ಭಾನುವಾರ, ಏಪ್ರಿಲ್ 11, 2021
25 °C

ಪಡಿತರ...ಎಷ್ಟೊಂದು ತರ

ಎ.ಎಂ.ಸುರೇಶ Updated:

ಅಕ್ಷರ ಗಾತ್ರ : | |

ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುತ್ತಿವೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕೃತ ದಾಖಲೆಗಳು. ಆದರೆ ರಾಜ್ಯದಲ್ಲಿ ಬಡತನದ ರೇಖೆಗಿಂತ ಕೆಳಗಿರುವವರಿಗಾಗಿ ವಿತರಿಸಲಾಗುತ್ತಿರುವ ಪಡಿತರ ಚೀಟಿಗಳ ಸಂಖ್ಯೆ ಈ ಅಧಿಕೃತ ದಾಖಲೆಯ ಜತೆ ತಾಳೆಯಾಗುತ್ತಿಲ್ಲ, ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ರಾಜ್ಯದ ಎಷ್ಟೋ ಊರುಗಳಲ್ಲಿ ವಾಸ ಇರುವ ಕುಟುಂಬಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಇದು ಸ್ಥಳೀಯ ರಾಜಕಾರಣಿಗಳ ಜತೆಯಲ್ಲಿ ಅಧಿಕಾರಿಗಳು ಷಾಮೀಲಾಗಿ ಮಾಡುತ್ತಿರುವ ವಂಚನೆ. ಈ ಅಕ್ರಮವನ್ನು ಪತ್ತೆಹಚ್ಚಲು ರಾಜ್ಯ ಸರ್ಕಾರ ಈಗ ಹೊಸದೊಂದು ಮಾರ್ಗಹಿಡಿದಿದೆ. ಇದರಿಂದಾದರೂ ನಕಲಿ ಪಡಿತರ ಚೀಟಿಗಳ ಹಾವಳಿ ನಿಯಂತ್ರಣಕ್ಕೆ ಬಂದೀತೇ?ರಾಜ್ಯದಲ್ಲಿ ಪಡಿತರ ಚೀಟಿ ಮತ್ತು ಆಹಾರ ಧಾನ್ಯಗಳ ವಿತರಣೆ ಅವ್ಯವಸ್ಥೆಯ ಆಗರ. ಒಂದೆಡೆ ಮಧ್ಯವರ್ತಿಗಳು, ವಂಚಕರ ಹಾವಳಿಯಿಂದಾಗಿ ಬಡವರಿಗೆ ತಲುಪಬೇಕಾದ ಆಹಾರ ಧಾನ್ಯಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೆ, ಮತ್ತೊಂದೆಡೆ ಅನರ್ಹರು ಅಕ್ರಮವಾಗಿ ಬಿಪಿಎಲ್ ಕಾರ್ಡ್‌ಗಳನ್ನು ಲಪಟಾಯಿಸಿಕೊಂಡು ಸರ್ಕಾರ ನೀಡುವ ಸಹಾಯ ಧನದ ಲಾಭ ಪಡೆಯುತ್ತಿದ್ದಾರೆ. ನಕಲಿ ಪಡಿತರ ಚೀಟಿಗಳ ಹಾವಳಿ ಮತ್ತು ಆಹಾರ ಧಾನ್ಯಗಳ ಹಂಚಿಕೆಯಲ್ಲಿ ಆಗುತ್ತಿರುವ ದುರುಪಯೋಗದ ಬಗ್ಗೆ ಒಂದು ದಶಕದಿಂದ  ಸಾಕಷ್ಟು ಚರ್ಚೆಯಾಗುತ್ತಿದೆ. 1999ರಿಂದ ಈಚೆಗೆ ಹತ್ತು ಮಂದಿ ಸಚಿವರು, ಹಲವು ಅಧಿಕಾರಿಗಳು ಈ ಇಲಾಖೆಯಲ್ಲಿ ಕೆಲಸ ಮಾಡಿ ಹೋಗಿದ್ದಾರೆ. ಆದರೆ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ಹಿಂದೆಯೂ ಅನೇಕ ಬಾರಿ ಅನರ್ಹರನ್ನು ಗುರುತಿಸುವ ಪ್ರಯತ್ನ ನಡೆದಿತ್ತು. ಈಗ ಅಂತಹದೇ ಪ್ರಯತ್ನ ಹೊಸ ರೀತಿಯಲ್ಲಿ ಆರಂಭವಾಗಿದೆ.ಕಳೆದ ವರ್ಷದ ಮಾರ್ಚ್ ತಿಂಗಳ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 1,51,42,110 ಪಡಿತರ ಚೀಟಿಗಳಿದ್ದವು (ಈಗ 1.60 ಕೋಟಿ ಆಗಿರುವ ಸಾಧ್ಯತೆಗಳಿವೆ). ಈ ಪೈಕಿ 98,44,338 ಬಿಪಿಎಲ್ ಕಾರ್ಡ್‌ಗಳು. ಆದರೆ ರಾಜ್ಯದಲ್ಲಿರುವ ಒಟ್ಟು ಕುಟುಂಬಗಳ ಸಂಖ್ಯೆಯೇ 1.20 ಕೋಟಿ! ಅಲ್ಲದೆ, ಒಟ್ಟು ಕುಟುಂಬಗಳ ಪೈಕಿ 15ರಿಂದ 20 ಲಕ್ಷ ಕುಟುಂಬಗಳಿಗೆ ಇನ್ನೂ ಪಡಿತರ ಚೀಟಿಗಳೇ ಸಿಕ್ಕಿಲ್ಲ. ಕುಟುಂಬಗಳಿಗಿಂತ ಪಡಿತರ ಚೀಟಿಗಳ ಸಂಖ್ಯೆ ಹೆಚ್ಚಾಗಿರುವುದೇ 50ರಿಂದ 60 ಲಕ್ಷ  ನಕಲಿ ಪಡಿತರ ಚೀಟಿಗಳು ಇವೆ ಎಂಬುದಕ್ಕೆ ಸಾಕ್ಷಿ ಎನ್ನುತ್ತಾರೆ ಅಧಿಕಾರಿಗಳು. ನಕಲಿ ಪಡಿತರ ಚೀಟಿಗಳಿಂದಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಿಂಗಳಿಗೆ ಸುಮಾರು 100 ಕೋಟಿ ರೂಪಾಯಿ ಸಬ್ಸಿಡಿ ಹಣ ನಷ್ಟವಾಗುತ್ತಿದ್ದರೆ, ಒಂದು ಕುಟುಂಬಕ್ಕೆ 2-3 ಪಡಿತರ ಚೀಟಿಗಳನ್ನು ಹೊಂದಿರುವವರು ರಾಜಾರೋಷವಾಗಿ ಸರ್ಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅರ್ಹ ಬಡ ಕುಟುಂಬಗಳಿಗೆ ಸಿಗಬೇಕಾದ ಸೌಲಭ್ಯಗಳು, ಉಳ್ಳವರ ಪಾಲಾಗುತ್ತಿವೆ.ಪಡಿತರ ಚೀಟಿಗಳ ವಿತರಣೆಯಲ್ಲಿ ಆಗಿರುವ ಅಕ್ರಮಗಳಿಗೆ ಹೊಣೆ ಯಾರು? ಎಲ್ಲಿ, ಹೇಗೆ ಅಕ್ರಮಗಳು ನಡೆಯುತ್ತಿವೆ ಎಂದು ಇದರ ಮೂಲವನ್ನು ಹುಡುಕುತ್ತಾ ಹೋದಾಗ ರಾಜಕಾರಣಿಗಳಿಗಿಂತ ಇಲಾಖೆಯ ಅಧಿಕಾರಿಗಳ ಪಾತ್ರವೇ ಹೆಚ್ಚು ಇರುವುದು ಕಂಡು ಬರುತ್ತದೆ. 2006ರ ನಂತರ ವ್ಯಾಪಕವಾಗಿ ಅಕ್ರಮಗಳು ನಡೆದಿದ್ದು, ಇದಕ್ಕೆ ಕಾರ್ಡ್‌ಗಳನ್ನು ವಿತರಿಸುವ ಹೊಣೆ ಹೊತ್ತಿದ್ದ ಕೊಮ್ಯಾಟ್ ಸಂಸ್ಥೆಯೇ ಕಾರಣ ಎನ್ನುತ್ತವೆ ಸರ್ಕಾರದ ಮೂಲಗಳು. ಇದರಲ್ಲಿ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಕೆಲಸ ಮಾಡಿದ ಹಿರಿಯ ಅಧಿಕಾರಿಗಳ ಪಾತ್ರವೂ ಇದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಕೊಮ್ಯಾಟ್ ಸಂಸ್ಥೆ ಸರ್ಕಾರದೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಉಲ್ಲಂಘಿಸಿದಾಗ ಅಧಿಕಾರಿಗಳು ಆ ಸಂಸ್ಥೆಯ ವಿರುದ್ಧ ಯಾಕೆ ಕ್ರಮಕೈಗೊಳ್ಳಲಿಲ್ಲ ಎಂಬ ಪ್ರಶ್ನೆ ಪ್ರಮುಖವಾಗಿ ಈಗ ಕೇಳಿ ಬರುತ್ತಿದೆ.ಅಕ್ರಮಗಳು ನಡೆದಿರುವುದು ಹೇಗೆ?

ಅರ್ಹ ಕುಟುಂಬಗಳಿಗೆ ಪಡಿತರ ಚೀಟಿಗಳನ್ನು ವಿತರಿಸುವ ಸಂಬಂಧ ರಾಜ್ಯ ಸರ್ಕಾರ 2006ರ ಮಾರ್ಚ್ 27ರಂದು ಕೊಮ್ಯಾಟ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದ ಪ್ರಕಾರ ಅರ್ಹ ಕುಟುಂಬಗಳ ಸದಸ್ಯರ ‘ಹೆಬ್ಬೆಟ್ಟಿನ ಜೀವಮಾಪಕ’ದೊಂದಿಗೆ ಹೋಲಿಕೆ ಮಾಡಿ 195 ದಿನಗಳಲ್ಲಿ ಪಡಿತರ ಚೀಟಿಗಳನ್ನು ವಿತರಿಸಬೇಕಾಗಿತ್ತು. ಇದಕ್ಕಾಗಿ ರಾಜ್ಯಮಟ್ಟದಲ್ಲಿ ಡಾಟಾ ಬೇಸ್ ಸ್ಥಾಪನೆ ಮತ್ತು ಆನ್‌ಲೈನ್ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಆದರೆ 2010ರವರೆಗೂ ಡಾಟಾ ಬೇಸ್ ಸ್ಥಾಪನೆಯಾಗಲಿಲ್ಲ. ಆನ್‌ಲೈನ್ ಸಹ ಇರಲಿಲ್ಲ. 195 ದಿನಗಳಲ್ಲಿ ಪಡಿತರ ಚೀಟಿಗಳನ್ನು ಹಂಚಿಕೆ ಮಾಡಬೇಕಿದ್ದ ಕೊಮ್ಯಾಟ್ ಸಂಸ್ಥೆ 2008ರ ಅಂತ್ಯದವರೆಗೂ ಬಡವರಿಗೆ ಕಾರ್ಡ್‌ಗಳನ್ನು ನೀಡಲೇ ಇಲ್ಲ. ಈ ಮಧ್ಯೆ ‘ನೆಮ್ಮದಿ ಕೇಂದ್ರ’ ಗಳಿಗೆ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ಅನುಮತಿ ನೀಡಿದಲ್ಲಿ ಒಪ್ಪಂದದಲ್ಲಿನ ಕರಾರಿನ ಪ್ರಕಾರ ಕಾರ್ಡ್‌ಗಳನ್ನು ಕೊಡುವುದಾಗಿ ಕೊಮ್ಯಾಟ್ ಸಂಸ್ಥೆಯವರು ಹೇಳಿದ್ದರು.ಇದಕ್ಕೆ ಒಪ್ಪಿದ ಸರ್ಕಾರ, ಪಡಿತರ ಚೀಟಿಗೆ ಸಲ್ಲಿಸುವ ಅರ್ಜಿಯ ಜೊತೆ 100 ರೂಪಾಯಿ ಮೌಲ್ಯದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಎಂದು ಸಾರ್ವಜನಿಕರಿಗೆ ಸೂಚಿಸಿತ್ತು. ಆದರೆ ಆ ಪ್ರಮಾಣ ಪತ್ರದ ಆಧಾರದ ಮೇಲೆ ಕಾರ್ಡ್ ಕೊಡಿ ಎಂದು ಸರ್ಕಾರ ಎಲ್ಲಿಯೂ ಹೇಳಿಲ್ಲ. ಮೂಲ ಒಪ್ಪಂದದ ತಾಂತ್ರಿಕ ಷರತ್ತಿನ ಪ್ರಕಾರ ಹೆಬ್ಬೆಟ್ಟಿನ ಜೀವಮಾಪಕದೊಂದಿಗೆ ಹೋಲಿಕೆ ಮಾಡಿಯೇ ಪಡಿತರ ಚೀಟಿಗಳನ್ನು ನೀಡಬೇಕಾಗಿತ್ತು. ಆದರೆ ಕೊಮ್ಯಾಟ್ ಸಂಸ್ಥೆ ಹೆಬ್ಬೆಟ್ಟಿನ ಜೀವಮಾಪಕದೊಂದಿಗೆ ಹೋಲಿಕೆ ಮಾಡದೆ, ಅರ್ಜಿ ಹಾಕಿದವರಿಗೆಲ್ಲ ಮನಬಂದಂತೆ ಪಡಿತರ ಚೀಟಿಗಳನ್ನು ನೀಡಿದೆ. ಈಗ ಲಕ್ಷಾಂತರ ಸಂಖ್ಯೆಯಲ್ಲಿ ನಕಲಿ ಪಡಿತರ ಚೀಟಿಗಳು ವಿತರಣೆಗೊಂಡು ಸೃಷ್ಟಿಯಾಗಿರುವ ಬಿಕ್ಕಟ್ಟಿಗೆ ಉಂಟಾಗಿರುವ ಅವ್ಯವಸ್ಥೆಗೆ ಕೊಮ್ಯಾಟ್ ಸಂಸ್ಥೆಯೇ ಕಾರಣ ಎನ್ನುತ್ತವೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂಲಗಳು.ಅಧಿಕಾರಿಗಳ ಮೌನ: 195 ದಿವಸದಲ್ಲಿ ಕಾರ್ಡ್‌ಗಳನ್ನು ವಿತರಿಸದೆ ಕೊಮ್ಯಾಟ್ ಸಂಸ್ಥೆ  ಒಪ್ಪಂದದ ಉಲ್ಲಂಘನೆ ಮಾಡಿದ್ದರೆ ಅದರ ವಿರುದ್ಧ  ಸರ್ಕಾರ ಯಾಕೆ ಕ್ರಮಕೈಗೊಳ್ಳಲಿಲ್ಲ? ಟೆಂಡರ್ ಗುತ್ತಿಗೆಯನ್ನು ಏಕೆ ರದ್ದು ಮಾಡಲಿಲ್ಲ? ಅಧಿಕಾರಿಗಳು ಏನು ಮಾಡುತ್ತಿದ್ದರು? ನಕಲಿ ಪಡಿತರ ಚೀಟಿ ನೀಡಿದ ಸಂಸ್ಥೆಗೆ ಹೇಗೆ 54 ಕೋಟಿ ರೂಪಾಯಿ ಪಾವತಿ ಮಾಡಿದರು? ಎಂಬ ಪ್ರಶ್ನೆಗಳಿಗೆ ಸರ್ಕಾರದ ಬಳಿಯೂ ಸ್ಪಷ್ಟ ಉತ್ತರ ಇಲ್ಲ. ಇಷ್ಟು ಅವಾಂತರಗಳು ನಡೆದಿದ್ದರೂ ಇದುವರೆಗೆ ಆ ಸಂಸ್ಥೆಯ ವಿರುದ್ಧ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಇತ್ತೀಚೆಗೆ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸಚಿವೆ ಶೋಭಾ ಕರಂದ್ಲಾಜೆ ಕ್ರಿಮಿನಲ್ ಮೊಕದ್ದಮೆ ಹೂಡುವ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಹೇಳಿದ್ದಾರೆ ಅಷ್ಟೇ. ಪರಿಶೀಲನೆ ಮುಗಿಯಿತೋ ಇಲ್ಲವೋ ಗೊತ್ತಿಲ್ಲ. ಈ ಮಧ್ಯೆ ಕೊಮ್ಯಾಟ್‌ನವರು ಸುಮಾರು 45 ಕೋಟಿ ರೂಪಾಯಿ ಹಣ ಪಾವತಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ, ಒತ್ತಡ ಹೇರುತ್ತಿದ್ದಾರೆ. ಕೊಮ್ಯಾಟ್ ಸಂಸ್ಥೆಗೆ ಪಡಿತರ ಚೀಟಿಗಳನ್ನು ವಿತರಿಸುವ ಜವಾಬ್ದಾರಿ ವಹಿಸಿದಾಗ 1.10 ಕೋಟಿ ಪಡಿತರ ಚೀಟಿಗಳು, 1.10 ಕೋಟಿ ಕುಟುಂಬಗಳು ಇದ್ದವು. ಈಗ 1.20 ಕುಟುಂಬಗಳಿದ್ದರೆ, ಕಾರ್ಡ್‌ಗಳ ಸಂಖ್ಯೆ 1.60 ಕೋಟಿಗೆ ಏರಿದ್ದು, ನಕಲಿ ಪಡಿತರ ಚೀಟಿಗಳದ್ದೇ ದೊಡ್ಡ ಸಮಸ್ಯೆಯಾಗಿದೆ.ಅರ್ಹರಿಗೆ ಸಿಗದ ಕಾರ್ಡ್

ಅನರ್ಹರಿಗೆ ನೀಡಿದ್ದ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವಾಗ ಅರ್ಹರಿಗೆ ಅನ್ಯಾಯವಾಗಿರುವುದು ನಿಜ ಎಂಬುದನ್ನು ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಎಚ್.ಹಾಲಪ್ಪ ವಿಧಾನ ಸಭೆಯಲ್ಲಿಯೇ ಒಪ್ಪಿಕೊಂಡಿದ್ದರು. ನಕಲಿ ಕಾರ್ಡ್‌ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎರಡೂವರೆ ವರ್ಷಗಳ ಹಿಂದೆ ಮೊದಲ ಸುತ್ತಿನಲ್ಲಿ 8,45,671 ಕಾರ್ಡ್‌ಗಳನ್ನು ರದ್ದು ಮಾಡಿದ ನಂತರ 1,06,68,594 ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವ ಕುಟುಂಬಗಳಿದ್ದವು. ಆದರೆ ಒಟ್ಟು ಕುಟುಂಬಗಳ ಸಂಖ್ಯೆಯೇ ಅಷ್ಟೊಂದು ಇರಲಿಲ್ಲ. ಹೀಗಾಗಿ ಮತ್ತೊಮ್ಮೆ ಅನರ್ಹರನ್ನು ಪಟ್ಟಿಯಿಂದ ತೆಗೆಯಲಾಯಿತು.ಇದಾದ ನಂತರವೂ  98,44,338 ಬಿಪಿಎಲ್ ಕಾರ್ಡ್‌ಗಳಿವೆ. ಹಿಂದೆ ಇಲಾಖೆಯ ಅಧಿಕಾರಿಗಳು ಪ್ರತಿಯೊಂದು ಮನೆಗೂ ಭೇಟಿ ನೀಡಿ ಸಮೀಕ್ಷೆ ನಡೆಸಿದ ನಂತರ ಅನರ್ಹರನ್ನು ಕೈಬಿಡುವ ಬದಲು, ಹಳ್ಳಿಯ ಒಂದೆಡೆ ಕುಳಿತುಕೊಂಡು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅಥವಾ ಗ್ರಾಮದ ಮುಖಂಡರು ಹೇಳಿದ ಮಾತುಗಳನ್ನು ನಂಬಿ ಬೇಕಾಬಿಟ್ಟಿಯಾಗಿ ಹೆಸರುಗಳನ್ನು ಕೈಬಿಟ್ಟಿರುವುದರಿಂದ ಅರ್ಹರಿಗೆ ಅನ್ಯಾಯವಾಗಿ, ಅನರ್ಹರು ಕಾರ್ಡ್‌ಗಳನ್ನು ಪಡೆದುಕೊಂಡಿದ್ದಾರೆ. ಸಾವಿರಾರು ಮಂದಿ ಅರ್ಹರಿಗೆ ಇನ್ನೂ ಕಾರ್ಡ್‌ಗಳೇ ಸಿಕ್ಕಿಲ್ಲ.ಯಾರಿಗೆ ಎಷ್ಟು ಪಡಿತರ...

ಕೇಂದ್ರ ಸರ್ಕಾರದ ಸೂಚನೆ ಪ್ರಕಾರ ಅಕ್ಕಿ, ಗೋಧಿ ಸೇರಿ ಒಟ್ಟು 35 ಕೆ.ಜಿ. ಆಹಾರ ಧಾನ್ಯಗಳನ್ನು ಪ್ರತಿ ತಿಂಗಳು ಬಿಪಿಎಲ್ ಕಾರ್ಡ್‌ಗಳಿಗೆ ನೀಡಬೇಕು. ‘ಅಂತ್ಯೋದಯ ಅನ್ನ’ ಯೋಜನೆಯ ಪಡಿತರ ಚೀಟಿದಾರರಿಗೆ 29 ಕೆ.ಜಿ. ಅಕ್ಕಿ, 6 ಕೆ.ಜಿ ಗೋಧಿ ನೀಡಬೇಕು. ಆದರೆ ಸದ್ಯ ರಾಜ್ಯದಲ್ಲಿ ಯೂನಿಟ್ ಪ್ರಕಾರ ಆಹಾರ ಧಾನ್ಯಗಳನ್ನು ಹಂಚಲಾಗುತ್ತಿದೆ. ಒಬ್ಬ ವ್ಯಕ್ತಿಗೆ ನಾಲ್ಕು ಕೆ.ಜಿ.ಯಂತೆ ಗರಿಷ್ಠ 20 ಕೆ.ಜಿ ಅಕ್ಕಿ ಮತ್ತು ಮೂರು ಕೆ.ಜಿ. ಗೋಧಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ರಾಜ್ಯದಲ್ಲಿ 32 ಲಕ್ಷ ಕುಟುಂಬಗಳು ಮಾತ್ರ ಬಡತನ ರೇಖೆಗಿಂತ ಕೆಳಗಿದ್ದು, ಅವರಿಗೆ ಮಾತ್ರ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ನೀಡುತ್ತಿದೆ. ಆದರೆ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ ಸುಮಾರು ಒಂದು ಕೋಟಿ ಇರುವುದರಿಂದ ಕೇಂದ್ರ ಸರ್ಕಾರದ ಸೂಚನೆ ಪ್ರಕಾರ 35 ಕೆ.ಜಿ. ಆಹಾರ ಧಾನ್ಯಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಗರಿಷ್ಠ 20 ಕೆ.ಜಿ.ಗೆ ಸೀಮಿತಗೊಳಿಸಲಾಗಿದೆ.ಬಗೆ ಬಗೆಯ ಪಡಿತರ

ಸರ್ಕಾರಗಳು ಬದಲಾದಂತೆಲ್ಲ ಕಾರ್ಡ್‌ಗಳ ಬಣ್ಣ, ಸ್ವರೂಪವೂ ಬದಲಾಗುತ್ತಾ ಬಂದಿದೆ. ಹಿಂದೆ ಜನತಾ ಪಕ್ಷದ ಸರ್ಕಾರ ಇದ್ದಾಗ ಬಡವರಿಗೆ ಹಸಿರು ಕಾರ್ಡ್, ಶ್ರೀಮಂತರಿಗೆ ಕೆಂಪು ಕಾರ್ಡ್ ನೀಡಲಾಗುತ್ತಿತ್ತು. ಆಗ ಎರಡೂ ಕಾರ್ಡ್‌ಗಳಿಗೂ ಆಹಾರ ಧಾನ್ಯ, ಸೀಮೆ ಎಣ್ಣೆ ಇತ್ಯಾದಿಗಳನ್ನು ನೀಡಲಾಗುತ್ತಿತ್ತು. ಕೆಲವು ವರ್ಷ ಬಡವರಿಗೆ ಪಂಚೆ, ಸೀರೆಯನ್ನೂ ಹಂಚಲಾಯಿತು.ಹಸಿರು ಕಾರ್ಡ್‌ಗೆ ಅತಿ ಕಡಿಮೆ ದರದಲ್ಲಿ ಆಹಾರ ಧಾನ್ಯಗಳು ಸಿಗುತ್ತಿದ್ದರೆ, ಕೆಂಪು ಕಾರ್ಡ್‌ಗೆ ಸ್ವಲ್ಪ ಹೆಚ್ಚಿನ ದರದಲ್ಲಿ ಆಹಾರ ಧಾನ್ಯಗಳನ್ನು ನೀಡಲಾಗುತ್ತಿತ್ತು. ಕ್ರಮೇಣ ಹಸಿರು, ಕೆಂಪು ಕಾರ್ಡ್‌ಗಳ ಜಾಗದಲ್ಲಿ ಬಿಪಿಎಲ್, ಎಪಿಎಲ್ ಕಾರ್ಡ್‌ಗಳು ಅಸ್ತಿತ್ವಕ್ಕೆ ಬಂದವು. ಹಲವು ವರ್ಷಗಳಿಂದ ಬಿಪಿಎಲ್ ಕಾರ್ಡ್‌ಗಳಿಗೆ ಮಾತ್ರ ಆಹಾರ ಧಾನ್ಯಗಳನ್ನು ನೀಡುತ್ತಿದ್ದು, ಕೇವಲ ವಿಳಾಸದ ದಾಖಲೆ ಮತ್ತಿತರ ಕಾರಣಗಳಿಗಾಗಿ ಮಾತ್ರ ಎಪಿಎಲ್ ಕಾರ್ಡ್‌ಗಳನ್ನು ಪಡೆಯಲಾಗುತ್ತಿದೆ. ಆದರೆ, ಈಚೆಗೆ ಸುಪ್ರೀಂ ಕೋರ್ಟ್ ಸೂಚನೆಯಂತೆ ಗೋದಾಮುಗಳಲ್ಲಿ ಕೊಳೆಯುತ್ತಿರುವ ಅಕ್ಕಿ, ಗೋಧಿಯನ್ನು ಖಾಲಿ ಮಾಡುವ ದೃಷ್ಟಿಯಿಂದ ಕಳೆದ ಸೆಪ್ಟೆಂಬರ್‌ನಿಂದ ಜನವರಿವರೆಗೆ ಎಪಿಎಲ್ ಕಾರ್ಡ್‌ಗಳಿಗೂ ಆಹಾರ ಧಾನ್ಯಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ವರ್ಗದಲ್ಲಿ ಪಡಿತರ ಪಡೆದವರ ಸಂಖ್ಯೆ ತುಂಬಾ ಕಡಿಮೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.