ಮಂಗಳವಾರ, ಏಪ್ರಿಲ್ 20, 2021
29 °C

ಪಠ್ಯಪುಸ್ತಕ ರಚನೆ ದಿಕ್ಕು ಬದಲು: ಸಂವಾದದಲ್ಲಿ ಸಾಹಿತಿ ಅನಂತಮೂರ್ತಿ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಪಠ್ಯಪುಸ್ತಕ ರಚನೆಯ ದಿಕ್ಕು ಬದಲಾಗಿದ್ದು, ಯಾವುದು ಸುಲಭ ಅದು ಪಠ್ಯದಲ್ಲಿ ಸೇರಿಕೊಳ್ಳುತ್ತದೆ. ಇದರಲ್ಲಿ ಎಲ್ಲ ರೀತಿಯ ಲಾಬಿಗಳೂ ಅಡಗಿವೆ ಎಂದು ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ವಿಷಾದಿಸಿದರು.

ನಗರದ ಡಯಾನ ಬುಕ್ಸ್ ಗ್ಯಾಲರಿಯಲ್ಲಿ ಗುರುವಾರ ಸಾಹಿತಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಡದ ಪಠ್ಯಪುಸ್ತಕಗಳಲ್ಲಿ ಬಹುಮಟ್ಟಿಗೆ ಕುಮಾರವ್ಯಾಸನನ್ನು ಕೈಬಿಡಲಾಗಿದೆ. ಆಧುನಿಕ ಕವಿಗಳನ್ನು ಸೇರಿಸಿಕೊಂಡರೂ ಅದೂ ಮೀಸಲಾತಿ ಆಧಾರದ ಮೇಲೆಯೇ; ಹಾಗಾಗಿ, ಗುಣಮಟ್ಟದ ಪಠ್ಯ ಸಿಗುವುದಿಲ್ಲ.

`ಉದಾಹರಣೆಗೆ ನನ್ನ ಸಾಹಿತ್ಯ ಕರ್ನಾಟಕದ ಯಾವುದಾದರೂ ಪಠ್ಯಪುಸ್ತಕಗಳಲ್ಲಿ ಇದೆಯೇ? ವಿದೇಶ, ಹೊರರಾಜ್ಯಗಳಲ್ಲಿ ನನ್ನ ಪುಸ್ತಕಗಳು ಪಠ್ಯಪುಸ್ತಕಗಳಾಗಿವೆ. ಇಲ್ಲಿ ಆಗುವುದಿಲ್ಲ ಎಂದರೆ ಏನು ಅರ್ಥ~ ಎಂದು ಪ್ರಶ್ನಿಸಿದರು.

ದುರ್ಬಲವಾದ ಪಠ್ಯಪುಸ್ತಕಗಳು ಇರುವುದರಿಂದಲೇ ನಮ್ಮ ಬಹಳಷ್ಟು ಕನ್ನಡ ಮೇಸ್ಟ್ರುಗಳು ಕ್ಲಾಸ್‌ನಲ್ಲಿ ಜೋಕರ್‌ಗಳಾಗಿದ್ದಾರೆ. ಇಡೀ ವರ್ಷ ಒಂದೇ ಕಾದಂಬರಿಯನ್ನೋ, ಕಥೆಯನ್ನೋ ಪಾಠ ಮಾಡಿ, ಬೋರ್ ಬಂದಿರುತ್ತದೆ. ಹಾಗಾಗಿ, ಅನಿವಾರ್ಯವಾಗಿ ಅವರು ಜೋಕರ್‌ಗಳಾಗುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.  

ಎಲ್ಲಾ ಗ್ರಂಥಾಲಯಗಳಲ್ಲಿ ಇಂತಿಷ್ಟು ಕನ್ನಡದ ಪ್ರಸಿದ್ಧ ಪುಸ್ತಕಗಳಿರಬೇಕು ಎಂಬುದನ್ನು ಸರ್ಕಾರ ಕಡ್ಡಾಯ ಮಾಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಸಲಹೆ ಮಾಡಿದರು.

ಜವಾಬ್ದಾರಿ ಇದೆ: ಇಂದು ಸಾಹಿತ್ಯ ಎಲ್ಲ ಜಾತಿ, ವರ್ಗ, ಲಿಂಗಗಳಿಂದಲೂ ಬರುತ್ತಿದೆ. ಆದರೆ, ಅದು ಆಯಾ ಮೂಲಗಳಿಗೆ ಮಾತ್ರ ನಿಲ್ಲಬಾರದು. ಒಬ್ಬ ದಲಿತ ಅವನ ಮೂಲದಿಂದ ಬರೆದ ಮೇಲೂ ಆತನಿಗೆ ಒಟ್ಟು ಸಾಹಿತ್ಯದಲ್ಲಿ ಜವಾಬ್ದಾರಿ ಇದೆ ಎಂಬುದನ್ನು ಅರಿಯಬೇಕು. ಇಲ್ಲದಿದ್ದರೆ ಸಾಹಿತ್ಯದಲ್ಲಿ ಸವಾಲು ಹೊರಟು ಹೋಗುತ್ತದೆ ಎಂದು ಅನಂತಮೂರ್ತಿ ವಿಶ್ಲೇಷಿಸಿದರು.

ವೇಗ ಉಳಿಯುವುದಿಲ್ಲ

ಯಾವುದನ್ನು ವೇಗವಾಗಿ ಓದಿ ಮುಗಿಸಲು ಸಾಧ್ಯ ಅದು ಹೆಚ್ಚು ಕಾಲ ಉಳಿಯುವುದಿಲ್ಲ. ಅವು ಓದುಗರ ಮೆಚ್ಚುಗೆ ಪಾತ್ರವಾಗುತ್ತವೆಯೋ ಹೊರತು, ಅದರಾಚೆ ಅವು ಉಳಿಯುವುದಿಲ್ಲ. ದೊಡ್ಡ ಬರಹಗಾರರ ಇದನ್ನು ಮಾಡಲು ಹೋಗುವುದಿಲ್ಲ. ಬರಹಗಾರ, ಓದುಗರ ಕಡೆ ಮುಖ ಮಾಡಿದಾಕ್ಷಣ, ಆ ಓದುಗನನ್ನು ವೆುಚ್ಚಿಸಲು ಆರಂಭಿಸುತ್ತಾನೆ. ಹಾಗಾಗಿ, ನಿಧಾನವಾಗಿ ಓದಿಸಿಕೊಂಡು ಹೋಗುವ ಕೃತಿಗಳೇ ಹೆಚ್ಚು ಉಳಿಯುತ್ತವೆ ಎಂದರು.

ನಾವೀನ್ಯತೆ ಸವಾಲು

ವಸ್ತುವಿನ ನಾವೀನ್ಯತೆ ಇಲ್ಲದೆಯೂ ಸಾಹಿತ್ಯ ಇರಲು ಸಾಧ್ಯವಾಗಿದೆ ಎಂದು ಪ್ರತಿಪಾದಿಸಿದ ಅವರು, ಪ್ರಪಂಚದಲ್ಲಿ ಯಾವುದೂ ಹೊಸದು ಇಲ್ಲ. ಆದರೂ, ಹೊಸ ತಲೆಮಾರು ಬರುತ್ತಿದ್ದಂತೆ ನಾವೀನ್ಯತೆ ತನ್ನಿಂದ ತಾನೇ ಹುಟ್ಟಿಕೊಳ್ಳುತ್ತದೆ. ಇದನ್ನು ಉಳಿಸಿಕೊಳ್ಳುವುದು ಎಲ್ಲಾ ಕಾಲದಲ್ಲೂ ಸಾಹಿತ್ಯಕ್ಕಿರುವ ದೊಡ್ಡ ಸವಾಲು ಎಂದರು.

ಭಾಷೆಗೊಂದು ವ್ಯಾಕರಣ ಇರಬೇಕು. ಅದು ಇಲ್ಲದಿದ್ದರೆ ಭಾಷೆ ಉಳಿಯುವುದಿಲ್ಲ. ಆಡುಮಾತಿನಂತೆ ವ್ಯಾಕರಣ ಇರಲು ಸಾಧ್ಯವಿಲ್ಲ. ಯಾರು ಎಷ್ಟೇ ಹೇಳಿದರೂ ನಾನು ಶಂಕರಭಟ್ಟರ ಕನ್ನಡವನ್ನು ಒಪ್ಪುವುದಿಲ್ಲ. ಕನ್ನಡದಲ್ಲಿ `ಋ~ ಕಾರ ಬೇಕೇ ಬೇಕು ಎಂದು ಪ್ರತಿಪಾದಿಸಿದರು.

ಸಂವಾದದಲ್ಲಿ ಅನಂತಮೂರ್ತಿ ಅವರ ಸಹಪಾಠಿ ಪ್ರೊ. ಪಂಚಾಕ್ಷರಯ್ಯ, ಶಿವಮೊಗ್ಗ ಹಾಗೂ ಮೈಸೂರಿನಲ್ಲಿನ ಓದುತ್ತಿದ್ದಾಗ ನಡೆದ ಘಟನೆಗಳನ್ನು ಮೆಲುಕು ಹಾಕಿದರು. ಡಯಾನ ಬುಕ್ಸ್ ಗ್ಯಾಲರಿ ಮಾಲೀಕ ಈಶ್ವರ್ ಉಪಸ್ಥಿತರಿದ್ದರು. ಡಾ.ಎಚ್.ಎಸ್. ನಾಗಭೂಷಣ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.