ಶನಿವಾರ, ಜೂನ್ 19, 2021
26 °C

ಪರಿಷತ್‌ಗೆ ಸಂಪನ್ಮೂಲ ಕ್ರೋಡೀಕರಿಸಲು ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ತಾವು ಆಯ್ಕೆಯಾದಲ್ಲಿ ಪರಿಷತ್ತಿಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸಲು ಪ್ರಯತ್ನಿಸುವುದಾಗಿ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಶೇಖರಗೌಡ ಮಾಲಿಪಾಟೀಲ್ ತಿಳಿಸಿದರು.ಸದ್ಯ ಪರಿಷತ್ತಿಗೆ ಆರ್ಥಿಕ ಸ್ವಾವಲಂಬನೆ ಇಲ್ಲ. ತಮ್ಮನ್ನು ಆಯ್ಕೆ ಮಾಡಿದ್ದಲ್ಲಿ ಸರ್ಕಾರದ ಜೊತೆಗೆ ಸೌಹಾರ್ದ ಸಂಬಂಧ ಇಟ್ಟುಕೊಂಡು ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳಿಗೆ ಸರ್ಕಾರದಿಂದ ನೇರವಾಗಿ ಅನುದಾನ ಬರುವಂತೆ ಕಾರ್ಯನಿರ್ವಹಿಸುವುದಾಗಿ ಬುಧವಾರ ಪತ್ರಿಕಾಗೊಷ್ಠಿಯಲ್ಲಿ ಹೇಳಿದರು.

ಈಗಾಗಲೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿ ಎರಡು ಅವಧಿಗೆ ಕಾರ್ಯ ನಿರ್ವಹಿಸಿದ್ದೇನೆ. ಗಂಗಾವತಿಯಲ್ಲಿ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದೇನೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಅಗ್ರ ಶಕ್ತಿಯಾಗಿ ಬೆಳೆಸುವ ಉದ್ದೇಶದಿಂದ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೇನೆ ಎಂದು ತಿಳಿಸಿದರು.ಈವರೆಗೆ ಬೆಂಗಳೂರು ಹಾಗೂ ಮೈಸೂರು ಕಡೆಯವರು ಪರಿಷತ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಉತ್ತರ ಕರ್ನಾಟಕ ಭಾಗದ ಪ್ರತಿನಿಧಿಯಾಗಿ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ. ಉತ್ತರ ಕರ್ನಾಟಕದ ಎಲ್ಲ 15 ಜಿಲ್ಲೆಗಳಲ್ಲಿ ತಮಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.ಮತದಾರರು ಅವಕಾಶ ನೀಡಿದ್ದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿ ನೂರು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಶತಮಾನೋತ್ಸವವನ್ನು ಯಶಸ್ವಿಯಾಗಿ ನಡೆಸಲಾಗುವುದು. ಶತಮಾನೋತ್ಸವ ಸಂದರ್ಭದಲ್ಲಿ 100 ಜನ ಸಾಹಿತಿಗಳ ಪರಿಚಯ ಒಳಗೊಂಡ ಸಂಪುಟ ಹೊರತರಲಾಗುವುದು ಎಂದು ತಿಳಿಸಿದರು.ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಪರಿಹರಿಸಲು ಪ್ರಯತ್ನಿಸಲಾಗುವುದು. ಪರಿಷತ್ತನ್ನು ಅಖಂಡ ಕರ್ನಾಟಕದ ಬದುಕಿನ ಸಾಕ್ಷಿಪ್ರಜ್ಞೆಯಾಗಿ ಮುನ್ನಡೆಸಲಾಗುವುದು. ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕತಿಗೆ ಅಪಚಾರವಾದರೆ ಕನ್ನಡಿಗರೊಂದಿಗೆ ಬೀದಿಗಳಿದು ಹೋರಾಟ ನಡೆಸಲಾಗುವುದು ಎಂದು ಹೇಳಿದರು.ಗಡಿಭಾಗಗಳಲ್ಲಿ ಇರುವ ಕನ್ನಡ ಶಾಲೆಗಳ ಸಬಲೀಕರಣಕ್ಕೆ ಪ್ರಯತ್ನಿಸಲಾಗುವುದು. ಕನ್ನಡಪರ ಚಟುವಟಿಕೆಗಳನ್ನು ರಾಜ್ಯಾದ್ಯಂತ ನಡೆಸಲಾಗುವುದು. ಪರಿಷತ್ ಉಳಿಸಿ ಬೆಳೆಸಲು ಯೋಜನೆ ರೂಪಿಸಲಾಗುವುದು. ಕನ್ನಡದ ಮೇರು ಬರಹಗಾರರ ಮೌಲಿಕ ಕೃತಿಗಳ ಮರು ಮುದ್ರಣ ಹಾಗೂ ಅನುವಾದಕ್ಕೆ ಆದ್ಯತೆ ನೀಡಲಾಗುವುದು.ಯುವ ಬರಹಗಾರರ ಕೃತಿಗಳ ಪ್ರಕಟಣೆ, ಲಭ್ಯವಿರದ ಮಹತ್ವದ ಕೃತಿಗಳನ್ನು ಮರುಮುದ್ರಣ ಮಾಡಲಾಗುವುದು. ಕನ್ನಡದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಕೇಂದ್ರ ಸರ್ಕಾರದ ಉದ್ಯೋಗಳಲ್ಲಿ ಕನ್ನಡಿಗರಿಗೆ ಪ್ರಾತಿನಿಧ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ವಿವರಿಸಿದರು.ಬೀದರ್ ಜಿಲ್ಲೆಯ ಮತದಾರ ಬಾಂಧವರು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.