ಶನಿವಾರ, ಮೇ 21, 2022
25 °C

ನ್ಯಾ. ಬಾಲಕೃಷ್ಣನ್ ಅಕ್ರಮ ಆಸ್ತಿ ಗಳಿಕೆ ಆರೋಪ:ಮಾಹಿತಿ ನೀಡಲು ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ (ಪಿಟಿಐ): ಸುಪ್ರೀಂಕೋರ್ಟ್ ಶುಕ್ರವಾರ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರ ಸಹಾಯಕನಿಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರು ಬೇನಾಮಿ ವ್ಯವಹಾರದಲ್ಲಿ ಎರಡು ನಿವೇಶನಗಳನ್ನು ಮಂಜೂರು ಮಾಡಿರುವ ಆರೋಪದ ಕುರಿತು ಅಭಿಪ್ರಾಯ ತಿಳಿಸುವಂತೆ ತಮಿಳುನಾಡು ಸರ್ಕಾರವನ್ನು ಕೇಳಿದೆ.ಅಲ್ಲದೆ, ಕೇರಳ ಸರ್ಕಾರ ವಶಪಡಿಸಿಕೊಂಡಿರುವ ನ್ಯಾ. ಬಾಲಕೃಷ್ಣನ್ ಅವರ ವಿವಿಧ ಅಕ್ರಮ ಆಸ್ತಿಗಳ ವಿವರ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಉತ್ತರಿಸುವಂತೆ ಆ ರಾಜ್ಯಕ್ಕೂ (ಕೇರಳ) ಸುಪ್ರೀಂಕೋರ್ಟ್ ಆದೇಶಿಸಿದೆ.ಹಾಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿರುವ ಬಾಲಕೃಷ್ಣನ್ ಅವರ ಅಕ್ರಮ ಆಸ್ತಿಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೋರಿ ಈ ಹಿಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವಕೀಲರೇ ಈಗ ಸಲ್ಲಿಸಿರುವ ಮತ್ತೊಂದು ವಿಚಾರಣಾ ಅವಧಿಯ ಅರ್ಜಿಯನ್ನು ಅನುಸರಿಸಿ, ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯ ಮತ್ತು ನ್ಯಾಯಮೂರ್ತಿಗಳಾದ ಕೆ.ಎಸ್. ರಾಧಾಕೃಷ್ಣನ್ ಹಾಗೂ ಸ್ವತಂತರ್ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು ತಮಿಳುನಾಡು ಮತ್ತು ಕೇರಳ ಸರ್ಕಾರಗಳಿಗೆ ಪ್ರತ್ಯೇಕವಾದ ನಿರ್ದೇಶನಗಳನ್ನು ನೀಡಿದೆ.ನ್ಯಾಯಪೀಠವು ಕಳೆದ ಫೆಬ್ರುವರಿ 18ರಂದು ಬಾಲಕೃಷ್ಣನ್ ಅವರ ಅಕ್ರಮ ಆಸ್ತಿ ಸಂಪಾದನೆ ವಿರುದ್ಧ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಗೆ ಪತ್ರಕರ್ತರೊಬ್ಬರು ಸಲ್ಲಿಸಿದ್ದ ದೂರಿನ ಬಗ್ಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ಅಟಾರ್ನಿ ಜನರಲ್ ಜಿ.ಇ. ವಹನ್ವತಿ ಅವರಿಗೆ ಆದೇಶಿಸಿತ್ತು.ನ್ಯಾಯಪೀಠದ ಮುಂದೆ ಅಕ್ಟೋಬರ್ 21ರಂದು ಸಲ್ಲಿಸಿರುವ ಹೊಸ ಅರ್ಜಿಯಲ್ಲಿ ಕರುಣಾನಿಧಿಯವರು ತಮ್ಮ ವಿವೇಚನಾ ಕೋಟಾವನ್ನು ದುರುಪಯೋಗಪಡಿಸಿಕೊಂಡು, ಬಾಲಕೃಷ್ಣನ್ ಅವರ ಮಾಜಿ ಸಹಾಯಕ ಕಣ್ಣಾಬಿರನ್ ಅವರಿಗೆ ಅಕ್ರಮವಾಗಿ ಚೆನ್ನೈನಲ್ಲಿ ಎರಡು ಬೆಲೆಬಾಳುವ ನಿವೇಶನಗಳನ್ನು ಒದಗಿಸಿರುವುದಾಗಿ ಆರೋಪಿಸಲಾಗಿದೆ.ಮಾಸಿಕ ಕೇವಲ ರೂ 10 ಸಾವಿರ ಆದಾಯ ಹೊಂದಿರುವ ಕಣ್ಣಾಬಿರನ್, 2008ರ ಫೆಬ್ರುವರಿ 7ರಂದು ನೊಳಂಬೂರಿನಲ್ಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ ಮಾರನೇ ದಿನವೇ ಅದನ್ನು ಪಡೆದಿದ್ದು, ನಂತರ 2008ರ ಏಪ್ರಿಲ್ 3ರಂದು ಅಣ್ಣಾ ನಗರದಲ್ಲಿ ಕಣ್ಣಾಬಿರನ್ ಅವರಿಗೆ ಎರಡನೇ ನಿವೇಶನ ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಸುಪ್ರೀಂಕೋರ್ಟ್‌ನಲ್ಲಿ ಗುಮಾಸ್ತನಾಗಿರುವ ಕಣ್ಣಾಬಿರನ್ ಅವರ ಹೆಸರಿಗೆ ಸ್ವತಃ ಕರುಣಾನಿಧಿಯವರೇ ಮುಖ್ಯಮಂತ್ರಿ ಕೋಟಾದಡಿ ಈ ನಿವೇಶನಗಳನ್ನು ಮಂಜೂರು ಮಾಡಿರುವುದನ್ನು ಸಂಬಂಧಿಸಿದ ಸರ್ವೆ ಅಧಿಕಾರಿಗಳು ಒಪ್ಪಿಕೊಂಡಿರುವ ದಾಖಲೆಗಳನ್ನು ಸಹ ದೂರಿನೊಂದಿಗೆ ಸಲ್ಲಿಸಲಾಗಿದೆ.ಇದರೊಂದಿಗೆ ಬಾಲಕೃಷ್ಣನ್ ತಮ್ಮ ಸಂಬಂಧಿಕರ ಹೆಸರಿನಲ್ಲಿ ಸಂಪಾದಿಸಿರುವ ಅಕ್ರಮ ಆಸ್ತಿಗಳನ್ನು ಕೇರಳ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದು, ಹೀಗಾಗಿ ಬಗ್ಗೆಯೂ ಸೂಕ್ತ ದಾಖಲು ಪತ್ರಗಳ ಮಾಹಿತಿ ವಿವರವನ್ನು ಸಲ್ಲಿಸಲು ನ್ಯಾಯಪೀಠ ಸೂಚಿಸಿದೆ.ನ್ಯಾಯಪೀಠವು ಅನಿರ್ದಿಷ್ಟಾವಧಿಯವರೆಗೆ ವಿಚಾರಣೆಯನ್ನು ಮುಂದೂಡುತ್ತಾ, ಕಳೆದ ಮೇ 5ರಂದು ಉಪರಾಷ್ಟ್ರಪತಿಯವರಿಗೆ ಸಲ್ಲಿಸಿರುವ ದೂರು ಮತ್ತು ಆನಂತರ ಗೃಹ ಸಚಿವಾಲಯಕ್ಕೆ ವರ್ಗಾವಣೆಯಾದ ಈ ದೂರಿನ ಬಗೆಗಿನ ತನಿಖಾ ವರದಿಯನ್ನು ಅಟಾರ್ನಿ ಜನರಲ್‌ರವರು ನ್ಯಾಯಾಲಯಕ್ಕೆ ಸಲ್ಲಿಸಿದ ಮೆಲಷ್ಟೇ ಮುಂದಿನ ವಿಚಾರಣೆಯನ್ನು ನಡೆಸುವುದಾಗಿ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.