ಶುಕ್ರವಾರ, ಮೇ 7, 2021
20 °C

ಪರಿಶಿಷ್ಟ ವಿದ್ಯಾರ್ಥಿ ನಿಲಯಗಳಲ್ಲಿ ಕಳಪೆ ಊಟ ಪೂರೈಕೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಪರಿಶಿಷ್ಟ ವಿದ್ಯಾರ್ಥಿಗಳಿರುವ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಪೂರೈಸುವ ಗುತ್ತಿಗೆ ಪಡೆದಿರುವವರು ದಲಿತ ಮುಖಂಡರೇ ಆಗಿದ್ದರೂ ಕಳಪೆ ಆಹಾರ ಪೂರೈಸಿ ವಂಚಿಸುತ್ತಿದ್ದಾರೆ ಎಂಬ ದಲಿತ ಮುಖಂಡ ವಿಜಯಕುಮಾರ್ ಆರೋಪವು ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿಯಲ್ಲಿ ಗದ್ದಲ ಎಬ್ಬಿಸಿದ ಘಟನೆ ಶನಿವಾರ ನಡೆದಿದೆ.ಕಾರ್ಯಕ್ರಮ ಮಧ್ಯಾಹ್ನ 3.15ರ ವೇಳೆಗೆ ಶುರುವಾಯಿತು. ಮೊದಲಿಗೆ ದಲಿತ ಮುಂಖಡರಾದ ಡಾ.ಎಂ.ಚಂದ್ರಶೇಖರ್, ಪಂಡಿತ್ ಮುನಿವೆಂಕಟಪ್ಪ, ಚಲಪತಿ ಭಾಷಣ ಮಾಡಿದರು. ನಂತರ ಮಾತನಾಡಿದ ವಿಜಯಕುಮಾರ್, ಪರಿಶಿಷ್ಟ ಸಮುದಾಯದವರಿರುವ ವಿದ್ಯಾರ್ಥಿ ನಿಯಲಗಳಲ್ಲಿ ಅಸಮರ್ಪಕ ಮತ್ತು ಕಳಪೆ ಆಹಾರ ಪೂರೈಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

 

ಜೊತೆಗೆ, ಆಹಾರ ಪೂರೈಸುವ ಗುತ್ತಿಗೆಯನ್ನು ದಲಿತ ಮುಖಂಡರೇ ಪಡೆದಿದ್ದಾರೆ. ಆದರೆ ಅದೇ ದಲಿತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮಾತ್ರ ಸರಿಯಾಗಿ ಆಹಾರ ಪೂರೈಸದೆ ವಂಚನೆ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.ಅವರು ಹಾಗೆ ಹೇಳುತ್ತಿದ್ದಂತೆಯೇ, ಸಭಿಕರ ಸಾಲಿನಲ್ಲಿದ್ದ ಕೆಲವು ದಲಿತ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿಜಯಕುಮಾರ್ ಅವರೊಡನೆ ವಾಗ್ವಾದಕ್ಕೂ ಮುಂದಾದರು. ಅವರಲ್ಲಿ ಹಲವರು ವೇದಿಕೆ ಏರಿ ವಿಜಯಕುಮಾರ್ ಸುತ್ತ ಗುಂಪುಗೂಡಿದರು.ದಿಢೀರನೆ ಏರ್ಪಟ್ಟ ಈ ಸನ್ನಿವೇಶದಿಂದ, ವೇದಿಕೆಯಲ್ಲಿದ್ದ ಸಚಿವ ವರ್ತೂರು ಪ್ರಕಾಶ್, ಜಿಲ್ಲಾಧಿಕಾರಿ ಮೀನಾ ಸೇರಿದಂತೆ ಎಲ್ಲರೂ ತಬ್ಬಿಬ್ಬಾದರು. ಅದೇ ವೇಳೆ, ಕೆಲವರು ವಿಜಯಕುಮಾರ್ ಅವರನ್ನು `ಆರೋಪ ಮಾಡುವ ಮುನ್ನ ನಿನ್ನ ಆಸ್ತಿ ಎಷ್ಟಿದೆ ಎಂಬ ಲೆಕ್ಕ ಕೊಡು~ ಎಂದು ಪ್ರಶ್ನಿಸಿದರು. ಸನ್ನಿವೇಶ ಉದ್ರಿಕ್ತಗೊಳ್ಳುತ್ತಿದ್ದಂತೆಯೇ ಚುರಕಾದ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್ ಅವರೇ ವೇದಿಕೆ ಮೆಟ್ಟಿಲುಗಳ ಬಳಿ ಸಾರಿ ಸಭಿಕರನ್ನು ನಿಯಂತ್ರಿಸಿದರು.ಅದೇ ವೇಳೆ ಜಿಲ್ಲಾಧಿಕಾರಿ ಮೀನಾ ಮತ್ತು ತಹಶೀಲ್ದಾರ್ ಮುನಿವೀರಪ್ಪ ವೇದಿಕೆ ಮೇಲಿಂದಲೇ ಜನರನ್ನು ಸಮಾಧಾನಗೊಳಿಸಲು ಯತ್ನಿಸಿದರು.ಸುಮಾರು 10 ನಿಮಿಷ ಇಡೀ ಸಭಾಂಗಣದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು. ಅನಪೇಕ್ಷಿತವಾಗಿ ನಡೆದ ಘಟನೆಯಿಂದ ನೂರಾರು ಸಭಿಕರೂ ಚದುರಿದರು. ವಿಜಯಕುಮಾರ್ ಭಾಷಣ ರದ್ದು ಮಾಡಲಾಯಿತು. ನಂತರ ಕಾರ್ಯಕ್ರಮ ಶಾಂತ ರೀತಿಯಲ್ಲಿ ನಡೆಯಿತು.ಶಾಸಕರಿಗೆ ದಲಿತರ ಧಿಕ್ಕಾರ

ಮಾಲೂರು: ತಾಲ್ಲೂಕು ಆಡಳಿತದ ದಲಿತ ವಿರೋಧಿ ನೀತಿ ಖಂಡಿಸಿ ದಲಿತ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಬಹಿಷ್ಕಾರದ ನಡುವೆ ತಾಲ್ಲೂಕು ಆಡಳಿತ ಶನಿವಾರ ಅಂಬೇಡ್ಕರ್ ಜಯಂತಿ ಆಚರಿಸಿತು.

ತಾಲ್ಲೂಕು ಆಡಳಿತ ಅಂಬೇಡ್ಕರ್ ಜಯಂತಿ ಆಚರಣೆ ಪೂರ್ವಭಾವಿ ಸಭೆಯಲ್ಲಿ 10 ದಲಿತ ಸಾಧಕರನ್ನು ಸನ್ಮಾನಿಸಲು ಸರ್ವಾನುಮತದಿಂದ ತೀರ್ಮಾನಿಸಲಾಗಿತ್ತು.ಆದರೆ ಆಹ್ವಾನ ಪತ್ರಿಕೆಯಲ್ಲಿ 10 ಮಂದಿ ಹೋರಾಟಗಾರರ ಹೆಸರ ಜೊತೆ ಬಿಜೆಪಿಯ 23 ಕಾರ್ಯಕರ್ತರ ಹೆಸರನ್ನು ಮುದ್ರಿಸಲಾಗಿತ್ತು.ಈ ದಲಿತ ವಿರೋಧಿ ನೀತಿ ಖಂಡಿಸಿ ತಾಲ್ಲೂಕು ದಲಿತ ಪರ ಸಂಘಟನೆಗಳು ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಬಹಿಷ್ಕರಿಸಿ ತಾಲ್ಲೂಕು ಆಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಹಾಕಿ ಕಾರ್ಯಕ್ರಮಕ್ಕೆ ಗೈರು ಹಾಜರಾದರು.ಪಟ್ಟಣದ ಬಸ್ ನಿಲ್ದಾಣದ ಬಳಿಯ ಉದ್ಯಾನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ತಾಲ್ಲೂಕು ಆಡಳಿತ ಹಾಗೂ ಶಾಸಕರು ಆಗಮಿಸಿದಾಗ ದಲಿತಪರ ಸಂಘಟನೆಗಳ ಕಾರ್ಯಕರ್ತರು ಧಿಕ್ಕಾರ ಕೂಗಿದರು.ದಲಿತ ನಾಗರಿಕ ಸಮಿತಿ ಅಧ್ಯಕ್ಷ ಪುರಸನಹಳ್ಳಿ ಶ್ರೀನಿವಾಸ್, ಸಮತಾ ಸೈನಿಕ ದಳ ಅಧ್ಯಕ್ಷ ಗೋವಿಂದಸ್ವಾಮಿ, ಕಾರ್ಯಾಧ್ಯಕ್ಷ ಎಸ್.ನಾರಾಯಣಸ್ವಾಮಿ, ದಲಿತ ಸಿಂಹಸೇನೆ ತಾಲ್ಲೂಕು ಅಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ್, ದಸಂಸ ಜಿಲ್ಲಾ ಸಂಚಾಲಕ ವೆಂಕಟಾಪು ಸತ್ಯಂ, ಮುಖಂಡರಾದ ನಿದರಮಂಗಲ ವೆಂಕಟಸ್ವಾಮಿ, ಮೈಲಾಂಡಹಳ್ಳಿ ನಾರಾಯಣಸ್ವಾಮಿ, ರಮೇಶ್, ಶಿವಣ್ಣ, ಭುವನಹಳ್ಳಿ ಚನ್ನಪ್ಪ ಭಾಗವಹಿಸಿದ್ದರು.ಸರ್ಕಾರಿ ಕಾರ್ಯಕ್ರಮಕ್ಕೆ ಬಹಿಷ್ಕಾರಮುಳಬಾಗಲು: ಪಟ್ಟಣದ ನೇತಾಜಿ ಕ್ರೀಡಾಂಗಣದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆಯನ್ನು ವಿವಿಧ ದಲಿತ ಸಂಘಟನೆಗಳು ಬಹಿಷ್ಕರಿಸಿದವು.ಶಾಸಕರು ಅಂಬೇಡ್ಕರ್ ದಿನಾಚರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಗೆ ಹಾಜರಾಗದ ಕಾರಣ ದಲಿತ ಸಂಘಟನೆಗಳು ಡಾ.ಅಂಬೇಡ್ಕರ್ ವಿಗ್ರಹದ ಎದುರು ಕುಳಿತು ಜನ್ಮ ದಿನಾಚರಣೆ ಆಚರಿಸಿದವು. ದಲಿತ ಸಂಘಟನೆ ಮುಖಂಡರಾದ ಸತೀಶ್, ಸಂಗಸಂದ್ರ ವಿಜಯಕುಮಾರ್, ಗೊಲ್ಲಹಳ್ಳಿ ವೆಂಕಟೇಶ್, ಮೆಕಾನಿಕ್ ಶ್ರೀನಿವಾಸ್, ತಾ.ಪಂ.ಸದಸ್ಯೆ ಲಕ್ಷ್ಮಿದೇವಮ್ಮ, ಅಲಂಗೂರು ರಾಮು ಇತರರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.