ಗುರುವಾರ , ಏಪ್ರಿಲ್ 22, 2021
29 °C

ಪಟಾಕಿ ಖರೀದಿ ಜೋರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೀಪಾವಳಿ ಅಂಗವಾಗಿ ನಗರದಲ್ಲಿ ಮಂಗಳವಾರ ಪಟಾಕಿ ಖರೀದಿ ಭರಾಟೆ ಜೋರಾಗಿತ್ತು. ಮಲ್ಲೇಶ್ವರ ಆಟದ ಮೈದಾನ, ರಾಜಾಜಿನಗರ ರಾಮಮಂದಿರದ ಆಟದ ಮೈದಾನ, ಹೊಂಬೇಗೌಡನಗರದ ಆಟದ ಮೈದಾನ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ನಿರ್ಮಾಣಗೊಂಡಿದ್ದ ಪಟಾಕಿ ಮಾರಾಟ ಮಳಿಗೆಗಳಲ್ಲಿ ವ್ಯಾಪಾರ ಹೆಚ್ಚಾಗಿತ್ತು.ಪಟಾಕಿ ಕೊಳ್ಳಲು ಜನರು ತಂಡೋಪತಂಡವಾಗಿ ಬರುತ್ತಿದ್ದ ದೃಶ್ಯ ಮಲ್ಲೇಶ್ವರ ಆಟದ ಮೈದಾನದಲ್ಲಿ ಕಂಡುಬಂತು. ಮೈದಾನದಲ್ಲಿ ಹಾಕಿದ್ದ 20 ಮಳಿಗೆಗಳಲ್ಲೂ ಜನರು ಸಡಗರದಿಂದ ಖರೀದಿಯಲ್ಲಿ ತೊಡಗಿದ್ದರು. ಕೆಲವು ವ್ಯಾಪಾರಿಗಳು ಹಬ್ಬದ ಎರಡನೇ ದಿನಕ್ಕೇ ಪಟಾಕಿಗಳೆಲ್ಲ ಮಾರಾಟವಾದ ಸಂತೋಷದಲ್ಲಿದ್ದರು.`ಪ್ರತಿವರ್ಷಕ್ಕಿಂತ ಈ ವರ್ಷ ವ್ಯಾಪಾರ ಜೋರಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಟಾಕಿ ಖರೀದಿಸುತ್ತಿದ್ದಾರೆ. ಪ್ರತಿಬಾರಿ ಹಬ್ಬದ ಮೂರು ದಿನವೂ ಪಟಾಕಿಯ ದಾಸ್ತಾನು ಇರುತ್ತಿತ್ತು. ಈ ವರ್ಷ ದಾಸ್ತಾನು ಎರಡನೇ ದಿನಕ್ಕೇ ತೀರಿದೆ~ ಎಂದು ಪಟಾಕಿ ವ್ಯಾಪಾರಿ ಮೋಹನ್ ಹೇಳಿದರು.`ಪಟಾಕಿಗಳ ಬೆಲೆ ಕಳೆದ ವರ್ಷಕ್ಕಿಂತ ಈ ವರ್ಷ ಶೇ 10ರಷ್ಟು ಹೆಚ್ಚಾಗಿದೆ. ಆದರೂ ಜನರ ಖರೀದಿಯ ಹುಮ್ಮಸ್ಸು ಕಡಿಮೆಯಾಗಿಲ್ಲ. ಎಲ್ಲ ಬಗೆಯ ಪಟಾಕಿಗಳನ್ನು ಒಳಗೊಂಡಿರುವ ಒಂದು ಬಾಕ್ಸ್ ಪಟಾಕಿಯ ಬೆಲೆ 400 ರೂಪಾಯಿಯಿಂದ 700ರ ವರೆಗಿದೆ. ದೊಡ್ಡ ಬಾಕ್ಸ್‌ಗೆ ಒಂದೂವರೆಯಿಂದ ಎರಡು ಸಾವಿರ ರೂಪಾಯಿ ಬೆಲೆ ಇದೆ. ಆದರೂ ಜನರು ಕೊಳ್ಳುವುದನ್ನು ಕಡಿಮೆ ಮಾಡಿಲ್ಲ. ಹಾಕಿದ್ದ ಅಸಲಿಗೆ ಲಾಭ ಬಂದಾಗಿದೆ~ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡವರು ವ್ಯಾಪಾರಿ ಸುಬ್ರಹ್ಮಣ್ಯ.`ಪಟಾಕಿಗಳ ಬೆಲೆ ಹೆಚ್ಚಾಗಿದೆ. ಎರಡು ಸಾವಿರ ರೂಪಾಯಿಗೆ ಎರಡು ಸಣ್ಣ ಕೈ ಚೀಲ ತುಂಬುವಷ್ಟು ಪಟಾಕಿ ಬಂದಿದೆ. ಪಟಾಕಿ ಹೊಡೆಯುವುದು ಬೇಡ ಎಂದರೂ ಮಕ್ಕಳು ಕೇಳುವುದಿಲ್ಲ. ದೀಪಾವಳಿಯಲ್ಲಿ ಪಟಾಕಿ ಹೊಡೆಯದೇ ಇದ್ದರೆ ಮಕ್ಕಳು ಮುನಿಸಿಕೊಂಡು ಕೂರುತ್ತಾರೆ. ಹೀಗಾಗಿ ಪಟಾಕಿ ಖರೀದಿಸುವುದು ಅನಿವಾರ್ಯ~ ಎಂದು ಗಾಯಿತ್ರಿನಗರದ ನಿವಾಸಿ ಜ್ಯೋತಿ ಹೇಳಿದರು.`ಈ ವರ್ಷ ಪಟಾಕಿ ಖರೀದಿಸುವುದು ಬೇಡ ಎಂದುಕೊಂಡಿದ್ದೆ. ದೀಪಗಳ ಹಬ್ಬದಲ್ಲಿ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯದ ಮಾಡುವುದರ ಜತೆಗೆ ಹಣವನ್ನು ಪೋಲು ಮಾಡುವುದು ನನಗಿಷ್ಟವಿಲ್ಲ. ಆದರೆ, ಹೆಂಡತಿ-ಮಕ್ಕಳ ಒತ್ತಾಯಕ್ಕೆ ಕಟ್ಟುಬಿದ್ದು ಪಟಾಕಿ ಖರೀದಿಸಲೇಬೇಕಾಯಿತು~ ಎಂದು ಶ್ರೀರಾಮಪುರದ ಗಂಗಾಧರ್ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.