ಶನಿವಾರ, ಮೇ 21, 2022
25 °C

ಪಕ್ಷಪಾತ ಧೋರಣೆ ವಿರೋಧಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಕ್ಷಪಾತ ನೀತಿ ವಿರೋಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಮಹಮದ್ ಸಾದಿಕ್ ಜಮೀಲ್ ಮಾತನಾಡಿ, ಪ್ರಭುತ್ವದ ಹಿಂಸೆಯ ವಿರುದ್ಧ ದನಿ ಎತ್ತಿದ ಪಿಯುಸಿಎಲ್ ಮಾನವ ಹಕ್ಕು ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಕವಿತಾ ಶ್ರೀವಾತ್ಸವ ಮನೆ ಮೇಲೆ ಪೊಲೀಸ್ ದಾಳಿ ನಡೆಸಿರುವ ರಾಜಸ್ತಾನ ಸರ್ಕಾರ, ಕವಿತಾ ದನಿಯನ್ನು ದಮನಿಸಲು ಯತ್ನಿಸುತ್ತಿದೆ ಎಂದರು.ಅಜ್ಮೀರ್ ದರ್ಗಾ ಸ್ಫೋಟ, ಗೋವಾ ಬಾಂಬ್ ದಾಳಿ, ಹೈದರಾಬಾದ್ ಮೆಕ್ಕಾ ಮಸೀದಿ ಬಾಂಬ್ ಸ್ಫೋಟ, ಸಂಜೋತ ಎಕ್ಸ್‌ಪ್ರೆಸ್ ರೈಲು ಸ್ಫೋಟ ಮೊದಲಾದ ಭಯೋತ್ಪಾದಕ ಕೃತ್ಯದಲ್ಲಿ ಪಾಲ್ಗೊಂಡ 11 ಬಲಪಂಥೀಯ ಉಗ್ರರ ಹೆಸರನ್ನು ರಾಷ್ಟ್ರೀಯ ತನಿಖಾ ತಂಡ ಬಿಡುಗಡೆ ಮಾಡಿದೆ. ಇವರನ್ನು ಬಂಧಿಸಿ ತಕ್ಷಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಎಲ್ಲ ಹಾಲಿ, ಮಾಜಿ ಮಂತ್ರಿಗಳು, ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೆಂಗಳೂರಿಗೆ ವಿದ್ಯುತ್ ಪೂರೈಸಿ ಗ್ರಾಮೀಣ ಪ್ರದೇಶಗಳನ್ನು ಕತ್ತಲಲ್ಲಿ ಇಡುವ ಧೋರಣೆಯನ್ನು ರಾಜ್ಯ ಸರ್ಕಾರ ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದರು. ಎಸ್‌ಡಿಪಿಐ ಉಪಾಧ್ಯಕ್ಷರಾದ ಬಿ.ಜಯಮ್ಮ, ಬಷೀರ್ ಅಹ್ಮದ್ ಖಾನ್ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.