ಸೋಮವಾರ, ಮೇ 23, 2022
20 °C

ಪರಪ್ಪನ ಅಗ್ರಹಾರದಲ್ಲಿ ಕಿರಿಕಿರಿ: ತಮ್ಮವರ ನೋಡಲು ಬಂದವರಿಗೆ ಸಂಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ತಮ್ಮವರನ್ನು ನೋಡಲು ಬಂದ ಹತ್ತಾರು ಮಂದಿ, ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ವಿಚಾರಣೆಯ ಹಿನ್ನೆಲೆಯಲ್ಲಿ ಪರಿತಪಿಸಬೇಕಾಯಿತು. ತಮ್ಮ ಕಡೆಯವರಿಗೆಂದು ಊಟ, ತಿಂಡಿ ಹೊತ್ತು ತಂದಿದ್ದ ಅವರೆಲ್ಲ ಅದನ್ನು ನೀಡಲಾಗದೇ ದಿನವಿಡೀ ಯಾತನೆ ಅನುಭವಿಸಿದರು.ಕೇಂದ್ರ ಕಾರಾಗೃಹದ ಎದುರಿನ ಕಟ್ಟಡದಲ್ಲೇ ಜಯಲಲಿತಾ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿತ್ತು. ಇದರಿಂದಾಗಿ ಇಡೀ ದಿನ ಕಾರಾಗೃಹದ ರಸ್ತೆಯಲ್ಲಿ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿತ್ತು. ಇದು ತಮ್ಮವರನ್ನು ಕಾಣಲು ಬಂದ ಜನಸಾಮಾನ್ಯರಿಗೆ ಕಣ್ಣೀರು ತಂದಿತು.ಸುಂಕದಕಟ್ಟೆಯ ಉಮಾ ಎಂಬ ಗರ್ಭಿಣಿ ಅಲ್ಲಿ ಪತಿಯ ಬಿಡುಗಡೆಗಾಗಿ ದಿನವಿಡೀ ಕಾದರು. ಒಂದು ವರ್ಷದಿಂದ ಕಾರಾಗೃಹದಲ್ಲಿರುವ ಪತಿ ರಾಜೇಶ್ ಗುರುವಾರ ಬಿಡುಗಡೆ ಹೊಂದುವವರಿದ್ದರು. ಪತಿಯನ್ನು ಬರಮಾಡಿಕೊಳ್ಳಲು ಅವರು ಬೆಳಿಗ್ಗೆಯೇ ಬಂದಿದ್ದರು.ಸಂಜೆಯವರೆಗೂ ಪತಿಯನ್ನು ಭೇಟಿ ಮಾಡಲಾಗದ ಕಾರಣದಿಂದ ತೀವ್ರ ಬೇಸರಗೊಂಡಿದ್ದ ಅವರು, `ವಿಚಾರಣೆ ನಡೆಸುವುದು ಬೇಡ ಎಂದು ನಾವು ಹೇಳುವುದಿಲ್ಲ. ಅವರ ವಿಚಾರಣೆಗಾಗಿ ನಮಗೇಕೆ ಶಿಕ್ಷೆ ನೀಡಬೇಕು~ ಎಂದು ಪ್ರಶ್ನಿಸಿದರು.ಜೈಲಿನಲ್ಲಿರುವ ಪತಿಗೆ ಊಟ ನೀಡಲೆಂದು ಬಂದಿದ್ದ ಯಲಹಂಕದ ನಿಂಗನಹಳ್ಳಿಯ ರತ್ನಮ್ಮ ಅವರ ಗೋಳು ಕೂಡ ಇದೇ ಆಗಿತ್ತು. ಪತಿ ಮತ್ತು ಸಂಬಂಧಿಗಾಗಿ ಕೋಳಿ ಸಾರು ತಂದಿದ್ದ ಅವರು ಸಂಜೆ ಅದನ್ನು ಹಿಡಿದು ಮನೆಯತ್ತ ಹೆಜ್ಜೆ ಹಾಕಿದರು.22 ವರ್ಷದ ಪುತ್ರ ಜೈಲಿನಿಂದ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರಕ್ಕೆ ಬಂದಿದ್ದ ರಾಜಗೋಪಾಲನಗರದ ಕಲಾವತಿ ಎಂಬುವರು ಕೂಡ ಜಯಲಲಿತಾ ವಿಚಾರಣೆಯ `ಬಿಸಿ~ ಅನುಭವಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.