಿತ್ತಬೈಲು ಆರೋಪಿಸಿದರು.

ಪುತ್ತೂರು ನಗರ ಠಾಣಾದಿಕಾರಿ ಬಿ.ಕೆ ಮಂಜಯ್ಯ ಅವರು  ಈ ಪ್ರಕರಣ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಬರುತ್ತದೆ. ಸಂಪ್ಯ ಎಸ್.ಐ ಅವರು ಮಾಡಿದ ತನಿಖೆ ಸರಿ ಇಲ್ಲದಿದ್ದರೆ ನ್ಯಾಯಾ­ಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ ಎಂದರು. ದಲಿತ ಮುಖಂಡ ಗುರುವಪ್ಪ ಅವರು ಮಾತನಾಡಿ  ಕಡಬ ಠಾಣಾ ವ್ಯಾಪ್ತಿಯಲ್ಲಿ ದಲಿತರನ್ನು ಕೆಲವೊಂದು ಸಂಘಟನೆಯ ಕಾರ್ಯಕರ್ತರು ಅಸ್ತ್ರವನ್ನಾಗಿ ಮಾಡಿಕೊಂಡು ಜಾತಿನಿಂದನೆ ಮಾಡುತ್ತಿದ್ದಾರೆ.

ಈ  ಬಗ್ಗೆ ಕಡಬ ಠಾಣೆಗೆ ದೂರು ನೀಡಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಕಾನೂನನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ದೂರಿದರು.  ಕಡಬ ಠಾಣಾ ವ್ಯಾಪ್ತಿಯ ಎಸ್.ಐ ಅವರನ್ನು ಕರೆದು ಮಾತಾಡಲು ಹೇಳುತ್ತೇನೆ ಎಂದು ತಹಶೀಲ್ದಾರ್ ಅವರು ತಿಳಿಸಿದರು.  ದಿನಗೂಲಿ ನೌಕರರಿಗೆ ಅನ್ಯಾಯ: ಆರೋಗ್ಯ ಇಲಾಖೆಯಲ್ಲಿ ಖಾಸಗಿ ನೌಕರಿ ಸಂಸ್ಥೆ ವತಿಯಿಂದ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿ­ಸುತ್ತಿರುವ ದಿನಗೂಲಿ ನೌಕರರಿಗೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ  ದುಡಿಯುತ್ತಿರುವ ನೌಕರರಿಗೆ ವೇತನದಲ್ಲಿ ಭವಿಷ್ಯನಿಧಿ ಕಡಿತಗೊಳಿಸಿ ಖಾತೆಗೂ ಜಮೆ ಮಾಡದೆ ಮೋಸ ಮಾಡಲಾ­ಗುತ್ತಿದೆ. ಸಕಾಲದಲ್ಲಿ ಸಂಬಳ ನೀಡುತ್ತಿಲ್ಲ ಎಂದು ದೂರು ಕೇಳಿಸಿತು. ಈ ಬಗ್ಗೆ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡಿ ಪರಿಶೀಲಿಸಲಾಗುವುದು  ಎಂದು ತಹಶೀಲ್ದಾರ್ ಉತ್ತರಿಸಿದರು.ಮಿನಿವಿಧಾನ ಸೌಧದಲ್ಲಿ ಅಂಬೇಡ್ಕರ್ ಪ್ರತಿಮೆ­ಯನ್ನು ಇರಿಸಬೇಕೆಂದು ದಲಿತ ಮುಖಂಡರು ಆಗ್ರಹಿಸಿದರು. ಮಿನಿವಿಧಾನಸೌಧ ಕಟ್ಟಡ ಕಾಮ­ಗಾರಿ ಪೂರ್ಣಗೊಂಡ ಕೂಡಲೇ ಪ್ರತಿಮೆಗೆ ಸೂಕ್ತ ಸ್ಥಳ ಪರಿಶೀಲಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸ­ಲಾಗುವುದು ಎಂದು ತಹಶೀಲ್ದಾರ್ ಹೇಳಿದರು.ಹಿರೇಬಂಡಾಡಿ ವ್ಯಾಪ್ತಿಯ  8 ಅಂಗನವಾಡಿ ಕೇಂದ್ರಗಳ ಪೈಕಿ ದಲಿತ ಮಹಿಳೆಗೆ ಕಾರ್ಯಕರ್ತೆ ಹುದ್ದೆಗೆ ಅವಕಾಶ ನೀಡಿಲ್ಲ ಎಂದು ದೂರು ಕೇಳಿಸಿತು. ತಾಲ್ಲೂಕು ಪಂಚಾಯಿತಿ ಕಾರ್ಯ­ನಿರ್ವಹಣಾಧಿಕಾರಿ ವಿಜಯ ಗೌಡ, ಸಮಾಜ ಕಲ್ಯಾಣಾಧಿಕಾರಿ ದಯಾನಂದ್ ಪಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)