ಶನಿವಾರ, ಏಪ್ರಿಲ್ 17, 2021
32 °C

ಪಂಚಾಯಿತಿ ಉಪ ಚುನಾವಣೆ ಫಲಿತಾಂಶ ಸಮಬಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ: ಬಾದಾಮಿ ಪುರಸಭೆಯ 5ನೇ ವಾರ್ಡ್‌ನಿಂದ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ಬಾಷಾಸಾಬ ರಾಜೇಸಾಬ ಉಮಚಗಿ ಹಾಗೂ ಕೆರೂರ ಪಟ್ಟಣ ಪಂಚಾಯಿತಿ 4ನೇ ವಾರ್ಡ್‌ನಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೈದುಸಾಬ್ ಚೌಧರಿ ಆಯ್ಕೆಯಾಗಿದ್ದಾರೆ. ಇಲ್ಲಿನ ಮಿನಿ ವಿಧಾನಸೌಧದಲ್ಲಿ ಮಂಗಳವಾರ ಜರುಗಿದ ಮತ ಎಣಿಕೆ ನಂತರ ತಹಸೀಲ್ದಾರ ಮಹೇಶ ಕರ್ಜಗಿ ಅಭ್ಯರ್ಥಿಗಳ ಫಲಿತಾಂಶ ಪ್ರಕಟಿಸಿದರು.ಬಾದಾಮಿ ಪುರಸಭೆಯ 5ನೇ ವಾರ್ಡ್‌ನಲ್ಲಿ ಒಟ್ಟು 1109 ಮತಗಳ ಪೈಕಿ 817 ಜನ ಮತದಾನ ಮಾಡಿದ್ದರು. ಬಿಜೆಪಿಯ ಬಾಷಾಸಾಬ ಉಮಚಗಿ 440 ಮತ ಪಡೆದರೆ, ಕಾಂಗ್ರೆಸ್‌ನ ರಾಜಮಹ್ಮದ್ ಹಳ್ಳೂರ 357 ಮತ ಪಡೆದರು. 20 ಮತಗಳು ತಿರಸ್ಕೃತಗೊಂಡಿವೆ. ಕೆರೂರ ಪಟ್ಟಣ ಪಂಚಾಯಿತಿ 4ನೇ ವಾರ್ಡ್‌ನಲ್ಲಿದ್ದ 721 ಮತಗಳ ಪೈಕಿ 597 ಜನ ಮತ ಚಲಾಯಿಸಿದ್ದರು. ಕಾಂಗ್ರೆಸ್ ಸೈದುಸಾಬ ಚೌಧರಿ 340 ಮತ ಪಡೆದು ಗೆಲುವು ಸಾಧಿಸಿದರೆ ಎದುರಾಳಿ ಜೆಡಿಎಸ್‌ನ ಬಸಪ್ಪ ಎರಡೆತ್ತಿನವರ 240 ಮತ ಗಳಿಸಿದರು. 17 ಮತಗಳು ತಿರಸ್ಕೃತವಾಗಿವೆ. ಫಲಿತಾಂಶ ಪ್ರಕಟವಾದ ನಂತರ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುಲಾಲು ಎರಚಿಕೊಂಡು ವಿಜಯೋತ್ಸವ ಆಚರಿಸಿದರು.ಕಾಂಗ್ರೆಸ್ಸಿಗರ ವಿಜಯೋತ್ಸವ


(ಕೆರೂರ ವರದಿ): ಸ್ಥಳೀಯ ಪಟ್ಟಣ ಪಂಚಾಯತಿಯ 4ನೇ ವಾರ್ಡ್‌ನಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸೈದುಸಾಬ್ ಚೌಧರಿ ಅವರ ಗೆಲುವು ಪ್ರಕಟಿಸುತ್ತಿದ್ದಂತೆ ಕಾರ್ಯಕರ್ತರು ಸಂಭ್ರಮಿಸಿದರು. ಸೈದುಸಾಬ್ ಬೆಂಬಲಿಗರು ಸಂತೆಯ ಗದ್ದಲದಲ್ಲಿಯೇ ಗುಲಾಲು ಎರಚಿ, ಪಟಾಕಿ ಸಿಡಿಸಿ ಮೆರವಣಿಗೆ ನಡೆಸಿದರು. ಜಿ.ಪಂ. ಸದಸ್ಯ ಡಾ. ಎಂ.ಜಿ. ಕಿತ್ತಲಿ, ಹನುಮಂತ ಮಾವಿನಮರದ, ನಗರ ಘಟಕದ ಅಧ್ಯಕ್ಷ ಯಲಗುರಪ್ಪ ಗುಲಗಂಜಿ, ಮಾಜಿ ಅಧ್ಯಕ್ಷ ಬಿ.ಬಿ. ಸೂಳಿಕೇರಿ, ಹುಸೇನಸಾಬ, ರಾಯೇಸಾಬ ಚೋರಗಸ್ತಿ, ಚಿನಗಿಸಾಬ ಚೌಧರಿ, ಪ,ಪಂ ಸದಸ್ಯ ರಮೇಶ ಮತ್ತಿಕಟ್ಟಿ, ಉಸ್ಮಾನಸಾಬ ಅತ್ತಾರ, ಎಸ್.ಎಚ್. ಉದಗಟ್ಟಿ ಮತ್ತಿತರರು ಪಾಲ್ಗೊಂಡಿದ್ದರು. ಮತದಾರರ ಗೆಲುವು: ನಂತರ ಮಾತನಾಡಿದ ಚೌಧರಿ ಗೆಲುವು ತಮ್ಮದಲ್ಲ, ಮತದಾರರದು. ಜಾತಿ, ಮತದ ಬೇಧವಿಲ್ಲದೆ ಮತ ಹಾಕಿ ಗೆಲುವಿಗೆ ಕಾರಣರಾಗಿದ್ದಾರೆ  ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.