ಶುಕ್ರವಾರ, ಜೂನ್ 18, 2021
21 °C

ಪರಿಶುದ್ಧ ಇಂಧನ-: ಅಮೆರಿಕ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತದಲ್ಲಿ ಪರಿಶುದ್ಧ ಇಂಧನ ಮೂಲವನ್ನು ಒದಗಿಸಿಕೊಡಲು ಅಮೆರಿಕದ ಅಂತರರಾಷ್ಟ್ರೀಯ ಧನ­ಸಹಾಯ ಸಂಸ್ಥೆ (ಯುಎಸ್‌–ಏಡ್‌) ವತಿಯಿಂದ ಮಂಗಳವಾರ ಸೆಲ್ಕೊ ಪ್ರತಿಷ್ಠಾನ ಹಾಗೂ ಅರ್ಬ್‌ ಎನರ್ಜಿ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಳ್ಳ­ಲಾಯಿತು.ಅಮೆರಿಕ ಸಹಾಯಕ ಕಾರ್ಯದರ್ಶಿ (ದಕ್ಷಿಣ ಹಾಗೂ ಮಧ್ಯ ಏಷ್ಯಾ ವ್ಯವಹಾರ) ನಿಶಾ ಬಿಸ್ವಾಲ್‌, ಒಪ್ಪಂದದ ಪತ್ರಗಳನ್ನು ಸೆಲ್ಕೊ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಿಶ್‌­ಕುಮಾರ್‌ ಸಾಹು ಮತ್ತು ಅರ್ಬ್‌ ಎನರ್ಜಿ ಸಂಸ್ಥೆಯ ಮುಖ್ಯ ಕಾರ್ಯ­ನಿರ್ವಹಣಾಧಿಕಾರಿ ಡೊಮೇನ್‌ ಮಿಲ್ಲರ್‌ ಅವರಿಗೆ ಹಸ್ತಾಂತರಿಸಿದರು.‘ಪ್ರಪಂಚವು ಹವಾಮಾನ ಬದಲಾವಣೆ ಸಮಸ್ಯೆ ಎದುರಿಸುತ್ತಿರುವ ಈ ಸನ್ನಿವೇಶದಲ್ಲಿ ಪರಿಶುದ್ಧ ಹಾಗೂ ನವೀಕರಿಸಬಹುದಾದ ಇಂಧನ ಮೂಲದ ಕಡೆಗೆ ಗಮನಹರಿಸುವುದು ಅತ್ಯಗತ್ಯವಾಗಿದ್ದು, ಅಮೆರಿಕ ಇಂತಹ ಪ್ರಯತ್ನಗಳಿಗೆ ನೆರವು ನೀಡಲಿದೆ’ ಎಂದು ಬಿಸ್ವಾಲ್‌ ಹೇಳಿದರು.‘ಅಮೆರಿಕದ ಅಂತರರಾಷ್ಟ್ರೀಯ ಧನಸಹಾಯ ಸಂಸ್ಥೆ ಮಾಡಿಕೊಂಡಿರುವ ಎರಡೂ ಒಪ್ಪಂದಗಳಿಂದ ಭಾರತದ ಲಕ್ಷಾಂತರ ಕುಟುಂಬಗಳು ಪರಿಶುದ್ಧ­ವಾದ ಇಂಧನ ಪಡೆಯಲು ಸಹಕಾರಿ­ಯಾಗಲಿದೆ’ ಎಂದು ಅವರು ತಿಳಿಸಿದರು. ‘ಸೆಲ್ಕೊ ಪ್ರತಿಷ್ಠಾನಕ್ಕೆ 2 ಲಕ್ಷ ಡಾಲರ್‌ ಹಾಗೂ ಅರ್ಬ್‌ ಎನರ್ಜಿ ಸಂಸ್ಥೆಗೆ 25 ಲಕ್ಷ ಡಾಲರ್‌ ಧನಸಹಾಯ ನೀಡಲಾ­ಗುತ್ತದೆ’ ಎಂದು ಘೋಷಿಸಿದರು.ಸೆಲ್ಕೊ ಪ್ರತಿಷ್ಠಾನದ ಸಾಹು ಮಾತ­ನಾಡಿ, ‘ದೇಶದ ಶೇ 40ರಷ್ಟು ಜನರಿಗೆ ಇದುವರೆಗೆ ವಿದ್ಯುತ್‌ ಸಂಪರ್ಕವೇ ಸಿಕ್ಕಿಲ್ಲ. ಇನ್ನೂ ಶೇ 30ರಷ್ಟು ಜನರಿಗೆ ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ. ಶೇ 30ರಷ್ಟು ಮಾತ್ರ ಗುಣಮಟ್ಟದ ವಿದ್ಯುತ್‌ ಪಡೆಯು­ತ್ತಿದ್ದಾರೆ. ಬೆಂಗಳೂರಿನಲ್ಲೇ ಇನ್ನೂ 10 ಸಾವಿರ ಮನೆಗಳಿಗೆ ವಿದ್ಯುತ್‌ ಸಂಪರ್ಕ ಸಿಕ್ಕಿಲ್ಲ’ ಎಂದು ವಿವರಿಸಿದರು.‘ಅಮೆರಿಕ ನೀಡುತ್ತಿರುವ ನೆರವಿನಿಂದ ಗ್ರಾಮೀಣ, ನಗರ ಮತ್ತು ಬುಡಕಟ್ಟು ಪ್ರದೇಶ ಸೇರಿದಂತೆ ವಿವಿಧ ಭಾಗಗಳಿಗೆ ಸರಿಹೊಂದುವ ಸುಲಭದ ತಂತ್ರಜ್ಞಾನದ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳನ್ನು ಶೋಧ ಮಾಡಲಾಗು­ತ್ತದೆ. ಅದಕ್ಕಾಗಿ ಆರು ಪ್ರಯೋಗಾಲಯ­ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.‘ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ (ಕೆಎಂಎಫ್‌) ಎಲ್ಲ ಹಾಲು ಸಂಗ್ರಹಣೆ ಕೇಂದ್ರಗಳಿಗೆ ಸೌರಶಕ್ತಿ ಬಳಕೆಗೆ ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.ಅರ್ಬ್‌ ಎನರ್ಜಿ ಸಂಸ್ಥೆಯ ಮಿಲ್ಲರ್‌, ‘ನಮ್ಮ ಸಂಸ್ಥೆಯಿಂದ ತಿಂಗಳಿಗೆ 1,500 ಸೌರಶಕ್ತಿ ಚಾಲಿತ ವಾಟರ್‌ ಹೀಟರ್‌­ಗಳನ್ನು ತಯಾರಿಸ­ಲಾಗುತ್ತಿದ್ದು, ಶೇ 60ರಷ್ಟು ಕರ್ನಾಟಕದಲ್ಲೇ ಮಾರಾಟ­ವಾಗುತ್ತಿವೆ’ ಎಂದು ಹೇಳಿದರು.ಅಮೆರಿಕ ವಾಣಿಜ್ಯ ಸಂಸ್ಥೆ ಪ್ರತಿನಿಧಿಗಳ ಜತೆ ಸಭೆ ನಡೆಸಿದ ಬಿಸ್ವಾಲ್‌, ರಾಜ್ಯಪಾಲ ಎಚ್‌.ಆರ್‌. ಭಾರದ್ವಾಜ್‌ ಅವರನ್ನೂ ಭೇಟಿಯಾಗಿ ಚರ್ಚಿಸಿದರು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಗೆ ಭೇಟಿ ನೀಡಿದ ಅವರು, ಭಾರತದ ಮಂಗಳಯಾನ ಯೋಜನೆ ಮಾಹಿತಿ ಪಡೆದುಕೊಂಡರು.ಅಮೆರಿಕ ರಾಯಭಾರ ಕಚೇರಿ ಚೆನ್ನೈ ಕೇಂದ್ರದ ಕಾನ್ಸುಲ್ ಜನರಲ್ ಜೆನ್ನಿಫರ್ ಮೆಕಿಂಟೈರ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.