ಭಾನುವಾರ, ಏಪ್ರಿಲ್ 11, 2021
32 °C

ನ್ಯಾ.ಸದಾಶಿವ ಆಯೋಗ ವರದಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಅವೈಜ್ಞಾನಿಕವಾದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಭೋವಿ (ವಡ್ಡರ) ಸಂಘದ ಜಿಲ್ಲಾ ಘಟಕ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.ಇಲ್ಲಿನ ಪುರಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಿದ ಭೋವಿ ಸಮಾಜ ಬಾಂಧವರು, ನಗರದ ಹುಕ್ಕೇರಿಮಠ, ಎಂ.ಜಿ.ರಸ್ತೆ, ಜೆ.ಪಿ.ವೃತ್ತ, ಬಸ್ ನಿಲ್ದಾಣ ಎದುರಿನ ರಸ್ತೆ ಮೂಲಕ ಹೊಸಮನಿ ಸಿದ್ಧಪ್ಪ ವೃತ್ತಕ್ಕೆ ಆಗಮಿಸಿ ಕೆಲ ಹೊತ್ತು ರಸ್ತೆ ತಡೆ ನಡೆಸಿದರು.ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯು ಪರಿಶಿಷ್ಟ ಜಾತಿಯ ಜನರಲ್ಲಿಯೇ ಜಾತಿ ವಿಂಗಡಣೆ ಮಾಡುವ ಹುನ್ನಾರ ಹೊಂದಿದೆ ಎಂದು ಆರೋಪಿಸಿ ಅದರ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕೂಡಲೇ ವರದಿಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.ಭೋವಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕೆ.ಪೂಜಾರ ಮಾತನಾಡಿ, ದೇಶದಲ್ಲಿ ಸಂವಿಧಾನ ಬದ್ಧವಾಗಿ 103 ಪರಿಶಿಷ್ಟ ಜಾತಿಗಳಿವೆ. ಅವುಗಳಲ್ಲಿ ಭೋವಿ ವಡ್ಡರ ಜಾತಿ ಕೂಡಾ ಒಂದಾಗಿದ್ದು, ಸದ್ಯ ರಾಜ್ಯದಲ್ಲಿ 45 ಲಕ್ಷಕ್ಕೂ ಹೆಚ್ಚು ಭೋವಿ ಸಮಾಜ ಬಾಂಧವರಿದ್ದಾರೆ. ಇವರಲ್ಲಿ ಬಹುತೇಕ ಜನರು ಅವಿದ್ಯಾವಂತರಾಗಿದ್ದಾರೆ. ಕಲ್ಲು ಒಡೆಯುವುದು, ಕೆರೆ ಕಟ್ಟೆಗಳನ್ನು ನಿರ್ಮಿಸುವಂತಹ ಕಷ್ಟದ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.ಇಂತಹ ಕಷ್ಟ ಸಹಿಷ್ಣುಗಳಾದ ಜನರ ಸ್ಥಿತಿಗತಿಯನ್ನು ಗಮನಿಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅರಸರು ಈ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಿರುವುದು ಇತಿಹಾಸ ಎಂದು ಹೇಳಿದರು.ಈಗಿನ ಮೀಸಲಾತಿ ಪ್ರಕಾರ ಪರಿಶಿಷ್ಟ ಜಾತಿಯ 103 ಜಾತಿಯವರು ಶೇ 15 ರಷ್ಟು ಮೀಸಲಾತಿಯಲ್ಲಿ ಸೌಲಭ್ಯ ಪಡೆಯುವಂತಾಗಬೇಕಾಗಿದೆ. ಆದರೆ, ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯಲ್ಲಿ ಕೆಲವೇ ಕೆಲವು ಜಾತಿಗಳಿಗೆ ಮೀಸಲಾತಿಯನ್ನು ಕಲ್ಪಿಸಿ ಉಳಿದ 95ಕ್ಕೂ ಹೆಚ್ಚು ಜಾತಿಗಳಿಗೆ ಅನ್ಯಾಯ ಮಾಡಲಾಗಿದೆ. ಹೀಗಾಗಿ ಇದೊಂದು ಅವೈಜ್ಞಾನಿಕ ವರದಿಯಾಗಿದೆ ಎಂದು ಪೂಜಾರ ಆರೋಪಿಸಿದರು.ವರದಿಯಲ್ಲಿ ನ್ಯಾಯಮೂರ್ತಿಗಳು ಯಾವ ಆಧಾರದ ಮೇಲೆ ಈ ತರಹದ ಒಳ ಮೀಸಲಾತಿಯನ್ನು ಸೇರಿಸಿದ್ದಾರೆಯೋ ಗೊತ್ತಿಲ್ಲ. ಆದರೆ, ಇದರ ಹಿಂದೆ ರಾಜಕೀಯ ದುರುದ್ದೇಶದಿಂದ ರಾಜಕಾರಣಿಗಳ ಪಿತೂರಿ ಅಡಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಆಪಾದಿಸಿದರು.ಒಂದೇ ಜಾತಿಗೆ ಸೇರಿರುವ ಸಮಾಜಗಳಲ್ಲಿಯೇ ತಾರತಮ್ಯ ಮಾಡಿರುವ ಸದಾಶಿವ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಪುರಸ್ಕರಿಸಬಾರದು. ವರದಿಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು. ಇಲ್ಲವಾದರೆ, ಭೋವಿ ಸಮಾಜದ ವತಿಯಿಂದ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಇದೇ ಸಂದರ್ಭದಲ್ಲಿ ತಮ್ಮ ಬೇಡಿಕೆಯ ಮನವಿಯನ್ನು ತಹಸೀಲ್ದಾರ್ ಶಿವಲಿಂಗು ಅವರಿಗೆ ಅರ್ಪಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ.ವಡ್ಡರ, ದಾನಪ್ಪ ಕರ್ಜಗಿ, ಅರ್ಜುಣಮ್ಮ ಹಂಚಿನಮನಿ, ನಾಗರಾಜ ಮಳಗಾವಿ, ಮಂಜು ವಡ್ಡರ, ಮಂಜುನಾಥ ಕುಮರ್ಶಿಕೊಪ್ಪ, ಬಸವರಾಜ ವಡ್ಡರ, ಬಿ.ಕೆ.ಬಟ್ಟಕೊಪ್ಪ, ದ್ಯಾಮಣ್ಣ ಅರಸುನಾಳ, ತಮ್ಮಣ್ಣ ವಡ್ಡರ, ಹನುಮಂತಪ್ಪ ದೇವಗಿರಿ, ಶಿದ್ರಾಮಪ್ಪ ಗುಂಜಾಳ, ಹನುಮಂತಪ್ಪ ಸಾಲಿ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.ಸಾಲ ಮನ್ನಾಕ್ಕಾಗಿ ಹೋರಾಟ

ಬರಗಾಲದ ಬವಣೆಗೆ ಸಿಲುಕಿರುವ ರೈತರು ತಾವು ಮಾಡಿದ ಸಾಲವನ್ನು ತೀರುಸಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ತಪ್ಪಿಸಲು ಕೂಡಲೇ ಸರ್ಕಾರ ರೈತರ ಸಂಪೂರ್ಣ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಜಯಕರ್ನಾಟಕ ಸಂಘಟನೆ ಜಿಲ್ಲಾ ಘಟಕ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.ನಗರದ ಪುರಸಿದ್ದೆೀಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಸಂಘಟನೆಯ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಹಾದು ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ಮಾಡಿದರು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ರೈತ ವಿರೋಧಿ ನೀತಿಯನ್ನು ಖಂಡಿಸಿ ಘೋಷಣೆಗಳನ್ನು ಕೂಗಿದರು.ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಆನವಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಸತತ ಎರಡನೇ ವರ್ಷವೂ ಬರ ಕಾಣಿಸಿಕೊಂಡಿದೆ. ರೈತರು ಸಾಲ ಮಾಡಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಆದರೆ, ಮಳೆ ಇಲ್ಲದೇ ಬಿತ್ತಿದ ಬೀಜವೂ ಮೊಳಕೆಯಲ್ಲಿ ಕಮರಿ ಹೋಗಿದೆ. ಇದರಿಂದ ಕಂಗಾಲಾಗಿರುವ ರೈತರಿಗೆ ಹಣಕಾಸು ಸಂಸ್ಥೆಗಳು ದಬ್ಬಾಳಿಕೆಯಿಂದ ಸಾಲ ವಸೂಲಾತಿ ಮಾಡುತ್ತಿವೆ. ಇದೇ ಕಾರಣಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರು.ಕೂಡಲೇ ಸಾಲ ವಸೂಲಾತಿಯನ್ನು ನಿಲ್ಲಿಸಲು ಹಣಕಾಸು ಸಂಸ್ಥೆಗಳಿಗೆ ಸೂಚನೆ ನೀಡಬೇಕಲ್ಲದೇ, ಈಗಾಗಲೇ ನೀಡಿರುವ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಮಾಡಬೇಕು. ಹೊಸದಾಗಿ ಸಾಲವನ್ನು ನೀಡಬೇಕು ಎಂದು ಒತ್ತಾಯಿಸಿದರು.ಬರಗಾಲದಿಂದ ಕೆರೆ ಕಟ್ಟೆಗಳು ಒಣಗಿದ್ದು, ದನಕರುಗಳಿಗೆ ಕುಡಿಯಲು ನೀರಿಲ್ಲ. ತಿನ್ನಲು ಮೇವಿಲ್ಲ. ಬೆಲೆಬಾಳುವ ದನಕರುಗಳನ್ನು ರೈತರು ಕಸಾಯಿಖಾನೆಗೆ ಮಾರುತ್ತಿದ್ದಾರೆ. ಕೂಡಲೇ ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಬೇಕು. ಗ್ರಾಮೀಣ ಭಾಗದಲ್ಲಿ ಆರು ತಾಸು ನಿರಂತರ ತ್ರಿಪೇಸ್ ವಿದ್ಯುತ್ ಪೂರೈಸಬೇಕು. ಕೂಲಿ ಕೆಲಸವಿಲ್ಲದೇ ರೈತರು ಗುಳೆ ಹೋಗುತ್ತಿದ್ದು, ಅವರಿಗೆ ಕೂಲಿ ದೊರೆಯುವಂತೆ ಮಾಡಬೇಕು. ಮೋಡಗಳು ಇರುವಾಗಲೇ ಮೋಡ ಬಿತ್ತನೆ ಮಾಡಬೇಕೆಂಬ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಶಿವಲಿಂಗು ಅವರಿಗೆ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ರಮೇಶ ಆನವಟ್ಟಿ, ಪ್ರಧಾನ ಕಾರ್ಯದರ್ಶಿ ಶಾಹೀದ್ ದೇವಿಹೊಸೂರ, ಸದಾನಂದ ಶೆಟ್ಟಿ, ಮಲ್ಲಿಕಾರ್ಜುನ ಜಕೀನಕಟ್ಟಿ, ಸತೀಶ ಮಡಿವಾಳರ, ಸಂಜಯಗಾಂಧಿ ಸಂಜೀವಣ್ಣವರ, ಸುಭಾಸ ಬೆಂಗಳೂರ, ಮೌನೇಶ ಪಾಟೀಲ ಅಲ್ಲದೇ ಅನೇಕರು ಭಾಗವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.