ಗುರುವಾರ , ಮೇ 19, 2022
21 °C

ಪಂಕ್ತಿಭೇದ, ಮಡೆಸ್ನಾನ ವಿರೋಧಿಸಿ ಜು. 9ರಂದು ರಾಜ್ಯದಲ್ಲಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಉಡುಪಿ ಶ್ರೀಕೃಷ್ಣ ಮಠದಲ್ಲಿನ ಪಂಕ್ತಿಭೇದ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಡೆಸ್ನಾನ ಆಚರಣೆ ವಿರೋಧಿಸಿ ಜುಲೈ 9ರಂದು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗೆ ಸಿಪಿಎಂ ಕರೆ ನೀಡಿದೆ.ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮಾರುತಿ ಮಾನ್ಪಡೆ, ಜಿ.ಎನ್.ನಾಗರಾಜ್, `ಉಡುಪಿಯ ಕೃಷ್ಣಮಠ, ಕುಕ್ಕೆಯಲ್ಲಿನ ಸುಬ್ರಹ್ಮಣ್ಯ ದೇವಾಲಯ ಸೇರಿದಂತೆ ರಾಜ್ಯದ ಹಲವು ದೇವಾಲಯಗಳಲ್ಲಿ ಭಕ್ತರ ನಡುವೆ ತಾರತಮ್ಯ ಮಾಡಲಾಗುತ್ತಿದೆ. ಇದನ್ನು ಖಂಡಿಸಿ ರಾಜ್ಯದಾದ್ಯಂತ ಚಳವಳಿ ನಡೆಸಲಾಗುವುದು' ಎಂದರು.`ಉಡುಪಿಯ ಕೃಷ್ಣ ಮಠದಲ್ಲಿ ಭಕ್ತರನ್ನು ಶಾಖಾಹಾರಿಗಳು ಮತ್ತು ಮಾಂಸಾಹಾರಿಗಳು ಎಂದು ವರ್ಗೀಕರಿಸಿ ತಾರತಮ್ಯ ಮಾಡಲಾಗುತ್ತದೆ. ಒಂದು ವರ್ಗದವ ರನ್ನು ನೆಲದ ಮೇಲೆ ಕೂರಿಸಿ ಊಟ ಹಾಕಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕೂಡ ಇದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಕೆಟ್ಟ ಪದ್ಧತಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತೇವೆ' ಎಂದರು.`ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಮಡೆ ಸ್ನಾನವನ್ನು ನಿಲ್ಲಿಸುವ ಮಾತನಾಡಿದ್ದ ಸರ್ಕಾರ, ಮತ್ತೆ ಅದನ್ನು ಮುಂದುವರಿಸಿದೆ.ಬ್ರಾಹ್ಮಣರು ಉಂಡ ಎಲೆಗಳ ಮೇಲೆ ಇತರೆ ಜಾತಿಯವರು ಉರುಳುವ ಅನಿಷ್ಠ ಪದ್ಧತಿಯನ್ನು ತೊಡೆದುಹಾಕುವ ಕೆಲಸ ಆಗಬೇಕು. ಈ ಕುರಿತು ರಾಜ್ಯ ಸರ್ಕಾರ ಕಠಿಣ ನಿಲುವು ತಾಳಬೇಕು. ದೇವಾಲಯಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ನಿಲ್ಲಿಸಲು ಮುಂದಾಗಬೇಕು' ಎಂದು ಆಗ್ರಹಿಸಿದರು.ದೇವಾಲಯಗಳಲ್ಲಿ ತಾರತಮ್ಯ ನಿಷೇಧಿಸುವಂತೆ ಸರ್ಕಾರವನ್ನು ಆಗ್ರಹಿಸಲು ಜು.9ರಂದು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಪ್ರಗತಿಪರ ನಾಗರಿಕರು ಪ್ರತಿಭಟನೆ ನಡೆಸುತ್ತಾರೆ. ಈ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.