ಬುಧವಾರ, ಮೇ 25, 2022
31 °C
ಉತ್ತರಾಖಂಡ ಜಲಪ್ರಳಯಕ್ಕೆ ಒಂದು ತಿಂಗಳು

ಪತ್ತೆಯಾಗದ ಮದ್ದೂರಿನ ಯಾತ್ರಿಗಳು

ಬಸವರಾಜ ಹವಾಲ್ದಾರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಉತ್ತರಾಖಂಡ ಜಲಪ್ರಳಯದಲ್ಲಿ ಮದ್ದೂರಿನ ಎಂ.ಜಿ. ಸೀತಾರಾಮು ಕುಟುಂಬದ 13 ಮಂದಿ ಸದಸ್ಯರು ಕಾಣೆಯಾಗಿ ಒಂದು ತಿಂಗಳು ಕಳೆದಿದೆ. ಇಂದಿಗೂ ಅವರ ಬರುವಿಕೆಯ ಆಶಾಭಾವನೆಯಲ್ಲಿದ್ದಾರೆ ಕುಟುಂಬದ ಸದಸ್ಯರು.ರಾಜ್ಯ ಸರ್ಕಾರದಿಂದ ಉತ್ತರಾಖಂಡಕ್ಕೆ ತೆರಳಿದ್ದ ಸಚಿವರು ಹಾಗೂ ಅಧಿಕಾರಿಗಳು ನೂರಾರು ಪ್ರವಾಸಿಗರನ್ನು ಕರೆ ತಂದಿದ್ದಾರೆ. ಕೆಲವರು ಕಾಣೆಯಾಗಿದ್ದು, ಸಿಕ್ಕಿಲ್ಲ. ಅಲ್ಲಿನ ಸರ್ಕಾರಕ್ಕೆ ಕಾಣೆಯಾದವರ ಬಗ್ಗೆ ವಿವರ ತಿಳಿಸಿ  ಎಂದು ಹೇಳಿ ಬಂದಿದ್ದಾರೆ.

ಆದರೆ, ಸೀತಾರಾಮು ಕುಟುಂಬದವರು ಮಾತ್ರ ಇಂದಿಗೂ ಉತ್ತರಾಖಂಡದಲ್ಲಿ ಕುಟುಂಬದ ಸದಸ್ಯರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.ರಾಜ್ಯ ಸರ್ಕಾರವು ಪಟ್ಟಿ ನೀಡಿ ಬಂದ ನಂತರ, ಕಾಣೆಯಾದವರ ಸ್ಥಿತಿ ಏನಾಗಿದೆ. ಯಾರದ್ದಾದರೂ ಸುಳಿವು ಸಿಕ್ಕಿದೆಯೇ ಎಂಬ ಬಗೆಗೆ ಕುಟುಂಬದ ಸದಸ್ಯರಿಗೆ ಮಾಹಿತಿ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಹಲವರು ಬಂದು ಸಾಂತ್ವನ ಹೇಳಿ ಬಂದಿದ್ದಾರೆ.ಮದ್ದೂರಿನ ಹಿರಿಯ ಪತ್ರಕರ್ತ ಸೀತಾರಾಮು ಅವರೊಂದಿಗೆ ಕುಟುಂಬದ ಹದಿನೆಂಟು ಮಂದಿ ಕೇದಾರನಾಥ, ಬದರಿನಾಥ ದರ್ಶನಕ್ಕೆಂದು ತೆರಳಿದ್ದರು. ಕೇದಾರದಿಂದ ಡೋಲಿ ಹಾಗೂ ಕುದುರೆಗಳ ಮೇಲೆ ಗೌರಿಕುಂಡದತ್ತ ಹೊರಟಾಗ ಕಾಣೆಯಾಗಿದ್ದರು.ಅದರಲ್ಲಿ ಸೀತಾರಾಮು ಹಾಗೂ ಇನ್ನೂ ನಾಲ್ವರು ಮರಳಿ ಬಂದಿದ್ದಾರೆ. ಎಂ.ಜಿ.ನಾಗರಾಜು, ಸುಮಾರಾಜು, ಲೀಲಾವತಿ, ಗುರುರಾಜ, ಉಮಾರಾಜ, ಎಸ್.ವಿ.ಕುಮಾರ್, ಸೀತಾಲಕ್ಷ್ಮೀ, ಎಂ.ಜಿ. ರಮೇಶ್, ನಾಗಲಕ್ಷ್ಮೀ, ನಾಗಶ್ರೀ ಮಕ್ಕಳಾದ ಅನಿರುದ್ಧ, ಅತುಲ್‌ಚಂದ್ರ ಹಾಗೂ ಅಮಿತ್‌ಚಂದ್ರ ಕಾಣೆಯಾದವರು.`ಪತ್ನಿ ನಾಗಶ್ರೀ, ಮಕ್ಕಳಾದ ಅಮಿತ್‌ಚಂದ್ರ, ಅತುಲ್‌ಚಂದ್ರ  ಹಾಗೂ ಕುಟುಂಬದ ಇನ್ನಿತರ ಸದಸ್ಯರನ್ನು ಹುಡುಕಿಕೊಂಡು ನಮ್ಮ ಭಾವ ರವಿಚಂದ್ರ ಅವರು ಉತ್ತರಾಖಂಡಕ್ಕೆ ಹೋಗಿದ್ದಾರೆ' ಎನ್ನುತ್ತಾರೆ ಸೀತಾರಾಮು ಅವರ ಪುತ್ರ ರಾಘವೇಂದ್ರ.`ಸರ್ಕಾರದಿಂದ ಕಾಣೆಯಾದವರ ಬಗೆಗೆ ಯಾವುದೇ ಮಾಹಿತಿ ಬಂದಿಲ್ಲ. ಈ ಹಿಂದೆಯೇ ಮಾಧ್ಯಮದವರಿಗೆಲ್ಲ  ಪಟ್ಟಿ ನೀಡಿದ್ದೆವು. ಸೋಮವಾರ ಮತ್ತೆ ದೂರವಾಣಿ ಕರೆ ಮಾಡಿ ಕೇಳುತ್ತಿದ್ದಾರೆ. ಏನಾದರೂ ಸುದ್ದಿ ಇದೆಯಾ?' ಎಂದು ರಾಘವೇಂದ್ರ  ಹೇಳಿದರು.ಇಲ್ಲಿಯವರೆಗೆ ಕುಟುಂಬದವರು ಕೈಕಟ್ಟಿ ಕುಳಿತಿಲ್ಲ. ಕುಟುಂಬದವರು ಉತ್ತರಾಖಂಡಕ್ಕೆ ಹೋಗಿ ಹುಡುಕಾಟ ನಡೆಸಿದ್ದಾರೆ. ಒಬ್ಬರು ಮರಳಿ ಬಂದ ಮೇಲೆ, ಮತ್ತೊಬ್ಬರು ಹೋಗುತ್ತಲೇ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.